Advertisement

ನಾಗರಿಕರ ಬಳಕೆಗೆ ಸಿಗದ ಇ-ಶೌಚಾಲಯ

03:55 PM May 03, 2019 | Team Udayavani |

ರಾಮನಗರ: ನಗರದಲ್ಲಿ ಸುಮಾರು 8 ಲಕ್ಷ ರೂ. ವೆಚ್ಚದಲ್ಲಿ ನಗರಸಭೆಯ ಮೂಲಕ ಸ್ಥಾಪಿಸಿರುವ ಇ-ಶೌಚಾಲಯಗಳು ಸಾರ್ವಜನಿಕ ಬಳಕೆಗೆ ಅವಕಾಶವಿಲ್ಲದಂತಾಗಿದೆ. ಇದಕ್ಕೆ ಇ-ಶೌಚಾಲಯ ನಿರ್ವಹಣೆ ಹೊತ್ತ ಗುತ್ತಿಗೆದಾರನ ನಿರ್ಲಕ್ಷ್ಯವೇ ಕಾರಣ ಎಂದು ತಿಳಿದು ಬಂದಿದೆ.

Advertisement

ನಗರದ ನ್ಯಾಯಾಲಯ ರಸ್ತೆಯಲ್ಲಿ, ಛತ್ರದ ಬೀದಿಯಲ್ಲಿ (ಮೇಯಿನ್‌ ಶಾಲೆ ಬಳಿ), ಜಿಲ್ಲಾ ಕ್ರೀಡಾಂಗಣ ಮತ್ತು ರಾಯರ ದೊಡ್ಡಿ ವೃತ್ತದಲ್ಲಿ ತಲಾ ಒಂದು ಇ-ಟಾಯ್ಲೆಟ್ ಸ್ಪಾಪನೆಯಾಗಿದೆ. ರಾಯರದೊಡ್ಡಿ ಬಳಿಯ ಟಾಯ್ಲೆಟ್ ಹೊರತುಪಡಿಸಿ ಉಳಿದ ಮೂರು ಟಾಯ್ಲೆಟ್‌ಗಳು ಬಳಕೆಯಾಗುತ್ತಿಲ್ಲ. ಕಾರಣ, ಅವು ಕಾರ್ಯನಿರ್ವಹಿಸುತ್ತಿಲ್ಲ. ಗುರುತಿಸಿಕೊಳ್ಳಲು ಇಚ್ಚಿಸದ ನಗರಸಭೆಯ ಅಧಿಕಾರಿಗಳ ಪ್ರಕಾರ ಮೂರು ಇ- ಟಾಯ್ಲೆಟ್‌ಗಳಲ್ಲಿ ವಿದ್ಯುತ್‌ಗೆ ಸಂಬಂಧಿಸಿದಂತೆ ಕೆಲವು ಲೋಪಗಳಿದ್ದು ಘಟಕಗಳು ಕಾರ್ಯ ನಿರ್ವಹಿಸುತ್ತಿಲ್ಲ. ಆದರೆ ಮೈಸೂರು ಮೂಲದ ಗುತ್ತಿಗೆದಾರ ನಾಪತ್ತೆಯಾಗಿದ್ದಾನೆ ಎಂದು ಅಧಿಕಾರಿಗಳೇ ದೂರಿದ್ದಾರೆ.

ನಗರಸಭೆಯಿಂದ 8 ಲಕ್ಷ ಮೊತ್ತ ವ್ಯಯ: ಜಿಲ್ಲಾ ಕೇಂದ್ರ ರಾಮನಗರಕ್ಕೆ ದಿನನಿತ್ಯ ಹೊರಗಡೆಯಿಂದ ಬಂದು ಹೋಗುವ ಜನಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಆಯಾ ಕಟ್ಟಿನಲ್ಲಿ ನಗರಸಭೆ ಇ-ಶೌಚಾಲಯಗಳನ್ನು ಸ್ಥಾಪಿಸಿದೆ. 8 ಲಕ್ಷಕ್ಕೂ ಅಧಿಕ ಮೊತ್ತವನ್ನು ನಗರಸಭೆ ವ್ಯಯಿಸಿದೆ. ಲೋಕಸಭಾ ಚುನಾವಣೆಗೆ ಕೆಲ ದಿನಗಳ ಮುನ್ನ ಇ- ಶೌಚಾಲಯಗಳನ್ನು ಅಧಿಕಾರಿ ವೃಂದವೇ ಉದ್ಘಾಟನೆ ನೆರವೇರಿಸಿದ್ದರು.

ಗುತ್ತಿಗೆದಾರನ ಮೊಬೈಲ್ ಸಂಖ್ಯೆ ನಿರಂತರ ಸ್ವಿಚ್ ಆಫ್: ನ್ಯಾಯಾಲಯ ರಸ್ತೆ, ಛತ್ರದ ಬೀದಿ ಮತ್ತು ಜಿಲ್ಲಾ ಕ್ರೀಡಾಂಗಣದ ಶೌಚಾಲಯ ಘಟಕಗಳು ಆರಂಭದಿಂದಲೂ ಕಾರ್ಯ ನಿರ್ವಹಿಸಲಿಲ್ಲ ಎಂದು ನಾಗರಿಕರು ದೂರಿದ್ದಾರೆ. ಮೈಸೂರು ಮೂಲದ ಗುತ್ತಿಗೆದಾರ ಇ- ಶೌಚಾಲಯಗಳನ್ನು ಸ್ಥಾಪಿಸಿದ್ದು, ಇನ್ನು ಒಂದು ವರ್ಷದ ಕಾಲ ಈ ಘಟಕಗಳನ್ನು ನಿರ್ವಹಿಸಬೇಕಾಗಿದೆ. ಆದರೆ, ಆತ ಕೈಗೆ ಸಿಗುತ್ತಿಲ್ಲ ಎಂಬ ಆರೋಪಗಳಿವೆ.

ಸಮಸ್ಯೆ ಇದ್ದರೆ ನಾಗರಿಕರೇ ನೇರವಾಗಿ ಗುತ್ತಿಗೆದಾರನನ್ನು ಸಂಪರ್ಕಿಸಲು ಮೊಬೈಲ್ ಸಂಖ್ಯೆಯನ್ನು (7624960165) ಘಟಕಗಳ ಮೇಲೆ ನಮೂದಿಸಲಾಗಿದೆ. ಸಂಪರ್ಕಿಸಬೇಕಾದ ಗುತ್ತಿಗೆದಾರನ ಮೊಬೈಲ್ ನಿರಂತರ ಸ್ವಿಚ್ ಆಫ್ ಸಂದೇಶ ಬರುತ್ತಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.

Advertisement

ವಿಕಲಚೇತನರ ಶೌಚಾಲಯವೂ ಬಂದ್‌!: ನಗರದ ನ್ಯಾಯಾಲಯ ಸಂಕೀರ್ಣದ ಬಳಿ ಇರುವ ಮಹಾತ್ಮ ಗಾಂಧಿ ಉದ್ಯಾನವನದ ಮುಂಭಾಗ ನಗರ ಸಭೆ ವತಿಯಿಂದ ವಿಕಲ ಚೇತನರ ಶೌಚಾಲಯ ಕಟ್ಟಡವನ್ನು ನಿರ್ಮಿಸಿ ವರ್ಷ ಕಳೆದಿದೆ. ಆದರೆ, ಈ ಶೌಚಾಲಯವೂ ಬಳಕೆಯಾಗುತ್ತಿಲ್ಲ. ಯಾವುದೇ ಸಂದರ್ಭದಲ್ಲಿ ಬೀಗ ಜಡಿದು ಕೊಂಡಿರುವ ಶೌಚಾಲಯದ ಬಗ್ಗೆ ನಗರಸಭೆಯ ಅಧಿಕಾರಿಗಳ ಗಮನ ಸೆಳೆದರು ಉಪಯೋಗವಾಗಿಲ್ಲ ಎಂದು ನಾಗರಿಕರು ಹರಿಹಾಯ್ದಿದ್ದಾರೆ.

ಜಿಲ್ಲಾಧಿಕಾರಿಗಳೇ ಇತ್ತ ಗಮನಿಸಿ!

ನಗರ ಸಭೆಯಲ್ಲಿ ಚುನಾಯಿತ ಪ್ರತಿನಿಧಿಗಳ ಆಡಳಿತಾವಧಿ ಕಳೆದ ಮಾರ್ಚ್‌ ತಿಂಗಳಲ್ಲೇ ಮುಗಿದಿದೆ. ನಗರ ಸಭೆಯ ಆಡಳಿತಾಧಿಕಾರಿಯಾಗಿ ಜಿಲ್ಲಾಧಿಕಾರಿಗಳು ಅಧಿಕಾರವಹಿಸಿಕೊಂಡಿದ್ದಾರೆ. ನಾಗರಿಕರ ತೆರಿಗೆ ಹಣ ಹೀಗೆ ನೆನೆಗುದಿಗೆ ಬಿದ್ದಿದ್ದು, ಜಿಲ್ಲಾಧಿಕಾರಿಗಳು ತಕ್ಷಣ ಗಮನಹರಿಸಿ ಇ-ಶೌಚಾಲಯಗಳು ಹಾಗೂ ವಿಕಲಚೇತನರ ಶೌಚಾಲಯಗಳನ್ನು ಸಾರ್ವಜನಿಕರ ಬಳಕೆಗೆ ಅವಕಾಶಮಾಡಿಕೊಡಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.
ಬಿ.ವಿ.ಸೂರ್ಯ ಪ್ರಕಾಶ್‌
Advertisement

Udayavani is now on Telegram. Click here to join our channel and stay updated with the latest news.

Next