ಮಾದನಹಿಪ್ಪರಗಿ: ಅತಿವೃಷ್ಟಿಯಿಂದ ತೊಗರಿ ಬೆಳೆ ಕಳೆದುಕೊಂಡ ರೈತರು ಕಂಗಾಲಾಗಿರುವಾಗಲೇ ಪ್ರಕೃತಿ ಇನ್ನೊಂದು ಹೊಡೆತ ನೀಡಿದೆ. ಮಳೆ ಬಾರದೆ, ಬಿಸಿಲು ಬೀಳದೇ ದಿನವಿಡಿ ಮಂಜು ಬಿದ್ದು ತರಕಾರಿ ಬೆಳೆಗಳು ಸೊರಗಿ ಹೋಗಿವೆ. ಹೂವುಗಳು ಉದುರಿವೆ. ಕಾಯಿಗಳು ನೆಲಕಚ್ಚಿವೆ. ಸತತವಾಗಿ ಎರಡ್ಮೂರು ದಿನಗಳಿಂದ ಆಕಾಶ, ಭೂಮಿ ಮಧ್ಯೆ ಹೊಗೆಯಂತೆ ಮಂಜು ಆವರಿಸಿದ ಹಿನ್ನೆಲೆಯಲ್ಲಿ ತರಕಾರಿ ಬೆಳೆಗಳಿಗೆ ರೋಗ ಬಿದ್ದು ಮಾದನಹಿಪ್ಪರಗಿ ವಲಯದೊಳಗಿನ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ.
ಈ ಭಾಗದ ರೈತರು ತರಕಾರಿ ಬೆಳೆ ಬೆಳೆಯಲು ಪ್ರಸಿದ್ಧರು. ದೂರದ ಮುಂಬೈ, ಪುಣೆ, ಸೊಲ್ಲಾಪುರ, ಹೈದ್ರಾಬಾದ, ಕಲಬುರಗಿ, ಯಾದಗರಿ, ಅಕ್ಕಲಕೋಟ, ಆಳಂದ ಈ ಎಲ್ಲ ನಗರಗಳಿಗೆ ದಿನಾಲು ಲಾರಿಗಳಲ್ಲಿ ತರಕಾರಿಗಳನ್ನು ಕಳುಹಿಸುತ್ತಾರೆ. ಟೊಮ್ಯಾಟೋ, ಬದನೆಕಾಯಿ, ಹಿರೇಕಾಯಿ, ಹಸಿ ಮೆಣಸಿನಕಾಯಿ, ಹಾಗಲಕಾಯಿ, ಈರುಳ್ಳಿ, ಮುಖ್ಯವಾಗಿ ಅವರೆಕಾಯಿ, ಡಬ್ಬು ಮೆಣಸಿನಕಾಯಿ, ನುಗ್ಗೆಕಾಯಿ, ಗಜ್ಜರಿ ಸೇರಿದಂತೆ ಇನ್ನು ಅನೇಕ ತರಹದ ತರಕಾರಿಗಳನ್ನು ಬೆಳೆಯುತ್ತಾರೆ.
ಕಳೆದ ಎರಡ್ಮೂರು ದಿನಗಳಿಂದ ಮಂಜು ಕವಿದಿದ್ದರಿಂದ ರೈತ ಶ್ರೀಶೈಲ ಶಿವಶರಣಪ್ಪ ಹಡಲಗಿ ಎನ್ನುವರ ಮೂರು ಎಕರೆ ನುಗ್ಗೆ, ಒಂದೂವರೆ ಎಕರೆ ಅವರೆಕಾಯಿ ತೋಟದಲ್ಲಿ ಇವುಗಳ ಹೂವುಗಳೆಲ್ಲ ಉದುರಿ ನೆಲಕಚ್ಚಿವೆ. ಆದರೂ ಮಾರ್ಕೆಟ್‌ನಲ್ಲಿ ಅವರೆಕಾಯಿ, ನುಗ್ಗೆಕಾಯಿ ಬೆಳೆಗೆ ಒಳ್ಳೆಯ ಬೆಲೆ ಇರುವುದರಿಂದ ಹೂವು, ಕಾಯಿ ಉಳಿಸಿಕೊಳ್ಳಲು ರೈತ ಔಷಧಗಳ ಮೊರೆ ಹೋಗಿದ್ದಾನೆ.
ಇದನ್ನೂ ಓದಿ:ಮೃತ ಗೋವುಗಳನ್ನು ವಾಹನಕ್ಕೆ ಕಟ್ಟಿ ಹೆದ್ದಾರಿಯಲ್ಲಿ ಎಳೆದೊಯ್ದ ಸಿಬ್ಬಂದಿ : ಆಕ್ರೋಶ
ಮಾದನಹಿಪ್ಪರಗಿ ಸುತ್ತಮುತ್ತ ನೂರಾರು ಎಕರೆ ಅವರೆಕಾಯಿ ಬೆಳೆ ಇದ್ದರೆ, ಸಾವಿರಾರು ಎಕರೆ ನುಗ್ಗೆ ಬೆಳೆ ಇದೆ. ಈ ಗ್ರಾಮದಿಂದ ಲಾರಿಗಳು ತರಕಾರಿಗಳನ್ನು ಹೊತ್ತು ನಗರಕ್ಕೆ ಹೋಗುತ್ತವೆ. ಹೈದ್ರಾಬಾದ್‌ಗೆ ನುಗ್ಗೆಕಾಯಿ, ಹಸಿ ಮೆಣಸಿನಕಾಯಿ, ಡಬ್ಬು ಮೆಣಸಿನಕಾಯಿ ಸರಬರಾಜು ಆಗುತ್ತದೆ. ಆದರೆ ಹವಾಮಾನ ಬದಲಾವಣೆಯಿಂದ ರೈತರ ಬದುಕು ಪ್ರಸಕ್ತ ವರ್ಷ ಮೂರಾಬಟ್ಟೆ ಆಗಿದೆ. ಕೃಷಿಯನ್ನೇ ನಂಬಿಕೊಂಡಿರುವ ರೈತರಿಗೆ ಅಕಾಲಿಕ ಮಳೆ, ಮಂಜು ಈ ವರ್ಷ ಅಮದಾನಿ(ಲಾಭ) ಬಾರದಂತೆ ಮಾಡಿದೆ.
–ಪರಮೇಶ್ವರ ಭೂಸನೂರ