ಭಟ್ಕಳ: ಕಳ್ಳರ ಕೈಚಳಕದಿಂದ ಬ್ಯಾಂಕ್ ಲಾಕರನ್ನೇ ಹೊತ್ತೊಯ್ದು ಲಕ್ಷಾಂತರ ರೂ. ದೋಚಿ ಪರಾರಿಯಾದ ಘಟನೆ ನಡೆದಿದೆ.
ನಗರ, ಗ್ರಾಮೀಣ ಹಾಗೂ ಮುರ್ಡೇಶ್ವರ ಪೊಲೀಸ್ ಠಾಣೆಗಳ ಸರಹದ್ದಿನಲ್ಲಿ ಏ.17ರ ಬುಧವಾರ ಬೆಳಗಿನ ಜಾವ ಸರಣಿ ಕಳ್ಳತನ ನಡೆದಿದೆ.
ಭಟ್ಕಳದಲ್ಲಿ ಚೆನ್ನಪಟ್ಟಣ ಹನುಮಂತ ದೇವರ ಜಾತ್ರೆ ಇಂದು ನಡೆಯಲಿದ್ದು, ಮಂಗಳವಾರ ರಾತ್ರಿ ಪುಷ್ಪ ರಥೋತ್ಸವ ಇರುವುದರಿಂದ ಪೊಲೀಸರು ಹೆಚ್ಚಿನ ಆದ್ಯತೆಯನ್ನು ನಗರದಲ್ಲಿ ಬಂದೋಬಸ್ತಿಗಾಗಿ ನೀಡುವುದನ್ನೇ ಉಪಯೋಗಿಸಿಕೊಂಡ ಕಳ್ಳರು ರಂಗೀಕಟ್ಟೆಯಲ್ಲಿರುವ ಸಹಕಾರಿ ಬ್ಯಾಂಕ್, ಗ್ರಾಮೀಣ ಠಾಣೆಯ ಸರಹದ್ದಿನಲ್ಲಿರುವ ಒಂದು ಅಂಗಡಿ ಹಾಗೂ ಮುರ್ಡೇಶ್ವರ ಬಸ್ತಿಮಕ್ಕಿಯಲ್ಲಿರುವ ಒಂದು ಸರ್ವಿಸ್ ಸೆಂಟರ್ ಸೇರಿದಂತೆ ಸರಣಿ ಕಳ್ಳತನ ನಡೆಸಿ ಪರಾರಿಯಾಗಿದ್ದಾರೆ.
ರಾತ್ರಿ 3.30ರ ಸುಮಾರಿಗೆ ತಲೆಗೆ ಹೆಲ್ಮೆಟ್, ಮುಖಕ್ಕೆ ಸ್ಕಾರ್ಫ್ ಧರಿಸಿ ಬಂದಿದ್ದ ಇಬ್ಬರು ಯುವಕರು ಸಹಕಾರಿ ಬ್ಯಾಂಕ್ ವೊಂದರ ಶಟರ್ ಎತ್ತಿ ಸಂಪೂರ್ಣ ಬಗ್ಗಿಸಿ ಒಳ ನುಗ್ಗಿದ್ದಾರೆ. ಬ್ಯಾಂಕಿನ ಸೇಫ್ ಲಾಕರ್‌ನ್ನು ಕಿತ್ತು ಮೊದಲ ಮಹಡಿಯಿಂದ ಕೆಳಕ್ಕೆ ಎಸೆದು ಅಲ್ಲಿಂದ ತೆಗೆದುಕೊಂಡು ಪರಾರಿಯಾಗಿದ್ದಾರೆ. ಲಾಕರ್‌ನಲ್ಲಿ ಲಕ್ಷಾಂತರ ರೂ. ನಗದು ಇದ್ದು ಇನ್ನು ಏನೇನು ಕಳ್ಳತನವಾಗಿದೆ ಎನ್ನುವುದು ತಿಳಿದು ಬರಬೇಕಿದೆ.
ಗ್ರಾಮೀಣ ಠಾಣೆಯ ವ್ಯಾಪ್ತಿಯಲ್ಲಿನ ಅಂಗಡಿಯಲ್ಲಿಯೂ ಕಳ್ಳತನವಾಗಿದ್ದು ವಿವರ ತಿಳಿದು ಬಂದಿಲ್ಲ.
ಮುರ್ಡೇಶ್ವರದ ಬಸ್ತಿಮಕ್ಕಿಯಲ್ಲಿರುವ ಸರ್ವಿಸ್ ಸೆಂಟರ್ ಒಂದರ ಶೆಟರ್ ಮುರಿದು ಒಳಹೊಕ್ಕಿದ್ದು ಅಲ್ಲಿಯೂ ಕೂಡಾ ಕಳ್ಳತನದ ವಿವರ ತಿಳಿದು ಬಂದಿಲ್ಲ.
ಸಿ.ಸಿ.ಟಿ.ವಿ.ಯಲ್ಲಿನ ದಾಖಲೆಯನ್ನು ಪರಿಶೀಲಿಸಲಾಗಿದ್ದು ಕಳ್ಳರ ಸುಳಿವು ದೊರೆತಿದೆ ಎನ್ನಲಾಗಿದೆ.