Advertisement

ಮನೆ ಮನೆಯಿಂದ ಇ-ತ್ಯಾಜ್ಯ ಸಂಗ್ರಹಣೆ

09:16 AM Apr 28, 2022 | Team Udayavani |

ಹುಬ್ಬಳ್ಳಿ: ಘನ ತ್ಯಾಜ್ಯ ನಿರ್ವಹಣೆಯಲ್ಲಿ ಸಮರ್ಪಕ ವ್ಯವಸ್ಥೆ ಕಂಡುಕೊಂಡಿರುವ ಹು-ಧಾ ಮಹಾನಗರ ಪಾಲಿಕೆಗೆ ಇ-ತ್ಯಾಜ್ಯ ನಿರ್ವಹಣೆ ಸವಾಲಾಗಿ ಪರಿಣಮಿಸಿದೆ. ಇತರೆ ತ್ಯಾಜ್ಯಕ್ಕಿಂತ ಮಾರಕವಾಗಿರುವ ವಿದ್ಯುನ್ಮಾನ ತ್ಯಾಜ್ಯವನ್ನು ಮನೆ ಮನೆಯಿಂದ ಸಂಗ್ರಹಿಸಲು ನಿರ್ಧರಿಸಿದ್ದು, ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಪಾಲಿಕೆ ಮುಂದಾಗಿದೆ.

Advertisement

ಈಗಾಗಲೇ ಹು-ಧಾ ಮಹಾನಗರ ಪಾಲಿಕೆ ಘನ ತ್ಯಾಜ್ಯ ನಿರ್ವಹಣೆಗೆ ಸಮರ್ಪಕ ಯೋಜನೆ ಸಾಕಾರಗೊಂಡಿದೆ. ಹಸಿ ತ್ಯಾಜ್ಯದಿಂದ ಕಾಂಪೋಸ್ಟ್‌ ಗೊಬ್ಬರ, ಒಣ ತ್ಯಾಜ್ಯದಿಂದ ಸಿಮೆಂಟ್‌ ಕಂಪನಿಗಳಿಗೆ ಪರ್ಯಾಯ ಇಂಧನ ರೂಪವಾಗಿ ಸಿದ್ಧಪಡಿಸುವ ಕೆಲಸ ನಡೆಯುತ್ತಿದೆ. ಆದರೆ ಪರಿಸರಕ್ಕೆ ಸಾಕಷ್ಟು ಮಾರಕವಾಗಿರುವ ವಿದ್ಯುನ್ಮಾನ ತ್ಯಾಜ್ಯ ನಿರ್ವಹಣೆಗಾಗಿ ಸೂಕ್ತ ವ್ಯವಸ್ಥೆ ಹೊಂದಲು ಸಾಧ್ಯವಾಗಿಲ್ಲ. ಹೀಗಾಗಿ ಮೊದಲ ಹಂತದಲ್ಲಿ ಸಂಗ್ರಹಕ್ಕೆ ಹೆಚ್ಚು ಆದ್ಯತೆ ನೀಡಿದ್ದು, ಆಟೋ ಟಿಪ್ಪರ್‌ಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆರಂಭಿಸಿದೆ. ಈ ಟಿಪ್ಪರ್‌ ಗಳಿಗೆ ಇ-ತ್ಯಾಜ್ಯ ನೀಡಬಹುದಾಗಿದ್ದು, ಇದಕ್ಕಾಗಿ ಆಟೋ ಟಿಪ್ಪರ್‌ ಗಳಲ್ಲಿ ಪ್ರತ್ಯೇಕ ಬಾಕ್ಸ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಇಷ್ಟೆಲ್ಲಾ ಕಾರ್ಯಗಳ ನಡುವೆಯೂ ಜನರಿಗೆ ಮಾಹಿತಿ ಕೊರತೆಯಿದ್ದು, ವಿಶೇಷ ಅಭಿಯಾನ ಮೂಲಕ ಪ್ರತಿ ಮನೆಗಳಿಂದ ಇ-ತ್ಯಾಜ್ಯ ಸಂಗ್ರಹಿಸುವ ಗುರಿ ಹಾಕಿಕೊಂಡಿದೆ.

ಬೃಹತ್‌ ನಗರಗಳಿಗೆ ಸೀಮಿತವಾಗಿದ್ದ ಇ-ತ್ಯಾಜ್ಯ ಎರಡನೇ ದರ್ಜೆಯ ನಗರಗಳಿಗೆ ಎಚ್ಚರಿಕೆ ಗಂಟೆ ನೀಡಿದೆ. ಇ-ತಾಜ್ಯ ಸಂಗ್ರಹವಾಗುವ ಬೃಹತ್‌ ನಗರಗಳ ಪೈಕಿ ಬೆಂಗಳೂರು ದೇಶದಲ್ಲಿ ಮೂರನೇ ಸ್ಥಾನ ಪಡೆದಿದೆ. ಹೀಗಾಗಿ ಇಲ್ಲಿನ ಮಹಾನಗರ ಪಾಲಿಕೆ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಈಗಾಗಲೇ 5 ಒಣ ತ್ಯಾಜ್ಯ ವಿಂಗಡನಾ ಘಟಕಗಳಲ್ಲಿ ಇ-ತ್ಯಾಜ್ಯ ಪ್ರತ್ಯೇಕಿಸುವ ಕಾರ್ಯ ನಡೆಯುತ್ತಿದೆ. ಇದರಿಂದ ಕಸಮಡ್ಡಿಗೆಗಳಿಗೆ ಇ-ತ್ಯಾಜ್ಯ ಸೇರುವುದು ಬಹುತೇಕ ಕಡಿಮೆಯಾಗಿದೆ. ಆದರೆ ಮನೆಗಳಿಂದ ಸಂಗ್ರಹಿಸುವ ಕೆಲ ವಿದ್ಯುನ್ಮಾನ ತ್ಯಾಜ್ಯವನ್ನು ಆಟೋ ಟಿಪ್ಪರ್‌ ಪೌರ ಕಾರ್ಮಿಕರು ಗುಜರಿ ಅಂಗಡಿಗಳಿಗೆ ಮಾರಾಟ ಮಾಡುವುದು ನಡೆಯುತ್ತದೆ. ಬೇಕಾದ ವಸ್ತುಗಳು ತೆಗೆದು ಬೇಡವಾದ ಬೀಸಾಡುವ ಕೆಲಸ ಆಗುತ್ತಿದೆ.

4-5 ಟನ್‌ ತ್ಯಾಜ್ಯ ಸಂಗ್ರಹ: ಎಲ್ಲಾ ವಲಯ ಕಚೇರಿಗಳಲ್ಲಿ ಇ-ತ್ಯಾಜ್ಯ ಸಂಗ್ರಹಿಸುವ ಕೆಲಸ ನಡೆಯುತ್ತಿದೆ. ಜನರು ಬಳಸಿದ ಅಥವಾ ದುರಸ್ತಿಯಾಗದ ಟಿವಿ, ಮೊಬೈಲ್‌, ಸ್ಮಾಟ್‌ ìಫೋನ್‌, ಓವನ್‌, ಪ್ರಿಂಟರ್‌ ಹೀಗೆ 23 ವಿವಿಧ ಬಗೆಯ ವಿದ್ಯುನ್ಮಾನ ವಸ್ತುಗಳನ್ನು ವಲಯ ಕಚೇರಿಗಳಿಗೆ ನೀಡಬಹುದಾಗಿದೆ. ಹೀಗೆ ಸಂಗ್ರಹಿಸಿರುವ ತ್ಯಾಜ್ಯ ಇಲ್ಲಿಯವರೆಗೆ ಸುಮಾರು 4-5 ಟನ್‌ ತಲುಪಿದೆ. ಆದರೆ ಈ ತ್ಯಾಜ್ಯ ನಿರ್ವಹಣೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇ-ತ್ಯಾಜ್ಯ ನಿರ್ವಹಣೆ ವೈಜ್ಞಾನಿಕವಾಗಿ ನಿರ್ವಹಣೆ ಮಾಡುವ ಏಕೈಕ ಅಧಿಕೃತ ಘಟಕ ರಾಜ್ಯದ ದಾಬಸಪೇಟೆ ಬಳಿಯಿದ್ದು, ಅವರನ್ನು ಸಂಪರ್ಕಿಸಲಾಗಿದೆ. ಪಾಲಿಕೆಯೇ ಸಾಗಾಟ ವೆಚ್ಚ ಭರಿಸಿ ನೀಡಿದರೆ ಮಾತ್ರ ಸಂಸ್ಕರಿಸಲಾಗುವುದು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಹೀಗಾಗಿ ಸಂಗ್ರಹವಾಗಿರುವ ತ್ಯಾಜ್ಯ ಎಲ್ಲಿಗೆ ಸಾಗಿಸಬೇಕು ಎನ್ನುವುದು ಅಧಿಕಾರಿಗಳಲ್ಲಿ ಗೊಂದಲ ಮೂಡಿಸಿದೆ.

ಯಾವುದು ಇ-ತ್ಯಾಜ್ಯ: ಇ-ತ್ಯಾಜ್ಯ ಆರೋಗ್ಯ ಹಾಗೂ ಪರಿಸರಕ್ಕೆ ಮಾರಕ. ಇದರಲ್ಲಿ ಪ್ರಮುಖವಾಗಿ ಪಾದರಸ, ಸೀಸ, ಆರ್ಸೆನಿಕ್‌, ಕ್ಯಾಡ್ಮಿಯಂತಹ ಕ್ಯಾನ್ಸರ್‌ಕಾರಕ ಅಂಶಗಳಿವೆ. ಉಳಿದಂತೆ ಪ್ಲಾಸ್ಟಿಕ್‌, ಅಲ್ಯುಮಿನಿಯಂ, ತಾಮ್ರದಂತಹ ಶೇ.38 ರಾಸಾಯನಿಕ ವಸ್ತುಗಳಿಂದ ಸಿದ್ಧವಾಗಿರುತ್ತವೆ. ಅನಿಯಂತ್ರಿತ ಸುಡುವಿಕೆ, ಬೀಸಾಡುವುದು ಪರಿಸರ ಕಲುಷಿತಗೊಳ್ಳುತ್ತದೆ. ಬೀಸಾಡುವುದರಿಂದ ಜಲ ಮಾಲಿನ್ಯ, ಸುಡುವುದರಿಂದ ವಾಯು ಮಾಲಿನ್ಯವಾಗುತ್ತದೆ. ಬಹು ಮುಖ್ಯವಾಗಿ ಬಳಸಿ ದುರಸ್ತಿಯಾದ ಕಂಪ್ಯೂಟರ್‌ಗಳ ಪ್ರಮಾಣ ಹೆಚ್ಚಿದ್ದು, ಇದೀಗ ಮೊಬೈಲ್‌ ಅದರ ಸ್ಪರ್ಧಿಯಾಗಿದೆ. ಇದರೊಂದಿಗೆ ವಿದ್ಯುತ್‌ ಉಪಕರಗಳು ಕೂಡ ಇವೆ. ಹೀಗಾಗಿ ವಿದ್ಯುನ್ಮಾನ ಉಪಕರಗಳು ಹೆಚ್ಚು ಮಾರಾಟವಾಗುವ ಕೇಂದ್ರಗಳನ್ನು ಗುರುತಿಸಿ ಅಲ್ಲಿ ಇ-ತ್ಯಾಜ್ಯ ಸಂಗ್ರಹಣೆಗಾಗಿ ಡಸ್ಟ್‌ ಬಿನ್‌ ಇಡುವ ಕಾರ್ಯಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ.

Advertisement

ನಿರ್ವಹಣೆಗೆ ಸಂಸ್ಥೆಯೊಂದು ಮುಂದು: ಎರಡನೇ ಹಂತದ ನಗರಗಳನ್ನು ಗಮನದಲ್ಲಿಟ್ಟುಕೊಂಡು ಸಂಸ್ಥೆಯೊಂದು ಇ-ತ್ಯಾಜ್ಯ ನಿರ್ವಹಣೆಗೆ ಮುಂದೆ ಬಂದಿದೆ. ಹಿಂದಿನ ಪಾಲಿಕೆ ಆಯುಕ್ತರಾಗಿದ್ದ ಡಾ| ಸುರೇಶ ಇಟ್ನಾಳ ಅವರೊಂದಿಗೆ ಮೊದಲ ಹಂತದ ಮಾತುಕತೆಯಾಗಿದೆ. ಒಂದು ವೇಳೆ ಘಟಕ ಮಹಾನಗರ ವ್ಯಾಪ್ತಿಯಲ್ಲಿ ಆರಂಭವಾದರೆ ಉತ್ತರ ಕರ್ನಾಟಕ ಭಾಗದ ಪ್ರಮುಖ ನಗರಗಳಿಂದ ಉತ್ಪಾದನೆಯಾಗುವ ಇ-ತ್ಯಾಜ್ಯವನ್ನು ಕೂಡ ಸಂಗ್ರಹಿಸಿ ಸಂಗ್ರಹಿಸುವ ಕೆಲಸ ಆಗಲಿದೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆದ ಸಂಸ್ಥೆ ಅಥವಾ ಕಂಪನಿಗಳಿದ್ದರೆ ಅವುಗಳನ್ನು ಸಂಪರ್ಕಿಸಿ ಅಲ್ಲಿಗೆ ಕೂಡ ಕಳುಹಿಸುವ ಚಿಂತನೆ ಪಾಲಿಕೆ ಅಧಿಕಾರಿಗಳಲ್ಲಿದೆ.

  • ಆಟೋ ಟಿಪ್ಪರ್‌ಗಳಲ್ಲಿ ಪ್ರತ್ಯೇಕ ಬಾಕ್ಸ್‌ ವ್ಯವಸ್ಥೆ
  • ಸಂಗ್ರಹ ಗೊಂಡಿದೆ ಸುಮಾರು 4-5 ಟನ್‌ ಇ-ತ್ಯಾಜ್ಯ
  • ಟಿಪ್ಪರ್‌ಗಳಿಂದ ಜನಜಾಗೃತಿ ಮೂಡಿಸುವ ಕೆಲಸ

ಎರಡನೇ ಹಂತದ ತ್ಯಾಜ್ಯ ವಿಂಗಡನೆ ಕಾರ್ಯದಲ್ಲಿ ಇ-ತ್ಯಾಜ್ಯ ಪ್ರತ್ಯೇಕಿಸಲಾಗುತ್ತಿದೆ. ಜನರು ಕೂಡ ಆಟೋ ಟಿಪ್ಪರ್‌ಗಳಿಗೆ ಇ-ತ್ಯಾಜ್ಯ ನೀಡಬಹುದಾಗಿದೆ. ಪಾಲಿಕೆ ಆಯುಕ್ತರೊಂದಿಗೆ ಚರ್ಚಿಸಿ ಕೆಲ ಪ್ರದೇಶಗಳಲ್ಲಿ ಇ-ತ್ಯಾಜ್ಯ ಸಂಗ್ರಹಕ್ಕೆ ಬ್ಯಾಗ್‌ ಅಥವಾ ಬಾಕ್ಸ್‌ ಇಡುವ ಕೆಲಸ ಪಾಲಿಕೆಯಿಂದ ಆಗುತ್ತದೆ. ಸಂತೋಷ ಯರಂಗಳಿ,ಕಾರ್ಯ ನಿರ್ವಾಹಕ ಅಭಿಯಂತರ, ಪಾಲಿಕೆ ಘನತ್ಯಾಜ್ಯ ನಿರ್ವಹಣೆ ವಿಭಾಗ

ಇ-ತ್ಯಾಜ್ಯ ಪರಿಸರಕ್ಕೆ ಮಾರಕವಾಗಿರುವುದರಿಂದ ವಲಯವಾರು ಸಂಗ್ರಹ ಕೇಂದ್ರ ಆರಂಭಿಸಲಾಗಿದೆ. ವ್ಯವಸ್ಥಿತವಾಗಿ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಜನರಲ್ಲಿ ಆಟೋ ಟಿಪ್ಪರ್‌ಗಳ ಜಿಂಗಲ್‌ಗ‌ಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಪ್ರತಿ ಮನೆಯಂದ ಇ ತ್ಯಾಜ್ಯ ಸಂಗ್ರಹಿಸುವ ಕೆಲಸ ಆರಂಭಿಸಿದರೆ ಜನರು ನೇರವಾಗಿ ಪಾಲಿಕೆಗೆ ನೀಡುತ್ತಾರೆ. ಇದನ್ನು ಅಭಿಯಾನದ ಮಾದರಿಯಲ್ಲಿ ಜನರಿಗೆ ಮಾಹಿತಿ ಜಾಗೂ ಜಾಗೃತಿ ನೀಡುವ ಕೆಲಸ ಆಗಲಿದೆ.  –ಡಾ|ಬಿ.ಗೋಪಾಲಕೃಷ್ಣ, ಆಯುಕ್ತರು, ಮಹಾನಗರ ಪಾಲಿಕೆ ­    -ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next