Advertisement

ಇನ್ನೂ  ಏಳು ಕಡೆಯಲ್ಲಿ ಇ-ಟಾಯ್ಲೆಟ್‌

11:49 AM Feb 28, 2018 | |

ಮಹಾನಗರ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೇ ಅನುಷ್ಠಾನಿಸಿರುವ ಇ-ಟಾಯ್ಲೆಟ್‌ ವ್ಯವಸ್ಥೆಯ ಸುಧಾರಣೆಯ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ ಇನ್ನೂ ಏಳು ಇ-ಟಾಯ್ಲೆಟ್‌ ನಿರ್ಮಾಣಕ್ಕೆ ಪಾಲಿಕೆ ನಿರ್ಧರಿಸಿದೆ.

Advertisement

ಲೈಟ್‌ ಹೌಸ್‌ ರಸ್ತೆ, ಕಾಫ್ರಿಗುಡ್ಡ, ವೈಲೆನ್ಸಿಯಾ ಪಾರ್ಕ್‌, ಪದವಿನಂಗಡಿ ಹಾಗೂ ಕಂಕನಾಡಿ (ವಾರ್ಡ್‌ ನಂ.49) ಸಹಿ ತ ಏಳು ಕಡೆಗಳಲ್ಲಿ ಇ-ಟಾಯ್ಲೆಟ್‌ ನಿರ್ಮಾಣದ ಗುರಿ ಹೊಂದಲಾಗಿದೆ. ಕಳೆದ ಮೂರು ಇ- ಟಾಯ್ಲೆಟ್‌ಗಳನ್ನು ಎಚ್‌ಪಿಸಿಎಲ್‌ ಸಂಸ್ಥೆಯ ವತಿಯಿಂದ ನಿರ್ಮಿಸಲಾಗಿದ್ದು, ಮುಂದಿನ ಇ-ಟಾಯ್ಲೆಟ್‌ಗಳನ್ನು ಮಂಗಳೂರು ಪಾಲಿಕೆಯ 14ನೇ ಹಣಕಾಸು ಯೋಜನೆಯಡಿ ನಿರ್ಮಿಸಲಾಗುತ್ತದೆ.

ಈಗಾಗಲೇ ಮಂಗಳೂರಿನ ಲಾಲ್‌ ಭಾಗ್‌ ಬಸ್‌ ನಿಲ್ದಾಣದ ಸಮೀಪ ಎರಡು(ಪುರುಷರು- ಮಹಿಳೆಯರಿಗೆ) ಕದ್ರಿ ಪಾರ್ಕ್‌ ಬಳಿ ಎರಡು ಹಾಗೂ ಹಂಪನಕಟ್ಟೆಯಲ್ಲಿ ಒಂದು ಇ- ಟಾಯ್ಲೆಟ್‌ ಕಾರ್ಯನಿರ್ವಹಿಸುತ್ತಿದೆ. ಕೇರಳ, ಬೆಂಗಳೂರು, ಮೈಸೂರು ಸೇರಿದಂತೆ ಬಹುತೇಕ ಭಾಗದಲ್ಲಿ ಈಗಾಗಲೇ ಜಾರಿಯಲ್ಲಿರುವ ಇ- ಟಾಯ್ಲೆಟ್‌ ವ್ಯವಸ್ಥೆಯನ್ನು ಇತ್ತೀಚೆಗೆ ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಮೊದಲ ಬಾರಿಗೆ ಪರಿಚಯಿಸಲಾಗಿತ್ತು. ಈಗ ಎರಡನೇ ಹಂತವಾಗಿ ಇ-ಟಾಯ್ಲೆಟ್‌ ನಿರ್ಮಾಣಕ್ಕೆ ಸಿದ್ಧತೆ ನಡೆಸಲಾಗಿದೆ.

7 ಲ. ರೂ. ವೆಚ್ಚ
ಒಂದು ಶೌಚಗೃಹದ ಅಂದಾಜು ವೆಚ್ಚ ಸುಮಾರು 7 ಲಕ್ಷ ರೂ.ಗಳಾಗಿದೆ. ಇದು ಪೋರ್ಟೆಬಲ್‌ ಟಾಯ್ಲೆಟ್‌ ಆಗಿದ್ದು ಬೇರೆಡೆ ಸ್ಥಳಾಂತರವೂ ಸುಲಭ.

ಶೌಚಾಲಯ ಬಳಕೆಗೆ ಮೊದಲು ನಾಣ್ಯಗಳನ್ನು ಬಳಸಬೇಕಿದೆ. ನಕಲಿ ನಾಣ್ಯ ಬಳಸಿದರೆ ಶೌಚಗೃಹದ ಬಾಗಿಲು ತೆರೆಯುವುದಿಲ್ಲ. ನಾಣ್ಯಗಳನ್ನು ಸೆನ್ಸಾರ್‌ ಮಾಡುವ ತಂತ್ರಜ್ಞಾನ ಇದರಲ್ಲಿದೆ. ತಾಂತ್ರಿಕ ವ್ಯವಸ್ಥೆಗಳು, ಜಿಪಿಎಸ್‌ ಸಂಪರ್ಕ ಹೊಂದಿದೆ. ತಾಂತ್ರಿಕ ವ್ಯವಸ್ಥೆಗಳು ಕೈಕೊಟ್ಟರೆ ಕೂಡಲೇ ಕಂಪೆನಿಯ ಕೇಂದ್ರ ಕಚೇರಿಗೆ ಅಲರ್ಟ್‌ ಹೋಗುತ್ತದೆ. ಶೀಘ್ರ ಎಂಜಿನಿರ್‌ಗಳು ಬಂದು ರಿಪೇರಿ ಕಾರ್ಯಕೈಗೊಳ್ಳುತ್ತಾರೆ.

Advertisement

ಆದಾಯ ನಿರೀಕ್ಷೆ
ಪ್ರತೀ ಇ-ಟಾಯ್ಲೆಟ್‌ಗಳನ್ನು ನಾಣ್ಯ ಹಾಕುವುದರ ಮೂಲಕ ಬಳಸಬೇಕಾಗಿದೆ. ಹೀಗಾಗಿ ಪ್ರತೀ ಇ-ಟಾಯ್ಲೆಟ್‌ನಿಂದ ಮಾಸಿಕವಾಗಿ ಸುಮಾರು 1,500 ರೂ.ಗಳಿಂದ 2,000ರೂ.ಗಳವರೆಗೆ ಆದಾಯ ಸಂಗ್ರಹಿಸುವ ನಿರೀಕ್ಷೆ ಹೊಂದಲಾಗಿದೆ.

ಮಾಹಿತಿ ಕೊರತೆ
ಇ- ಟಾಯ್ಲೆಟ್‌ ಎಂಬ ಪರಿಕಲ್ಪನೆ ಮಂಗಳೂರಿಗೆ ಹೊಸದಾಗಿ ಪರಿಚಿತವಾದ್ದರಿಂದ ಇಲ್ಲಿನ ಜನ ರಿಗೆ ಇದರ ಬಳಕೆ ಬಗ್ಗೆ ಇನ್ನೂ ಸ್ಪಷ್ಟವಾಗಿ ತಿಳಿದಂತಿಲ್ಲ. ಜತೆಗೆ ಅನಕ್ಷರಸ್ಥರಿಗೆ ಇ-ಟಾಯ್ಲೆಟ್‌ ಬಳಕೆ ಹೇಗೆ ಎಂಬ ಬಗ್ಗೆ ಮಾಹಿತಿ ಇಲ್ಲದಿರುವುದರಿಂದ ಇದರ ಬಳಕೆಯೂ ಸ್ವಲ್ಪ ಕಡಿಮೆಯಾಗಿದೆ. ಲಾಲ್‌ಬಾಗ್‌ ಬಸ್‌ ನಿಲ್ದಾಣ ಸಮೀಪ ಇ - ಟಾಯ್ಲೆಟ್‌ ಇದ್ದರೂ ಕೆಲವರು ಅದರೊಳಗೆ ಹೋಗಲು ಮುಜುಗರ ಪಡುತ್ತಿದ್ದಾರೆ. 

ಹೀಗಾಗಿ ಹೆಚ್ಚಿನವರಿಗೆ ಇ-ಟಾಯ್ಲೆಟ್‌ ಎಂಬುದು ಅಪರಿಚಿತ ಶೌಚಾಲಯವಾಗಿದೆ. ಈ ಮಧ್ಯೆ ಕದ್ರಿ ಪಾರ್ಕ್‌ನಲ್ಲಿರುವ ಇ-ಟಾಯ್ಲೆಟ್‌ನಲ್ಲಿ ನೀರಿನ ಕೊರತೆಯೂ ಕೆಲವೊಮ್ಮೆ ಎದುರಾಗಿ ಹೊರಗಡೆಯಲ್ಲಿ ‘ಹಸುರು ಬಣ್ಣದ ಸಿಗ್ನಲ್‌’ ಬದಲು ‘ಕೆಂಪು ಬಣ್ಣದ ಸಿಗ್ನಲ್‌’ ಹೊಳೆಯುವ ಸಂಗತಿ ಹಲವು ಬಾರಿ ನಡೆದಿದೆ.

ಟಾಯ್ಲೆಟ್‌ಗಳದ್ದೇ ಸಮಸ್ಯೆ
ಮಂಗಳೂರಿನಲ್ಲಿ ‘ಶೌಚಾಲಯ’ ಎಂಬುದು ಬಹುದೊಡ್ಡ ಸಮಸ್ಯೆಯ ವಿಚಾರ. ಬೇಕಾದಲ್ಲಿ ಇಲ್ಲ. ಇರುವಲ್ಲಿ ಸರಿಯಿಲ್ಲ.! ಹೀಗಾಗಿ ಜನರಿಗೆ ಒಂದಲ್ಲ ಒಂದು ತಾಪತ್ರಯ ತಪ್ಪಿದ್ದಲ್ಲ. ನಂತೂರು, ಮಾರ್ಕೆಟ್‌ ರಸ್ತೆ, ಕೆಪಿಟಿ ಜಂಕ್ಷನ್‌, ಕೊಟ್ಟಾರ ಚೌಕಿ, ಪಿ.ವಿ.ಎಸ್‌., ಕದ್ರಿ ಮಲ್ಲಿಕಟ್ಟೆ, ಹಂಪನಕಟ್ಟೆ, ಅತ್ತಾವರ, ಕಂಕನಾಡಿ ಹೀಗೆ ಹಲವು ಜಾಗದಲ್ಲಿ ಶೌಚಾಲಯ ಅಗತ್ಯ. ಆದರೆಲ್ಲಿ ಕೂಡ ಸುಸಜ್ಜಿತ ಶೌಚಾಲಯ ಇಲ್ಲವೇ ಇಲ್ಲ. ಸ್ಟೇಟ್‌ ಬ್ಯಾಂಕ್‌ ಬಸ್‌ ನಿಲ್ದಾಣ ವ್ಯಾಪ್ತಿಯಲ್ಲಿ ಒಂದೆರಡು ಶೌಚಾಲಯ ಇದೆಯಾದರೂ ನಿರ್ವಹಣೆ ಇಲ್ಲದಂತಾಗಿದೆ.

ಇ-ಟಾಯ್ಲೆಟ್‌; ಬಳಸುವುದು ಹೇಗೆ?
ಆಧುನಿಕ ತಂತ್ರಜ್ಞಾನದ ಶೌಚಗೃಹ ವ್ಯವಸ್ಥೆ ಇದು. ನಾಣ್ಯ ಪಾವತಿಸಿ ಉಪಯೋಗಿಸುವ ಸ್ವಯಂ ಚಾಲಿತ ಇದರಲ್ಲಿದೆ. ಟಾಯ್ಲೆಟ್‌ ಹೊರಗಡೆ ಹಸುರು ಬಣ್ಣ ಇದ್ದರೆ (ಕೆಂಪು ಬಣ್ಣವಿದ್ದರೆ ಬ್ಯುಸಿ ಎಂದರ್ಥ) ಮಾತ್ರ ಶೌಚಾಲಯ ಬಳಸಬಹುದು. ಮೊದಲಿಗೆ ನಾಣ್ಯವನ್ನು ಶೌಚಗೃಹದ ಎದುರಿನ ನಿಗದಿತ ಸ್ಥಳದಲ್ಲಿ ಹಾಕಿದ ಕೂಡಲೇ ಶೌಚಗೃಹದ ಬಾಗಿಲು ತೆಗೆಯಬಹುದು. ಬಳಿಕ ಒಳಗಿನಿಂದ ಚಿಲಕ ಹಾಕಬೇಕು. ಲೈಟ್‌, ಫ್ಯಾನ್‌, ಎಕ್ಸಾಸ್ಟರ್‌ ವ್ಯವಸ್ಥೆಗಳು ಇದರಲ್ಲಿದೆ. ಅಟೋಮ್ಯಾಟಿಕ್‌ ಆಗಿ ಇವು ಚಾಲನೆಗೊಳ್ಳುತ್ತವೆ. 

ಬಳಕೆಯ ಅನಂತರ ಸ್ವಯಂಚಾಲಿತವಾಗಿ ನೀರು ಹರಿಯುತ್ತದೆ. ಹೊರಗಡೆ ಕೈ ತೊಳೆಯುವ ವ್ಯವಸ್ಥೆಯೂ ಇದೆ. ಶೌಚಗೃಹದ ಮೇಲೆ 250ರಿಂದ 300 ಲೀಟರ್‌ ಸಾಮರ್ಥ್ಯದ ಟ್ಯಾಂಕ್‌ ಅಳವಡಿಸಲಾಗಿದೆ. 3 ನಿಮಿಷ ಬಳಸಿದರೆ 1.5 ಲೀಟರ್‌ ನೀರು ಫ್ಲಶ್‌ ಆಗುತ್ತದೆ. 3 ನಿಮಿಷಕ್ಕಿಂತ ಹೆಚ್ಚು ಉಪಯೋಗಿಸಿದರೆ 4.5 ಲೀಟರ್‌ ಹರಿಯುತ್ತದೆ. ಪ್ರತೀ 10 ಜನ ಬಳಸಿದ ಬಳಿಕ ಶೌಚಗೃಹ ಸ್ವಯಂಚಾಲಿತವಾಗಿ ಕ್ಲೀನ್‌ ಆಗುವ ವ್ಯವಸ್ಥೆ ಇದೆ. 

ಸ್ಮಾರ್ಟ್‌ ಬಸ್‌ ಶೆಲ್ಟರ್‌ನಲ್ಲೂ ಇ-ಟಾಯ್ಲೆಟ್‌
‘ಸ್ಮಾರ್ಟ್‌ ಸಿಟಿ’ ಯೋಜನೆಯನ್ವಯ 22 ಕಡೆಗಳಲ್ಲಿ ಸುಸಜ್ಜಿತ ಸ್ಮಾರ್ಟ್‌ ಬಸ್‌ ಶೆಲ್ಟರ್‌(ತಂಗುದಾಣ) ನಿರ್ಮಾಣವಾಗಲಿದ್ದು, ಇದರಲ್ಲಿ ಜಾಗದ ಲಭ್ಯತೆ ಅಧಿಕವಿರುವಲ್ಲಿ ಇ ಟಾಯ್ಲೆಟ್‌ ಸಹಿತವಾದ ‘ಎ’ ಶ್ರೇಣಿಯ ಬಸ್‌ ತಂಗುದಾಣ ನಿರ್ಮಾಣವಾಗಲಿದೆ. ‘ಎ’ ಶ್ರೇಣಿಯ ಬಸ್‌ ಶೆಲ್ಟರ್‌ಗಳು ಮ್ಯಾಕ್‌ ಮಾಲ್‌ ಕಂಕನಾಡಿ, ಜೆರೋಸಾ ಸ್ಕೂಲ್‌ ವೆಲೆನ್ಸಿಯಾ, ಸೈಂಟ್‌ ಆ್ಯಗ್ನೆಸ್‌ ಕಾಲೇಜು ಬೆಂದೂರ್‌ವೆಲ್‌,
ಬೋಂದೆಲ್‌ ಜಂಕ್ಷನ್‌, ಮನಪಾ ಕಚೇರಿ ಲಾಲ್‌ಭಾಗ್‌, ಉರ್ವಸ್ಟೋರ್‌ ಜಂಕ್ಷನ್‌, ಕಾಟಿಪಳ್ಳ ಜಂಕ್ಷನ್‌ ಹಾಗೂ ಸುರತ್ಕಲ್‌ನ ಹೊಟೇಲ್‌ ಲಲಿತ್‌ ಇಂಟರ್‌ನ್ಯಾಷನಲ್‌ ಸಮೀಪ ನಿರ್ಮಾಣವಾಗಲಿದೆ. ಈ ಬಸ್‌ ಶೆಲ್ಟರ್‌ ಗಳಲ್ಲಿ ಇ-ಟಾಯ್ಲೆಟ್‌ ವ್ಯವಸ್ಥೆ ಕೂಡ ಇರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next