Advertisement

ಬೆಳಗಾವಿಯಲ್ಲಿ ಇ -ವಿಧಾನ್‌ ಮೊದಲ ಪ್ರಯೋಗ?

06:00 AM Dec 10, 2018 | Team Udayavani |

ಬೆಳಗಾವಿ: ರಾಜ್ಯ ವಿಧಾನ ಮಂಡಲದ ಸಚಿವಾಲಯವನ್ನು ಸಂಪೂರ್ಣ ಡಿಜಟಲೀಕರಣ ಮಾಡುವ  ಪ್ರಕ್ರಿಯೆ ಆರಂಭವಾಗಿದ್ದು, ಬೆಳಗಾವಿಯಲ್ಲಿ 10 ದಿನ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಇ-ವಿಧಾನ ಯೋಜನೆಯ  ಮೊದಲ ಭಾಗವಾಗಿ ಅಧಿವೇಶನದ ಕಲಾಪಗಳನ್ನು ಲೈವ್‌ವೆಬ್‌ ಕಾಸ್ಟಿಂಗ್‌ ಮೂಲಕ ಪ್ರಸಾರ ಮಾಡಲು ವಿಧಾನಸಭೆ ಸಚಿವಾಲಯದ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ.ಲೋಕಸಭೆ ಹಾಗೂ ರಾಜ್ಯಸಭೆ ಮಾದರಿಯಲ್ಲಿ ಅಧಿವೇಶನದ ಕಾರ್ಯ ಕಲಾಪಗಳನ್ನು ಸಾರ್ವಜನಿಕರು ನೇರವಾಗಿ ಆನ್‌ಲೈನ್‌ ಮೂಲಕ ವೀಕ್ಷಿಸಲು ಅವಕಾಶ “ಇ-ವಿಧಾನ್‌’ದಲ್ಲಿದೆ. 

Advertisement

ಈಗಾಗಲೇ ಲೈಬ್‌ವೆಬ್‌ ಕಾಸ್ಟಿಂಗ್‌ ವ್ಯವಸ್ಥೆಯ ರೂಪು ರೇಷೆಗಳನ್ನು ತಯಾರಿಸಲಾಗಿದೆ. ವಿಧಾನಸಭಾಧ್ಯಕ್ಷ ರಮೇಶ್‌ ಕುಮಾರ್‌ ಒಪ್ಪಿಗೆ ನೀಡಿದರೆ, ಬೆಳಗಾವಿಯಲ್ಲಿ ನಡೆಯುವ ಹತ್ತು ದಿನದ ಅಧಿವೇಶನದಲ್ಲಿಯೇ ಆನ್‌ಲೈನ್‌ ಮೂಲಕ ಕಲಾಪಗಳನ್ನು ಸಾರ್ವಜನಿಕರು ವೀಕ್ಷಿಸಬಹುದಾಗಿದೆ.

ಎರಡು ರೀತಿಯ ಪ್ರಸ್ತಾವನೆ
ಅಧಿವೇಶನದ ಕಲಾಪಗಳನ್ನು ಸಾರ್ವಜನಿಕರಿಗೆ ವೀಕ್ಷಿಸಲು ಅವಕಾಶ ನೀಡುವ ಮೊದಲು ಸಂಬಂಧ ಪಟ್ಟ ಹಿರಿಯ ಅಧಿಕಾರಿಗಳು ವೀಕ್ಷಣೆ ಮಾಡಿದ ಬಳಿಕ  ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸುವ ರಾಜ್ಯವ್ಯಾಪಿ ನೆಟ್‌ ವರ್ಕಿಂಗ್‌ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಈ ವ್ಯವಸ್ಥೆಯಲ್ಲಿ ಕಲಾಪದ ಕಾರ್ಯ ಚಟುವಟಿಕೆಗಳನ್ನು ಸಂಬಂಧಿಸಿದ ಹಿರಿಯ ಅಧಿಕಾರಿಗಳು ವೀಕ್ಷಿಸಿ, ಪರಿಶೀಲಿಸಿದ ನಂತರ ಸಾರ್ವಜನಿಕರ ವೀಕ್ಷಣೆಗೆ ಬಿಡುವುದು.

ಎರಡನೇ ಮಾದರಿಯಲ್ಲಿ ಕಲಾಪ ನಡೆಯುತ್ತಿರುವುದನ್ನು ಲೋಕಸಭೆ -ರಾಜ್ಯಸಭೆ ಮಾದರಿಯಲ್ಲಿ ನೇರವಾಗಿಯೇ ವಿಧಾನಸಭೆ ಸಚಿವಾಲಯದ ವೆಬ್‌ ಸೈಟ್‌ ಮೂಲಕ ಲೈವ್‌ಕಾಸ್ಟ್‌ ಮಾಡುವ ಬಗ್ಗೆ ಎರಡು ಪ್ರಸ್ತಾಪಗಳನ್ನು ಸಿದ್ಧ ಪಡಿಸಿ ವಿಧಾನಸಭೆಯ ಸಚಿವಾಲಯದ ಐಟಿ ವಿಭಾಗದ ಅಧಿಕಾರಿಗಳು ಸಭಾಧ್ಯಕ್ಷರಿಗೆ ನೀಡಿದ್ದು ಅವರ ಅನುಮತಿಗಾಗಿ ಕಾಯುತ್ತಿದ್ದಾರೆ.

ಇ-ವಿಧಾನದ ಮೊದಲ ಹೆಜ್ಜೆ
ದೇಶದ ಎಲ್ಲ ವಿಧಾನ ಮಂಡಲದ ಸಚಿವಾಲಯಗಳನ್ನು ಕಾಗದ ರಹಿತ ಮಾಡುವ ಪ್ರಕ್ರಿಯೆ ಆರಂಭವಾಗಿದ್ದು, ಈಗಾಗಲೇ ಹಿಮಾಚಲ ಪ್ರದೇಶದಲ್ಲಿ ಇ-ವಿಧಾನ್‌ ವ್ಯವಸ್ಥೆ ಅಳವಡಿಸಿಕೊಂಡಿದ್ದು  ಮಾದರಿಯಾಗಿದೆ.

Advertisement

ಅದೇ ರೀತಿ ಎಲ್ಲ ವಿಧಾನ ಮಂಡಲ ಕಾರ್ಯ ಕಲಾಪಗಳನ್ನು ಕಾಗದ ರಹಿತ ಮಾಡಲಾಗುತ್ತಿದ್ದು, ಈಗಾಗಲೇ ಇ-ವಿಧಾನ ವ್ಯವಸ್ಥೆ ಅಳವಡಿಸುವ ನಿಟ್ಟಿನಲ್ಲಿ ಸಚಿವಾಲಯದ ಅಧಿಕಾರಿಗಳಿಗೆ ದೆಹಲಿ ಹಾಗೂ ಬೆಂಗಳೂರಿನಲ್ಲಿ ಎರಡು ಹಂತದಲ್ಲಿ ತರಬೇತಿ ನೀಡಲಾಗಿದೆ.

ಇ-ವಿಧಾನ ಅಳವಡಿಸಿಕೊಳ್ಳಲು ಕೇಂದ್ರ ಸರ್ಕಾರವೇ ಹಣಕಾಸಿನ ನೆರವು ನೀಡುತ್ತಿದೆ. ಎನ್‌ಐಸಿ ಮೂಲಕ ತಾಂತ್ರಿಕ ವ್ಯವಸ್ಥೆಯನ್ನೂ ಕಲ್ಪಿಸಿಕೊಡುತ್ತಿದೆ. ಅದಕ್ಕಾಗಿ ಎರಡೂ ಸನದಗಳ ಸದಸ್ಯರಿಗೆ ತರಬೇತಿ ನೀಡಿ, ಆನ್‌ಲೈನ್‌ನಲ್ಲಿ ಬರುವ ಮಾಹಿತಿ ಪಡೆದುಕೊಂಡು ಕಲಾಪಗಳ ಚರ್ಚೆಗಳಲ್ಲಿ ಭಾಗವಹಿಸಲು ಮಾಹಿತಿ ನೀಡಬೇಕಿದೆ.  ಸಂಪೂರ್ಣ ಇ-ವಿಧಾನ ವ್ಯವಸ್ಥೆ ಜಾರಿಗೆ ತರುವ ಪ್ರಕ್ರಿಯೆ ವಿಳಂಬವಾಗುತ್ತಿರುವುದರಿಂದ ಮೊದಲ ಹಂತದಲ್ಲಿ ವೆಬ್‌ಮೂಲಕ ಲೈವ್‌ ಟೆಲಿಕಾಸ್ಟ್‌ ಮಾಡಲು ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ.

ಲೋಕಸಭೆ, ರಾಜ್ಯಸಭೆ ಮಾದರಿಯಲ್ಲಿ ಕರ್ನಾಟಕ ವಿಧಾನಸಭೆಯ ಕಾರ್ಯ ಕಲಾಪಗಳನ್ನು ಸಾರ್ವಜನಿಕರು ನೇರ ವೀಕ್ಷಣೆಗೆ ಅವಕಾಶ ಕಲ್ಪಿಸಲು ಲೈವ್‌ವೆಬ್‌ ಕಾಸ್ಟಿಂಗ್‌ ವ್ಯವಸ್ಥೆ ಸಿದ್ದ ಪಡಿಸಲಾಗಿದೆ. ಈ ಬಗ್ಗೆ ಸಭಾಧ್ಯಕ್ಷರ ಒಪ್ಪಿಗೆಗೆ ಕಾಯುತ್ತಿದ್ದೇವೆ. ಅವರು ಒಪ್ಪಿಗೆ ಸೂಚಿಸಿದರೆ, ಬೆಳಗಾವಿ ಅಧಿವೇಶನವನ್ನು ಸಾರ್ವಜನಿಕರ ವೀಕ್ಷಣೆಗೆ ಲೈವ್‌ ನೀಡಲಾಗುವುದು.
-ಶಶಿಧರ್‌, ನಿರ್ದೇಶಕರು, ವಿಧಾನಸಭೆ ಸಚಿವಾಲಯದ ಐಟಿ ವಿಭಾಗ

– ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next