Advertisement

ತತ್ವಪದಕಾರರ ಸಂಪುಟ ಬಿಡುಗಡೆಗೆ ಇ-ಟೆಂಡರ್‌ ಅಡ್ಡಿ

11:06 PM Nov 04, 2019 | Lakshmi GovindaRaju |

ಬೆಂಗಳೂರು: ರಾಷ್ಟ್ರೀಯ ಸಂತ ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ 18 ಸಂಪುಟಗಳ “ಕರ್ನಾಟಕ ತತ್ವಪದಕಾರರ ಸಮಗ್ರ ಸಾಹಿತ್ಯ ಸಂಪುಟ’ ಹೊರ ತಂದಿದ್ದು ಬಿಡುಗಡೆಗೆ “ಇ-ಟೆಂಡರ್‌’ ಪ್ರಕ್ರಿಯೆ ಅಡ್ಡಿಯಾಗಿದೆ. ಐತಿಹಾಸಿಕ ಸಂಪುಟಗಳ ಬಿಡುಗಡೆಯ ಯೋಜನೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇ ಶಕರು ಹಣಕಾಸು ಅಧಿಕಾರಿಗಳಾಗಿದ್ದಾರೆ. ಆದರೆ ಸಂಶೋಧನಾ ಕೇಂದ್ರದ ಉಸ್ತುವಾರಿ ನೋಡಿಕೊಳ್ಳುವ ಜಂಟಿ ನಿರ್ದೇಶಕರು ಆಗಾಗ ಬದಲಾವಣೆ ಆಗುತ್ತಿರುವುದೇ ಸಂಪುಟ ಬಿಡುಗಡೆ ವಿಳಂಬಕ್ಕೆ ಮೂಲ ಕಾರಣ ಎಂಬ ಆರೋಪ ಕೇಳಿ ಬಂದಿದೆ.

Advertisement

ರಾಷ್ಟ್ರೀಯ ಸಂತ ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಈ ಹಿಂದೆ ಕರ್ನಾಟಕದ ವಿವಿಧ ಕಡೆಗಳಲ್ಲಿದ್ದ ತತ್ವಪದಕಾರರ ಸಾಹಿತ್ಯವನ್ನು ಒಂದೆಡೆ ಸಂಗ್ರಹ ಮಾಡಿ ಸುಮಾರು 50 ಸಂಪುಟಗಳಲ್ಲಿ ತರುವ ಆಲೋಚನೆಯಿತ್ತು. ಐದು ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸುವ ನಿರೀಕ್ಷೆಯಲ್ಲಿತ್ತು. ಈ ದೃಷ್ಟಿಯಿಂದ ವೇಗವಾಗಿ ಕಾರ್ಯನಿರ್ವಹಿಸಿದ ಅಧ್ಯಯನ ಕೇಂದ್ರ 50ರಲ್ಲಿ ಈಗಾಗಲೇ ಸುಮಾರು 32 ಸಂಪುಟಗಳನ್ನು ಹೊರತಂದಿದೆ. ಆದರೆ ಉಳಿದ ಸಂಪುಟಗಳಿಗೆ ಇನ್ನೂ ಬಿಡುಗಡೆ ಭಾಗ್ಯ ಮಾತ್ರ ಇದುವರೆಗೂ ದೊರೆತಿಲ್ಲ.

ಇ-ಟೆಂಡರ್‌ ಪ್ರಕ್ರಿಯೆ ಏಕೆ?: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಗೆ ರಾಷ್ಟ್ರೀಯ ಸಂತ ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಸೇರಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು ಈ ಸಂಶೋಧನಾ ಕೇಂದ್ರದ ಅಧ್ಯಕ್ಷರಾಗಿದ್ದಾರೆ. ಹಾಗೆಯೇ ಇಲಾಖೆಯ ಜಂಟಿ ನಿರ್ದೇಶಕರು ಸದಸ್ಯ ಕಾರ್ಯದರ್ಶಿಗಳಾಗಿದ್ದಾರೆ. ಜತೆಗೆ ಸಂಶೋಧನಾ ಕೇಂದ್ರಕ್ಕೆ ಸಂಬಂಧಿಸಿದ ಯೋಜನೆಗಳ ಹಣಕಾಸು ನಿರ್ವಹಣೆಯನ್ನು ಇವರೇ ನಿರ್ವಹಿಸಲಿದ್ದಾರೆ.

ಈ ಯೋಜನೆಗಾಗಿ ರಾಷ್ಟ್ರೀಯ ಸಂತ ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಸುಮಾರು 2.5 ಕೋಟಿ.ರೂ. ಮೀಸಲಿಟ್ಟಿತ್ತು. ಇದರಲ್ಲಿ ಒಂದಿಷ್ಟು ಅನುದಾನವನ್ನು ಈಗಾಗಲೇ 32 ಸಂಪುಟಗಳನ್ನು ಹೊರತರಲು ಬಳಕೆ ಮಾಡಿಕೊಂಡಿದೆ. ಈಗ ಉಳಿಕೆಯಿರುವ 18 ಸಂಪುಟಗಳ ಮುದ್ರಣಕ್ಕೆ ಸುಮಾರು 25 ಲಕ್ಷ ರೂ. ಅವಶ್ಯಕವಿದೆ. ಅನುದಾನವೇನೂ ಇದೆ. ಆದರೆ ಮದ್ರಣಕ್ಕೆ ದೊಡ್ಡ ಮೊತ್ತದ ಹಣಬೇಕಾಗಿರುವುದರಿಂದ ಈ ಕಾರ್ಯ “ಇ -ಟೆಂಡರ್‌’ ಪ್ರಕ್ರಿಯೆ ಮೂಲಕ ನಡೆಯಬೇಕಾಗಿದೆ.

ಇಲಾಖೆ ಜಂಟಿ ನಿರ್ದೇಶಕರ ಹಣಕಾಸು ಅಧಿಕಾರಿ ಗಳಾಗಿರುವುದರಿಂದ ಇ-ಟೆಂಡರ್‌ ಪ್ರಕ್ರಿಯೆಗೆ ಅವರು ತಮ್ಮ ಆಧಾರ್‌ ಕಾರ್ಡ್‌ ಸೇರಿದಂತೆ ಇನ್ನಿತರ ಪೂರಕ ದಾಖಲೆಗಳನ್ನು ನೀಡಬೇಕಾಗುತ್ತದೆ. ಆದರೆ ಇಲಾಖೆ ಜಂಟಿ ನಿರ್ದೇಶಕರು ಆಗಾಗ ಬದಲಾವಣೆ ಆಗುತ್ತಲೇ ಇರುವುದರಿಂದ ಸಂಪುಟ ಮುದ್ರಣ ಕಾರ್ಯ ನಡೆದಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಇಲಾಖೆ ಹಿರಿಯ ಅಧಿ ಕಾರಿಗಳೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.

Advertisement

ಸಂಪುಟಗಳ ಲೇಖನ ಮಾಲೆ ಸಿದ್ಧವಿದೆ: ನಾಡಿನಲ್ಲಿ ಸಂತ ಶಿಶುನಾಳ ಶರೀಫ‌ರ ರೀತಿಯಲ್ಲಿ ನೂರಾರು ಜನ ತತ್ವಪದಕಾರರಿದ್ದರು. ಅಂಥ ತತ್ವಪದಕಾರರನ್ನು ಶೋಧಿಸಿ ಅವರ ತತ್ವಪದಗಳನ್ನು ಸಂಪುಟಗಳಲ್ಲಿ ಹೊರತರುವುದು ಈ ಯೋಜನೆ ಮುಖ್ಯ ಉದ್ದೇಶವಾಗಿತ್ತು. ಕೃತಿಗಳ ಪ್ರಕಟಣೆ ಯೋಜನ ಸಂಪಾದಕತ್ವವನ್ನು ಎಸ್‌.ನಟರಾಜ ಬೂದಾಳು ಅವರಿಗೆ ವಹಿಸಲಾಗಿತ್ತು. ಲೇಖಕ ರಹಮತ್‌ ತರೀಕೆರೆ, ಮೀನಾಕ್ಷಿ ಬಾಳಿ ಸೇರಿ ಹಲವು ಲೇಖಕರು ಈ ಯೋಜನೆಗೆ ಕೈ ಜೋಡಿಸಿದ್ದರು.

18 ಸಂಪುಟಗಳ ಸಂಬಂಧಿಸಿದ ಲೇಖನ ಮಾಲೆ ಸಿದ್ಧವಾಗಿದೆ. ಆದರೆ ಮುದ್ರಣವಿಲ್ಲದೆ ಅವು ಸಿದ್ಧ ರೂಪದಲ್ಲೇ ಉಳಿದಿವೆ ಎಂದು ಈ ಹಿಂದೆ ರಾಷ್ಟ್ರೀಯ ಸಂತ ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಬೆಂಗಳೂರು ಸಮನ್ವಯಾಧಿಕಾರಿಗಿದ್ದ ಕಾ.ತ.ಚಿಕ್ಕಣ “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ. ವಿಶ್ವವಿದ್ಯಾಲಯ ಮಾಡಬೇಕಾಗಿದ್ದ ಕೆಲಸವನ್ನು ಸಂಶೋಧನಾ ಕೇಂದ್ರ ಮಾಡಿದೆ. ಈ ಕೆಲಸಕ್ಕೆ ಮನ್ನಣೆ ಸಿಗಬೇಕಾದರೆ ಉಳಿದ ಸಂಪುಟಗಳು ಹೊರಬರಬೇಕು ಎಂದು ತಿಳಿಸಿದ್ದಾರೆ.

ಕರ್ನಾಟಕ ತತ್ವಪದಕಾರರ ಸಮಗ್ರ ಸಾಹಿತ್ಯ ಸಂಪುಟದ ಬಗ್ಗೆ ಸರಿಯಾದ ಮಾಹಿತಿಯಿಲ್ಲ. ಜಂಟಿ ನಿರ್ದೇಶಕರಿಂದಾಗಿಯೇ ಇ-ಟೆಂಡರ್‌ ಪ್ರಕ್ರಿಯೆ ವಿಳಂಬವಾಗಿದ್ದರೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ.
-ಎಸ್‌.ರಂಗಪ್ಪ, ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

* ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next