ಕೂಕಣ ಅಂತ ಪದ ಕೇಳುತ್ತಲೇ, ಥಟ್ಟನೆ ಕಣ್ಣ ಮುಂದೆ ಸಣ್ಣವನಿದ್ದಾಗ ನೋಡಿದ್ದ ಅದೇ ಚಿತ್ರಗಳು ಬಂದು ಹೋದವು.. ಈ ದಿನಗಳಲ್ಲೂ ಅದನ್ನೆಲ್ಲಾ ಮಾಡೋರು ಇರುತ್ತಾರಾ? ಇಷ್ಟು ವರ್ಷ ಕಳೆದ ಮೇಲೂ ಅವರ ವೃತ್ತಿ ಬದಲಾಗಿಲ್ಲವಾ? ಅವರ ಮಕ್ಕಳು ಓದಿದ್ದಾರಾ? ಅಥವಾ ಅವರೂ ಕೂಡ ಓದಲೇ ಇಲ್ಲವಾ? ಅಥವಾ ಓದಿಕೊಂಡೂ ಇಂತಹ ವೃತ್ತಿಗೆ ಯಾಕೆ ಬಂದ್ರು? ಇದು ಕುಲ ಕಸುಬಾ? ಹೀಗೆ ಥರಹೇವಾರಿ ಪ್ರಶ್ನೆಗಳು ಕುಣಿಯತೊಡಗಿದವು..
ಹೀಗಿದ್ದಾಗಲೇ ಕಲಬುರಗಿಯ ಬಸ್ ನಿಲ್ದಾಣಕ್ಕೆ ಬಸ್ಸು ಬಂದು ನಿಂತಿತು. ಕೆಳಗಿಳಿದು, ನಿಲ್ದಾಣದ ತುಂಬಾ ಕಣ್ಣಾಡಿಸಿದ್ರೂ ಆ ಜನ ಎಲ್ಲೂ ಕಾಣಲಿಲ್ಲ.. ಅರೆ..ಇವನಾ.. ಕೆಲ್ಸಾ ಬಿಟ್ಟಂಗೆ ಕಾಣುತ್ತೆ ಅನ್ನಿಸುವಾಗಲೇ, ಬಸ್ ನಿಲ್ದಾಣದ ಮುಖ್ಯ ದ್ವಾರದಲ್ಲಿ ಒಂದಷ್ಟು ಜನರು ಕಾಣಿಸಿಕೊಂಡರು. ಬಪ್ಪರೇ, ಕೊನೆಗೂ ಸಿಕ್ಕರು. ನನಗೆ ಬೇಕಿದ್ದವರು ಇವರೇ ಅಂದುಕೊಂಡು ಆ ಕಡೆ ಹೆಜ್ಜೆ ಹಾಕಿದೆ.
ಸಣ್ಣ ದನಿ, ಬಡಕಲು ದೇಹಗಳು.. ಹೆಗಲಿಗೆ ಚೀಲ.. ಬರ್ರಿ..ಬರ್ರಿ.. ಹತ್ತು ರೂಪಾಯಿ.. ಇಪ್ಪತ್ತು ರೂಪಾಯಿ.. ಅನ್ನುತ್ತಾ ಕರೆಯುತ್ತಿದ್ದರು.. ಹೌದು.. ಅನುಮಾನವೇ ಇಲ್ಲ.. ಅವರೇ! ಆದರೆ, ಅವರ್ಯಾರಿಗೂ ಮಾತನಾಡುವ ಪುರುಸೊತ್ತು ಇದ್ದಂಗೆ ಕಾಣಿಸಲಿಲ್ಲ. ಅದು ಅವರ ಪಾಲಿನ ಬಿಜಿನೆಸ್ ಟೈಮ್.. ಆದರೂ, ಬಿಡಬಾರದು ಅಂತ ಸ್ವಲ್ಪ ಹೊತ್ತು ಅಲ್ಲಿಯೇ ನಿಂತು ನೋಡಿದೆ.
ಹೆಗಲಿಗೆ ಚಿಕ್ಕದೊಂದು ಚರ್ಮದ ಚೀಲ ಹಾಕಿಕೊಂಡು ಕಲರ್ ಕಲರ್‌ನ ಚಿಕ್ಕ ಬಾಟಲಿ ಹಿಡಿದುಕೊಂಡು, ಅರಳೆ(ಹತ್ತಿ) ಉಂಡೆ ತುಂಬಿಕೊಂಡು ಕೈಯಲ್ಲಿ ಚಿವಟಿಗೆ. ಚಪ್ಪಟೆಯಾಗಿದ್ದ ಚೂಪಾದ ತೆಳ್ಳಗಿನ ಸರಳು ಹಿಡಿದು, “ಬರ್ರಿ….ಬರ್ರಿ… ಕೂಕಣ ತೆಗಿತೀವಿ..ಕೂಕಣ.. ನೋವು.. ಮಾಡಲ್ಲ..ಬರ್ರಿ..ಬರ್ರಿ’ ಎಂದು ಸಣ್ಣ ದನಿಯಲ್ಲಿ ಕರೆಯುವ ಸಮುದಾಯವೊಂದು ಕಲಬುರ್ಗಿ ಸೀಮೆಯಲ್ಲಿದೆ. ನಿಧಾನವಾಗಿ ಕಿವಿಯೊಳಗೆ ಸರಳು ಹಾಕುವುದು, ತೆಗೆಯುವುದು. ಕೈಗೆ ಒರೆಸಿಕೊಳ್ಳೋದು. ಮತ್ತೆ ಹಾಕುವುದು ಕಿವಿಯೊಳಗಿನ ಕಲ್ಮಶ ತೆಗೆಯುವುದು ನಡೆದೇ ಇತ್ತು. ಕಣ್ಣು ಮತ್ತು ದೃಷ್ಟಿ ಮಾತ್ರ ಕಿವಿಯ ಮೇಲೆಯೇ.. ಸ್ವಲ್ಪ ಮೈಮರೆತರೂ ಖಂಡಿತ ಕಿವಿಗೆ ಗಾಯ!
ಹತ್ತಾರು ಜನರಲ್ಲಿ ಮೂರ್‍ನಾಲ್ಕು ಮಂದಿ ಮಾತ್ರ ಕೂಕಣ ತೆಗೆಸಿಕೊಳ್ಳಲು ಮುಖ್ಯದ್ವಾರದ ಪಕ್ಕದ ಗೋಡೆಯ ಕಡೆಗೆ ನಿಲ್ಲುತ್ತಿದ್ದರು. “ನಿಧಾನಪಾ.. ಜೋರು ಮಾಡಬೇಡಾ. ನೋವಾಗ್ತದೆ’ ಅನ್ನುತ್ತಿದ್ದ ಗಿರಾಕಿಗಳು. ಕಣ್ಣು ಮುಚ್ಚಿ, ಮಾರಿ ಕಿವುಚಿಕೊಂಡು ಕೈ ಎತ್ತಿ ಸನ್ನೆ ಮಾಡುತ್ತಿದ್ದರು. 10 ನಿಮಿಷದಲ್ಲಿ ಕೆಲಸ ಮುಗೀತಿತ್ತು.
ಇದೆಲ್ಲಾ ಏನು? ಈಗ ಹೇಳ್ತಿರೋದು ಯಾರ ಪುರಾಣ ಎಂದೆಲ್ಲಾ ನಿಮಗೆ ಅನುಮಾನ ಬಂತಾ? ಇದು ಕಿವಿಯಲ್ಲಿನ ಕೂಕಣ ತೆಗೆಯುವುದನ್ನೇ ವೃತ್ತಿ ಮಾಡಿಕೊಂಡಿರುವ ಸಮುದಾಯವೊಂದರ ಕಥನ.
ಇವರೆಲ್ಲಾ 25-30ರ ಜನರ ಗುಂಪಾಗಿ, ಬಸ್, ರೈಲು ನಿಲ್ದಾಣಗಳು, ಸಂತೆಗಳು, ಬಜಾರುಗಳು, ಜಾತ್ರೆಗಳಲ್ಲಿ; ಸಾರ್ವಜನಿಕ ವ್ಯವಹಾರ ನಡೆಯುವ ಸ್ಥಳದಲ್ಲಿ ನಿಂತು, ಕುಂತು ಜನರ ಕಿವಿಯಲ್ಲಿನ ಕೂಕಣ ತೆಗೆದು ಹೊಟ್ಟೆ ತುಂಬಿಸಿಕೊಳ್ಳುತ್ತಾರೆ.
ಅಚ್ಚರಿ ಎಂದರೆ, ಏನೆಲ್ಲಾ ಬದಲಾದರೂ ಈ ವೃತ್ತಿ ಮತ್ತು ಇದನ್ನು ನಂಬಿದವರು ಮಾತ್ರ ದಶಕಗಳಿಂದಲೂ ಹಾಗೆಯೇ ಉಳಿದಿದ್ದಾರೆ. ಇವರಿಗೆ ಸರಕಾರಗಳು, ರಾಜಕಾರಣಿಗಳು ಹಾಗೂ ನಮ್ಮ ವ್ಯವಸ್ಥೆ ಇನ್ನೂ ಏನೂ ಸಹಾಯ ಮಾಡಿಲ್ಲ.
ಹಿಂಗೇ ಎಷ್ಟು ದಿನ?
ಏನ್ರಿ..ಹಿಂಗೇ ಎಷ್ಟು ದಿನ ಬದುಕ್ತೀರಿ ಅಂತ ಕೇಳಿದ್ರೆ, “ಏನು ಮಾಡಾಮು ಸರೂÅ.. ಬಾಳ ದಿನದಿಂದ, ನಮ್ಮಪ್ಪನ ಕಾಲದಿಂದಲೂ ಇದೇ ಕಸುಬು ಮಾಡ್ತಿದೀವಿ. ಈಗ್ಯಾರು ನಮಗ ಹೊಸಾ ಕೆಲ್ಸ ಕೊಡ್ತಾರ? ಕೊಟ್ಟರೂ ನಮಗೆಲ್ಲಿ ಐತಿ ಐಡಿಯಾ? ಓದಿಲ್ಲ.. ಬರಿªಲ್ಲ. ಕೈಯಾಗ ಕಬ್ಬಣದ ಕಡ್ಡಿ ಹಿಡಿದ್ರೇನೇ ಹೊಟ್ಟೆ ತುಂಬತಾದ. ಗಿರಾಕಿ ಸಿಕ್ಕರ ಹೊಟ್ಟೆ ತುಂಬಾ. ಇಲ್ಲಂದ್ರ ಅರ್ಧ ಹೊಟ್ಟಿ ಉಣತೀವಿ..(ಸಿಕ್ಕರೆ ಶಿಕಾರಿ.. ಇಲ್ಲದಿದ್ದರೆ ಭಿಖಾರಿ..) ಎನ್ನುತ್ತಾ ನಮ್ಮನ್ನೇ ದಿಟ್ಟಿಸಿ ನೋಡಿ ನಗುತ್ತಾರೆ ಹಾಗರಗಾ ಕ್ರಾಸಿನ ಇಂದಿರಾಗಾಂಧಿ ಕಾಲೊನಿಯ ನಿವಾಸಿ ಗುಡೂಖಾನ ಬಡೇಖಾನ್.
ಹಿಂಗೇ ಕೆಲ್ಸಾ ಮಾಡಕೋಂತ, ಒಬ್ಬ ಮಗಳ ಮತ್ತು ಮಗನ ಮದುವೆ ಮಾಡೀನ್ರಿ. ಮಗಳ ಗಂಡಾನೂ, ನನ್ನ ಮಗಾನೂ ಇದೇ ಕೆಲ್ಸಾ ಮಾಡ್ತಾರ. ರೋಜಿ ರೋಟಿಗೆ ಏನೂ ತೊಂದರೆ ಇಲ್ಲ. ಸಣ್ಣದೊಂದು ಮನಿ ಕಟಗೊಂಡೀನಿ. ಮನ್ಯಾಗ ಹೆಣ್ಣು ಮಕ್ಕಳು (ಹೆಂಡ್ತಿ, ಸೊಸೆ) ಹಗ್ಗ ಮಾಡ್ತಾರ. ನೂಲಿಂದು ಮತ್ತ ಪ್ಲಾಸ್ಟಿಕ್ ಚೀಲದ ದಾರದಿಂದ ಹಗ್ಗ ಮಾಡಿ ಮಾರ್ತಾರ. ಹ್ಯಂಗೋ ಜೀವನ ನಡದಾದ ಎಂದು ಗುಡೂಖಾನ್ ನಿಟ್ಟುಸಿರು ಬಿಟ್ಟರು.
ಆ ಸಣಕಲ ದೇಹಕ್ಕೆ ತೊಗಲಿನ ಚೀಲವೇ ಭಾರ ಎನ್ನುವಷ್ಟರ ಮಟ್ಟಿಗೆ ಅದು ಜೋತು ಬಿದ್ದಿತ್ತು. ಗುಟಕಾ, ತಂಬಾಕು ತಿಂದು ನಕ್ಕರೂ ಕೆಂಪು ನಗುವೇ ಕಾಣುವಂತಿತ್ತು. ಕಣ್ಣು ಹಾಯಿಸಿ ನೋಡಿದರೆ, ಎಲ್ಲಾ ನಾಲ್ಕಾರು ಜನರೂ ಸೊಣಕಲೇ. ಮೊಹಮ್ಮದ್ ಸೌಫಿಕ್, ಜಾವೀದ್‌ಖಾನ್, ಅಹಮದ್ ಮತ್ತು ಮಸ್ತಾನ. ಎಲ್ಲರದ್ದೂ ಇಂತಹದೇ ಕಥೆಗಳು.
ಇವರ ಹೊಟ್ಟೆ ತುಂಬೋದು ಹೇಗೆ..
ಟ್ರಾಫಿಕ್ ಪೊಲೀಸ್ ಠಾಣೆಯ ಪೇದೆ ಸುಧಾಕರ್ ಅವರನ್ನ ಮಾತಾಡಿಸಿದ್ರೆ, “ಸರ್, ಈಗ ದೊಡ್ಡ ದವಾಖಾನಿ, ಇಎನ್‌ಟಿ ಸ್ಪೆಶಲಿಸ್ಟ್ ಎಲ್ಲವು ಬಂದಿದೆ ಸರಿ. ಆದ್ರೆ, ಇವರ ಹೊಟ್ಟೆ ಹ್ಯಾಂಗ ತುಂಬಬೇಕು? ಹತ್ತೋ ಇಪ್ಪತ್ತೋ ರೂಪಾಯಿಗೆ ಇವತ್ತು ಏನು ಸಿಗುತ್ತೆ? ಇವರು ಎಚ್ಚರಿಕೆಯಿಂದ ಕಿವಿ ಸ್ವತ್ಛ ಮಾಡ್ತಾರೆ. ಒಳಗೆ ಕಬ್ಬಿಣದ ಸರಳು ತಗುಲಿದರೆ ತೊಂದರೆ ಆಗ್ತದೆ ನಿಜ. ಆದರೂ, ಕಳೆದ ಹಲವು ವರ್ಷಗಳಿಂದ ಈ ಕಡೆ ಡ್ನೂಟಿ ಹಾಕಿದಾಗಲೆಲ್ಲಾ ನಾನು ಈ ಜನರಿಂದ ಕಿವಿ ಸ್ವತ್ಛ ಮಾಡಿಸಿಕೊಳ್ತಿನಿ. ಅಂಥದ್ದೇನೂ ಆಗಿಲ್ಲ. ರಂಪಾಟಗಳೂ ಕಂಡಿಲ್ಲ’ ಅಂದರು.
ಚಿತ್ತಾಪುರದ ಕಾಳಗಿ ಗ್ರಾಮದ ರಾಜಶೇಖರ ಅವರದ್ದೂ ಥೇಟು ಇದೇ ಅಭಿಪ್ರಾಯ. “ಇವರಿಂದ ಏನೂ ತೊಂದರೆ ಆಗಿಲ್ಲ. ಈ ಮಂದಿ ಛಲೋದಾಗ ಕಿವ್ಯಾಗಿನ ಹೊಲಸು ತಗಿತಾರ್ರಿ. ಇದೇ ಕೆಲಸಕ್ಕ ದವಾಖಾನಿಗೆ ಹೋದ್ರ, ನೂರಾರು ರೂಪಾಯಿ ಮಾಡ್ತಾರ. ಬ್ಯಾನಿ ಆಗ್ಲಿಕತ್ತಾದ ಅಂದ್ರ ಸಾಕು. ಟೆಸ್ಟ್, ಎಕ್ಸರೇ.. ಎಲ್ಲಾ ಮಾಡಿ ಕಿವ್ಯಾಗ ಹಾಕ್ಕೊಳ್ಳಾಕ 2-3 ಎಣ್ಣಿ ಕೊಟ್ಟು ಸಾವಿರಾರು ರೂಪಾಯಿ ಬಿಲ್ ಮಾಡ್ತಾರ್ರಿ. ಆದ್ರೆ ಈ ಮಂದಿ ಅಂಥವರಲ್ಲ ನೋಡ್ರಿ’ ಅಂದರು.
ಸರಕಾರ ಹಾಗೂ ಸಂಘ ಸಂಸ್ಥೆಗಳು ಈ ಸಮುದಾಯದ ಜನರ ವೃತ್ತಿ ಮತ್ತು ಬದುಕಿನ ಕಡೆಗೆ ತಿರುಗಿನೋಡುವ ಜರೂರತ್ತು ಇದೆ. ಅದನ್ಯಾರು ಮಾಡುತ್ತಾರೋ..
ಭಯಾನಕ ಸತ್ಯಗಳು!
ಈ ಕಸುಬು ಮಾಡುತ್ತಿರುವವರಲ್ಲಿ ಬಹುತೇಕರು ಅನಕ್ಷರಸ್ಥರು. ಅವರ್ಯಾರೂ ಶಾಲೆಗಳ ಮುಖ ನೋಡಿದವರಲ್ಲ. ಹುಬ್ಬೇರಿಸುವ ವಿಷಯ ಅಂದ್ರೆ, ಒಬ್ಬೊಬ್ಬರಿಗೂ ನಾಲ್ಕು ಭಾಷೆ ಬರುತ್ತೆ. ಕನ್ನಡ, ಹಿಂದಿ, ಮರಾಠಿ, ತೆಲುಗು. ಸಾಲದ್ದಕ್ಕೆ ಅಲ್ಲಸ್ವಲ್ಪ ಇಂಗ್ಲೀಷು!
ಇವರೆಲ್ಲಾ ನಾಲ್ಕಾರು ರಾಜ್ಯಗಳನ್ನು ಸುತ್ತಿದ್ದಾರೆ. ನೋಡಬೇಕು ಅನ್ನುವ ಸ್ಥಳವನ್ನೆಲ್ಲಾ ವೃತ್ತಿ ಮಾಡಿಕೊಂಡೇ ನೋಡಿದ್ದಾರೆ! ಅಲ್ಲೆಲ್ಲಾ ದುಡಿದಿದ್ದಾರೆ. ಕೆಲವು ಕಡೆಗಳಲ್ಲಿ ಜಗಳಗಳೂ ಆಗಿವೆ. ತೊಂದರೆ ಆಗುವ, ಏಟು ಬೀಳುವ ಸಾಧ್ಯತೆ ಇದೆ ಅನ್ನಿಸಿದ ತಕ್ಷಣ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಆದರೆ, ಯಾರೂ ಈ ಕಸುಬನ್ನು ನಿಲ್ಲಿಸಿ ಬೇರೊಂದು ನೌಕರಿ ಮಾಡಿಲ್ಲ. ಬೇರೆ ವೃತ್ತಿಯಲ್ಲಿ ತೊಡಗಿಲ್ಲ. ಹಿಂದೆ ಇದನ್ನೇ ನಮ್ಮ ಅಪ್ಪ ಮಾಡುತ್ತಿದ್ದ. ಈಗ ನಾವೂ ಮಾಡುತ್ತಿದ್ದೇವೆ. ದೇವರಿದ್ದಾನೆ. ಹೊಟ್ಟೆ ತುಂಬುತ್ತಿದೆ. ಎಲ್ಲವೂ ಅಲ್ಹಾನ ಮರ್ಜಿ ಅನ್ನುತ್ತಾರೆ.
ಹೌದು.. ಇವರೆಲ್ಲಾ ಮುಸ್ಲಿಂ ಸಮುದಾಯದ ಒಳಪಂಗಡವರು. ಹಾಗಂತ ಮುಸ್ಲಿಮರಿಗೂ ಇವರಿಗೂ ಸಂಬಂಧಗಳೇನೂ ನಡೆಯಲ್ಲ. ಅಂದರೆ ಮದುವೆ, ಮುಂಜಿ ಏನೂ ಇಲ್ಲ. ಇವರ 25-30 ಕುಟುಂಬಗಳ ಮಧ್ಯೆಯೇ ಮದುವೆ, ಮುಂಜಿ.. ಇತರೆ ಎಲ್ಲಾ.
ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ಜಿಲ್ಲಾ ಕೇಂದ್ರಗಳಲ್ಲಿಯೇ ಇವರಿದ್ದಾರೆ. ತಾಲೂಕು ಹಾಗೂ ಗ್ರಾಮಗಳಲ್ಲಿ ಇವರಿಲ್ಲ. ಹಳ್ಳಿಗಳಲ್ಯಾಕೆ ಇರಲ್ಲ ಅಂತ ಕೇಳಿದರೆ, ನಮಗೆ ಮನಿ, ಹೊಲ ಏನೂ ಇಲ್ಲ. ಇದ್ದದ್ದು ಇದೊಂದೇ ವೃತ್ತಿ. ಈಗೀಗ ಮನೆಯಲ್ಲಿನ ಹೆಣ್ಣು ಮಕ್ಕಳು ಹಗ್ಗ ಮಾಡ್ತಾರೆ ಎನ್ನುವ ಇವರು, ಮುಸ್ಲಿಂ ಜಾತಿಯ ಸುನ್ನಿ ಪಂಗಡಕ್ಕೆ ಸೇರಿದ್ದೇವೆಂದು ಹೇಳಿಕೊಳ್ಳುತ್ತಾರೆ. ಇವರ ಮಾತೃಭಾಷೆ ಹಿಂದಿ ಅಥವಾ ಉರ್ದು.
ಸೂರ್ಯಕಾಂತ ಎಂ.ಜಮಾದಾರ
ಫೋಟೋಗಳು: ಮಂಜುನಾಥ ಜಮಾದಾರ.