Advertisement

ಆ ಟಾಯ್ಲೆಟ್‌ ಹೋಗಿ ಇ -ಟಾಯ್ಲೆಟ್‌ ಬಂದರೂ  ಪ್ರಯೋಜನವಿಲ್ಲ 

08:02 PM Sep 01, 2021 | Team Udayavani |

ಕಾರ್ಕಳ:  ಸರಕಾರರ ನೂರೆಂಟು ಯೋಜನೆಗಳು ಅಂತಿಮವಾಗಿ ಜನರಿಗೆ ತಲುಪಲು ವಿಫ‌ಲವಾಗುವುದು ಹೇಗೆ ಎಂಬುದಕ್ಕೆ  ಕಾರ್ಕಳ ಪುರಸಭೆ ವ್ಯಾಪ್ತಿಯ ಇ ಟಾಯ್ಲೆಟ್‌ಗಳೇ ಒಂದು ನಿದರ್ಶನ. ಮಾಮೂಲಿ ಟಾಯ್ಲೆಟ್‌ ಹೋಗಿ ಇ ಟಾಯ್ಲೆಟ್‌ ಬಂದಿದ್ದರೂ ಬಳಕೆಗೆ ಸಿಗದಂತಾಗಿದೆ.

Advertisement

2018ರಲ್ಲಿ  ಸರಕಾರದ ನಗರೋತ್ಥಾನ  ಹಂತ-3ರ ಅಡಿಯಲ್ಲಿ  ಬಿಡುಗಡೆಗೊಳಿಸಿದ  3. ಕೋ.ರೂ. ಅನುದಾನದಲ್ಲಿ ವಿವಿಧ ಕಾಮಗಾರಿಗಳಲ್ಲಿ ಇ ಟಾಯ್ಲೆಟ್‌ ಕೂಡ ಒಳಗೊಂಡಿದೆ. ಪುರಸಭೆ ವ್ಯಾಪ್ತಿಯ ನಾಲ್ಕು ಕಡೆಗಳಲ್ಲಿ ಸುಮಾರು 26 ಲ.ರೂ. ವೆಚ್ಚದಲ್ಲಿ  ಇದನ್ನು ನಿರ್ಮಿಸಲಾಗಿದೆ. ಗುತ್ತಿಗೆದಾರರು ಸರಿಯಾಗಿ ನಿರ್ವಹಿಸದೆ ಇರುವುದೇ  ಬಳಕೆಗೆ ಸಿಗದಿರಲು ಕಾರಣ ಎನ್ನಲಾಗಿದೆ.

ಬಂಗ್ಲೆಗುಡ್ಡೆ ಬಳಿಯ ಇ- ಶೌಚಾಲಯಕ್ಕೆ  ಡ್ರೈನೇಜ್‌ ವ್ಯವಸ್ಥೆ ಕಲ್ಲಿಸಿಲ್ಲ. ನೀರಿನ ಸಂಪರ್ಕವೂ ನೀಡಿಲ್ಲ. ಅದು ಅರ್ಧಕ್ಕೆ  ನಿಂತಿದೆ.  ಅಲ್ಲಿ  ಶುಚಿತ್ವದ  ಕೊರತೆಯಿಂದ ಘಟಕ ನಾರುತ್ತಿದೆ. ಗುತ್ತಿಗೆದಾರರಿಗೆ ಅರ್ಧ ಬಿಲ್‌ ಕೂಡ ಪಾವತಿಯಾಗಿದೆ. ಸಾರ್ವಜನಿಕರ ಉಪಯೋಗಕ್ಕೆ ಸಿಗುವ ತನಕ ಟಾಯ್ಲೆಟ್‌  ತಲುಪಿಲ್ಲ. ಇನ್ನು ಪುರಸಭೆ ಕಚೇರಿ  ಪಕ್ಕದಲ್ಲಿ ಬಸ್‌ಸ್ಟಾಂಡ್‌ ಸಮೀಪದ  ಇ-ಟಾಯ್ಲೆಟ್‌ ಕೂಡ  ಸಾರ್ವಜನಿಕ ಬಳಕೆಗೆ ಸಿಗುತ್ತಿಲ್ಲ.  ಗಾಂಧಿ ಮೈದಾನ ಬಳಿಯಲ್ಲಿ ಇರುವುದರ ಕಥೆ ಕೂಡ ಇದೇ ಆಗಿದೆ. ಎರಡೂ ಕಡೆಯ ಇ ಟಾಯ್ಲೆಟ್‌ ಸಾಂಕೇತಿಕವಾಗಿ ಉದ್ಘಾಟನೆ  ನೆರವೇರಿಸಲಾಗಿದೆ. ಅನಂತರ  ಅದರ  ನಿರ್ವಹಣೆಯನ್ನು ಮರೆಯಲಾಗಿದೆ.

“ಶುಚಿ ಇಲ್ಲಿ ಕಾಣಿರಿ’ ಎಂಬ ಬೋಡ್‌  :

“ಕೊನೆಗೂ ನಿಮ್ಮ ನಿರೀಕ್ಷೆಗೂ ಮೀರಿ ಶುಚಿಯಾಗಿರುವ ಶೌಚಾಲಯವನ್ನು ಇಲ್ಲಿ  ಕಾಣಿರಿ’ -ಇದು  ಆನೆಕೆರೆ ಇ-ಟಾಯ್ಲೆಟ್‌ನ ಹೊರಗೆ ಕಂಡುಬರುತ್ತಿರುವ ಬರಹ. ಹತ್ತಿರಕ್ಕೆ ತೆರಳಿ ಒಳಗೆ ಇಣುಕಿ ನೋಡಿದರೆ ಅಲ್ಲಿ ಗಬ್ಬು ವಾಸನೆಯಿದೆ.  ಶೌಚಾಲಯ ಪ್ರಯೋಜನ ಪಡೆಯಬೇಕಿದ್ದವರು ಇದರಿಂದ ರೋಸಿ ಹೋಗಿದ್ದಾರೆ.

Advertisement

ಸಾರ್ವಜನಿಕ ಉಪಯೋಗದ ನಾಗರಿಕರು 5 ರೂ. ನಾಣ್ಯ ಬಳಸಿ ಉಪಯೋಗಿಸಬಹುದಾದ ತಂತ್ರಜ್ಞಾನದ ಇ ಟಾಯ್ಲೆಟ್‌ಗಳಿವು. ದ್ವಾರದ ಪಕ್ಕದ ಯಂತ್ರದ ಪೆಟ್ಟಿಗೆಯೊಳಗೆ ನಾಣ್ಯ ಹಾಕಿದಾಗ ಸ್ವಯಂಚಾಲಿತ ಬಾಗಿಲು ತೆರೆದುಕೊಳ್ಳುತ್ತದೆ. ಸಾಮಾನ್ಯ ಕಾರ್ಮಿಕ ನಿರ್ವಹಣೆಯ ಶೌಚಾಲಯಗಳಲ್ಲಿ  ಸಂಗ್ರಹವಾಗುವ  ಶೌಚಾಲಯದ  ಶುಲ್ಕ  ನಿರ್ವಹಣೆ  ನಡೆಸುವ ಸಂಸ್ಥೆಯ ಪಾಲಾಗುತ್ತದೆ; ಇದರಿಂದ ಸ್ಥಳಿಯಾಡಳಿತಕ್ಕೆ ಆದಾಯ ದೊರಕುವುದಿಲ್ಲ ; ಸ್ವಚ್ಛತೆಗೆ ಆದ್ಯತೆ ನೀಡುತ್ತಿಲ್ಲ; ಸ್ಥಳಿಯಾಡಳಿತಕ್ಕೆ ನಿರ್ವಹಣೆ ಕಷ್ಟ ಎಂಬೆಲ್ಲ ಕಾರಣಕ್ಕೆ  ಕಾರ್ಮಿಕ ರಹಿತ ಇ-ಟಾಯ್ಲೆಟ್‌ ವ್ಯವಸ್ಥೆ ಜಾರಿಗೆ ಬಂದಿದ್ದರೂ ಅದಿನ್ನೂ  ಸಾರ್ವಜನಿಕರ  ಬಳಕೆಗೆ ದೊರೆತಿಲ್ಲ.

ಶುಚಿತ್ವ ಶೌಚಾಲಯ ಅಗತ್ಯ :

ಖಾಸಗಿ  ಬಸ್‌ನಿಲ್ದಾಣ ಬಳಿ   ಸಾರ್ವಜನಿಕ ಶೌಚಾಲಯ ಕಟ್ಟಡ ನಿರ್ಮಿಸಿ ಕೆಲವೇ ವರ್ಷಗಳು ಕಳೆದಿವೆ. ನೀರಿನ ವ್ಯವಸ್ಥೆ, ಕಟ್ಟಡದ ಮುಂಭಾಗ ದುರಸ್ತಿಯಾಗದೆ  ಬೀಗ ಜಡಿಯಲಾಗಿದೆ. ನಗರದ ಬಹುತೇಕ ಸ್ಥಳಗಳು ಜನನಿಬಿಡ ಸ್ಥಳಗಳಾಗಿದ್ದು,  ಬೆಳೆಯುತ್ತಿರುವ  ನಗರ ಪ್ರದೇಶದ ಪ್ರಮುಖ ಜನಸಂದಣಿ ಇರುವ ಕಡೆಗಳಲ್ಲಿ  ಸಾರ್ವಜನಿಕರಿಗೆ  ಉಪಯೋಗಕ್ಕೆ ಸಿಗುವ ರೀತಿಯಲ್ಲಿ ಶುಚಿತ್ವ ವಿರುವ ಶೌಚಾಲಯಗಳ ಅಗತ್ಯವಿದೆ.

ಇ-ಟಾಯ್ಲೆಟ್‌ ವಸ್ತುಸ್ಥಿತಿ ಪರಿಶೀಲಿಸಿದ್ದು  ಬಾಕಿ ಉಳಿದ ಕೆಲಸಗಳನ್ನು ಶೀಘ್ರವೇ ಪೂರ್ಣಗೊಳಿಸಿ ಬಳಕೆಗೆ ಯೋಗ್ಯವಾಗಿಸುವಂತೆ  ಗುತ್ತಿಗೆದಾರರಿಗೆ ಸೂಚಿಸಲಾಗುವುದು. -ರೂಪಾ ಡಿ.ಶೆಟ್ಟಿ  , ಮುಖ್ಯಾಧಿಕಾರಿ,  ಪುರಸಭೆ ಕಾರ್ಕಳ

ಬಂಗ್ಲೆಗುಡ್ಡೆಯಲ್ಲಿ  ಇ ಟಾಯ್ಲೆಟ್‌ ನಿರ್ಮಿಸಿ 4-5 ವರ್ಷಗಳಾಗಿವೆ. ಅದಿನ್ನು ಬಳಸುವಂತಿಲ್ಲ. ಸಾಮಾನ್ಯ ಸಭೆಯಲ್ಲಿ ಪ್ರಸ್ತಾವಿಸಿದ್ದೇನೆ. ಮುಂದಿನ ಸಭೆಯಲ್ಲಿ ಪರಿಹಾರ ಆಗುವಂತೆ ಒತ್ತಾಯಿಸಿ  ಧರಣಿ ನಡೆಸುವೆ.-ಪ್ರತಿಮಾ ರಾಣೆ ,  ನಗರ ಸಭೆ ಸದಸ್ಯೆ

 

– ಬಾಲಕೃಷ್ಣ  ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next