ಚೆನ್ನೈ: ಬಂಗಾಳ ಕೊಲ್ಲಿಯಲ್ಲಿ ಮಂಗಳವಾರ ಮಧ್ಯಾಹ್ನ ಭೂಕಂಪನ ಉಂಟಾಗಿದ್ದು, ತಮಿಳುನಾಡು ಮತ್ತು ಆಂಧ್ರಪ್ರದೇಶದ ಕೆಲ ನಗರಗಳಲ್ಲಿ ಅದರ ಅನುಭವ ಉಂಟಾಗಿದೆ.
ಚೆನ್ನೈ, ಕಾಕಿನಾಡ ಸೇರಿ ಅನೇಕ ನಗರಗಳಲ್ಲಿ ಭೂಮಿ ಕಂಪಿಸಿದೆ ಎಂದು ಹೇಳಲಾಗಿದೆ.
ಚೆನ್ನೈನಿಂದ 320 ಕಿ.ಮೀ ದೂರ ಹಾಗೂ ಆಂಧ್ರದ ಕಾಕಿನಾಡದಿಂದ 296 ಕಿಮೀ ದೂರದಲ್ಲಿ ಸಮುದ್ರ ಮಧ್ಯದಲ್ಲಿ 10 ಕಿ.ಮೀ ಆಳದಲ್ಲಿ ಭೂಮಿ ಕಂಪಿಸಿದೆ. ಮಧ್ಯಾಹ್ನ 12.35ರ ಸಮಯಕ್ಕೆ 5.1 ತೀವ್ರತೆಯಲ್ಲಿ ಕಂಪನ ಉಂಟಾಗಿದೆ.
ಇದನ್ನೂ ಓದಿ:100 ಬಿಲಿಯನ್ ಡಾಲರ್ ಬಂಡವಾಳ ಗಳಿಸಿದ ಇನ್ಫೋಸಿಸ್
ಅದರ ಪರಿಣಾಮ ಕಾಕಿನಾಡ, ರಜೋಲ್, ಪಾಲಕೊಲ್ಲು, ನರಸಪುರಂನ ಮನೆಗಳ ಸೀಲಿಂಗ್ ಫ್ಯಾನ್ ಅಲುಗಾಡಿದೆ. ವಸ್ತುಗಳು ಕೆಳಗೆ ಬಿದ್ದಿವೆ ಎಂದು ಸಾರ್ವಜನಿಕರು ಹೇಳಿದ್ದಾರೆ. ಈ ಅನುಭವ ಚೆನ್ನೈನಲ್ಲೂ ಆಗಿದೆ.
ಲಘುವಾಗಿ ಭೂಮಿ ಕಂಪಿಸಿದ್ದು, ಹೆಚ್ಚೇನೂ ಅಪಾಯ ಸಂಭವಿಸಿದ ವರದಿಯಾಗಿಲ್ಲ. ಹಾಗೆಯೇ ಈವರೆಗೂ ಸುನಾಮಿ ಮುನ್ನೆಚ್ಚರಿಕೆ ನೀಡಿಲ್ಲ. ಚೆನ್ನೈನಲ್ಲಿ ಸಮುದ್ರ ತೀರದ ಸ್ಥಳಗಳು, ತಿರುವನ್ಮಿಯೂರ್, ಅಲ್ವಾರ್‌ಪೇಟ್ ಮುಂತಾದೆಡೆ ಭೂಮಿ ನಡುಗಿದ ಅನುಭವವಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಹೇಳಿಕೊಂಡಿದ್ದಾರೆ.