ಕಾಬೂಲ್/ಹೊಸದಿಲ್ಲಿ: ಅಫ್ಘಾನಿಸ್ಥಾನದ ಉತ್ತರ ಭಾಗದಲ್ಲಿ 6.1 ತೀವ್ರತೆಯ ಭೂಕಂಪ ಬುಧವಾರ ಮಧ್ಯಾಹ್ನ ಸಂಭವಿಸಿದ್ದು, ಇದರ ಪ್ರಭಾವ ಉತ್ತರ ಭಾರತದಲ್ಲೂ ಕಂಡುಬಂದಿದೆ. ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಒಂದು ನಿಮಿಷಕ್ಕೂ ಹೆಚ್ಚು ಕಾಲ ಭೂಮಿ ಕಂಪಿಸಿದೆ. ಭೂಕಂಪದಿಂದಾಗಿ ಪಾಕಿಸ್ಥಾನದಲ್ಲಿ ಓರ್ವ ಬಾಲಕಿ ಸಾವನ್ನಪ್ಪಿದ್ದು, 19 ಜನರಿಗೆ ಗಾಯವಾಗಿದೆ. 2015ರಲ್ಲಿ 7.5 ತೀವ್ರತೆಯ ಭೂಕಂಪ ಸಂಭವಿಸಿ 380 ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ ಜುರ್ಮ್ ಪ್ರದೇಶದಲ್ಲೇ ಈ ಬಾರಿಯೂ ಕಂಪನ ಸಂಭವಿಸಿದೆ. ಶ್ರೀನಗರದಲ್ಲಿ ಫ್ಲೈಓವರ್‌ಗಾಗಿ ನಿರ್ಮಿಸಿದ್ದ ಕಾಂಕ್ರಿಟ್ ಪಿಲ್ಲರ್ ಕುಸಿದು ಬಿದ್ದಿದೆ. ಹಿಂದು ಕುಷ್ ಪರ್ವತ ಪ್ರಾಂತ್ಯದ ತಜಕಿಸ್ತಾನದ ಗಡಿಯಲ್ಲಿ ಭೂಕಂಪ ಸಂಭವಿಸಿದ್ದು, ಇದರ ಕೇಂದ್ರ 191 ಕಿ.ಮೀ ಆಳದಲ್ಲಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ಹೇಳಿದೆ. ಕಾಬೂಲ್‌ನಲ್ಲಿ ಎರಡು ಬಾರಿ ತೀವ್ರ ಪ್ರಮಾಣದ ಕಂಪನ ಸಂಭವಿಸಿದ್ದು, ಭೀತಿಗೊಂಡ ಜನರು ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ಪಾಕಿಸ್ಥಾನದ ಇಸ್ಲಾಮಾ ಬಾದ್, ಪೇಶಾವರ ಮತ್ತು ಲಾಹೋರ್‌ನಲ್ಲೂ ಭೂಮಿ ಕಂಪಿಸಿದ್ದು, ಜನರನ್ನು ಕಟ್ಟಡಗಳಿಂದ ತಕ್ಷಣ ಸ್ಥಳಾಂತರಗೊಳಿಸಲಾಗಿದೆ.
ಪಾಕ್‌ನಲ್ಲಿ ಹಲವು ಕಟ್ಟಡಗಳು ಉರುಳಿರುವುದರಿಂದ ಇಲ್ಲಿ ಇನ್ನಷ್ಟು ಜನರಿಗೆ ಗಾಯವಾಗಿರಬಹುದು ಎಂದು ಊಹಿಸಲಾಗಿದೆ. 2005ರ ಅಕ್ಟೋಬರ್‌ನಲ್ಲಿ ಪಾಕ್‌ನ ಕೆಲ ಭಾಗಗಳಲ್ಲಿ ಭೂಕಂಪವಾಗಿ 80 ಸಾವಿರ ಮಂದಿ ಅಸುನೀಗಿದ್ದರು.