Advertisement

ಭೂಕಂಪನ, ಅತಿ ಮಳೆ ಭೂ ಕುಸಿತಕ್ಕೆ ಕಾರಣ

11:00 AM Dec 15, 2018 | Team Udayavani |

ಮಡಿಕೇರಿ: ಕೊಡಗು ಕೃಷಿ ವಿಜ್ಞಾನಿಗಳ ವೇದಿಕೆಯು ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದ ಸಹಯೋಗದೊಂದಿಗೆ ಅತಿವೃಷ್ಟಿ ಕುರಿತು ಅಧ್ಯಯನ ನಡೆಸಿ ಭೂ ಕುಸಿತಕ್ಕೆ ಕಾರಣವಾದ ಕೆಲವು ಅಂಶಗಳನ್ನು ಗುರುತಿಸಿ ಪ್ರಕಟಿಸಿದೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೃಷಿ ವಿಜ್ಞಾನ ವೇದಿಕೆಯ ಅಧ್ಯಕ್ಷ ಕೆ.ಆರ್‌. ಬಾಬು ರಾಘವನ್‌ ಹಾಗೂ ಇತರ ಪ್ರಮುಖರು, ಭೂ ಕುಸಿತದ ಕಾರಣಗಳ ಕುರಿತು ಮಾಹಿತಿ ನೀಡಿದರು. 2018ರ ಜುಲೈ 9ರಂದು ಮಡಿಕೆೇರಿ ವಿಭಾಗದಲ್ಲಿ ಭೂಕಂಪನವಾಗಿತ್ತು. ಇದರ ತೀವ್ರತೆ 3.4 ಎಂದು ರಿಕ್ಟರ್‌ ಮಾಪಕದಲ್ಲಿ ಕಂಡು ಬಂದಿದೆ. ಭೂ ಕಂಪನವು ಒಂದು ತಿಂಗಳ ಅನಂತರ ನಡೆದ ಭೂ ಕುಸಿತಕ್ಕೆ ಕಾರಣವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಜೂನ್‌ನಿಂದ ಸಪ್ಟೆಂಬರ್‌ವರೆಗೆ 3,463 ಮಿ.ಮೀ. ಮಳೆ ದಾಖಲಾಗಿದ್ದು, ಸಾಧಾರಣ ಮಳೆಗಿಂತ ಶೇ.59ರಷ್ಟು ಹೆಚ್ಚಾಗಿದೆ. ಆಗಸ್ಟ್‌ 13 ರಿಂದ 19ರ ವರೆಗೆ ಜಿಲ್ಲೆಯಲ್ಲಿ 594.2ಮಿ.ಮೀ. ಮಳೆೆಯಾಗಿದ್ದು, ಇದು ಸಾಧಾರಣ ಮಳೆಗಿಂತ ಶೇ.272 ರಷ್ಟು ಹೆಚ್ಚಾಗಿದೆ. ಇದು ಕೂಡ ಭೂ ಕುಸಿತಕ್ಕೆ ಮೂಲ ಕಾರಣವೆಂದು ಹೇಳಬಹುದಾಗಿದೆ. ಇದರ ಪರಿಣಾಮದಿಂದ ಆಗಸ್ಟ್‌ 15, 16 ಮತ್ತು 17 ರಂದು ವಿವಿಧ ಕಡೆ ಭೂ ಕುಸಿತ ಸಂಭವಿಸಿದೆ.

ಭೂ ಕುಸಿತದಿಂದಾಗಿ ಅತಿವೃಷ್ಟಿ ಹಾನಿ ಪೀಡಿತ ಪ್ರದೇಶಗಳಲ್ಲಿ ಒಟ್ಟು 629.158 ಹೆಕ್ಟೇರ್‌ ಪ್ರದೇಶ ನಾಶವಾಗಿದೆ. ಅತಿಯಾದ ಮಳೆಯಿಂದ ಇಳಿಜಾರು ಪ್ರದೇಶ ಗಳಲ್ಲಿ ಭೂ ಕುಸಿತ ಉಂಟಾಗಿದೆ. ಇಳಿಜಾರು ಪ್ರದೇಶವನ್ನು ಗಟ್ಟಿ ಮಾಡುವುದರಿಂದ ಮತ್ತು ಭೂ ಸವೆತವನ್ನು ತಡೆಗಟ್ಟುವುದರಿಂದ ಮುಂದೆ ಎದುರಾಗಬಹುದಾದ ಅಪಾಯವನ್ನು ತಡೆಯಬಹುದಾಗಿದೆ.ಪತ್ರಿಕಾಗೋಷ್ಠಿಯಲ್ಲಿ ಭೂ ವಿಜ್ಞಾನಿ ಡಾ| ರವಿ ಕುಮಾರ್‌, ವೇದಿಕೆ ಉಪಾಧ್ಯಕ್ಷ ಸುಬ್ರಹ್ಮಣ್ಯ, ಕಾರ್ಯದರ್ಶಿ ಡಾ| ಸತೀಶ್‌, ಪ್ರಮುಖರಾದ ಜಿ.ಎಂ. ದೇವಗಿರಿ ಹಾಗೂ ಶೋಭಾ ಉಪಸ್ಥಿತರಿದ್ದರು.

ಹಿನ್ನೀರಿನ ಒತ್ತಡವೂ ಕಾರಣ
ಹಾರಂಗಿ ಜಲಾಶಯದಿಂದ ಒಳಹರಿವಿನ ಮಟ್ಟವನ್ನು ಮೊದಲೇ ಗಮನಿಸದೆ ಏಕಾಏಕಿ ನೀರನ್ನು ಹೊರಬಿಟ್ಟ ಪರಿಣಾಮವೂ ಮತ್ತು ಜಲಾಶಯದ ಹಿನ್ನೀರಿನ ಒತ್ತಡದಿಂದಲು ಭೂ ಕುಸಿತ ಉಂಟಾಗಿದೆ. ಬೆಟ್ಟ ಗುಡ್ಡಗಳ ಕಲ್ಲಿನ ರಚನೆಗಳಲ್ಲಿ ಉಂಟಾಗಿರುವ ಬಿರುಕುಗಳಿಂದಾಗಿ ಮಣ್ಣಿನ ಪ್ರದೇಶ ಸಡಿಲವಾಗಿದ್ದು, ತೇವಾಂಶ ಸಂಗ್ರಹಗೊಂಡು ಅಸ್ಥಿರತೆ ಉಲ್ಬಣಗೊಂಡಿದೆ. ಇಂತಹ ಪ್ರದೇಶಗಳು ಸಡಿಲಗೊಂಡು ಸಣ್ಣ ಕಣಿವೆ ಪ್ರದೇಶಗಳಾಗಿ ಪರಿವರ್ತನೆಗೊಂಡು ಭೂ ಕುಸಿತ ಉಂಟಾಗಿದೆ ಎಂದು ಪ್ರಮುಖರು ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next