Advertisement

ಬೆಳ್ಳಂಬೆಳಗ್ಗೆ ಗರ್ಜಿಸಿ ಅಬ್ಬರಿಸಿದ ಯಂತ್ರಗಳು

10:14 AM Jul 14, 2019 | Team Udayavani |

ಗದಗ: ನಗರದಲ್ಲಿ ಶನಿವಾರ ಬೆಳ್ಳಂಬೆಳಗ್ಗೆ ಹತ್ತಾರು ಜೆಸಿಬಿಗಳು ಗರ್ಜಿಸಿದವು. ನಗರಸಭೆ ಲೀಜ್‌ ಅವಧಿ ಮುಗಿದು ದಶಕಗಳೇ ಕಳೆದಿರುವ 54 ವಕಾರ ಸಾಲುಗಳ ಹಲವು ಕಟ್ಟಡಗಳನ್ನು ತೆರವು ಕಾರ್ಯಕ್ಕೆ ಚಾಲನೆ ಪಡೆಯಿತು. ಈ ಮೂಲಕ ನಗರಸಭೆ ಇತಿಹಾಸದಲ್ಲೇ ಮೊದಲ ಬಾರಿಗೆ ತನ್ನ ಆಸ್ತಿಯನ್ನು ವಶಕ್ಕೆ ಪಡೆದಂತಾಯಿತು.

Advertisement

ಇಲ್ಲಿನ ಭೂಮರಡ್ಡಿ ಸರ್ಕಲ್ನಿಂದ ಕೆ.ಎಚ್.ಪಾಟೀಲ ವೃತ್ತ ಹಾಗೂ ಭೂಮರಡ್ಡಿ ಸರ್ಕಲ್ನಿಂದ ಎಪಿಎಂಸಿ ಮೇನ್‌ ಗೇಟ್ ಹಾಗೂ ತೋಂಟದಾರ್ಯ ವಿದ್ಯಾಪೀಠದ ಬಸವೇಶ್ವರ ಪ್ರೌಢ ಶಾಲೆ ವರೆಗೆ ಸುಮಾರು 34 ಎಕರೆ ಪ್ರದೇಶದ 54 ವಕಾರ ಸಾಲುಗಳಲ್ಲಿ ಹತ್ತಾರು ಗೋದಾಮು, ವಿವಿಧ ಟ್ರೇಡರ್, ಸಿಮೆಂಟ್ ಅಂಗಡಿ, ಬಂಬೂ ಮಾರಾಟ ಸೇರಿದಂತೆ ಸಾವಿರಾರು ಅಂಗಡಿ ಮುಂಗಟ್ಟುಗಳನ್ನು ಶನಿವಾರ ಬಹುತೇಕ ತೆರವುಗೊಳಿಸಲಾಯಿತು.

ಜೆಸಿಬಿಗಳ ಗರ್ಜನೆ: ಶನಿವಾರ ಸೂರ್ಯೋದಯಕ್ಕೂ ಮುನ್ನವೇ ನಗರಸಭೆ ಆವರಣ ಅಧಿಕಾರಿಗಳು ಹಾಗೂ ಸಾರ್ವಜನಿಕರಿಂದ ತುಂಬಿ ತುಳುಕುತ್ತಿತ್ತು. 5.30ರ ವೇಳೆಗೆ ನಗರಸಭೆಯಲ್ಲಿ ಜಮಾಯಿಸಿದ್ದ ಅಧಿಕಾರಿಗಳು ತೆರವು ಕಾರ್ಯಾಚರಣೆಯ ನೀಲನಕ್ಷೆಯನ್ನು ತಮ್ಮ ಸಿಬ್ಬಂದಿಗೆ ವಿವರಿಸಿದರು.

ಬಳಿಕ ಆಗಮಿಸಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಎಸ್ಪಿ ಶ್ರೀನಾಥ ಜೋಶಿ ಮಾತನಾಡಿ, ವರ್ತಕರಿಗೆ ಈಗಾಗಲೇ ನೀಡಿರುವ ಸಮಯಾವಕಾಶ ಮುಗಿದಿದೆ. ತಮ್ಮ ಮೇಲಾಧಿಕಾರಿಗಳ ಆದೇಶದ ಹೊರತು ಯಾವುದೇ ಕಾರಣಕ್ಕೂ ತೆರವು ಕಾರ್ಯಾಚರಣೆ ನಿಲ್ಲಿಸಬಾರದು. ವರ್ತಕರು ಹಾಗೂ ಸ್ಥಳೀಯ ನಿವಾಸಿಗಳು ಸ್ಥಳಾಂತರಕ್ಕೆ ಅಗತ್ಯ ಸಹಕಾರ ನೀಡುವಂತೆ ಕಟ್ಟುನಿಟ್ಟಾಗಿ ಸೂಚಿಸಿದರು.

ಬಳಿಕ ಸುಮಾರು 30ಕ್ಕೂ ಹೆಚ್ಚು ಜೆಸಿಬಿಗಳು ಒಂದರ ಹಿಂದೊಂದು ಎಂಬಂತೆ ನಗರಸಭೆಯಿಂದ ಭೂಮರಡ್ಡಿ ಸರ್ಕಲ್ನತ್ತ ಧಾವಿಸಿದ ಜೆಸಿಬಿಗಳು ಹಾಗೂ ಸಿಬ್ಬಂದಿ ತೆರವು ಕಾರ್ಯಕ್ಕೆ ಧುಮುಕಿದವು. ವಕಾರ ಸಾಲುಗಳಲ್ಲಿರುವ ಕಟ್ಟಡಗಳ ಮೇಲೆರಗಿದ ಜೆಸಿಬಿ ಹಾಗೂ ಹಿಟಾಚಿಗಳು ಆರ್ಭಟಿಸಿದವು.

Advertisement

ಸಂಜೆ 4 ಗಂಟೆ ವೇಳೆಗೆ ಕಟ್ಟಡಗಳ ನೆಲಸಮ ಕಾರ್ಯ ಬಹುತೇಕ ಪೂರ್ಣಗೊಂಡಿತ್ತು. ಲೋಹದ ಆನೆಗಳು ಸೊಂಡಿಲು ಹಾಕಿ, ಗರ್ಜಿಸುತ್ತಿದ್ದಂತೆ ಕೆಲವೇ ಸಮಯದಲ್ಲಿ ಕಬ್ಬಿಣದ ಶೀಟುಗಳನ್ನು ಹಾಕಿದ್ದ, ಮಣ್ಣು ಹಾಗೂ ಆರ್‌ಸಿಸಿ ಮೇಲ್ಛಾವಣಿ ಹೊಂದಿದ್ದ ಕಟ್ಟಡಗಳು ನೆಲಕ್ಕುರುಳುತ್ತಿದ್ದವು.

ಮಾನವೀಯತೆ ಮೆರೆದ ಜಿಲ್ಲಾಡಳಿತ: ಲೀಜ್‌ ಅವಧಿ ಮುಗಿದಿದ್ದರಿಂದ ತೆರವುಗೊಳಿಸುವಂತೆ ನಗರಸಭೆ ಮೈಕ್‌ಗಳಲ್ಲಿ ಅನೌನ್ಸ್‌ಮೆಂಟ್ ಮಾಡಿದರೂ, ನಾನಾ ಕಾರಣಗಳಿಂದ ಅನೇಕರು ಅಂಗಡಿ ಹಾಗೂ ಮನೆಗಳನ್ನು ತೆರವುಗೊಳಿಸಿರಲಿಲ್ಲ. ಆದರೆ ಯಾವುದೇ ಒತ್ತಡಕ್ಕೆ ಮಣಿಯದ ಜಿಲ್ಲಾಡಳಿತ ಮೊದಲಿಗೆ ಭೂಮರೆಡ್ಡಿ ವೃತ್ತದಲ್ಲಿರುವ ಕೆಲ ಅಂಗಡಿಗಳಿಗೆ ಜೆಸಿಬಿಗಳನ್ನು ನುಗ್ಗಿಸಿದ್ದರಿಂದ ಕಕ್ಕಾಬಿಕ್ಕಿಯಾದ ವರ್ತಕರು, ನಾಮುಂದು, ತಾಮುಂದು ಎಂಬಂತೆ ಅಂಗಡಿಗಳನ್ನು ಖಾಲಿ ಮಾಡಲು ಮುಂದಾದರು. ಇನ್ನುಳಿದವರೂ ಸ್ವಯಂ ಪ್ರೇರಣೆಯಿಂದ ತಮ್ಮ ಸರಕು, ಸರಂಜಾಮುಗಳನ್ನು ಹೊರ ಹಾಕಲು ಹರಸಾಹ ಪಟ್ಟರು. ಈ ವೇಳೆ ವರ್ತಕರು ಮಾಲು ಹಾಗೂ ನಿವಾಸಿಗಳು ಸರಕು ಸಾಗಿಲು ಜಿಲ್ಲಾಡಳಿತದಿಂದ ಉಚಿತವಾಗಿ ಸಿಬ್ಬಂದಿ ಹಾಗೂ ಟ್ರ್ಯಾಕ್ಟರ್‌ಗಳನ್ನು ಒದಗಿಸಿತು. ಅದಕ್ಕಾಗಿ ಜಿಲ್ಲೆಯ ವಿವಿಧೆಡೆಯಿಂದ 500ಕ್ಕೂ ಹೆಚ್ಚು ಸಿಬ್ಬಂದಿ ಹಾಗೂ ಟ್ರ್ಯಾಕ್ಟರ್‌ಗಳನ್ನು ಕರೆಯಿಸಿತ್ತು. ಜನರಿಗೆ ತಮ್ಮ ಸರಕು ಸಾಗಾಣಿಕೆ ವೆಚ್ಚ ತಪ್ಪಿಸುವುದರೊಂದಿಗೆ ಎದುರಾಗಬಹುದಾದ ಪ್ರತಿಭಟನೆಯನ್ನೂ ಶಮನಗೊಳಿಸಿತು. ಈ ಮೂಲಕ ಒಂದೇ ಏಟಿನಲ್ಲಿ ಎರಡು ಹಕ್ಕಿಗಳನ್ನು ಹೊಡೆಯುವ ಜಾಣ್ಮೆ ಪ್ರದರ್ಶಿಸಿತು. ಅಲ್ಲದೇ, ತಕ್ಷಣಕ್ಕೆ ಉಳಿದುಕೊ ಳ್ಳಲು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳದವರಿಗೆ ಎಪಿಎಂಸಿಯಲ್ಲಿ ಖಾಲಿ ಇರುವ ಗೋದಾಮುಗಳನ್ನು ಮುಕ್ತವಾಗಿಸಿ, ಮಾನವೀಯತೆ ಮೆರೆಯಿತು.

Advertisement

Udayavani is now on Telegram. Click here to join our channel and stay updated with the latest news.

Next