ಮಡಿಕೇರಿ: ಕುಶಾಲನಗರದ ವಿವಿಧ ಬಡಾವಣೆಗಳು, ಕೊಪ್ಪ ಮತ್ತು ಬೈಲುಕೊಪ್ಪ ಭಾಗದಲ್ಲಿ ಭೂಕಂಪನದ ಅನುಭವವಾಗಿದೆ. ಆದರೆ ಇದನ್ನು ಅಧಿಕಾರಿಗಳು ದೃಢಪಡಿಸಿಲ್ಲ.
ಶುಕ್ರವಾರ ಬೆಳಗ್ಗೆ 6.25ರ ಸುಮಾರಿಗೆ 2ರಿಂದ 3 ಸೆಕೆಂಡುಗಳ ಕಾಲ ಭಾರೀ ಶಬ್ದ ಕೇಳಿಸಿದೆ. ಕೆಲವರು ಇದು ಗುಡುಗು ಎಂದು ಭಾವಿಸಿದ್ದರಾದರೂ ಶಬ್ದದ ತೀವ್ರತೆ ಮತ್ತು ಎಲ್ಲ ಭಾಗದಲ್ಲೂ ಒಂದೇ ರೀತಿ ಕೇಳಿ ಬಂದ ಕಾರಣ ಇದು ಭೂಕಂಪನದ ಶಬ್ದ ಎಂದು ಚರ್ಚೆಯಾಗುತ್ತಿದೆ. ಕುಶಾಲನಗರ ಸಮೀಪದಲ್ಲೇ ಹಾರಂಗಿ ಜಲಾಶಯವಿದ್ದು, ಜನರಲ್ಲಿ ಆತಂಕ ಮೂಡಿದೆ.
ಹೆಬ್ಟಾಲೆ, ಹಕ್ಕೆ, ಕೂಡು ಮಂಗಳೂರು, ಮುಳ್ಳುಸೋಗೆ, ಕುಶಾಲನಗರ, ಕೊಪ್ಪ, ಬೈಲುಕೊಪ್ಪ ಗ್ರಾಮಗಳ ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿದೆ ಎಂದು ಸ್ಥಳೀಯರು ಹೇಳಿಕೊಂಡಿದ್ದಾರೆ.
ಯಾವುದೇ ಭೂಕಂಪನ ಮಾಪಕ ಕೇಂದ್ರಗಳಲ್ಲಿ ಭೂಮಿ ಕಂಪಿಸಿದ ಬಗ್ಗೆ ದಾಖಲಾಗಿಲ್ಲ ಎಂದು ಬೆಂಗಳೂರಿನ ಹಿರಿಯ ಭೂವಿಜ್ಞಾನಿ ಡಾ| ಎಚ್.ಎಸ್.ಎಂ.ಪ್ರಕಾಶ್ ತಿಳಿಸಿದ್ದಾರೆ. ದಾಖಲೆಗಳ ಪ್ರಕಾರ ಈ ಅವಧಿಯಲ್ಲಿ ಹರಿಯಾಣ ಮತ್ತು ಮಣಿಪುರ ಭಾಗಗಳಲ್ಲಿ ಅಲ್ಪ ಪ್ರಮಾಣದ ಭೂಕಂಪನ ನಡೆದಿರುವುದು ತಿಳಿದುಬಂದಿದೆ ಎಂದು ಅವರು ತಿಳಿಸಿದ್ದಾರೆ.
ಕೊಡಗು ಜಿಲ್ಲಾಡಳಿತದ ಎನ್‌ಡಿಆರ್‌ಎಫ್ ಉಸ್ತುವಾರಿ ಅನನ್ಯ ವಾಸುದೇವ್ ಕೂಡ ತಮಗೆ ಈ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ ಎಂದು ತಿಳಿಸಿದ್ದಾರೆ.