Advertisement

ಶ್ರೀನಿವಾಸಪುರಕ್ಕೆ ಪರವೂರಿನ ಮಾವು ಲಗ್ಗೆ

10:09 AM Apr 29, 2019 | Team Udayavani |

ಕೋಲಾರ: ಮಾವಿನ ರಾಜಧಾನಿ ಎಂದೇ ಖ್ಯಾತವಾಗಿರುವ ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ಮಾವು ಹಣ್ಣಾಗುವ ಮುನ್ನವೇ ಹೊರ ರಾಜ್ಯ, ಜಿಲ್ಲೆಗಳ ಮಾವು ನಗರದ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಬೆಲೆ ಮಾತ್ರ ಗ್ರಾಹಕರಿಗೆ ಹೆಚ್ಚು ಕಹಿಯಾಗಿದೆ.

Advertisement

ಕೋಲಾರದ ಶ್ರೀನಿವಾಸಪುರದ ಮಾವು ಇನ್ನೂ ಮಾರುಕಟ್ಟೆ ಹೊಸ್ತಿಲು ತುಳಿಯುವ ಮುನ್ನವೇ ಹೊರ ರಾಜ್ಯದ ವಿವಿಧ ತರಾವರಿ ಮಾವಿನ ಸಿಹಿ ಗ್ರಾಹಕರಿಗೆ ದೊರೆಯಲಾರಂಭಿಸಿದೆ. ರಾಜ್ಯದಲ್ಲಿ ಉತ್ಪಾದನೆಯಾಗುವ ಒಟ್ಟು ಮಾವಿನಲ್ಲಿ ಶೇ.47ಕ್ಕಿಂತಲೂ ಹೆಚ್ಚು ಮಾವು ಬೆಳೆಯುವುದು ಕೋಲಾರ ಜಿಲ್ಲೆಯಲ್ಲೇ. ಅದರಲ್ಲೂ ಶ್ರೀನಿವಾಸಪುರದಲ್ಲಿ. ಇಲ್ಲಿನ ಮಣ್ಣಿನ ಮಹಿಮೆ, ಫಲವತ್ತತೆ ಮಾವು ಬೆಳೆಗೆ ಪ್ರಕೃತಿಯೇ ಹೇಳಿ ಮಾಡಿಸಿಕೊಟ್ಟಂತಿದೆ. ಇಲ್ಲಿನ ಮರಳು ಮಿಶ್ರಿತ ಕೆಮ್ಮಣ್ಣು ವಿಶೇಷತೆ. ಯಾವುದೇ ತಳಿಯಿರಲಿ, ಈ ನೆಲದಲ್ಲಿ ಬೆಳೆದ ಮಾವು ಹುಳಿ ಕಡಿಮೆ. ಹೆಚ್ಚು ರುಚಿಕರ ಮತ್ತು ಸ್ವಾದಿಷ್ಟಕರ. ಎಲ್ಲರ ಬಾಯಲ್ಲಿ ನೀರೂರಿಸುವ ಸಾಮರ್ಥ್ಯ ಹೊಂದಿದೆ.ಜಿಲ್ಲೆಯಲ್ಲಿ ರಸಪುರಿ, ಬಾದಾಮಿ, ಮಲ್ಲಿಕಾ, ತೋತಾಪುರಿ, ನೀಲಂ, ಬೇನಿಷಾ, ಖುದ್ದೂಸ್‌, ರಾಜಗೀರಾ, ಕಾಲಾಪಾಡ್‌, ಆಲ್ಫೋನ್ಸಾ , ಮಲಗೋಬಾ, ಅಲ್ಮೇಟ್, ತಳಿಯ ಮಾವು ಹೆಚ್ಚು ಬೆಳೆಯುಲಾಗುತ್ತಿದೆ.

ಪರವೂರಿನ ಮಾವು ಲಗ್ಗೆ: ಹಣ್ಣುಗಳ ರಾಜ ಮಾವು ಕೋಲಾರದ ಮಾರುಕಟ್ಟೆಗೂ ಲಗ್ಗೆ ಇಟ್ಟಿದೆ. ಇವುಗಳಲ್ಲಿ ಪರವೂರಿನ (ಹೊರ ಜಿಲ್ಲೆ)ಮಾವು ಹೆಚ್ಚಿನದ್ದಾಗಿದ್ದರೆ, ಸ್ಥಳೀಯ ಶ್ರೀನಿವಾಸಪುರದಿಂದಲೂ ಅಲ್ಪ ಪ್ರಮಾಣದಲ್ಲಿ ಮಾವು ಬರಲಾರಂಭಿಸಿದೆ. ಜಿಲ್ಲೆಯಲ್ಲಿ ಸುಮಾರು 50,433 ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದ್ದು, 26,000 ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಶ್ರೀನಿವಾಸಪುರದಲ್ಲೇ ಮಾವು ಬೆಳೆಯಲಾಗುತ್ತಿದೆ. ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಬಹುತೇಕ ಕಡೆ ಮಾವು ಹೂವು ಬಿಟ್ಟಿದ್ದು ತಡವಾಗಿದ್ದು, ಇನ್ನೂ ಮಾಗುವ ಹಂತಕ್ಕೆ ಬಂದಿಲ್ಲ. ಆದರೆ, ಕೆಲವೇ ಕೆಲ ಪ್ರದೇಶದಲ್ಲಿ ಡಿಸೆಂಬರ್‌ನಿಂದ ಜನವರಿ ಆರಂಭದಲ್ಲಿ ಹೂವು ಬಿಟ್ಟಿದ್ದ ಬಾದಾಮಿ, ರಾಜಗೀರಾ ತಳಿ ಕಾಯಿಗಳು ಮರದಲ್ಲಿ ಸಾಧಾರಣವಾಗಿ ಬಲಿತಿದೆ. ಮಾವಿನ ತೋಟಗಳನ್ನು ಗುತ್ತಿಗೆಗೆ ಪಡೆದಿರುವ ಮಾವು ವ್ಯಾಪಾರಸ್ಥರು ಬಲಿಯಲಾರಂಭಿಸಿರುವ ಕಾಯಿಗಳನ್ನೇ ಕಿತ್ತು ಹಣ್ಣಾಗಿಸಿ ಮಾರಾಟ ಮಾಡಲಾರಂಭಿಸಿದ್ದಾರೆ. ಕೆಲ ದಿನಗಳಿಂದ ಬಿದ್ದ ಭಾರೀ ಮಳೆಗೆ ಮಾವು ಬೆಳೆಹಾನಿ ಸಂಭವಿಸಿದೆ. ತಿಂಗಳಾಂತ್ಯದಲ್ಲಿ ಮಳೆಯಾಗುವ ಸೂಚನೆ ಸಿಕ್ಕಿರುವುದೇ ತಕ್ಕ ಮಟ್ಟಿಗೆ ಬಲಿತಿರುವ ಕಾಯಿಗಳನ್ನು ಕೀಳಲು ಪ್ರಮುಖ ಕಾರಣ ಎನ್ನಲಾಗಿದೆ.

ಮಾವಿನ ಬೆಲೆ ದುಬಾರಿಯಾಗೋ ಸಾಧ್ಯತೆ

ಮಾರುಕಟ್ಟೆಗೆ ಹೆಚ್ಚು ಪ್ರಮಾಣದಲ್ಲಿ ಮಾವು ಬಾರದಿರುವುದರಿಂದ ಆರಂಭದಲ್ಲಿ ಬೆಲೆ ಸ್ವಲ್ಪ ದುಬಾರಿಯೇ ಇದೆ. ಕೋಲಾರ ನಗರದಲ್ಲಿ ರಾಜಗೀರಾ 60ರಿಂದ 70 ರೂ,.ಗೆ ಮಾರಾಟ ಆದರೆ ಬಾದಾಮಿ ಕೆ.ಜಿ.ಗೆ 100ರಿಂದ 120 ರೂ., ನಾಟಿ ತಳಿಯ, ಆಡುಭಾಷೆಯಲ್ಲಿ ಸಕ್ಕರೆ ಮಾವು ಕೆ.ಜಿ.ಗೆ 80 ರೂ.ಗೆ ಮಾರಾಟ ಆಗುತ್ತಿದೆ. ಕಳೆದ ವರ್ಷ ಮಾವು ಫಸಲು ಚೆನ್ನಾಗಿತ್ತು. ಹೀಗಾಗಿ ದರ ಕಡಿಮೆಯಿತ್ತು. ಈ ಸಲ ಫಸಲು ಚೆನ್ನಾಗಿದ್ದರೂ ವಾರದ ಹಿಂದೆ ಬಿದ್ದ ಮಳೆ ಮಾರ್ಚ್‌ ಅಂತ್ಯದಲ್ಲಿ ಬಿದ್ದಿದ್ದರೆ ಕಾಯಿ ಗಾತ್ರ ಚೆನ್ನಾಗಿ ಬರುತ್ತಿತ್ತು. ಕೆಲ ದಿನಗಳ ಹಿಂದೆ ಶ್ರೀನಿವಾಸಪುರದಲ್ಲಿ ಬಿರುಗಾಳಿ ಸಹಿತ ಮಳೆಗೆ ಭಾರೀ ಪ್ರಮಾಣದಲ್ಲಿ ಮಾವು ಬೆಳೆಗೆ ಹಾನಿ ಆಗಿರುವುದರಿಂದ ಮುಂದಿನ ದಿನಗಳಲ್ಲಿ ಮಾವು ಬೆಲೆ ದುಬಾರಿ ಆಗಬಹುದು ಎನ್ನುತ್ತಾರೆ ಮಾವಿನ ವ್ಯಾಪಾರಿಗಳು.

ಶ್ರೀನಿವಾಸಪುರದಲ್ಲಿ ಮಂಡಿ ಆರಂಭವಾಗಬೇಕಿದೆ
ಪ್ರತಿ ವರ್ಷವೂ ಕೋಲಾರ ಜಿಲ್ಲೆಯ ಮಾವು ಫಸಲು ಕೊಯ್ಲು ಆರಂಭಕ್ಕೆ ಮುನ್ನವೇ ರಾಮನಗರ, ಮೈಸೂರು ಭಾಗದಿಂದ ಮಾವುಗಳು ಮೊದಲು ಮಾರುಕಟ್ಟೆ ಪ್ರವೇಶ ಸಾಮಾನ್ಯ. 2-3 ದಿನಗಳಿಂದ ನಗರದ ಬೀದಿ ಬೀದಿಯ ತಳ್ಳುವ ಬಂಡಿಗಳಲ್ಲಿ ಮಾವು ಮಾರಾಟ ಆರಂಭವಾಗಿದ್ದು ಗ್ರಾಹಕರ ಹುಳಿ-ಸಿಹಿ ಮಿಶ್ರಿತ ಮಾವುಗಳನ್ನು ಚಪ್ಪರಿಸಬಹುದಾಗಿದೆ. ಶ್ರೀನಿವಾಸಪುರದಲ್ಲಿ ಮಾವು ಮಂಡಿ ಇನ್ನಷ್ಟೇ ಆರಂಭವಾಗಬೇಕಿದ್ದು, ಇದರ ನಡುವೆಯೂ ಶ್ರೀನಿವಾಸಪುರ ಎಪಿಎಂಸಿಯಲ್ಲಿ ಭಾನುವಾರ 40 ಕ್ವಿಂಟಲ್ ಮಾವು ಅವಕ ಆಗಿದೆ.

ಗಣೇಶ್‌
Advertisement
Advertisement

Udayavani is now on Telegram. Click here to join our channel and stay updated with the latest news.

Next