ಪುತ್ತೂರು: ನೆಕ್ಕಿಲ ಡಂಪಿಂಗ್ ಯಾರ್ಡ್‌ನಲ್ಲಿ ನಗರಸಭೆಯಿಂದ ನಿರ್ಮಿಸಲಾದ ಎರಹುಳ ಗೊಬ್ಬರ ಘಟಕವನ್ನು ಕೂಡಲೇ ವೈಜ್ಞಾನಿಕ ರೀತಿಯಲ್ಲಿ ಅಭಿವೃದ್ಧಿಗೊಳಿಸುವಂತೆ ಪುತ್ತೂರು ಸಹಾಯಕ ಕಮಿಷನರ್ ಎಚ್.ಕೆ. ಕೃಷ್ಣಮೂರ್ತಿ ಅವರು ನಗರಸಭೆ ಅಧಿಕಾರಿಗಳಿಗೆ ಗುರುವಾರ ಸೂಚನೆ ನೀಡಿದ್ದಾರೆ. ನಾಲ್ಕು ವರ್ಷಗಳ ಹಿಂದೆ ನೆಕ್ಕಿಲದಲ್ಲಿ ನಿರ್ಮಿಸಲಾಗಿರುವ ಎರಹುಳ ಗೊಬ್ಬರ ಘಟಕ ಅವೈಜ್ಞಾನಿಕವಾಗಿರುವ ಮತ್ತು ನಿಷ್ಟ್ರಯೋಜಕವಾಗಿರುವ ಕುರಿತು ಉದಯವಾಣಿಯ
‘ಸುದಿನ’ದಲ್ಲಿ “ಹೆಸರಿಗಷ್ಟೇ ಎರೆಹುಳ ಗೊಬ್ಬರ ಘಟಕ ತೆರೆದ ಪುತ್ತೂರು ನಗರಸಭೆ’ ಶೀರ್ಷಿಕೆಯೊಂದಿಗೆ ಮೇ 21ರಂದು ಸಚಿತ್ರ ವರದಿ ಪ್ರಕಟಿಸಿತ್ತು. ಗುರುವಾರ ಎರೆಹುಳ ಗೊಬ್ಬರ ಘಟಕವನ್ನು ಸಹಾಯಕ ಕಮಿಷನರ್ ಅವರು ವೀಕ್ಷಣೆ ನಡೆಸುವ ಸಂದರ್ಭದಲ್ಲಿ ಘಟಕದ ಟ್ಯಾಂಕ್ ತಳಭಾಗದಲ್ಲಿ ಕಾಂಕ್ರೀಟ್ ಹಾಕಿರುವ ಮತ್ತು ಇದರಿಂದ ಎರೆ ಹುಳು ಸೃಷ್ಟಿಯೇ ಅಸಾಧ್ಯವಾಗಿರುವಂತೆ ಅವೈಜ್ಞಾನಿಕ ನಿರ್ಮಾಣದ ಕುರಿತು ಸ್ಥಳೀಯರು ಮಾಹಿತಿ ನೀಡಿದರು.
ಅವ್ಯವಸ್ಥೆಯ ಕುರಿತು ನಗರಸಭೆ ಪೌರಾಯಕ್ತೆ ರೂಪಾ ಟಿ. ಶೆಟ್ಟಿ ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದ ಸಹಾಯಕ ಕಮಿಷನರ್ ಅವರು ಕೂಡಲೇ ಟ್ಯಾಂಕ್ ತಳಭಾಗದ ಕಾಂಕ್ರೀಟ್ ತೆಗೆಯಬೇಕು. ವೈಜ್ಞಾನಿಕ ರೀತಿಯ ಮರು ಅಭಿವೃದ್ಧಿಗೊಳಿಸಿ ಕಸ, ತಾಜ್ಯದ ಮೂಲಕ ಎರೆಹುಳು ಗೊಬ್ಬರ ತಯಾರಿಸಲು ಪೂರಕವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಈ ಭಾಗದಲ್ಲಿ ನೆಲ ಗಟ್ಟಿಯಾಗುವುದರಿಂದ ನೀರು ಇಂಗುತ್ತದೆ. ಪರಿಸರದ ಮನೆಗಳಿಗೆ ಹಾನಿಯಾಗುವ ಸಾಧ್ಯತೆ ಇಲ್ಲ. ಕೂಡಲೇ ಈ ಕುರಿತು ಪೂರಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಹಾಯಕ ಕಮಿಷನರ್ ನಗರಸಭಾ ಅಧಿಕಾರಿಗಳಿಗೆ ಸೂಚಿಸಿದರು.
ನಗರಸಭೆಗೆ ಸ್ವಚ್ಛ ಭಾರತ್ ಮಿಷನ್ ಅಡಿ 4 ಕೋಟಿ ರೂ. ಮಂಜೂರಾಗಲಿದ್ದು, ಈ ಅನುದಾನದಲ್ಲಿ ಡಂಪಿಂಗ್ ಯಾರ್ಡ್ ಅಭಿವೃದ್ಧಿಯ ವೇಳೆ ಎರೆಹುಳ ಘಟಕವನ್ನು ವೈಜ್ಞಾನಿಕವಾಗಿ ಅಭಿವೃದ್ಧಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಯುಕ್ತೆ ರೂಪಾ ಟಿ. ಶೆಟ್ಟಿ ಉತ್ತರಿಸಿದರು.