ಕಂಪ್ಲಿ: ಕೇಂದ್ರ ಹಾಗೂ ರಾಜ್ಯದ ಡಬಲ್ ಎಂಜಿನ್ ಬಿಜೆಪಿ ಸರ್ಕಾರ ರೈತ ಪರವಾದ ಸರ್ಕಾರವಾಗಿದ್ದು ಜಿಲ್ಲೆಯ ರೈತರ ಅನುಕೂಲಕ್ಕಾಗಿ ಇನ್ನೆರಡು ಮೂರು ದಿನಗಳಲ್ಲಿ ಭತ್ತ ಹಾಗೂ ಜೋಳ ಖರೀದಿ ಕೇಂದ್ರಗಳನ್ನು ಆರಂಭಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸುವುದಾಗಿ ಸಾರಿಗೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ಶ್ರೀರಾಮುಲು ಭರವಸೆ ನೀಡಿದರು.
ಅವರು ಪಟ್ಟಣದ ಕುರುಗೋಡು ರಸ್ತೆಯ ಸಕ್ಕರೆ ಕಾರ್ಖಾನೆ ಸಂಪರ್ಕ ರಸ್ತೆಯ ಹತ್ತಿರ ಎಸ್.ಎಫ್.ಸಿ. ವಿಶೇಷ ಅನುದಾನದಡಿ 2.50 ಕೋಟಿ ರೂಗಳ ವೆಚ್ಚದಲ್ಲಿ ಕಂಪ್ಲಿ ಬೈಪಾಸ್ ರಸ್ತೆ ಅಭಿವೃದ್ಧಿಗೆ ಭೂಮಿಪೂಜೆ, ಎಪಿಎಂಸಿ ಆವರಣದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ರೈತ ಸಂಪರ್ಕ ಕೇಂದ್ರದ ಲೋಕಾರ್ಪಣೆ ಹಾಗೂ ಪುರಸಭೆ ವ್ಯಾಪ್ತಿಯ ವಿವಿಧ ವಾರ್ಡ್‌ಗಳಲ್ಲಿ ಮುಖ್ಯಮಂತ್ರಿಗಳ ಅಮೃತ್ ನಗರೋತ್ಥಾನ ಅನುದಾನದ 423 ಲಕ್ಷ ರೂಗಳ ರಸ್ತೆ ಮತ್ತು ಚರಂಡಿ ಕಾಮಗಾರಿ, ಐತಿಹಾಸಿಕ ಸೋಮಪ್ಪನ ಕೆರೆ ಸುತ್ತ 219 ಲಕ್ಷ ರೂ. ವೆಚ್ಚದಲ್ಲಿ ತಂತಿ ಬೇಲಿ, ತಡೆಗೋಡೆ ನಿರ್ಮಾಣ ಕಾಮಗಾರಿ ಮತ್ತು ಕಂಪ್ಲಿ ಸೋಮಪ್ಪನ ಕೆರೆ ಅಂಗಳದಲ್ಲಿ ಎನ್‌ಎಂಡಿಸಿ ಮತ್ತು ಜಿಲ್ಲಾ ಕೇಂದ್ರ ಗ್ರಂಥಾಲಯ ಅನುದಾನದ 80 ಲಕ್ಷ ರೂ. ವೆಚ್ಚದಲ್ಲಿ ಶಾಖಾ ಗ್ರಂಥಾಲಯ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆಯನ್ನು ನೆರವೇರಿಸಿ ಮಾತನಾಡಿದರು.
ಚುನಾವಣೆಗೆ ಮಾತ್ರ ರಾಜಕೀಯವಿರಲಿ. ನಂತರ ಪಕ್ಷಭೇದ ಮರೆತು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸೋಣ. ಪಕ್ಕದಲ್ಲಿಯೇ ತುಂಗಭದ್ರಾ ಜಲಾಶಯವಿದ್ದರೂ ಸಹಿತ ರೈತರ ಎರಡನೇ ಬೆಳೆಗಾಗಿ ಹಾಲಿ ಶಾಸಕ ಜೆ.ಎನ್. ಗಣೇಶ್, ಮಾಜಿ ಶಾಸಕ ಟಿ.ಎಚ್. ಸುರೇಶಬಾಬು ಕಾಲುವೆಗಳ ಮೇಲೆ ನೀರಿಗಾಗಿ ಅಧಿಕಾರಿಗಳನ್ನು ಬೇಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಈ ಭಾಗದ ರೈತರ ಎರಡನೇ ಬೆಳೆಗಾಗಿ ವ್ಯರ್ಥವಾಗುವ ಸುಮಾರು 30 ಟಿಎಂಸಿ ನೀರು ಸಂಗ್ರಹಕ್ಕಾಗಿ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ನವಲಿ ಹತ್ತಿರ ಸಮಾನಾಂತರ ಜಲಾಯಶಯ ನಿರ್ಮಾಣಕ್ಕೆ ನಮ್ಮ ಸರ್ಕಾರ ಮುಂದಾಗಿದ್ದು, ಇದಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು 1000 ಕೋಟಿ ರೂಗಳನ್ನು ಬಜೆಟಿನಲ್ಲಿ ಕಾಯ್ದಿರಿಸಿದ್ದಾರೆ.
ಕಂಪ್ಲಿ ಗಂಗಾವತಿ ತುಂಗಭದ್ರಾ ಸಂಪರ್ಕ ಸೇತುವೆ ನಿರ್ಮಾಣಕ್ಕೆ 75 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ ಎಂದರು. ಅಧ್ಯಕ್ಷತೆ ವಹಿಸಿ ಶಾಸಕ ಜೆ.ಎನ್. ಗಣೇಶ್ ಮಾತನಾಡಿ, ಇನ್ನು ಕೇವಲ ಒಂದು ತಿಂಗಳ ಅವಧಿಯಲ್ಲಿ ಉಸ್ತುವಾರಿ ಸಚಿವರಾದ ಬಿ. ಶ್ರೀರಾಮುಲು ನೇತೃತ್ವದಲ್ಲಿ 100 ಹಾಸಿಗೆ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗುವುದು. ಕ್ಷೇತ್ರದಲ್ಲಿ ಗ್ರಾಮೀಣ ಪ್ರದೇಶಗಳ ಬಹುತೇಕ ರಸ್ತೆಗಳು ನಿರಂತರ ಮಳೆಗೆ ಹಾನಿಗೀಡಾಗಿದ್ದು, ಡಿಎಂಎಫ್ ಅನುದಾನದಲ್ಲಿ ಹಣ ಮಂಜೂರು ಮಾಡಬೇಕೆಂದರು.
ರಾಮುಲು ಅಣ್ಣನವರು ಕೇವಲ ಅಳಿಯನಿಗೆ ಸಹಕಾರ ನೀಡದೇ ಸಹೋದರನಾದ ತಮಗೂ ಸಹಕಾರ ನೀಡಿ ಕ್ಷೇತ್ರದ ಅಭಿವೃದ್ಧಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದಾಗ ವೇದಿಕೆಯಲ್ಲಿದವರು ಚಪ್ಪಾಳೆ ತಟ್ಟುವ ಮೂಲಕ ಸಹಮತ ವ್ಯಕ್ತಪಡಿಸಿದರು. ಪುರಸಭೆ ಸ್ಥಾಯಿ ಸಮಿತಿ ಚೇರ್‌ಮನ್ ಸಿ.ಆರ್. ಹನುಮಂತ ನೂತನ ತಾಲೂಕು ಕೇಂದ್ರವಾಗಿರುವ ಕಂಪ್ಲಿಗೆ ಬಸ್ ಡಿಪೋ ಸೇರಿದಂತೆ ಇತರೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಬೇಕೆಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಜವಳಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಗುತ್ತಿಗನೂರು ವಿರುಪಾಕ್ಷಗೌಡ, ಪುರಸಭೆ ಅಧ್ಯಕ್ಷೆ ಶಾಂತಲಾ ವಿದ್ಯಾಧರ್, ಉಪಾಧ್ಯಕ್ಷೆ ನಿರ್ಮಲಾ ಕೆ. ವಸಂತಕುಮಾರ್, ಸ್ಥಾಯಿ ಸಮಿತಿ ಚೇರ್‌ಮನ್ ಸಿ.ಆರ್. ಹನುಮಂತ, ಪುರಸಭೆಯ ಎಲ್ಲ ಸದಸ್ಯರು, ಎಪಿಎಂಸಿ ಅಧ್ಯಕ್ಷ ಕೆ. ಹೂವಣ್ಣ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ| ಮಲ್ಲಿಕಾರ್ಜುನ, ತಹಶೀಲ್ದಾರ್ ಗೌಸಿಯಾಬೇಗಂ, ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ
ಮನ್ಸೂರು ಅಲಿ, ಇಂಜಿನಿಯರ್ ಶ್ರೀಕಂಠಸ್ವಾಮಿ, ತಾಪಂ ಇಒ ಮಹ್ಮದ್ ಖೀಜರ್, ಪುರಸಭೆ ಮುಖ್ಯಾಧಿಕಾರಿ ಎನ್. ಶಿವಲಿಂಗಪ್ಪ, ಬಿ. ಸಿದ್ದಪ್ಪ, ಪಿ.ಬ್ರಹ್ಮಯ್ಯ, ಎನ್. ಪುರುಷೋತ್ತಮ, ಜಿ. ಸುಧಾಕರ್, ಜಿ. ರಾಮಣ್ಣ ಇದ್ದರು.