ಕಲಬುರಗಿ: ಶಿಕ್ಷಣದಿಂದ ಯಾರೂ ಕೂಡ ವಂಚಿತರಾಗಬಾರದು. ಅನಕ್ಷರಸ್ಥರು ವಯಸ್ಕರ ಶಿಕ್ಷಣ ಪಡೆಯುವ ಮೂಲಕ ಶಿಕ್ಷಿತರಾಗಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸೇಷನ್ ನ್ಯಾಯಾಧಿಧೀಶ ಕೆ.ಸುಬ್ರಮಣ್ಯ ಹೇಳಿದರು.
ನಗರದ ಕೇಂದ್ರ ಕಾರಾಗೃಹದಲ್ಲಿ ಲೋಕ ಶಿಕ್ಷಣ ನಿರ್ದೇಶನಾಲಯ, ಕಾರಾಗೃಹ ಮತ್ತು ಸುಧಾರಣೆ ಸೇವೆ ಇಲಾಖೆ, ಜಿಲ್ಲಾಡಳಿತ, ಜಿಪಂ ಆಶ್ರಯದಲ್ಲಿ ನಡೆದ ಸಾಕ್ಷರತಾ ಕಾರ್ಯಕ್ರಮ, ಕಲಿಕಾ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ| ದಿಲೀಷ್ ಸಸಿ ಮಾತನಾಡಿ, ಸಾಕ್ಷರತಾ ಕಾರ್ಯಕ್ರಮಕ್ಕೆ ಅಗತ್ಯವಾದ ಎಲ್ಲ ಸೌಲಭ್ಯ ಒದಗಿಸಲಾಗಿದೆ. ಅಲ್ಲದೇ, ಕಾರಾಗೃಹದಲ್ಲಿ ಸಸ್ಯತೋಟ ಮತ್ತು ಎರೆ ಹುಳು ಗೊಬ್ಬರ ತಯಾರಿಕೆ ಘಟಕ ಸ್ಥಾಪಿಸಲು ಸೂಕ್ತ ನಿರ್ದೇಶನ ನೀಡುವುದಾಗಿ ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಪಿ.ಎಸ್.ರಮೇಶ ಮಾತನಾಡಿ, ಜೈಲು ವಾಸಿಗಳು “ಪಡನಾ ಲಿಖನಾ’ ಸಾಕ್ಷರತಾ ಕಾರ್ಯಕ್ರಮದ ಸದುಪಯೋಗ ಪಡೆಯಬೇಕು ಎಂದರು. “ಕಲಿಕೆಯಿಂದ ಬದಲಾವಣೆ’ ಸಾಕ್ಷರತಾ ಕಾರ್ಯಕ್ರಮದಡಿ 10 ಜನ ಸ್ವಯಂ ಸೇವಕ ಬೋಧಕರಿಗೆ ಬೋಧನಾ ಸಾಮಗ್ರಿಗಳ ಕಿಟ್ ವಿತರಿಸಲಾಯಿತು. ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುಶಾಂತ ಚೌಗಲೆ, ನಗರ ಉಪ ಪೊಲೀಸ್ ಆಯುಕ್ತ ಅಡೂxರು ಶ್ರೀನಿವಾಸಲು, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಹಣಮಂತಪ್ಪಾ ನಾಟೀಕಾರ ಇದ್ದರು. ತಾಲೂಕು ಸಂಯೋಜಕರಾದ ಮುರುಗೇಂದ್ರ ಮಸಳಿ, ಮಲ್ಲಯ್ಯ ಹಿರೇಮಠ, ಸುರೇಶ ಜಾಧವ ಮತ್ತು ಶಿಕ್ಷಣ ಪ್ರೇಮಿ ಬಂಡಯ್ಯ ಹಿರೇಮಠ ಸಾಕ್ಷರಗೀತೆ ಹಾಡಿದರು. ಕಾರಾಗೃಹದ ಪ್ರಭಾರಿ ಅಧೀಕ್ಷಕ ವಿ.ಕೃಷ್ಣಮೂರ್ತಿ ಸ್ವಾಗತಿಸಿದರು. ಶಿವಾನಂದ ಚವ್ಹಾಣ ಮಾತನಾಡಿದರು. ಶಿಕ್ಷಕ ನಾಗರಾಜ ಮೂಲಗೆ ನಿರೂಪಿಸಿದರು. ಪ್ರಭು ಜಾಧವ ವಂದಿಸಿದರು.