ವಿಜಯಪುರ: ಬಸವನಾಡಿನಲ್ಲಿ ಕಳೆದ ಮೂರು ದಿನಗಳಿಂದ ನಿರಂತರ ಐದಾರು ಬಾರಿ ಭೂಮಿ ಕಂಪಿಸಿದೆ. ಸತತವಾಗಿ ಭೂಕಂಪದ ಅನುಭವದಿಂದ ಜಿಲ್ಲೆಯ ಜನರು ಭಯಭೀತರಾಗಿದ್ದು, ಅಧ್ಯಯನ ನಡೆಸುವಂತೆ ಸರ್ಕಾರಕ್ಕೆ ಮನವಿ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ.
ಭಾನುವಾರ ರಾತ್ರಿ 6-27ಕ್ಕೆ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದಲ್ಲಿ ಹಾಗೂ 3-13ಕ್ಕೆ, ಸೋಮವಾರ ಮಧ್ಯಾಹ್ನ 4-26, ರಾತ್ರಿ 9-23 ಕ್ಕೆ ವಿಜಯಪುರ ನಗರದ ಬಹುತೇಕ ಭಾಗಗಳಲ್ಲಿ ಭೂಮಿ ಕಂಪಿಸಿದೆ. ಶನಿವಾರ ರಾತ್ರಿ 8-16 ನಗರದಲ್ಲಿ ಭೂಮಿ ಕಂಪಿಸಿತ್ತು.
ಹೀಗೆ ಕಳೆದ ಮೂರು ದಿನಗಳಿಂದ ಐದಾರು ಬಾರಿ ಭೂಮಿ ಕಂಪಿಸಿದ್ದು, ಮನೆಗಳು ಅಲುಗಾಡಿ, ವಸ್ತುಗಳು ಕೆಳಗೆ ಬೀಳುತ್ತಿವೆ. ಭೂಕಂಪನದ ಭೀತಿಯಿಂದಾಗಿ ಜಿಲ್ಲೆಯ ಜನರು ಮನೆಗಳ ಒಳಗೆ ನಿಲ್ಲಲೂ ಭಯಪಡುವಷ್ಟು ಆತಂಕ ಸೃಷ್ಟಿಯಾಗಿದೆ.
ಈ ಮಧ್ಯೆ ಅಪಾಯ ರಹಿತ ಭೂಕಂಪ ಸಂಭವಿಸಿದ ಉಕ್ಕಲಿ ಗ್ರಾಮಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿದೆ.
ಮತ್ತೊಂದೆಡೆ ಜಿಲ್ಲೆಯಲ್ಲಿ ಸತತವಾಗಿ ಲಘು ಭೂಕಂಪ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಜನರು ಆತಂಕದಲ್ಲಿದ್ದಾರೆ. ಹೀಗಾಗಿ ಅಧ್ಯಯನ ನಡೆಸಲು ಭೂಗರ್ಭ ತಜ್ಞರ ತಂಡ ಕಳಿಸುವಂತೆ ಸರ್ಕಾರಕ್ಕೆ ಮನವಿ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ. ಮಂಗಳವಾರ ಸರ್ಕಾರಕ್ಕೆ ಈ ಬಗ್ಗೆ ಪತ್ರ ಬರೆಯುವುದಾಗಿ ಜಿಲ್ಲಾಧಿಕಾರಿ ಡಾ.ವಿ.ಬಿ. ದಾನಮ್ಮನವರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.