ಹುಣಸೂರು: ಭೂಮಿಯ ಫಲವತ್ತತೆ ರಕ್ಷಿಸುವ ಕಡೆ, ಮರಗಿಡಗಳನ್ನು ಬೆಳೆಸುವ ಕಡೆ, ಭೂಮಿಗೆ ಹಾನಿಕಾರಕವಾದ ತ್ಯಾಜ್ಯಗಳನ್ನು ಬಿಸಾಕುವಾಗ ಎಲ್ಲರೂ ಎಚ್ಚರದಿಂದ ಇರಬೇಕೆಂದು ಡೀಡ್ ಸಂಸ್ಥೆಯ ಸಂಯೋಜಕ ಎ.ಪ್ರಕಾಶ್ ಮನವಿ ಮಾಡಿದರು.
ನಗರದ ಡೀಡ್ ಸಂಸ್ಥೆ ಆವರಣದ ಜ್ಞಾನ ಕುಟೀರದ ಎದುರಿನ ಆವರಣದಲ್ಲಿ ಆಯೋಜಿಸಿದ್ದ ವಿಶ್ವ ಭೂಮಿ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರು ಮೊದಲು ಹೊಲ ಉಳುವಾಗ ಹೊನ್ನಾರು ಎಂದು ಕರೆದು ಪೂಜಿಸುವರು. ಮೊದಲು ಬೆಳೆ ನಾಟಿ ಮಾಡುವಾಗ, ಬೆಳೆ ಕೊಯ್ಲು ಮಾಡುವಾಗ ಹಾಗೂ ಕಣದಲ್ಲಿ ಧಾನ್ಯರಾಶಿ ಹಾಕಿದಾಗ ಪೂಜೆ ಮಾಡುವುದು ಇಂದಿಗೂ ನಡೆಯುತ್ತಿದೆ. ಆದರೆ ಭೂಮಿಗೆ ವಿಷವೆಂಬ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಬಳಕೆಯಿಂದ ಭೂಮಿ ವಿಷಯುಕ್ತವಾಗಿದೆ. ಜಮೀನಿನಲ್ಲಿ ಮರಗಿಡಗಳು ಬೆಳೆಸದೆ ಭೂಮಿಯ ಸವಕಳಿಗೂ ಕಾರಣವಾಗಿದ್ದು, ಇದರಿಂದಾಗಿ ಪ್ರಕೃತಿ ವಿಕೋಪ, ಭೂಕಂಪ, ಬರ ಗೋಚರವಾಗುತ್ತಿದ್ದು, ಮುಂದಿನ ಪೀಳಿಗೆಗಾಗಿ ಭೂಮಿಯನ್ನು ಉಳಿಸುವತ್ತ ಎಲ್ಲರೂ ಚಿಂತಿಸಬೇಕೆಂದು ಮನವಿ ಮಾಡಿದರು.
ಡೀಡ್ ಸಂಸ್ಥೆಯ ನಿರ್ದೇಶಕ ಡಾ.ಎಸ್. ಶ್ರೀಕಾಂತ್ ಮಾತನಾಡಿ, ಭೂಮಿ ಸಕಲ ಜೀವರಾಶಿಗೂ ಜೀವದಾತೆ. ಭೂಮಿ ಮೇಲೆ ಮರಗಿಡಗಳು ಬೆಳೆದು ಸೂರ್ಯನ ಬೆಳಕನ್ನು ತನ್ನ ಎಲೆಗಳಿಂದ ಹೀರಿ ಹಾಗೂ ತನ್ನ ಬೇರುಗಳಿಂದ ಭೂಮಿಯ ಸಾರವನ್ನು ಹೀರಿ ದ್ಯುತಿ ಸಂಶ್ಲೇಷಣೆ ಕ್ರಿಯೆ ನಡೆಸಿ, ಬೀಳುವ ಮಳೆಯಿಂದ, ಬೀಸುವ ಗಾಳಿಯ ತನುವಿನಿಂದ ಬೆಳೆದ ಮರಗಿಡಗಳು- ಬೆಳೆಗಳು ಎಲ್ಲಾ ಜೀವರಾಶಿಗಳಿಗೂ ಆಹಾರ ನೀಡುತ್ತವೆ. ಭೂಮಿಯ ಮೇಲಿನ ಅರಣ್ಯ ಅನ್ನಪೂರ್ಣೆಯೇ ಸರಿ. ಇಂತ ಭೂಮಿಯನ್ನು ಮಾನವರಾದ ನಾವು ಹಾಳುಗೆಡವಿದರೆ ಭೂಮಿಯ ಸ್ವಾಸ್ತ್ಯ ಹಾಳಾಗುತ್ತದೆ. ಇದರಿಂದ ಭೂಮಿಯ ಮೇಲಿರುವ ಜೀವರಾಶಿಗಳ ಸ್ವಾಸ್ತ್ಯಕ್ಕೂ ಕುಂದಾಗುತ್ತದೆ. ಇಂತ ಭೂಮಿಯನ್ನು ಕಾಪಾಡಿಕೊಳ್ಳುವುದು, ಗೌರವಿಸುವುದು, ಸ್ಮರಿಸುವುದು ನಮ್ಮೆಲ್ಲರ ಆಧ್ಯ ಕರ್ತವ್ಯವಾಗಬೇಕು. ಭೂಮಿಯನ್ನು ಸ್ಮರಿಸಲೆಂದು, ಕಾಪಾಡಲೆಂದು ವಿಶ್ವ ಸಂಸ್ಥೆ ಏಪ್ರಿಲ್ 22ನ್ನು ಭೂಮಿಯ ದಿನ(ಅರ್ಥ್ ಡೇ) ಎಂದು ಘೋಷಿಸಿದ್ದು. ಪ್ರಪಂಚದಾದ್ಯಂತ ಭೂಮಿಯ ದಿನವನ್ನು ಆಚರಿಸಲಾಗುತ್ತಿದೆ. ಆದರೆ ದಿನಾಚರಣೆಗಳು ಆದಿನಕ್ಕೆ ಮಾತ್ರ ಸೀಮಿತವಾಗುತ್ತಿರುವುದು ಬೇಸರದ ಸಂಗತಿಯಾದರೂ ಸಹ ಸರಕಾರದ ಹಲವು ಯೋಜನೆಗಳಿಂದಾಗಿ ಕೃಷಿಕರು ಸಸಿನೆಡಲು ಮುಂದಾಗಿರುವುದು ಸ್ಪಲ್ಪಮಟ್ಟಿಗೆ ನೆಮ್ಮದಿ ತಂದಿದೆ ಎಂದರು.
ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಪಿ.ಕೆ.ರಾಮು ಮಾತನಾಡಿ, ಆದಿವಾಸಿಗಳಾದ ನಾವು ಭೂಮಿಯನ್ನು ನಮ್ಮ ಮಾತೆ ಎಂದೇ ನಂಬಿದ್ದೇವೆ. ಆ ಭೂಮಿ ಮೇಲೆ ಬೆಳೆಯುವ ಕಾಡು ನಮಗೆ ಅನ್ನಪೂರ್ಣೆ. ನಾವು ಭೂಮಿಯ ಸ್ವತ್ತು ಭೂಮಿ ನಮ್ಮ ಸ್ವತ್ತು ಅಲ್ಲ ಎಂಬುದನ್ನು ಎಲ್ಲರೂ ಅರಿಯಬೇಕಿದೆ ಎಂದರು.
ಭೂಮಿಗೆ ನಮನ: ಡೀಡ್ ಆವರಣದಲ್ಲಿನ ಇರುವ 60 ವಿದಧ ಗಿಡ, ಮರ, ಬಳ್ಳಿ, ಗಿಡಮೂಲಿಕೆಗಳ ಎಲೆಗಳನ್ನು ಭೂಮಿಯಾಕಾರದಲ್ಲಿ ಜೋಡಿಸಿ ಭೂಮಿಗೆ ನಮನವನ್ನು ಸಲ್ಲಿಸಲಾಯಿತು. ಈ ವೇಳೆ ದಾಸನಪುರದ ನಿತ್ಯ ಮತ್ತು ಚಿತ್ರ, ಚಿಕ್ಕಹುಣಸೂರಿನ ಧನ್ಯ, ಹೊಸೂರ್ ಗೇಟಿನ ರಕ್ಷಿತಾ.ಹೆಚ್.ಎಸ್, ಡೀಡ್ ಸಂಯೋಜಕ ಎ.ಪ್ರಕಾಶ್ ಇದ್ದರು.
ಭೂಮಿಯ ಫಲವತ್ತತೆ ಉಳಿಸೋಣ ಬನ್ನಿ: ಘೋಷಣೆ: ಇರುವುದೊಂದೇ ಭೂಮಿ- ಇಂದೇ ಎಚ್ಚತ್ತುಕೊಳ್ಳಿ. ಉಳಿಸೋಣ ಬನ್ನಿ ಭೂಮಿಯ ಫಲವತ್ತತೆ ಉಳಿಸೋಣ ಬನ್ನಿ. ಬೆಳೆಸೋಣ ಬನ್ನಿ ಮರಗಿಡಗಳನ್ನು ಬೆಳೆಸೋಣ ಬನ್ನಿ ಮತ್ತು ಸ್ವಚ್ಚ ಭೂಮಿ ಸ್ವಸ್ಥ ಭೂಮಿ ಎಂಬ ಘೋಷಣೆಗಳನ್ನು ಕೂಗಲಾಯಿತು. ಎಚ್. ಎಸ್.ರಕ್ಷಿತಾ. ಮಾತನಾಡಿ, ರಾಸಾಯನಿಕಗಳಿಂದ ವಿಷಪೂರಕ ಆಹಾರ ಬೆಳೆದು ತಿನ್ನುತ್ತಿದ್ದೇವೆ. ಇನ್ನಾದರೂ ಸಾವಯವ ಕೃಷಿಯಕಡೆ ಮುಖಮಾಡಬೇಕು ಎಂದರು. ದಾಸನಪುರ ಹಾಡಿಯ ಆದಿವಾಸಿ ಮಹಿಳೆ ಚಿತ್ರ ಮಾತನಾಡಿ ಮಣ್ಣನ್ನು ಆದಿವಾಸಿಗಳು ಔಷ—ಯಾಗಿ ನೋಡುತ್ತೇವೆ. ಬಿದ್ದು ಗಾಯಗಳಾದಾಗ ರಕ್ತವನ್ನು ತಡೆಯಲು ಒಳ್ಳೆಯ ಮಣ್ಣನ್ನು ಹಚ್ಚುತ್ತೇವೆ. ಇಂತ ಪವಿತ್ರ ಮಣ್ಣನ್ನು ಹಾಳುಮಾಡಿದರೆ ಮನುಷ್ಯರಿಗೆ ಉಳಿಗಾಲವಿಲ್ಲ. ಭೂಮಿಯ ಮೇಲಿನ ಮರಗಿಡಗಳನ್ನು ಕಡಿದರೆ ಮನುಷ್ಯನಿಗೆ ಉಳಿಗಾಲವಿಲ್ಲ ಹೀಗಾಗಿ ಇಂದಿನಿಂದಲೇ ಪ್ರತಿಯೊಬ್ಬರೂ ಗಿಡಗಳನ್ನು ಪೋಷಿಸುವ ಪಣತೊಡಬೇಕೆಂದರು.ಆದಿವಾಸಿ ಹಿರಿಯ ಜಡಿಯಯ್ಯ ಮಾತನಾಡಿ, ತಾಲೂಕಿನ ಪ್ರತಿ ಹಾಡಿಯಲ್ಲೂ ಮುಂದೆ ಭೂಮಿ ದಿನಾಚರಣೆ ಆಚರಿಸುವ ಮೂಲಕ ಜಾಗƒತಿ ಮೂಡಿಸಲಾಗುವುದೆಂದರು.