Advertisement

Moon: ಭೂಮಿಯ ಎಲೆಕ್ಟ್ರಾನ್‌ಗಳೇ ಚಂದ್ರನಲ್ಲಿ ನೀರಿರಲು ಕಾರಣ?

11:41 PM Sep 15, 2023 | Team Udayavani |

ಹೊಸದಿಲ್ಲಿ: ಚಂದ್ರನ ಮೇಲೆ ನೀರಿ­ದೆಯಾ? ಅಲ್ಲಿ ಜೀವಿಗಳು ವಾಸಿ­ಸಲು ಸಾಧ್ಯವೇ? ಈ ಪ್ರಶ್ನೆಯ­ನ್ನಿಟ್ಟುಕೊಂಡು ವಿಜ್ಞಾನಿಗಳು ಹಲವು ದಶಕಗಳಿಂದ ಸಂಶೋಧನೆ ನಡೆಸು­ತ್ತಿದ್ದಾರೆ. ಭಾರತದ ಚಂದ್ರಯಾನ-1 ನೌಕೆ ಚಂದ್ರನ ಮೇಲೆ ಇಳಿದಿದ್ದಾಗ, ಭೂಮಿಯ­ಲ್ಲಿನ ಶಕ್ತಿಯುತ ಎಲೆಕ್ಟ್ರಾನ್‌ಗಳೇ ಚಂದ್ರನಲ್ಲಿ ನೀರು ರಚನೆ­ಯಾಗಲು ಕಾರಣವಾಗಿದ್ದಿರಬಹುದು ಎಂಬ ಸಲಹೆ ನೀಡಿತ್ತು. ಅದನ್ನೀಗ ಅಮೆರಿಕದ ಮನೋ­ವಾದಲ್ಲಿರುವ ಹವಾಯಿ ವಿಶ್ವವಿದ್ಯಾಲಯದ ಸಂಶೋಧಕರು ಸಮರ್ಥಿಸಿಕೊಂಡಿದ್ದಾರೆ.

Advertisement

ಈ ಬಗ್ಗೆ ನೇಚರ್‌ ಅಸ್ಟ್ರಾನಮಿ ಎಂಬ ನಿಯತಕಾಲಿಕೆಯಲ್ಲಿ ಒಂದು ಸಂಶೋಧನಾ ಲೇಖನ ಪ್ರಕಟ­ವಾಗಿದೆ. ಎಲೆಕ್ಟ್ರಾನ್‌ಗಳು ನೀರು ರೂಪುಗೊಳ್ಳಲು ಸಹಾಯ ಮಾಡಿ­ದ್ದಿರಬಹುದು ಎಂಬ ಅಭಿಪ್ರಾಯ­ವನ್ನು ಅದರಲ್ಲೂ ವ್ಯಕ್ತಪಡಿಸಲಾಗಿದೆ. ಈ ಹಿಂದೆ ಚಂದ್ರಯಾನ-1ರ ಶೋಧದಲ್ಲಿ ಭೂಮಿಯ ಪ್ಲಾಸ್ಮಾ ಪದರ (ವಾತಾ­ವರಣ­ದಲ್ಲಿ ಸೂಕ್ಷ್ಮವಾಗಿರುತ್ತದೆ)ದಲ್ಲಿರುವ ಎಲೆಕ್ಟ್ರಾನ್‌ಗಳು, ಚಂದ್ರನ ಮೇಲ್ಪದರದಲ್ಲಿ ಹವಾಮಾನ ಪ್ರಕ್ರಿಯೆಗೆ ನೆರವು ನೀಡಿರುವುದು, ಬಂಡೆಗಳು, ಲವಣಗಳನ್ನು ವಿಭಜಿಸಲು ಸಹಾಯ ಮಾಡಿರುವುದು ಗೊತ್ತಾಗಿತ್ತು.

ಹೊಸತಾಗಿ ಪ್ರಕಟವಾಗಿರುವ ಸಂಶೋಧನಾ ಲೇಖನ, ಚಂದ್ರನ ಗುಪ್ತಭಾಗಗಳಲ್ಲಿ ಗಡ್ಡೆಗಟ್ಟಿ­ರುವ ನೀರಿನ ಮೂಲವೇನು ಎಂಬ ಸುಳಿವು ನೀಡುತ್ತಿದೆ. ಚಂದ್ರನ ಮೇಲೆ ನೀರು ಸಾಂದ್ರವಾಗಿರುವ, ಹಂಚಿಕೆಯಾಗಿರುವ ಬಗೆಗಿನ ಜ್ಞಾನ ಬಹಳ ಅಗತ್ಯ ಎಂದು ಲೇಖಕರು ಹೇಳಿದ್ದಾರೆ.

ಚಂದ್ರನಲ್ಲಿರುವ ನೀರಿನ ಕಣಗಳ ಆವಿಷ್ಕಾರದಲ್ಲಿ ಚಂದ್ರಯಾನ-1 ಮಹತ್ವದ ಪಾತ್ರ ವಹಿಸಿತ್ತು. 2008ರಲ್ಲಿ ಭಾರತದ ನೌಕೆಯು ಶಶಾಂಕನ ಮೇಲ್ಮೆ„ಯನ್ನು ಸ್ಪರ್ಶಿಸಿತ್ತು. ಇದು 2009ರ ಆಗಸ್ಟ್‌ವರೆಗೆ ಕಾರ್ಯನಿರ್ವಹಿಸಿತ್ತು. ಇತ್ತೀಚೆಗಷ್ಟೇ ಭಾರತವು ಚಂದ್ರಯಾನ-3 ಯೋಜನೆಯ ಮೂಲಕ ಲ್ಯಾಂಡರ್‌ ಮತ್ತು ರೋವರ್‌ ಅನ್ನು ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಇಳಿಸಿ ಇತಿಹಾಸ ನಿರ್ಮಿಸಿದೆ.

ಸೌರಮಾರುತದ ಎಫೆಕ್ಟ್
ಸೌರಮಾರುತದಲ್ಲಿ ಫೋಟಾನ್‌ನಂತಹ ಶಕ್ತಿ ಯುತ ಕಣಗಳಿರುತ್ತವೆ. ಇದನ್ನು ಒಳಗೊಂಡ ಸೌರಮಾರುತಗಳು ಚಂದ್ರನ ಮೇಲ್ಪದರದ ಮೇಲೆ ಅಪ್ಪಳಿಸುವುದರಿಂದ ಅಲ್ಲಿ ನೀರು ರೂಪುಗೊಂಡಿರಬಹುದು ಎಂಬ ಅಂದಾಜಿದೆ. ಭೂಮಿಯ ಕಾಂತೀಯಧ್ರುವದ ಮೂಲಕ ಚಂದ್ರ ಚಲಿಸುವುದರಿಂದ ಸೌರಮಾರುತಗ ಳಿಂದ, ಚಂದ್ರನಿಗೆ ರಕ್ಷಣೆ ಸಿಗುತ್ತದೆ. ಆದರೆ ಸೂರ್ಯನ ಲಘುವಾದ ಫೋಟಾನ್‌ ಕಣಗ ಳಿಂದ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ ಎಂದು ಹವಾಯಿ ವಿವಿ ವಿಜ್ಞಾನಿಗಳು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next