Advertisement

ಭೂಕಂಪ: ಸಿಎಂ ಗಮನಕ್ಕೆ ತಂದ ಸಂಸದ ಜಾಧವ-ತೇಲ್ಕೂರ

09:55 AM Oct 14, 2021 | Team Udayavani |

ಚಿಂಚೋಳಿ: ಸರ್ಕಾರದಿಂದ ವಿಪತ್ತು ನಿರ್ವಹಣಾ ಅಧಿಕಾರಿಗಳ ತಂಡವನ್ನು ಗಡಿಕೇಶ್ವಾರ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಕಳಿಸಿ, ಭೂಕಂಪದ ಸಮಗ್ರ ಅಧ್ಯಯನ ನಡೆಸಿ, ಅಲ್ಲಿನ ನಿವಾಸಿಗಳಲ್ಲಿ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಕಲಬುರಗಿ ಸಂಸದ ಡಾ| ಉಮೇಶ ಜಾಧವ, ಸೇಡಂ ಶಾಸಕ ರಾಜಕುಮಾರ ಪಾಟೀಲ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಕೋರಿದರು.

Advertisement

ತಾಲೂಕಿನ ಗಡಿಕೇಶ್ವಾರ ಮತ್ತು ಸುತ್ತಲಿನ ಗ್ರಾಮಗಳಲ್ಲಿ ನಿರಂತರ ಭೂಮಿಯಿಂದ ಭಾರಿ ಶಬ್ದ ಉಂಟಾಗಿ ನಂತರ ಭೂಮಿ ಕಂಪಿಸುತ್ತಿದೆ. ಇದರಿಂದ ಈ ಭಾಗದ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.

ಚಿಂಚೋಳಿ, ಕಾಳಗಿ, ಚಿತ್ತಾಪುರ, ಸೇಡಂ ತಾಲೂಕಿನ ಗ್ರಾಮಗಳಲ್ಲಿ ಕಳೆದ ಐದಾರು ವರ್ಷಗಳಿಂದ ಆಗಾಗ ಭೂಮಿ ನಡುಗುತ್ತಲೇ ಇದೆ. ಹೀಗಾಗಿ ಕೆಲವು ಗ್ರಾಮಸ್ಥರು ತಮ್ಮ ಗೃಹೋಪಯೋಗಿ ವಸ್ತುಗಳೊಂದಿಗೆ ನೆಂಟರ ಮನೆಗೆ ತೆರಳಿದ್ದಾರೆ ಎಂದು ವಿವರಿಸಿದರು.

ನಂತರ ಗಡಿಕೇಶ್ವಾರ, ಹಲಚೇರಾ, ಹೊಸಳ್ಳಿ, ಕೊರವಿ, ಕೆರೋಳಿ, ಭಂಟನಳ್ಳಿ, ರುದನೂರ, ಭೂತಪೂರ, ಚಿಂತಪಳ್ಳಿ, ರಾಯಕೋಡ, ಕೊಡದೂರ, ಮಂಗಲಗಿ, ಬೆನಕನಳ್ಳಿ ಗ್ರಾಮಗಳಲ್ಲಿ ಭೂ ತಜ್ಞರನ್ನು ಕಳಿಸಿ, ಪರಿಹಾರ ಸೂಚಿಸುವುದು ಅಗತ್ಯವಾಗಿದೆ ಎಂದು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟರು. ಸಮಸ್ಯೆ ಆಲಿಸಿದ ಮುಖ್ಯಮಂತ್ರಿಗಳು ಜಿಲ್ಲಾಡಳಿತಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗುವುದು. ಸರ್ಕಾರದಿಂದಲೂ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ತದನಂತರ ವಿಪತ್ತು ನಿರ್ವಹಣಾ ಆಯುಕ್ತ ಡಾ| ಮನೋಜರಂಜನ್‌ ಅವರ ಜತೆ ಈ ಕುರಿತು ಚರ್ಚಿಸಿದರು. ಸುದ್ದಿಗಾರರಿಗೆ ಈ ವಿಷಯ ತಿಳಿಸಿರುವ ಸಂಸದರು, ಗಡಿಕೇಶ್ವಾರ ಗ್ರಾಮಗಳಿಗೆ ಜಿಲ್ಲಾಧಿಕಾರಿಗಳು ಹಾಗೂ ಅಧಿಕಾರಿಗಳು ತೆರಳಿ ಜನರಲ್ಲಿ ಧೈರ್ಯ ತುಂಬುವಂತೆ ಸೂಚಿಸಲಾಗಿದೆ. ಅ. 16ರಂದು ಕೊರವಿ ರಾಮನಗರ ತಾಂಡಾದಲ್ಲಿ ಗ್ರಾಮ ವಾಸ್ತವ್ಯ ಮಾಡಲಾಗುವುದು ಎಂದು ಹೇಳಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next