ಉಪಗ್ರಹ, ವೈಜ್ಞಾನಿಕ ಉಪಕರಣಗಳು ಇಲ್ಲದಿದ್ದ ಕಾಲದಲ್ಲಿ ಭೂಮಿಯ ಸುತ್ತಳತೆಯನ್ನು ಮನುಷ್ಯ ಪತ್ತೆ ಹಚ್ಚಿದ್ದು ಅಚ್ಚರಿಯೇ ಸರಿ. ಅದಕ್ಕೆ ಕಾರಣ ಗಣಿತಜ್ಞರು. ಅಂಕೆ- ಸಂಖ್ಯೆಗಳ ಸಹಾಯದಿಂದ ಕುಳಿತಲ್ಲೇ ಅವರು ಭೂಮಿಯ ಸುತ್ತಳತೆ ಪತ್ತೆ ಹಚ್ಚಲು ಅವರ ಜ್ಞಾನವಷ್ಟೇ ಅಲ್ಲ, ಸೂಕ್ಷ್ಮಪ್ರಜ್ಞೆಯೂ ಕಾರಣವಾಗಿದೆ. 2,200 ವರ್ಷಗಳ ಹಿಂದೆ ಜೀವಿಸಿದ್ದ ಗಣಿತಜ್ಞ ಎರಾಟೋಸ್ತೀನಿಸ್. ಒಮ್ಮೆ ಅವನ ಕಿವಿಗೆ ಸುದ್ದಿಯೊಂದು ಬೀಳುತ್ತದೆ. ಸಾಮಾನ್ಯವಾಗಿ ಮಧ್ಯಾಹ್ನ ಸೂರ್ಯ ನೆತ್ತಿಯ ಮೇಲಿರುತ್ತಾನೆ ಹೀಗಾಗಿ ನೆರಳು ನೆಲದ ಮೇಲೆ ಚಾಚುವುದಿಲ್ಲ, ಕಾಲ ಬಳಿಯಲ್ಲೇ ಉಡುಗಿಹೋಗುತ್ತದೆ. ಆದೇ ಸಂಜೆ ನಮ್ಮ ನೆರಳು ಉದ್ದಕ್ಕೆ ಚಾಚುತ್ತದೆ. ಆದರೆ, ಗ್ರೀಸ್ ದೇಶದ ಸೈಯೀನ್ ನಗರದಲ್ಲಿ ಸಂಜೆಯ ಹೊತ್ತು ನೆರಳು ನೆಲದಲ್ಲಿ ಉದ್ದಕ್ಕೆ ಚಾಚುವುದಿಲ್ಲ ಎನ್ನುವ ಸುದ್ದಿ ಅವನಲ್ಲಿ ಅಚ್ಚರಿ ಮೂಡಿಸುತ್ತದೆ. ಅವನು ಅಲ್ಲಿಗೆ ತೆರಳಿ ನೆಲದಲ್ಲಿ ಕಡ್ಡಿಯನ್ನು ನೆಟ್ಟು ಅದು ನಿಜವೆಂದು ತಿಳಿದುಕೊಳ್ಳುತ್ತಾನೆ. ನಂತರ ಆ ಜಾಗದಿಂದ ಸುಮಾರು 800 ಕಿ.ಮೀ ದೂರವಿದ್ದ ಅಲೆಕ್ಸಾಂಡ್ರಿಯಾ ನಗರದಲ್ಲಿ ಕಡ್ಡಿ ನೆಟ್ಟು ಪರೀಕ್ಷಿಸಿದಾಗ ಅಲ್ಲಿ ಅದರ ನೆರಳು ಸ್ವಲ್ಪವೇ ಸ್ವಲ್ಪ ಚಾಚಿದ್ದು ಕಂಡುಬಂದಿತ್ತು. ಅದನ್ನು ಅಧ್ಯಯನಕ್ಕೊಳಪಡಿಸಿದಾಗ 7.2 ಡಿಗ್ರಿಯಷ್ಟು ವ್ಯತ್ಯಾಸ ದೊರಕಿತ್ತು. ಅದಕ್ಕೆ ಹಿಂದೆಯೇ ಭೂಮಿ ಗುಂಡಗಿದೆ ಎಂದು ಅರಿಸ್ಟಾಟಲ್ ಮತ್ತು ಪೈಥಾಗೋರಸ್ ಮತ್ತಿತರ ವಿಜ್ಞಾನಿಗಳು ಪ್ರತಿಪಾದಿಸಿದ್ದರು. ಹೀಗಾಗಿ ಎರಾಟೋಸ್ತೀನಿಸ್‌ಗೆ ಭೂಮಿ ಗುಂಡಗಿದೆ ಎನ್ನುವುದರಲ್ಲಿ ಅನುಮಾನವಿರಲಿಲ್ಲ. ಈಗ ಲೆಕ್ಕಕ್ಕೆ ಬರೋಣ. ಒಂದು ವೃತ್ತವೆಂದರೆ 360 ಡಿಗ್ರೀ. 7.2 ಡಿಗ್ರಿ ಎಂದರೆ ವೃತ್ತದ 50 ಪಟ್ಟು ಚಿಕ್ಕ ಭಾಗ. ಅದು ಎರಡು ಪಟ್ಟಣಗಳ ನಡುವಿನ ವ್ಯತ್ಯಾಸ (800 ಕಿ.ಮೀ). ಅದರ ಸಹಾಯದಿಂದ ಭೂಮಿಯ ಸುತ್ತಳತೆ 40,000 ಕಿ.ಮೀ ಎನ್ನುವುದನ್ನು ಎರಾಟೋಸ್ತೀನಿಸ್ ಕಂಡುಹಿಡಿದ.
ಇದಾಗಿ ಸುಮಾರು 2,200 ವರ್ಷಗಳ ನಂತರ ಉಪಗ್ರಹದ ಸಹಾಯದಿಂದ ಭೂಮಿಯ ಸುತ್ತಳತೆ 40,075 ಕಿ.ಮೀ ಎಂದು ನಿಖರವಾಗಿ ಪತ್ತೆ ಹಚ್ಚಲಾಯಿತು.