ಶಿಡ್ಲಘಟ್ಟ: ನಗರದ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಇ-ಪೇಮೆಂಟ್ ಅವ್ಯವಸ್ಥೆಯಿಂದ ಆಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಆಗ್ರಹಿಸಿ ರೇಷ್ಮೆ ನೂಲು ಬಿಚ್ಚಾಣಿಕೆದಾರರು ಗುರುವಾರ ಮಾರುಕಟ್ಟೆಯಲ್ಲಿ 2 ಗಂಟೆಗಳ ಕಾಲ ಇ-ಹರಾಜು ಪ್ರಕ್ರಿಯೆ ಬಹಿಷ್ಕರಿಸಿ ಉಪನಿರ್ದೇಶಕರನ್ನು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ತರಾಟೆ: ರಾಜ್ಯದಲ್ಲಿ ಅತೀ ದೊಡ್ಡ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಇ-ಪೇಮೆಂಟ್ ವ್ಯವಸ್ಥೆಯನ್ನು ಜಾರಿಗೊಳಿಸುವ ಮೊದಲು ರೇಷ್ಮೆ ನೂಲು ಬಿಚ್ಚಾಣಿಕೆದಾರರು ಮತ್ತು ರೇಷ್ಮೆ ಬೆಳೆಗಾರರೊಂದಿಗೆ ಸೌಜನ್ಯಕ್ಕಾದರೂ ಸಭೆ ನಡೆಸದೆ ಮಾರುಕಟ್ಟೆಯ ಅಧಿಕಾರಿ ಗಳು ಸರ್ವಾಧಿಕಾರಿ ಧೋರಣೆ ಅನುಸರಿಸಿದ ಫಲದಿಂದಾಗಿ ಪ್ರತಿನಿತ್ಯ ಸಂಕಷ್ಟ ಎದುರಿಸುವಂತಾಗಿದೆ ಎಂದು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡರು.
ಮಾರುಕಟ್ಟೆ ಹೊರ ಭಾಗದಲ್ಲಿ ಮಾರಾಟ: ಇ-ಪೇಮೆಂಟ್ ವ್ಯವಸ್ಥೆ ಜಾರಿಗೊಳಿಸಲು ಅಭ್ಯಂತರವಿಲ್ಲ. ಆದರೆ ಈ ವ್ಯವಸ್ಥೆಯಲ್ಲಿರುವ ಲೋಪ ದೋಷಗಳನ್ನು ಸರಿಪಡಿಸಲು ಮಾರುಕಟ್ಟೆ ಅಧಿಕಾರಿಗಳು ವಿಫಲರಾಗಿದ್ದಾರೆ. ಜೊತೆಗೆ ಈ ವ್ಯವಸ್ಥೆ ಜಾರಿಯಾದ ಬಳಿಕ ಮಾರುಕಟ್ಟೆಯಲ್ಲಿ ರೇಷ್ಮೆ ಗೂಡು ಬರುವುದೇ ಕಡಿಮೆಯಾಗಿದ್ದು, ರೇಷ್ಮೆ ಬೆಳೆಗಾರರು ಮಾರುಕಟ್ಟೆಯ ಹೊರಭಾಗದಲ್ಲಿ ರೇಷ್ಮೆ ಗೂಡು ಮಾರಾಟ ಮಾಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಮಾರುಕಟ್ಟೆಗೆ ಬರುವ ನೂಲು ಬಿಚ್ಚಾಣಿಕೆದಾರರು ಸಂಕಷ್ಟ ಎದುರಿಸುವಂತಾಗಿದೆ ಎಂದು ಕಿಡಿಕಾರಿದರು.
ಬ್ಯಾಂಕ್ ಸ್ಥಾಪಿಸಿ: ರಾಜ್ಯದಲ್ಲಿ ಅನೇಕ ಸರ್ಕಾರಿ ರೇಷ್ಮೆ ಮಾರುಕಟ್ಟೆಗಳಲ್ಲಿ ಇ-ಪೇಮೆಂಟ್ ವ್ಯವಸ್ಥೆ ಜಾರಿಗೊಳಿಸಿಲ್ಲ. ಆದರೆ ಶಿಡ್ಲಘಟ್ಟದಲ್ಲಿ ಮಾತ್ರ ಯಾವುದೇ ರೀತಿಯ ಪೂರ್ವ ಸಿದ್ಧತೆಯಿಲ್ಲದೆ, ಲೋಪ ದೋಷ ಸರಿಪಡಿಸದೆ ಅಧಿಕಾರಿಗಳು ಮುಂದಾಗಿ ದ್ದಾರೆ. ಇದರಿಂದ ರೇಷ್ಮೆ ನೂಲು ಬಿಚ್ಚಾಣಿಕೆಸದಾರರು ಆರ್ಥಿಕವಾಗಿ ದಿವಾಳಿಯಾಗಲು ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿ ಮಾರುಕಟ್ಟೆಯಲ್ಲಿ ಬ್ಯಾಂಕ್ ಸ್ಥಾಪಿಸಿ ಇಂಟರ್‌ನೆಟ್ ಬ್ಯಾಂಕಿಂಗ್ ವ್ಯವಸ್ಥೆ ಭದ್ರಗೊಳಿಸಿ ನಂತರ ಇ-ಪೇಮೆಂಟ್ ವ್ಯವಸ್ಥೆಯನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.
ಇದನ್ನೂ ಓದಿ :ಅತಂತ್ರ ಗ್ರಾಪಂಗಳ ಪುನಾರಚಿಸಿ ಚುನಾವಣೆ ನಡೆಸಿ
ಈ ಸಂದರ್ಭದಲ್ಲಿ ರಾಜ್ಯ ರೇಷ್ಮೆ ನೂಲು ಬಿಚ್ಚಾಣಿಕೆದಾರರ ಸಂಘದ ಕಾರ್ಯಾಧ್ಯಕ್ಷ ಮೊಹಮ್ಮದ್ ಅನ್ವರ್, ಮೇಲೂರು ಅಜೀಜ್, ಸಿಲ್ಕ್ಫೆಡರೇಷನ್ ಮಾಜಿ ಉಪಾಧ್ಯಕ್ಷ ಜಿ. ರೆಹಮಾನ್, ಶಿಡ್ಲಘಟ್ಟ ತಾಲೂಕು ರೇಷ್ಮೆ ನೂಲು ಬಿಚ್ಚಾಣಿಕೆದಾರರ ಅಧ್ಯಕ್ಷ ಅನ್ಸರ್‌ಖಾನ್, ಉಪಾಧ್ಯಕ್ಷ ಆನಂದ್, ಸಾದಿಕ್, ಸಿ.ಎಂ.ಬಾಬು, ಬಾಂಬೆ ನವಾಜ್, ನವೀದ್‌ಪಾಷ,ಮುನಿಕೃಷ್ಣ, ಮುನಿರಾಜು (ದಾಮೋದರ), ಮುಜ್ಜು ಮತ್ತಿತರರು ಉಪಸ್ಥಿತರಿದ್ದರು. ನಗರ ಪೊಲೀಸ್ ಠಾಣೆಯ ಪಿಎಸ್‌ಐ ಸತೀಶ್ ಮತ್ತು ಸಿಬ್ಬಂದಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಂಡಿದ್ದರು.