Advertisement

ಈಗಲ್ಟನ್‌ ರೆಸಾರ್ಟ್‌ ವಿವಾದ ಮತ್ತೆ ಮುನ್ನೆಲೆಗೆ

02:40 PM Mar 16, 2022 | Team Udayavani |

ರಾಮನಗರ: ಬಿಡದಿ ಬಳಿ ಇರುವ ಈಗಲ್ಟನ್‌ ಗೋಲ್ಪ್ ರೆಸಾರ್ಟ್‌ ಪುನಃ ಸುದ್ದಿಯಲ್ಲಿದೆ. ಇತ್ತೀಚೆಗೆ ಸದನದಲ್ಲಿ ಚನ್ನಪಟ್ಟಣ ಶಾಸಕ, ಮಾಜಿ ಸಿಎಂ ಎಚ್‌. ಡಿ.ಕುಮಾರಸ್ವಾಮಿ ಈಗಲ್ಟನ್‌ ರೆಸಾರ್ಟ್‌ ವಿಚಾರವನ್ನು ಪ್ರಸ್ಥಾಪಿಸಿ 982 ಕೋಟಿ ರೂ. ಹಣವನ್ನು ಕಟ್ಟುವಂತೆ ಆದೇಶ ನೀಡಿರುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

ಕಾಂಗ್ರೆಸ್‌ ಪ್ರಭಾವಿ ನಾಯಕರೊಬ್ಬರು (ಪರೋಕ್ಷವಾಗಿ ಡಿ.ಕೆ.ಸಹೋದರರು) ತಾವು ರೆಸಾರ್ಟ್‌ನ ಸೇವೆಗಳನ್ನು ಪಡೆದುಕೊಂಡಿದ್ದಕ್ಕೆ ಆಡಳಿತ 98 ಸಾವಿರ ರೂ. ಬಿಲ್‌ ಕೊಟ್ಟಿತ್ತು. ಇದಕ್ಕೆ ಕುಪಿತಗೊಂಡು ರೆಸಾರ್ಟ್‌ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದಾರೆ. 982 ಕೋಟಿ ರೂ. ಪಾವತಿಸುವಂತೆ ಆದೇಶ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಕೊಡಿಸಲಾಗಿದೆ ಎಂದು ಕುಮಾರಸ್ವಾಮಿ ದೂರಿದ್ದಾರೆ. ಎಚ್‌.ಡಿ.ಕುಮಾರಸ್ವಾಮಿ ಅವರ ಈ ದೂರಿಗೆ ರಾಜ್ಯ ಕಾಂಗ್ರೆಸ್‌ ಕಿಡಿಕಾರಿದೆ. ಸಂಸದ ಡಿ.ಕೆ.ಸುರೇಶ್‌ ಸಹ ಕುಮಾರಸ್ವಾಮಿಯವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನೊಂದೆಡೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸಹ ಕಿಡಿಕಾರಿದ್ದರು. ಹೀಗಾಗಿ ಈಗಲ್ಟನ್‌ ರೆಸಾರ್ಟ್‌ ವಿವಾದ ಈಗ ರಾಜಕೀಯ ಬಣ್ಣ ಪಡೆದುಕೊಂಡಿದೆ. ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಡುವೆ ಜಟಾ ಪಟಿಗೆ ಕಾರಣವಾಗಿದೆ. ಕಾಂಗ್ರೆಸ್‌ನ ಆಕ್ರೋಶಕ್ಕೆ ಪ್ರತಿಕ್ರಿಯಿಸಿರುವ ಎಚ್‌.ಡಿ.ಕುಮಾರಸ್ವಾಮಿ ತಮ್ಮ ಬಳಿ ಇನ್ನು ದಾಖಲೆಗಳಿದ್ದು ಒಂದೊಂದೆ ಬಿಡುಗಡೆ ಮಾಡುವುದಾಗಿ ಎಚ್ಚರಿಸಿದ್ದಾರೆ.

ಸರ್ಕಾರಿ ಭೂ ಕಬಳಿಕೆ ಆರೋಪ ಎದುರಿಸುತ್ತಿರುವ ಸಂಸ್ಥೆ: 1995ರಲ್ಲಿ ಪ್ರವಾಸೋದ್ಯಮ ಕ್ಷೇತ್ರದಡಿ ರಾಜ್ಯ ಸರ್ಕಾರದಿಂದ ಅನುಮತಿ ಪಡೆದು ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಶ್ರೀ ಚಾಮುಂಡೇಶ್ವರಿ ಬಿಲ್ಡ್‌ ಟೆಕ್‌ ಸಂಸ್ಥೆ ಬಿಡದಿ ಹೋಬಳಿಯ ಶ್ಯಾನುಮಂಗಲದಲ್ಲಿ ಈಗಲ್‌ಟನ್‌ ರೆಸಾರ್ಟ್‌ ನಿರ್ಮಿಸಿದೆ. ಗಾಲ್ಪ್ ಮೈದಾನ ಮತ್ತು ಆಟ ಈ ರೆಸಾರ್ಟ್‌ನ ಪ್ರಮುಖ ಆಕರ್ಷಣೆ. ಈಗಲ್ಟನ್‌ ಗಾಲ್ಪ್ ರೆಸಾರ್ಟ್‌ ರಾಜ್ಯದ ರಾಜಕಾರಣಿಗಳು ಮತ್ತು ಸೆಲೆಬ್ರಿಟಿಗಳ ನೆಚ್ಚಿನ ತಾಣ. ಸುಮಾರು 400 ಎಕರೆ ವ್ಯಾಪ್ತಿಯಲ್ಲಿ ರೆಸಾರ್ಟ್‌ ನಿರ್ಮಾಣವಾಗಿದೆ. ಈ ಪೈಕಿ 106 ಎಕರೆ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದೆ ಎಂಬುದು ಈ ಸಂಸ್ಥೆಯ ವಿರುದ್ಧ ಇರುವ ಆರೋಪ. 982 ಕೋಟಿ ರೂ. ಪಾವತಿಸುವಂತೆ ಜಿಲ್ಲಾಡಳಿತದ ಆದೇಶ, ಸುಪ್ರೀಂ ಕೋರ್ಟ್‌ ಸಹ ಸರ್ಕಾರದ ಆರೋ ಪವನ್ನು ಎತ್ತಿ ಹಿಡಿದಿದೆ.

ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ರೆಸಾರ್ಟ್‌ 28.33 ಎಕರೆ ಭೂಮಿಯನ್ನು ಜಿಲ್ಲಾಡಳಿತಕ್ಕೆ ವಾಪಸ್ಸು ಕೊಟ್ಟಿದೆ. ಉಳಿದ 77 ಎಕರೆ 19 ಗುಂಟೆ ಭೂಮಿಯನ್ನು ಸಂಸ್ಥೆ ತನ್ನ ಅನುಭವದಲ್ಲೇ ಇರಿಸಿಕೊಂಡಿದೆ. ಈ ಭೂಮಿಗೆ ರಾಮನಗರ ಜಿಲ್ಲಾಡಳಿತ 982,07,77,480 ರೂ. ಮಾರುಕಟ್ಟೆ ಮೌಲ್ಯವನ್ನು ಪಾವತಿಸುವಂತೆ ಆದೇಶಿಸಿದೆ.

Advertisement

ಆದರೆ, ರೆಸಾರ್ಟ್‌ ಮಾಲಿಕತ್ವ ಹೊಂದಿರುವ ಸಂಸ್ಥೆ ಈ ಮೊದಲೇ ಪಾವತಿಸಿದ್ದ 12.35 ಕೋಟಿ ರೂ. ಮೊತ್ತ ವನ್ನೇ ಮಾರುಕಟ್ಟೆ ಮೌಲ್ಯ ಎಂದು ಪರಿಗಣಿಸುವಂತೆ ಮನವಿ ಮಾಡಿತ್ತು. ಆದರೆ, ಸರ್ಕಾರ ಈ ಮನವಿ ಯನ್ನು ತಿರಸ್ಕರಿಸಿದ್ದರಿಂದ ಮಾಲೀಕ ಸಂಸ್ಥೆ ಪುನಃ ರಾಜ್ಯ ಹೈಕೋರ್ಟಿನ ಮೊರೆ ಹೋಗಿತ್ತು. 12.35 ಕೋಟಿ ರೂ ಮೊತ್ತವನ್ನೇ ಒಪ್ಪಿಕೊಳ್ಳುವಂತೆ ಸರ್ಕರಕ್ಕೆ ಆದೇಶ ಕೊಡಬೇಕು ಎಂದು ಪ್ರಾರ್ಥಿಸಿತ್ತು.

ಸದನ ಸಮಿತಿ ರಚಿಸಿದ್ದ ಸರ್ಕಾರ: ಈಗಲ್ಟನ್‌ ರೆಸಾರ್ಟ್ ನ ಒತ್ತುವರಿ ಭೂಮಿಯನ್ನು ವಾಪಸ್ಸು ಪಡೆಯಲು ಸರ್ಕಾರ ಸದನ ಸಮಿತಿಯನ್ನು ರಚಿಸಿತ್ತು. 2020ರ ಫೆಬ್ರವರಿಯಲ್ಲಿ ಎಚ್‌.ಕೆ.ಪಾಟೀಲ್‌ ಅಧ್ಯಕ್ಷತೆಯ ರಾಜ್ಯ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸದಸ್ಯರು ಈಗಲ್‌ಟನ್‌ಗೆ ಭೇಟಿ ನೀಡಿ ಒತ್ತುವರಿಯಾಗಿದ್ದ ಸರ್ಕಾರಿ ಜಮೀನನ್ನು ಪರಿಶೀಲನೆ ನಡೆಸಿದ್ದರು. ಸಂಸ್ಥೆ 982 ಕೋಟಿ ರೂ. ಪಾವತಿಸದಿದ್ದರೆ ಸರ್ಕಾರದ ಜಾಗ ವಶಕ್ಕೆ ಪಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು. 982 ಕೋಟಿ ರೂ. ಏಕೆ?: 77.19 ಎಕರೆ ಭೂಮಿಗೆ ಜಿಲ್ಲಾಡಳಿತ 982 ಕೋಟಿ ರೂ. ಮಾರುಕಟ್ಟೆ ಬೆಲೆ ಯನ್ನು ಪಾವತಿಸುವಂತೆ ಆದೇಶ ಹೊರೆಡಿಸಿದೆ. ಶ್ಯಾನುಮಂಗಲ ವ್ಯಾಪ್ತಿಯಲ್ಲಿ ಸರ್ಕಾರ ನಿಗದಿಪಡಿಸಿರುವ ಮಾರುಕಟ್ಟೆ ಬೆಲೆಯನ್ನು ಆಧರಿಸಿ, ಜಿಲ್ಲಾಡಳಿತ ಈ ಮೊದಲು ನಿರ್ಧರಿಸಿತ್ತು. ಆದರೆ, ಈಗಲ್ಟನ್‌ ರೆಸಾರ್ಟ್‌ನ ಮಾಲೀಕ ಸಂಸ್ಥೆ ಚಾಮುಂಡೇಶ್ವರಿ ಬಿಲ್ಡ್‌ ಟೆಕ್‌ ಇಲ್ಲಿ ನಿರ್ಮಿಸಿರುವ ಐಷಾರಾಮಿ ವಿಲ್ಲಾಗಳನ್ನು ಮಾರಾಟ ಮಾಡಿದೆ.

ಹೀಗೆ ಮಾರಾಟ ಮಾಡಿದ ವಿಲ್ಲಾಗಳಿಗೆ ವಿಧಿಸಿರುವ ದರ ಮಾರುಕಟ್ಟೆ ಬೆಲೆಗಿಂತ ಹಲವಾರು ಪಟ್ಟು ಹೆಚ್ಚಾಗಿದೆ. ಮಾಲೀಕ ಸಂಸ್ಥೆ ವಿಧಿಸಿರುವ ಬೆಲೆಯನ್ನೇ ಜಿಲ್ಲಾಡಳಿತವೂ ಪರಿಗಣಿಸಿ, ಸರ್ಕಾರದ ಭೂಮಿಗೆ 982 ಕೋಟಿ ರೂ. ನಿಗದಿಪಡಿಸಿ ಪಾವ ತಿಸುವಂತೆ ಸೂಚಿಸಿದೆ ಎಂದು ಜಿಲ್ಲಾಡಳಿತದ ಅಧಿಕಾರಿಗಳು ತಿಳಿಸಿದ್ದಾರೆ. ಈಗಲ್ಟನ್‌ ರೆಸಾರ್ಟ್‌ನ ಭೂಮಿ ಒತ್ತುವರಿ ವಿವಾದ ನ್ಯಾಯಾಲಯದಲ್ಲಿದೆ. ವಿವಾದ ರಾಜಕೀಯ ತಿರುವು ಪಡೆದುಕೊಳ್ಳುತ್ತಿದ್ದು, ಸಾರ್ವಜನಿಕರಲ್ಲಿ ಕುತೂಹಲ ಕೆರಳಿಸಿದೆ.

ಗೋಲ್ಪ್ ಕೋರ್ಟ್‌ ತಾಲೂಕು ಆಡಳಿತದ ವಶ : ಈಗಲ್ಟನ್‌ ಸಂಸ್ಥೆಯ ವಶದಲ್ಲಿರುವ 77 ಎಕರೆ ಸರ್ಕಾರಿ ಭೂಮಿಯ ಪೈಕಿ ಶೇ.90 ಗೋಲ್ಪ್ ಮೈದಾನವಿದೆ. ಆಡಳಿತ ಸೂಚಿಸಿದ ಮೊತ್ತವನ್ನು ಪಾವತಿಸಲು ಸಂಸ್ಥೆ ವಿಫ‌ಲವಾದ್ದರಿಂದ ತಾಲೂಕು ಆಡಳಿತ 77 ಎಕರೆ ಭೂಮಿಯನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. ಶೇ.40ಕ್ಕೂ ಹೆಚ್ಚು ತಂತಿ ಬೇಲಿಯನ್ನು ಅಳವಡಿಸಿದೆ. ರೆಸಾರ್ಟ್‌ನ ಜೀವಾಳವಾಗಿರುವ ಗೋಲ್ಪ್ ಕೋರ್ಟ್‌ ಈಗ ತಾಲೂಕು ಆಡಳಿತದ ವಶದಲ್ಲಿದೆ. ಶೇ.90ರಷ್ಟು ಭಾಗ ಗೋಲ್ಪ್ ಮೈದಾನವನ್ನು ರೆಸಾರ್ಟ್‌ ಕಳೆದುಕೊಂಡಂತಾಗಿದೆ.

ತಾಲೂಕು ಆಡಳಿತದಿಂದ ಬೇಲಿ: ಹೈಕೋರ್ಟ್‌ ಸಂಸ್ಥೆಯ ಮನವಿಯನ್ನು ಪುರಸ್ಕರಿಸಲಿಲ್ಲ. ಈ ಕಾರಣ ಸ್ಥಳೀಯ ಆಡಳಿತ ಒತ್ತುವರಿ ಭೂಮಿಗೆ 2021ರ ಸೆಪ್ಟಂಬರ್‌ 14ರಂದು ತಂತಿ ಬೇಲಿ ಅಳವಡಿಸಲು ಆರಂಭಿಸಿತ್ತು. ತಾಲೂಕು ಆಡಳಿತದ ಈ ಕ್ರಮಕ್ಕೆ ಸಂಸ್ಥೆ ಪುನಃ ಹೈಕೋರ್ಟಿನ ಮೊರೆ ಹೋಗಿತ್ತು. ಹೈಕೋರ್ಟ್‌ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳುವಂತೆ ಸೂಚಿಸಿ, ತಡೆಯಾಜ್ಞೆ ಕೊಟ್ಟಿದೆ. ಇದು ಸದ್ಯದ ಪರಿಸ್ಥಿತಿ.

ಈಗಲ್ಟನ್‌ ರೆಸಾರ್ಟ್‌ ಸಂಸ್ಥೆ ಒತ್ತುವರಿ ಮಾಡಿಕೊಂಡಿರುವ ಭೂಮಿಗೆ ಸರ್ಕಾರ ಮಾರುಕಟ್ಟೆ ಬೆಲೆ ನಿಗದಿಪಡಿಸಿ ಪಾವತಿಸುವಂತೆ ಆದೇಶ ನೀಡಿದೆ. ಈ ವಿಚಾರದಲ್ಲಿ ಕಾಂಗ್ರೆಸ್‌ ಪಾತ್ರವಿಲ್ಲ. ರೈತರ ಸಮಸ್ಯೆ ಬಿಟ್ಟು ಕುಮಾರಸ್ವಾಮಿಯವರು ಸಂಸ್ಥೆ ಪರ ಮಾತನಾಡುತ್ತಿದ್ದಾರೆ. ಕುಮಾರಸ್ವಾಮಿಯವರು ಸರ್ಕಾರಕ್ಕೆ ಹೇಳಿ ಉಚಿತವಾಗಿಯೇ ಭೂಮಿಯನ್ನು ಸಂಸ್ಥೆಗೆ ಕೊಟ್ಟು ಬಿಡಲಿ, ನಮ್ಮ ಅಭ್ಯಂತರವೇನಿಲ್ಲ. ಆದರೆ, ಸೂಕ್ತ ಸಮಯದಲ್ಲಿ ಜನರ ಮುಂದೆ ವಿಷಯ ಮಂಡಿಸುತ್ತೇವೆ. ಡಿ.ಕೆ.ಸುರೇಶ್‌, ಸಂಸದ

ಈಗಲ್ಟನ್‌ ರೆಸಾರ್ಟ್‌ ಭೂಮಿ ಒತ್ತುವರಿ ವಿಚಾರ ಪುನಃ ರಾಜ್ಯ ಉಚ್ಚನ್ಯಾಯಾಲ ಯದಲ್ಲಿದೆ. ಸರ್ಕಾರ ನಿಗದಿಪಡಿಸಿದ ಮಾರುಕಟ್ಟೆ ಮೌಲ್ಯ ಪಾವತಿಸುವ ವಿಚಾರದಲ್ಲಿ ಸಂಸ್ಥೆ ಪುನಃ ಕೋರ್ಟಿನ ಮೊರೆ ಹೋಗಿದೆ. ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ನ್ಯಾಯಾಲ ಯದ ಸೂಚನೆ ಪಾಲಿಸಲಾಗುತ್ತಿದೆ. ವಿಜಯ್‌ ಕುಮಾರ್‌, ತಹಶೀಲ್ದಾರ್‌, ರಾಮನಗರ ತಾಲೂಕು

 

 – ಬಿ.ವಿ.ಸೂರ್ಯ ಪ್ರಕಾಶ್‌

Advertisement

Udayavani is now on Telegram. Click here to join our channel and stay updated with the latest news.

Next