ಬೆಳ್ತಂಗಡಿ: ರೋಗದ ಆರಂಭ ಹಂತದಲ್ಲಿ ನಿರ್ಲಕ್ಷಿಸಬಾರದು. ಆರೋಗ್ಯ ತಪಾಸಣೆ ಹಾಗೂ ಸಲಹಾ ಶಿಬಿರಗಳು ರೋಗವನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಅಗತ್ಯ ಚಿಕಿತ್ಸೆ ಪಡೆಯಲು ಸಹಕರಿಸುತ್ತವೆ ಎಂದು ಉಜಿರೆಯ ಬೆನಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ| ಗೋಪಾಲಕೃಷ್ಣ ಅಭಿಪ್ರಾಯಪಟ್ಟರು.
ಬೆಳ್ತಂಗಡಿ ರೋಟರಿ ಕ್ಲಬ್, ಉಜಿರೆಯ ಬೆನಕ ಆಸ್ಪತ್ರೆ, ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ಚಾರ್ಮಾಡಿ ರೋಟರಿ ಸಮುದಾಯ ದಳದ ಸಹಯೋಗದಲ್ಲಿ ಬಾಂಜಾರುಮಲೆಯ ಸಮುದಾಯ ಭವನದಲ್ಲಿ ಆಯೋಜಿಸಿದ ಬೃಹತ್ ಆರೋಗ್ಯ ಮೇಳದಲ್ಲಿ ಅವರು ಮಾತನಾಡಿದರು.
ಸ್ಥಳೀಯ ತಾಲೂಕು ಪಂಚಾಯತ್ ಸದಸ್ಯ ಕೊರಗಪ್ಪ ಗೌಡ, ಗ್ರಾಮ ಪಂಚಾಯತ್ ಸದಸ್ಯರಾದ ಓಬಯ್ಯ ಗೌಡ, ಶಾಂಭವಿ, ಮೀನಾಕ್ಷಿ, ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವೆಂಕಟೇಶ್ ಭಟ್ ಹಾಗೂ ಚಾರ್ಮಾಡಿಯ ರೋಟರಿ ಸಮುದಾಯ ದಳದ ಅಧ್ಯಕ್ಷ ರವಿಶಂಕರ ಉಪಸ್ಥಿತರಿದ್ದರು.
ಮಕ್ಕಳ ತಜ್ಞ ಡಾ| ಗೋವಿಂದ ಕಿಶೋರ್, ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ ಡಾ| ವಿನಯಕಿಶೋರ್ ಹಾಗೂ ಬೆನಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ| ಗೋಪಾಲ ಕೃಷ್ಣ ಆರೋಗ್ಯ ತಪಾಸಣೆ ನಡೆಸಿ ಅಗತ್ಯ ಮಾರ್ಗದರ್ಶನ ನೀಡಿದರು.
ರಕ್ತದೊತ್ತಡ, ಮಧುಮೇಹ ಪರೀಕ್ಷೆಗಳನ್ನು ಉಚಿತವಾಗಿ ನಡೆಸಲಾಯಿತು. ಶಿಬಿರದಲ್ಲಿ 63 ಜನರ ಆರೋಗ್ಯ ತಪಾಸಣೆ ನಡೆಸಿ, ಅಗತ್ಯ ಔಷಧವನ್ನು ಉಚಿತವಾಗಿ ನೀಡಲಾಯಿತು. ರೋಟರಿ ಸದಸ್ಯರಾದ ಬಾಬು ಪೂಜಾರಿ, ಡಾ| ಎ. ಜಯಕುಮಾರ್ ಶೆಟ್ಟಿ, ಬೆನಕ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಸ್.ಜಿ. ಭಟ್, ಬೆನಕ ಆಸ್ಪತ್ರೆಯ ಮ್ಯಾನೇಜರ್ ದೇವಸ್ಯ ಹಾಗೂ ದಾದಿಯರು ಸಹಕರಿಸಿದ್ದರು. ಬೆಳ್ತಂಗಡಿ ರೋಟರಿ ಕ್ಲಬ್‌ನ ನಿಯೋಜಿತ ಅಧ್ಯಕ್ಷ ಜಯರಾಮ್ ಸ್ವಾಗತಿಸಿ, ನಿಯೋಜಿತ ಕಾರ್ಯದರ್ಶಿ ಪ್ರಕಾಶ್ ನಾರಾಯಣ್ ವಂದಿಸಿದರು.