Advertisement

ಕೋಚಿಂಗ್‌ ಪಡೆಯದೇ ಎಂಟು ಸರ್ಕಾರಿ ಹುದ್ದೆ ಪಡೆದ ಸಾಧಕಿ

12:02 PM May 09, 2019 | Team Udayavani |

ಮಹಾಲಿಂಗಪುರ: ಸ್ಥಳೀಯ ಕೆಎಲ್ಇ ಸಂಸ್ಥೆಯ ಎಸ್‌ಸಿಪಿ ಕಾಲೇಜಿನ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿರುವ ಯಲ್ಲವ್ವಾ ಮಾಳೇದ ಯಾವುದೇ ಕೋಚಿಂಗ್‌ ಪಡೆಯದೇ 8 ಸರ್ಕಾರಿ ಹುದ್ದೆ ಪಡೆದಿದ್ದಾರೆ.

Advertisement

ತೇರದಾಳ ಪಟ್ಟಣದ ಕೂಲಿಕಾರರಾದ ಭೀಮಪ್ಪ ಮತ್ತು ಸುಭದ್ರಾ ಮಾಳೇದ ಪುತ್ರಿಯಾದ ಯಲ್ಲವ್ವಾ ಬೆಳೆದದ್ದು ಕಷ್ಟದ ಹಾದಿಯಲ್ಲಿಯೇ. ಇರಲು ಗೇಣುದ್ದ ಜಾಗವಿಲ್ಲ. ಮನೆ, ಹೊಲವಂತೂ ಇಲ್ಲವೇ ಇಲ್ಲ. ಅಜ್ಜಿಯ ಮನೆಯೇ ಇವರಿಗಾಸರೆ.

ಕಾಲೇಜಿನ ಫೀ ಪಾವತಿಸಲು ಪರದಾಟ ನಡೆಸಿ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದ್ದ ಯಲ್ಲವ್ವಾ ಸಮೀರವಾಡಿ ಸೋಮೈಯಾ ಶುಗರ್ ಫ್ಯಾಕ್ಟರಿ ನೀಡಿದ ವಿದ್ಯಾರ್ಥಿ ವೇತನದಿಂದ ಶಿಕ್ಷಣ ಪುನರಾರಂಭಿಸಿ ಬಿಎಸ್ಸಿ, ಎಂಎಸ್ಸಿ ಅಧ್ಯಯನ ಮಾಡಿದ್ದಾರೆ. ಸುಮಾರು ಒಂದು ವರ್ಷದವರೆಗೂ ಹಸಿವು, ನಿದ್ರೆಯೆನ್ನದೇ ಓದಿ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಯಶಸ್ವಿಯಾಗಿದ್ದಾರೆ.

ಈಗ ಏಕಕಾಲಕ್ಕೆ ನವೋದಯ ಶಾಲೆಯಲ್ಲಿ ಪ್ರಥಮ ದರ್ಜೆ ಗಣಕಯಂತ್ರ ಸಹಾಯಕರು, ಮಹಾನಗರ ಪಾಲಿಕೆಯ ಪ್ರಥಮ ದರ್ಜೆ ಕಂದಾಯ ನಿರೀಕ್ಷಕರು, ಮಹಾನಗರ ಪಾಲಿಕೆಯ ಕರ ವಸೂಲಿಗಾರರು, ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಪ್ರಥಮ ದರ್ಜೆ ಗಣಕಯಂತ್ರ ಸಹಾಯಕರು, ಗ್ರೇಡ್‌-2 ಮುಖ್ಯಾಧಿಕಾರಿ, ಅಲ್ಪಸಂಖ್ಯಾತರ ಇಲಾಖೆಯ ವರಿಷ್ಠಾಧಿಕಾರಿ, ದತ್ತಾಂಶ ವರದಿಗಾರರು, ರೈಲ್ವೆ ಇಲಾಖೆಯ ಗ್ರೂಪ್‌ ‘ಡಿ’ ಹುದ್ದೆ ಸೇರಿದಂತೆ ಎಂಟು ಸರ್ಕಾರಿ ಹುದ್ದೆಗಳು ಇವರನ್ನು ಅರಸಿ ಬಂದಿವೆ. ಈ ಎಂಟು ಹುದ್ದೆಗಳಲ್ಲಿ ಯಲ್ಲವ್ವಾ ಮಾಳೇದ ಮಹಾನಗರ ಪಾಲಿಕೆಯ ಪ್ರಥಮ ದರ್ಜೆ ಕಂದಾಯ ನಿರೀಕ್ಷಕರ ಹುದ್ದೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸತತ ಪ್ರಯತ್ನ, ಶ್ರದ್ಧೆಯಿಂದ ಓದಿ ಶ್ರಮಪಟ್ಟಿದ್ದರ ಫಲವಾಗಿ ಇವರ ಬಾಳಲ್ಲಿ ಬೆಳಕಿನ ಆಶಾಕಿರಣ ಮೂಡಿದೆ.

ಯಾವುದೇ ಒಂದು ಕ್ಷೇತ್ರದಲ್ಲಿ ಸಾಧಕರಾಗಲು ಶ್ರೀಮಂತ, ಬಡವ ಅನ್ನುವುದಕ್ಕಿಂತ ಸತತ ಪ್ರಯತ್ನ, ಶ್ರದ್ಧೆ ಪ್ರಾಮಾಣಿಕತೆ ಮುಖ್ಯವಾಗಿದೆ. ನಾನು ತುಂಬಾ ಕಷ್ಟಪಟ್ಟು ಓದಿದ್ದೇನೆ. ನನ್ನ ಪರಿಶ್ರಮಕ್ಕೆ ಇಂದು ಪ್ರತಿಫಲ ಸಿಕ್ಕಿದೆ. ಇನ್ಮುಂದೆ ನಮ್ಮ ಕುಟುಂಬಕ್ಕೆ ಯಾವುದೇ ಕಷ್ಟ ಇಲ್ಲ.
•ಯಲ್ಲವ್ವಾ ಮಾಳೇದ, 8 ಸರಕಾರಿ ನೌಕರಿ ಪಡೆದ ಸಾಧಕಿ
•ವಿದ್ಯಾರ್ಥಿ ವೇತನದಿಂದಲೇ ಓದಿ ಯಶಸ್ವಿ
•ಮನೆ-ಹೊಲವಿಲ್ಲ ಅಜ್ಜಿಯ ಮನೆಯೇ ಆಸರೆ
ಮಗಳ ಸಾಧನೆಯಿಂದ ಖುಷಿಯಾಗಿದೆ. ನಮ್ಮ ಬಡತನ ಇಂದಿಗೆ ಮುಗಿಯುತೆಂದು ಅನ್ನಿಸುತ್ತಿದೆ. ನನ್ನ ಮಗಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದಗಳು.
•ಸುಭದ್ರಾ ಮಾಳೇದ, ಸಾಧಕಿಯ ತಾಯಿ

ಚಂದ್ರಶೇಖರ ಮೋರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next