ಮಂಗಳೂರು: ಎರಡು ತಿಂಗಳ ನಿಷೇಧದ ಬಳಿಕ ಪ್ರಾರಂಭವಾಗಿರುವ ಯಾಂತ್ರಿಕ ಮೀನುಗಾರಿಕೆಗೆ ಆರಂಭ ದಲ್ಲೇ ಹವಾಮಾನ ವೈಪರೀತ್ಯದ ಅಡಚಣೆ ಎದುರಾಗಿದೆ. ಹೊಸ ಮೀನುಗಾರಿಕಾ ಋತುವಿನಲ್ಲಿ ಬಹು ನಿರೀಕ್ಷೆಯೊಂದಿಗೆ ಆ. 1ರಂದು ಸಮುದ್ರಕ್ಕೆ ತೆರಳಿದ್ದ ಬೋಟುಗಳು ಚಂಡಮಾರುತದಿಂದಾಗಿ ಮೀನು ಗಾರಿಕೆ ನಡೆಸಲು ಸಾಧ್ಯವಾಗದೆ ವಾಪಸಾಗಿವೆ.
ಹವಾಮಾನ ಇಲಾಖೆಯ ನೀಡಿ ರುವ ಮುನ್ಸೂಚನೆಯಂತೆ ಆ.9ರ ವರೆಗೆ ಇದೇ ಪರಿಸ್ಥಿತಿ ಮುಂದುವರಿ ಯುವ ಸಾಧ್ಯತೆಗಳಿವೆ.
ಆಳ ಸಮುದ್ರ ಮೀನುಗಾರಿಕೆ ನಡೆಸುವ ಟ್ರಾಲ್ ಬೋಟುಗಳು ಆ. 1ರಿಂದ ಮೀನುಗಾರಿಕೆಗೆ ತೆರಳಿದ್ದವು. ಬೋಟ್‌ಗಳು 8 ರಿಂದ 10 ದಿನಗಳ ಕಾಲ ಮೀನುಗಾರಿಕೆ ನಡೆಸಿ ಹಿಂದಿರುಗಿ ಬರಬೇಕಾಗಿತ್ತು. ಆದರೆ ಆ. 3 ರಂದು ದಿಢೀರ್ ಕಾಣಿಸಿಕೊಂಡ ಚಂಡಮಾರುತದಿಂದಾಗಿ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಸಮುದ್ರಕ್ಕೆ ತೆರಳಿದ್ದ ಬೋಟ್‌ಗಳಿಗೆ ಕೇವಲ ಮೂರು ದಿನ ಮಾತ್ರ ಮೀನುಗಾರಿಕೆ ನಡೆಸಲು ಸಾಧ್ಯವಾಗಿದ್ದು, ಎಲ್ಲ ಬೋಟ್‌ಗಳು ಈಗ ಬಂದರುಗಳಿಗೆ ಮರಳಿವೆ. ಮಂಗಳೂರಿನಲ್ಲಿ ಆಳಿವೆ ಬಾಗಿಲು ಬಳಿ ಸಮುದ್ರದಲ್ಲಿ ಪ್ರಕ್ಷುಬ್ಧತೆ ಹೆಚ್ಚಿರುವುದರಿಂದ ಮೀನುಗಾರಿಕಾ ಬಂದರಿನೊಳಗೆ ಬರಲಾರದೆ ಎನ್‌ಎಂಪಿಟಿಯ ಬರ್ತ್‌ನಲ್ಲಿ ನಿಲುಗಡೆ ಮಾಡಲಾಗಿದೆ. ದೂರ ಸಮುದ್ರದಲ್ಲಿ ಮೀನುಗಾರಿಕೆಯಲ್ಲಿ ನಿರತವಾಗಿದ್ದ ಕೆಲವು ಬೋಟುಗಳು ಮಂಗಳೂರಿಗೆ ಬರಲಾರದೆ ಸಮೀಪದ ಕಣ್ಣೂರು, ಕೊಲ್ಲಂ, ಕಾರವಾರಗಳ ಮೀನುಗಾರಿಕಾ ಬಂದರುಗಳಲ್ಲಿ ಆಶ್ರಯ ಪಡೆದಿವೆ.
ಹವಾಮಾನ ಇಲಾಖೆ ಮುನ್ಸೂಚನೆಯಂತೆ ಸಮುದ್ರದಲ್ಲಿ 40ರಿಂದ 50 ಕಿ.ಮೀ. ವೇಗದಲ್ಲಿ ಬಲವಾದ ಗಾಳಿ ಹಾಗೂ ಸಮುದ್ರ ಪ್ರಕ್ಷುಬ್ಧಗೊಂಡಿರುವುರಿಂದ ಮೀನುಗಾರರು ಸಮುದ್ರಕ್ಕೆ ತೆರಳದಂತೆ ಆ.4 ರಂದು ಎಚ್ಚರಿಕೆ ನೀಡಲಾಗಿದ್ದು ಆ. 9ರ ವರೆಗೆ ಮುಂದುವರಿಯಲಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಮೀನುಗಾರರುಹಿಂದಿರುಗಿದ್ದಾರೆ. ಮಂಗಳೂರು ಬಂದರಿನಲ್ಲಿ ಅಳಿವೆ ಬಾಗಿಲು ಮೂಲಕ ಒಳಬರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅವರಿಗೆ ನವಮಂಗಳೂರು ಬಂದರಿನೊಳಗೆ ತಂಗಲು ಅವಕಾಶ ಕಲ್ಪಿಸಲಾಗಿದೆ. ಪ್ರಸ್ತುತ ಸುಮಾರು 100 ಕ್ಕೂ ಅಧಿಕ ಬೋಟುಗಳು ತಂಗಿವೆ
– ಮೀನುಗಾರಿಕಾ ಉಪನಿರ್ದೇಶಕ, ಮಂಗಳೂರು