Advertisement

ಭೂಮಿ ಪೂಜೆ: ವಿದೇಶಿ ಮಾಧ್ಯಮಗಳಲ್ಲೇನಿತ್ತು?

12:39 PM Aug 06, 2020 | mahesh |

ಮಣಿಪಾಲ: ಅಯೋಧ್ಯೆಯ ರಾಮ ದೇವಾಲಯ ಭೂಮಿ ಪೂಜೆಯ ಸುದ್ದಿ ಜಗತ್ತಿನ ಹಲವು ಸುದ್ದಿ ಮಾಧ್ಯಮಗಳಲ್ಲಿ ಅನುರಣಿಸಿವೆ.ವಿಶ್ವ ಮಾಧ್ಯಮಗಳ ಮುಖ್ಯಾಂಶಗಳಲ್ಲಿ ಅಯೋಧ್ಯೆಯೇ ರಾರಾಜಿಸುತ್ತಿದೆ. ಸಿಎನ್‌ಎನ್‌, ದಿ ಗಾರ್ಡಿಯನ್‌, ಬಿಬಿಸಿ, ಅಲ್‌ಜಜೀರಾ ಮತ್ತು ಡಾನ್‌ ಈ ಕಾರ್ಯಕ್ರಮವನ್ನು ಪ್ರಮುಖ ಸುದ್ದಿಯಾಗಿ ತೆಗೆದುಕೊಂಡಿವೆ. ಅಮೆರಿಕದ ಸುದ್ದಿ ತಾಣ ಸಿಎನ್‌ಎನ್‌, ದೇಶದಲ್ಲಿ ಕೊರೊನಾ ವೈರಸ್‌ ಹರಡಿದರೂ ಪ್ರಧಾನಿ ಮೋದಿ ದೇವಾಲಯ ನಿರ್ಮಾಣದ ಭೂಮಿ ಪೂಜೆಯನ್ನು ಮಾಡಿದ್ದಾರೆ ಎಂದು ವರದಿ ಮಾಡಿದೆ. ರಾಮ ದೇವಾಲಯದ ಅಡಿಪಾಯವು ವಾಸ್ತವವಾಗಿ, ಭಾರತದ ಬದಲಾಗುತ್ತಿರುವ ಸಂವಿಧಾನದ ಅಡಿಪಾಯವಾಗಿದೆ ಎಂದು ಪಾಕಿಸ್ಥಾನದ ಪತ್ರಿಕೆ ದಿ ಡಾನ್‌ ಬರೆದಿದೆ.

Advertisement

ಕೊರೊನಾ ಹೊರತಾಗಿಯೂ ಶಿಲಾನ್ಯಾಸ: ಸಿಎನ್‌ಎನ್‌
ಮೋದಿ ಅವರು ಹಿಂದೂಗಳ ಪವಿತ್ರ ಸ್ಥಳದಲ್ಲಿ ರಾಮ್‌ ದೇವಾಲಯದ ಭೂಮಿ ಪೂಜೆಯನ್ನು ನೆರವೇರಿಸಿದ್ದಾರೆ. ಈ ಸ್ಥಳವು ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ವಿವಾದದ ಮೂಲವಾಗಿದೆ. ಭಾರತದಲ್ಲಿ ಸತತ ಐದು ದಿನಗಳಲ್ಲಿ 50 ಸಾವಿರಕ್ಕೂ ಹೆಚ್ಚು ಹೊಸ ಸೋಂಕು ಪ್ರಕರಣಗಳು ಮುನ್ನೆಲೆಗೆ ಬರುತ್ತಿರುವ ಸಮಯದಲ್ಲಿ ಬುಧವಾರ ಭೂಮಿ ಪೂಜೆ ಕಾರ್ಯಕ್ರಮ ನಡೆಯಿತು ಎಂದಿದೆ. ಸೋಂಕಿನ ವಿಷಯದಲ್ಲಿ ಭಾರತ ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿದೆ. ಗೃಹ ಸಚಿವ ಅಮಿತ್‌ ಶಾ ಮತ್ತು ಅಯೋಧ್ಯೆಯ ದೇವಾಲಯದ ಅರ್ಚಕರು ಸೇರಿದಂತೆ ನಾಲ್ವರು ಭದ್ರತಾ ಸಿಬಂದಿಗೂ ಸೋಂಕು ತಗುಲಿದೆ ಎಂದು ಸಿಎನ್‌ಎನ್‌ ಹೇಳಿದೆ.

ಮೂರು ತಿಂಗಳ ಮೊದಲೇ ಅಯೋಧ್ಯೆಯಲ್ಲಿ ದೀಪಾವಳಿ: ದಿ ಗಾರ್ಡಿಯನ್‌
ಅಯೋಧ್ಯೆಯಲ್ಲಿ ದೀಪಾವಳಿ ಮೂರು ತಿಂಗಳ ಹಿಂದೆಯೇ ಬಂದಿದೆ ಎಂದು ಬ್ರಿಟಿಷ್‌ ಪತ್ರಿಕೆ ದಿ ಗಾರ್ಡಿಯನ್‌ ಬರೆದಿದೆ. ಅಯೋಧ್ಯಾ ನಗರದಲ್ಲಿ ರಾಮ ದೇವಾಲಯದ ಅಡಿಪಾಯ ಹಾಕಲಾಗುತ್ತಿದೆ. ಇದು ದಶಕಗಳಿಂದ ಭಾರತೀಯ ಇತಿಹಾಸದಲ್ಲಿ ಅತ್ಯಂತ ಭಾವನಾತ್ಮಕ ವಿಷಯವಾಗಿದೆ. ಭಗವಾನ್‌ ರಾಮನು ಹಿಂದೂಗಳಲ್ಲಿ ಅತ್ಯಂತ ಪೂಜ್ಯ. ರಾಮನ ದೇವಾಲಯದ ನಿರ್ಮಾಣವು ಅನೇಕ ಹಿಂದೂಗಳಿಗೆ ಹೆಮ್ಮೆಯ ಕ್ಷಣ ವಾಗಿದೆ. ಭಾರತೀಯ ಮುಸ್ಲಿಮರೂ ಪರೋಕ್ಷವಾಗಿ ರಾಮ ಮಂದಿರವನ್ನು ಬೆಂಬಲಿಸಿದ್ದಾರೆ ಎಂದು ಅದು ಹೇಳಿದೆ.

ನೂತನ ಸಂವಿಧಾನದ ಅಡಿಪಾಯ: ಡಾನ್‌
ಪಾಕಿಸ್ಥಾನ ಪತ್ರಿಕೆ ಡಾನ್‌ ಹಿಂದೂ ದೇವಾಲಯದ ಅಡಿಪಾಯವನ್ನು ಬಾಬರಿ ಮಸೀದಿ ಇದ್ದ ಸ್ಥಳದಲ್ಲಿ ನಿರ್ಮಿಸಲಾಗಿದೆ ಎಂದಿದೆ. ಈ ಸ್ಥಳವು ಸುಮಾರು 500 ವರ್ಷಗಳಿಂದ ಬಾಬರಿ ಮಸೀದಿಯನ್ನು ಹೊಂದಿತ್ತು. ಜಾತ್ಯತೀತ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಪರಿವರ್ತಿಸುವ ಮತ್ತೂಂದು ಹೆಜ್ಜೆ ಇದಾಗಿದೆ ಎಂಬುದನ್ನು ಬಿಜೆಪಿ ಪರೋಕ್ಷವಾಗಿಒಪ್ಪುತ್ತದೆ ಎಂದು ಭಾರತದ ನೀತಿ ಸಂಶೋಧನಾ ಕೇಂದ್ರದ ಮಾಜಿ ಅಧ್ಯಕ್ಷ ಪ್ರತಾಪ್‌ ಭಾನು ಮೆಹ್ತಾ ಅವರನ್ನು ಉಲ್ಲೇಖೀಸಿ ಡಾನ್‌ ಉಲ್ಲೇಖೀಸಿದೆ. ಭಾರತದ ಮೂಲ ಸಾಂವಿಧಾನಿಕ ಚೌಕಟ್ಟು ಬದಲಾಗುತ್ತಿದೆ ಎಂಬುದನ್ನು ಇದು ಸೂಚಿಸುತ್ತದೆ ಎಂದಿದೆ.

ಜಾತ್ಯತೀತ ಸಿದ್ಧಾಂತದೊಂದಿಗೆ ಹೊಂದಾಣಿಕೆ: ಅಲ್‌ಜಜೀರಾ
ಮಸೀದಿಯ ಸ್ಥಳದಲ್ಲಿ ದೇವಾಲಯವನ್ನು ನಿರ್ಮಿಸಲಾಗುತ್ತಿದೆ ಎಂದು ಕೊಲ್ಲಿ ರಾಷ್ಟ್ರಗಳ ಚಾನೆಲ್‌ ಅಲ್‌ಜಜೀರಾ ಬರೆದಿದೆ. ಭಾರತದ ಜಾತ್ಯತೀತ ಸಿದ್ಧಾಂತವು ರಾಜಿಯಾಗಿದೆ. ಭಾರತದಲ್ಲಿ ಅಧಿಕಾರದಲ್ಲಿದ್ದ ಹಿಂದೂ ರಾಷ್ಟ್ರೀಯವಾದಿ ಭಾರತೀಯ ಜನತಾ ಪಕ್ಷ 1980ರ ದಶಕದಿಂದಲೂ ದೇವಾಲಯದ ಆಂದೋಲನವನ್ನು ನಡೆಸಿತ್ತು. 1992ರಲ್ಲಿ ಹಿಂದೂ ಮೂಲಭೂತವಾದಿಗಳು ಮಸೀದಿಯನ್ನು ಕೆಡವಿದರು. ನವೆಂಬರ್‌ 2019ರಲ್ಲಿ ಸುಪ್ರೀಂ ಕೋರ್ಟ್‌ ಮಸೀದಿಯ ಸ್ಥಳವನ್ನು ಹಿಂದೂಗಳಿಗೆ ನೀಡಿತು. ಈ ನಿರ್ಧಾರಕ್ಕೆ ವ್ಯಾಪಕ ಟೀಕೆಯೂ ವ್ಯಕ್ತವಾಗಿತ್ತು. ಬಾಬ್ರಿ ಉರುಳಿಸುವಿಕೆಯ ಪ್ರಕರಣದ ಕಾನೂನು ವಿಚಾರಣೆ ಇನ್ನೂ ಪೂರ್ಣಗೊಂಡಿಲ್ಲ ಎಂದು ಹೇಳಿದೆ.

Advertisement

ಭಾರತದ ಹಿಂದೂಗಳಿಗೆ ಸಂತಸ: ಎಬಿಸಿ ನ್ಯೂಸ್‌
ಕೊರೊನಾ ಕಾರಣದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಶಿಲಾನ್ಯಾಸದಲ್ಲಿ ಭಾಗವಹಿಸಿಲ್ಲ. ಈ ಬಗ್ಗೆ ಹಿಂದೂಗಳು ಸಂತಸದಲ್ಲಿದ್ದಾರೆ ಎಂದು ಎಬಿಸಿ ನ್ಯೂಸ್‌ ವರದಿ ಮಾಡಿದೆ. ಈ ಮೊದಲು ಮಸೀದಿ ಇದ್ದ ಜಾಗದಲ್ಲಿ ಪ್ರಧಾನಿ ಮೋದಿ ಅವರು ರಾಮ್‌ ದೇವಸ್ಥಾನದ ಭೂಮಿ ಪೂಜೆಯನ್ನು ಮಾಡಿದರು. ಮೂರರಿಂದ ಮೂರೂವರೆ ವರ್ಷದಲ್ಲಿ ಇಲ್ಲಿ ರಾಮ ದೇವಾಲಯದ ನಿರ್ಮಾಣವಾಗಲಿದೆ. ಇದು ವಿಶ್ವದ ಅತ್ಯಂತ ಭವ್ಯವಾದ ದೇವಾಲಯಗಳಲ್ಲಿ ಒಂದಾಗಲಿದೆ ಎಂದಿದೆ.

ದೇಗುಲ ನಿರ್ಮಾಣಕ್ಕೆ ಸುಪ್ರೀಂ ದಾರಿ: ಬಿಬಿಸಿ
ಭೂಮಿ ಪೂಜೆಯ ವರದಿಯ ಜತೆಗೆ ರಾಮ ದೇವಸ್ಥಾನ ಮತ್ತು ಬಾಬರಿ ಮಸೀದಿ ವಿವಾದವನ್ನೂ ಬಿಬಿಸಿ ಉಲ್ಲೇಖೀಸಿದೆ. 1992ರ ವರೆಗೆ ಇಲ್ಲಿ ಮಸೀದಿ ಇತ್ತು. ಅದನ್ನು ಹಿಂದೂಗಳು ಒಡೆದರು. ಪರಿಣಾಮವಾಗಿ ಎರಡೂ ಎರಡೂ ಸಮುದಾಯಗಳು ಈ ಸ್ಥಳವನ್ನು ಪಡೆದುಕೊಳ್ಳಲು ಕಾನೂನು ಹೋರಾಟ ಮುಂದುವರೆಸಿದವು. ಕಳೆದ ವರ್ಷ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪು ದೇವಾಲಯ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟಿದೆ. ಮುಸ್ಲಿಮರಿಗೆ ಮಸೀದಿ ನಿರ್ಮಾಣಕ್ಕೆ ಪ್ರತ್ಯೇಕ ಸ್ಥಾನ ನೀಡಲಾಗಿದೆ ಎಂದು ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next