ರಾಮನಗರ: ಆರೋಗ್ಯವಂತ ಮತ್ತು ನೆಮ್ಮದಿ ಜೀವನಕ್ಕೆ ಸಸ್ಯಾಹಾರ ಮತ್ತು ಧ್ಯಾನ ಮುಖ್ಯ ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ ದಯಾನಂದ ಸ್ವಾಮೀಜಿ ಕರೆ ನೀಡಿದರು. ನಗರದ ಗುರುಭವನದಲ್ಲಿ ರಾಮನಗರ ಪಿರಮಿಡ್ ಯೋಗ ಧ್ಯಾನ ಕೇಂದ್ರ ಗುರುವಾರ ಆಯೋಜಿಸಿದ್ದ “ಶಾಖಾಹಾರ ಜನಜಾಗೃತಿ ಜಾಥಾ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಾನವ ಮೂಲತಃ ಸಸ್ಯಹಾರಿ. ಆದರೆ, ಮಾಂಸಾಹರ ಸೇವನೆ ಅನೇಕ ಆನಾರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಇಂದಿನ ಅನೇಕ ಒತ್ತಡಗಳಿಗೂ ಆಹಾರ ಪದ್ಧತಿಗಳೇ ಕಾರಣ ಎಂದು ಅಭಿಪ್ರಾಯಪಟ್ಟರು. ಪ್ರಾಣಿಗಳೂ ನಮ್ಮಂತೆಯೇ ಜೀವಿಗಳು, ನಮ್ಮಂತೆ ಬದಕಲು ಅವುಗಳಿಗೂ ಹಕ್ಕಿದೆ. ಮಾನವರು ಸಸ್ಯಾಹಾರಿಗಳಾಗುವ ಮೂಲಕ ಪ್ರಾಣಿ ಹಿಂಸೆಯನ್ನು ನಿಲ್ಲಿಸಬೇಕು ಎಂದ ಅವರು, ಸಸ್ಯಾಹಾರದ ಮಹತ್ವ ಮತ್ತು ಅದರಿಂದಾಗುವ ಲಾಭಗಳ ಬಗ್ಗೆ ತಿಳಿಸಿಕೊಟ್ಟರು.
ಕರ್ನಾಟಕ ಧ್ಯಾನ ಪ್ರಚಾರ ಕೇಂದ್ರದ ಅಧ್ಯಕ್ಷ ಬರಹ ಮೂರ್ತಿ ಮಾತನಾಡಿ, ಪಿರಮಿಡ್ ಧ್ಯಾನಕ್ಕೆ ಅಪಾರವಾದ ಶಕ್ತಿ ಇದೆ. ಮಾನವನ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳಿಂದ ಮುಕ್ತಿಪಡೆಯಲು ಧ್ಯಾನ ಅವಶ್ಯಕ. ಧ್ಯಾನಿಗಳಾಗುವುದರಿಂದ ಒತ್ತಡ ರಹಿತ ಜೀವನ ಸಾಧ್ಯ. ಇದು ಪರೋಕ್ಷವಾಗಿ ಆರ್ಥಿಕ, ಸಾಮಾಜಿ, ಶೈಕ್ಷಣಿಕ ಅಬಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.
ಜನಜಾಗೃತಿ ಜಾಥಾ: ಗುರುವಾರ ಬೆಳಗ್ಗೆ ನಗರದ ಗುರುಭವನದಿಂದ ಶಾಖಾಹಾರ ಜನ ಜಾಗೃತಿ ಜಾಥ ನಗರದ ಪ್ರಮುಖ ರಸ್ತೆಗಳು ಮತ್ತು ಬಡಾವಣೆಗಳಲ್ಲಿ ಸಂಚರಿಸಿ ಶಾಖಾಹಾರ ಮತ್ತು ಧ್ಯಾನ ಕುರಿತು ಜನ ಜಾಗೃತಿ ಮೂಡಿಸಲಾಯಿತು.
ಪಿರಮಿಡ್ ಧ್ಯಾನಕೇಂದ್ರ ಲೋಕಾರ್ಪಣೆ: ಚಾಮುಂಡೇಶ್ವರಿ ಬಡಾವಣೆಯಲ್ಲಿ ನಿರ್ಮಿಸಿರುವ ಪಿರಮಿಡ್ ಧ್ಯಾನ ಕೇಂದ್ರವನ್ನು ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟಿಸ್ ಮೂವ್‌ಮೆಂಟ್ (ಇಂಡಿಯಾ)ದ ಸಂಸ್ಥಾಪಕ ಬ್ರಹ್ಮರ್ಷಿ ಸುಭಾಷ್ ಪತ್ರೀಜಿ ಲೋಕಾರ್ಪಣೆ ಮಾಡಿದರು. ಪಿರಮಿಡ್ ಧ್ಯಾನ ಕೇಂದ್ರ ಮುಖ್ಯಸ್ಥ ಎನ್.ಕೃಷ್ಣಪ್ಪ, ಮೂವ್‌ಮೆಂಟ್‌ನ ಕಾರ್ಯದರ್ಶಿ ಅರುಣಾಚಲಂ ಇದ್ದರು.