ಪುತ್ತೂರು: ಇ- ಟ್ರೇಡಿಂಗ್ ಪುತ್ತೂರು ಎಪಿಎಂಸಿ ವ್ಯವಸ್ಥೆಗೆ ಹೊಂದಾಣಿಕೆಯಾಗುತ್ತಿಲ್ಲ. ಹಾಗೆಂದು ಇದು ಸರಕಾರದ ಆದೇಶ. ಜಾರಿಗೆ ತರಲೇಬೇಕಾಗಿದೆ. ಆದ್ದರಿಂದ ಸಾಂಕೇತಿಕವಾಗಿ ಜಾರಿ ಮಾಡಿ, ಒಳಿತು- ಕೆಡುಕು ಪರಾಮರ್ಶಿಸೋಣ ಎಂದು ಎಪಿಎಂಸಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಅಭಿಪ್ರಾಯಿಸಿದರು. ಪುತ್ತೂರು ಎಪಿಎಂಸಿ ಸಭಾಂಗಣದಲ್ಲಿ ಗುರುವಾರ ನಡೆದ ಸಮಿತಿ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ಇ-ಟ್ರೇಡಿಂಗ್‌ಗಾಗಿ ಪುತ್ತೂರು ಎಪಿಎಂಸಿ ಈಗಾಗಲೇ 93 ಲಕ್ಷ ರೂ.ನಷ್ಟು ಹಣ ವ್ಯಯಿಸಿದೆ. ಪ್ರತಿ ತಿಂಗಳು 5ರಿಂದ 10 ಲಕ್ಷ ರೂ. ನಷ್ಟು ಹಣವನ್ನು ಪಾವತಿ ಮಾಡಬೇಕಾಗಿದೆ. ಸರಕಾರದ ಆದೇಶವಿದ್ದ ಕಾರಣ, ಪಾವತಿ ಮಾಡುವುದು ಅನಿವಾರ್ಯವಾಯಿತು. ಇದೀಗ ಜಾರಿಯೂ ಅನಿವಾರ್ಯವಾಗಿದೆ ಎಂದರು.
ಪ್ರತಿಕ್ರಿಯಿಸಿದ ವರ್ತಕ ಪ್ರತಿನಿಧಿ ಶಕೂರ್ ಹಾಜಿ, ಸರಕಾರದ ಆದೇಶ ಸರಿ. ಆದರೆ ನಮಗೆ ಮಾತನಾಡುವ ಹಕ್ಕಿದೆ. ಬೋರ್ಡ್ ಮುಂದೆ ಈ ವಿಚಾರವನ್ನು ತಿಳಿಯ ಪಡಿಸಬೇಕಾಗಿದೆ. ಇಲ್ಲಿನ ವ್ಯವಸ್ಥೆಗೆ ತಕ್ಕಂತೆ ಕಾನೂನು ಮಾರ್ಪಡಿಸಲಿ ಎಂದು ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಕಾರ್ಯದರ್ಶಿ ಭಾರತಿ, ಈಗಾಗಲೇ ಗೇಟ್ ಎಂಟ್ರಿ ಮಾಡಲು ತಿಳಿಸಿದ್ದಾರೆ. ಇದಕ್ಕೆ ಬೇಕಾದ ವ್ಯವಸ್ಥೆಗಳನ್ನು ಮಾಡಲಾಗಿದೆ. ಇ- ಟ್ರೇಡಿಂಗನ್ನು ಸಾಂಕೇತಿಕವಾಗಿ ಜಾರಿ ಮಾಡೋಣ ಎಂದು ಸಲಹೆ ನೀಡಿದರು. ಇದಕ್ಕೆ ಒಪ್ಪಿಗೆ ಸೂಚಿಸಿದ ಅಧ್ಯಕ್ಷರು, ಸಾಂಕೇತಿಕವಾಗಿ ಜಾರಿ ಮಾಡುವುದಕ್ಕೆ ಅಭ್ಯಂತರವಿಲ್ಲ. ಆದರೆ ಈ ಬಗ್ಗೆ ರೆಮ್ಸ್ ಸಂಸ್ಥೆ ಸರಿಯಾದ ಮಾಹಿತಿಯನ್ನೇ ನೀಡುತ್ತಿಲ್ಲ. ಮಾಹಿತಿಯಿಲ್ಲದೇ ಕಾರ್ಯ ಕ್ರಮ ಜಾರಿ ಮಾಡುವುದಾದರೂ ಹೇಗೆ? ಮುಂದಿನ ಬಾರಿ ಸರಿಯಾದ ಮಾಹಿತಿ ನೀಡಲು ಆಗ್ರಹಿಸಲಾಗುವುದು. ಸರಿಯಾದ ತಿಳಿವಳಿಕೆ ನೀಡಿದ ಬಳಿಕವಷ್ಟೇ ಜಾರಿಗೆ ಸಾಧ್ಯ. ನಂತರ ಪ್ರತಿ ಗ್ರಾಮ ಪಂಚಾಯತ್‌ನಲ್ಲಿ ಸಭೆ ಕರೆದು, ಈ ಬಗ್ಗೆ ಮಾಹಿತಿ ನೀಡಲಾಗುವುದು. ಇದರಿಂದ ಇ-ಟ್ರೇಡಿಂಗ್‌ಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರಲು ಸಾಧ್ಯ ಎಂದರು. ಎಪಿಎಂಸಿ ಅಧಿಕಾರಿ, ಸಿಬಂದಿ ಮೇಲೆ ಕೆಲಸದ ಒತ್ತಡವಿದೆ. ಈ ಸಂದರ್ಭ ವರ್ತಕರು ಸಹಕರಿಸಬೇಕು. ಎಪಿಎಂಸಿ ಯಲ್ಲಿ ಸಿಬಂದಿ ಕೊರತೆಯೂ ಇದೆ. ಆದ್ದರಿಂದ ಕೆಲಸವನ್ನು ನಿರ್ವಹಿಸಿಕೊಂಡು ಹೋಗಬೇಕಾಗಿದೆ. ಎಲ್ಲರೂ ಸಹಕಾರ ನೀಡುವಂತೆ ಕೇಳಿಕೊಂಡರು.
ವಿವಿಧ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗುವುದು. ಇದರಲ್ಲಿ ಇತರೆ ಕೆಲಸಗಳನ್ನು ಸೇರಿಸಿಕೊಳ್ಳುವ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ಪ್ರತಿಕ್ರಿಯಿಸಿದ ಅಧ್ಯಕ್ಷರು, ಮುಂದಿನ ಸಭೆಗೆ ತೆರಳಿದಾಗ, ಎಲ್ಲ ಕಾಮಗಾರಿಗಳ ಅನುಮೋದನೆ ಮಾಡಲಾಗುವುದು. ಎಷ್ಟು ದಿನ ಆದರೂ ಚಿಂತೆ ಇಲ್ಲ. ಅಲ್ಲಿಯೇ ಕುಳಿತು ಕೆಲಸ ಮಾಡಿಸಲಾಗುವುದು. ಅಧಿಕಾರಿ, ನಿರ್ದೇಶಕರು ಯಾರೇ ಆಗಿರಲಿ, ಕೆಲಸ ಆಗಲೇಬೇಕು. ಒಂದು ವೇಳೆ ಸಾಧ್ಯ ಇಲ್ಲ ಎಂದಾದರೆ, ಅದರ ಕಾರಣವನ್ನಾದರೂ ತಿಳಿಸಬೇಕು ಎಂದರು.
ಎಪಿಎಂಸಿ ವಾಹನದ ಬಗ್ಗೆ ಈಗಾಗಲೇ ಮಾತನಾಡಲಾಗಿದೆ. ನನಗೆ ಹೆಚ್ಚಿನ ಮಾಹಿತಿ ಇಲ್ಲದೇ ಇದ್ದರೂ, ಮಾತನಾಡಿದ್ದೇನೆ. ವಾರದೊಳಗೆ ವ್ಯವಸ್ಥೆ ಮಾಡುವ ಆಶ್ವಾಸನೆ ಸಿಕ್ಕಿದೆ ಎಂದು ಬೂಡಿಯಾರ್ ರಾಧಾಕೃಷ್ಣ ರೈ ಹೇಳಿದರು.
ಶುಚಿತ್ವ
ಪುತ್ತೂರು ಎಪಿಎಂಸಿ ಸಭೆ ಬಳಿಕ ಪದಾಧಿಕಾರಿಗಳು, ಅಧಿಕಾರಿಗಳು ಪ್ರಾಂಗಣವನ್ನು ವೀಕ್ಷಿಸಲಾಯಿತು. ಪ್ರಾಂಗಣದ ಐದು ಶೌಚಾಲಗಳ ಕೀಯನ್ನು ಮುಂದಿನ ದಿನದಲ್ಲಿ ವರ್ತಕರಿಗೇ ನೀಡಲಾಗುವುದು. ಅವರೇ ನಿರ್ವಹಣೆ ಮಾಡಬೇಕು ಎಂದು ಈ ಸಂದರ್ಭ ತಿಳಿಸಲಾಯಿತು. ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು, ಅಧಿಕಾರಿ, ಸಿಬಂದಿ ಭಾಗವಹಿಸಿದ್ದರು.
ವರ್ತಕರಿಗೆ ಪ್ರತ್ಯೇಕ ಬುಟ್ಟಿ
ತ್ಯಾಜ್ಯದ ಬಗ್ಗೆ ವರ್ತಕರು ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಪ್ರಸ್ತಾವಿಸಿದಾಗ ಪ್ರತಿಕ್ರಿಯಿಸಿದ ವರ್ತಕ ಪ್ರತಿನಿಧಿ ಶಕೂರ್ ಹಾಜಿ, ವಿಲೇವಾರಿಯದ್ದೇ ಸಮಸ್ಯೆ. ಈ ಹಿಂದೆ ನಗರಸಭೆಯಿಂದ ವಾಹನ ಬರುತ್ತಿತ್ತು. ಆದರೆ ಈಗ ಹಸಿ- ಒಣ ಕಸ ಪ್ರತ್ಯೇಕ ಮಾಡಿ ನೀಡುವಂತೆ ಕೇಳಿಕೊಳ್ಳುತ್ತಿದ್ದಾರೆ. ಆದ್ದರಿಂದ ಸಮಸ್ಯೆಯಾಗಿದೆ ಎಂದರು. ಅಧ್ಯಕ್ಷರು ಮಾತನಾಡಿ, ವರ್ತಕರಿಗೆ ಪ್ರತ್ಯೇಕ ಬುಟ್ಟಿ ನೀಡಲಾಗುವುದು. ಇದರಲ್ಲಿ ಹಸಿ-ಒಣ ಕಸ ಹಾಕಿ, ನಗರಸಭೆಗೆ ನೀಡುವ ವ್ಯವಸ್ಥೆ ಮಾಡುವ. ನಗರಸಭೆ ಜತೆಗೂ ಮಾತುಕತೆ ನಡೆಸಲಾಗುವುದು ಎಂದರು.