ಭುವನೇಶ್ವರ: ಶಿಕ್ಷಕರು ಶಿಸ್ತಿನ ಸಿಪಾಯಿಯಂತೆ ಪಾಠ ಮಾಡಿದರೆ, ತುಟಿಕ್ ಪಿಟಿಕ್ ಎನ್ನದೆ ವಿದ್ಯಾರ್ಥಿಗಳು ಪಾಠವನ್ನು ಕೇಳುತ್ತಾರೆ. ಕೆಲವೊಮ್ಮೆ ಮಾತು ಕೇಳಿದರೆ ಶಿಕ್ಷೆಯನ್ನು ಕೊಡುವ ಶಿಕ್ಷಕರ ಮುಂದೆ ತಲೆ ತಗ್ಗಿಸಿ ಕೂರುವ ಪ್ರಸಂಗ ಬರುತ್ತದೆ . ನಮ್ಮ ವಿದ್ಯಾರ್ಥಿ ಜೀವನದಲ್ಲಿ ಅಚ್ಚುಮೆಚ್ಚಿನ ಶಿಕ್ಷಕರು ನೆನಪಲಿ ಉಳಿಯುವ ಜೊತೆ ನಮಗೆ ಅತಿ ಹೆಚ್ಚು ಶಿಕ್ಷೆ ಕೊಟ್ಟ ಶಿಕ್ಷಕರು ನೆನಪಿರುತ್ತಾರೆ.
ಇಲ್ಲೊಬ್ಬ ಶಿಕ್ಷಕರು ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಪಾಠ ಮಾಡುತ್ತಾರೆ. ಡ್ಯಾನ್ಸ್ ಮಾಡುತ್ತಾ ಪಾಠ ಮಾಡುತ್ತಾರೆ. ಪ್ರತಿ ಪಾಠವನ್ನು ಪದ್ಯ ರೂಪದಲ್ಲಿ ಹಾಡುತ್ತಾರೆ. ಹೌದು ಒಡಿಸ್ಸಾದ ಕೋರಪುತ್ ಜಿಲ್ಲೆಯ ಲ್ಯಾಮ್ ಪುತ್ ಹಿರಿಯ ಪ್ರಾಥಮಿಕ ಶಾಲೆಯ ಉಸ್ತುವಾರಿ ಮುಖ್ಯೋಪಾಧ್ಯಾಯರಾದ ಪ್ರಫುಲಾ ಕುಮಾರ್ ಪಾಥಿ ಎನ್ನುವ ಶಿಕ್ಷಕ ಮಕ್ಕಳೊಂದಿಗೆ ಈ ರೀತಿಯಾಗಿ ಬೆರೆತು ಪಾಠ ಮಾಡುತ್ತಾರೆ. ಪ್ರತಿದಿನ ಪಾಠ ಮಾಡಲು ಬರುವ ಶಿಕ್ಷಕ ಪಾಥಿ ಪುಸ್ತಕದಲ್ಲಿರುವ ಪಠ್ಯವನ್ನು ಹಾಡಿನ ರೂಪದಲ್ಲಿ ಸರಳವಾಗಿ ಮಕ್ಕಳಿಗೆ ಹೇಳುವುದರ ಜೊತೆ, ಸೊಂಟ ಬಳುಕಿಸಿ, ನೃತ್ಯ ಮಾಡಿ, ನಟನೆ ಮಾಡಿ ಮಕ್ಕಳನ್ನು ನಗಿಸಿ, ತಾವು ನಕ್ಕು ಪಾಠ ಮಾಡುತ್ತಾರೆ.ಇವರು ಪದ್ಯ ರೂಪದಲ್ಲಿ ಗದ್ಯವನ್ನು ಹೇಳುವ ಮಾರ್ಗ ಮಕ್ಕಳಿಗೆ ನೆನಪಿಟ್ಟು ಕೊಳ್ಳುವುದು ಸುಲಭವಾಗುತ್ತದೆ ಎನ್ನುತ್ತಾರೆ ಪ್ರಫುಲ್.
56 ವರ್ಷದ ಕುಮಾರ್ ಪಾಥಿ ಈ ರೀತಿ ವಿಭಿನ್ನವಾಗಿ ಪಾಠವನ್ನು ಹೇಳಲು ಆರಂಭಿಸಿದ್ದು 2008 ರಲ್ಲಿ. ಆಗ ಕುಮಾರ್ ಸರ್ವ ಶಿಕ್ಷಣ ಅಭಿಯಾನದ ಸಂಪನ್ಮೂಲ ವ್ಯಕ್ತಿ ಆಗಿದ್ದರಂತೆ. “ನಾನು ಮಕ್ಕಳಿಗೆ ಹಾಡು ಮತ್ತು ನೃತ್ಯದ ಮೂಲಕ ಸ್ವಲ್ಪ ಹಾಸ್ಯವನ್ನು ಬೆರೆಸಿ ಪಾಠವನ್ನು ಹೇಳುತ್ತೇನೆ. ಇದರಿಂದಾಗಿ ಮಕ್ಕಳು ಹೆಚ್ಚು ಆತ್ಮೀಯರಾಗಿ ಹಾಗೂ ಆಸಕ್ತರಾಗಿ ಪಾಠವನ್ನು ಕೇಳುತ್ತಾರೆ, ನಾನು ಪಾಠಕ್ಕಾಗಿ ತಯಾರಿಯನ್ನು ನಡೆಸಿಕೊಂಡು ಬರುತ್ತೇನೆ,ಮಾನಸಿಕವಾಗಿ ಚುರುಕಾಗಿ ಇರುತ್ತೇನೆ,ಮಧ್ಯಾಹ್ನದ ಊಟದ ನಂತರ ಕೆಲವು ಮಕ್ಕಳು ನಿದ್ದೆಯಲ್ಲಿರುತ್ತಾರೆ. ಆಗ ನಾನು ಮಾಡಿದ ಹಾಗೆ ವಿದ್ಯಾರ್ಥಿಗಳು ಡ್ಯಾನ್ಸ್ ಮಾಡಿದ್ರೆ ನಿದ್ದೆಯಿಂದ ತಪ್ಪಿಸಬಹುದು” ಎನ್ನುತ್ತಾರೆ ಪ್ರಫುಲಾ ಕುಮಾರ್.
ಪ್ರಫುಲಾ ಕುಮಾರ್ ಪಾಥಿ ತಮ್ಮ ಪಠ್ಯ ಶೈಲಿಯನ್ನು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ಈಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎಲ್ಲೆಡಯೂ ಸರಳ ಮತ್ತು ಆತ್ಮೀಯರಾಗಿ ಮಕ್ಕಳೊಂದಿಗೆ ಬೆರೆಯುವ ಪ್ರಫುಲಾ ಕುಮಾರ್ ಪಾಥಿಯ ಪಠ್ಯ ಶೈಲಿಯ ಕುರಿತು ಜನ ಮೆಚ್ಚುಗೆಯನ್ನು ಕೊಡುತ್ತಿದ್ದಾರೆ. ಅಂದ ಹಾಗೆ ಪಾಥಿಯನ್ನು ಒಡಿಸ್ಸಾದಲ್ಲಿ “ಡ್ಯಾನ್ಸಿಂಗ್ ಟೀಚರ್ ಆಫ್ ಕೋರಪತ್ ” ಎಂದು ಗುರುತಿಸುತ್ತಾರೆ.