ಬೆಂಗಳೂರು: ಕಾಂಗ್ರೆಸ್ ಪಕ್ಷ ಲಸಿಕೆ ನೀಡುವುದನ್ನು ವಿರೋಧಿಸಿಲ್ಲ. ಪೂರ್ಣ ಪ್ರಮಾಣದಲ್ಲಿ ಪರೀಕ್ಷಿಸದೆ, ಅದನ್ನು ಬಡ ಆಶಾ ಕಾರ್ಯಕರ್ತೆಯರು ಸೇರಿದಂತೆ ಕೋವಿಡ್ ವಾರಿಯರ್ಸ್ ಗಳಿಗೆ ನೀಡುವುದನ್ನು ಮಾತ್ರ ಪ್ರಶ್ನಿಸಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ನಡೆದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರಂಭದಲ್ಲಿ ಲಸಿಕೆ ಬಗ್ಗೆ ಬಿಜೆಪಿಯವರಿಗೆ ನಂಬಿಕೆ ಇರಲಿಲ್ಲ. ಹೀಗಾಗಿ ಮೊದಲು ಪ್ರಧಾನ ಮಂತ್ರಿಗಳು ತೆಗೆದುಕೊಳ್ಳದೇ, ಅದನ್ನು ಬಡವರ ಮೇಲೆ ಪ್ರಯೋಗಿಸಿದ್ದರು ಎಂದರು.
ನಾವು ಲಸಿಕೆ ವಿರೋಧಿಸಿದ್ದರೆ ಸಿದ್ದರಾಮಯ್ಯನವರು, ನಾನು, ನಮ್ಮ ನಾಯಕರು ಲಸಿಕೆ ತೆಗೆದುಕೊಳ್ಳುತ್ತಿದ್ದೆವಾ? ನಾವು ಕೊಟ್ಟ ಸಹಕಾರವನ್ನು ಸರ್ಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ. ಸುಖಾಸುಮ್ಮನೆ ಆರೋಪ ಮಾಡುತ್ತಿದೆ ಎಂದು ಡಿ ಕೆ ಶಿವಕುಮಾರ್ ಹೇಳಿದರು.
ಕೋವಿಡ್ ಪಿಡುಗಿನ ಸಂಕಷ್ಟದ ಸಮಯದಲ್ಲಿ ಜನರ ರಕ್ಷಣೆ ನಮ್ಮ ಕರ್ತವ್ಯ. ಹೀಗಾಗಿ ತಾಲೂಕು ಮಟ್ಟದಿಂದ ರಾಜ್ಯ ಮಟ್ಟದವರೆಗೂ, ಸಹಾಯವಾಣಿ, ಆಂಬ್ಯುಲೆನ್ಸ್ ಸೇವೆ, ಆಕ್ಸಿಜನ್ ಪೂರೈಕೆ, ಮೆಡಿಕಲ್ ಕಿಟ್, ಆಹಾರ ಕಿಟ್ ವಿತರಣೆಯಿಂದ ಉಚಿತ ಲಸಿಕೆ ನೀಡಲು 100 ಕೋಟಿ ರೂ. ಯೋಜನೆವರೆಗೂ ಕಾಂಗ್ರೆಸ್ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
‘ಯವ ಕಾಂಗ್ರೆಸ್ ಸದಸ್ಯರು ರಾಜ್ಯದ ಉದ್ದಗಲಕ್ಕೂ ಜನರ ಪ್ರಾಣ ಉಳಿಸಲು ಅಗತ್ಯ ಸೇವೆ ಒದಗಿಸುತ್ತಿದ್ದಾರೆ. ವಿದೇಶಗಳಿಗೆ ಲಸಿಕೆ ರಫ್ತು ಸ್ಥಗಿತಗೊಳಿಸಿ, ನಮ್ಮ ದೇಶದ ಜನರಿಗೆ ಮೊದಲು ನೀಡಬೇಕು. ಲಸಿಕೆ ಪಡೆಯಲು ಆನ್ ಲೈನ್ ನೋಂದಣಿ ಮಾಡಿಸಬೇಕೆಂದು ಹೇಳಿದ್ದಾರೆ. ಹಳ್ಳಿ ಜನರಿಗೆ ಆನ್ಲೈನ್ ಬಗ್ಗೆ ಏನು ಗೊತ್ತಿರುತ್ತದೆ? ಹೀಗಾಗಿ ನಮ್ಮ ಯೂತ್ ಕಾಂಗ್ರೆಸ್ ಸದಸ್ಯರು ಪಕ್ಷ, ಜಾತಿ, ಧರ್ಮ ಬೇಧವಿಲ್ಲದೆ, ಹಳ್ಳಿಯಿಂದ ನಗರದವರೆಗೆ ಆನ್ಲೈನ್ ನೋಂದಣಿ ಅಭಿಯಾನ ಆರಂಭಿಸುತ್ತಿದ್ದಾರೆ ಎಂದರು.