Advertisement
ಮಾಜಿ ಸಿಎಂ ಪನ್ನೀರ್‌ಸೆಲ್ವಂ ಅವರು ಶಶಿಕಲಾ ವಿರುದ್ಧ ಬಂಡಾಯದ ಕಹಳೆ ಊದಿದಂದಿನಿಂದ ಆರಂಭವಾಗಿದ್ದ 10 ದಿನಗಳ ರಾಜಕೀಯ ಅನಿಶ್ಚಿತತೆ ಹಾಗೂ ಹೈಡ್ರಾಮಾಗಳಿಗೆ ಈ ಮೂಲಕ ತಾತ್ಕಾಲಿಕ ತೆರೆಬಿದ್ದಿದೆ.
Related Articles
ಸಂಜೆ 4.30ಕ್ಕೆ ಸಿಎಂ ಆಗಿ ಪ್ರಮಾಣ ಸ್ವೀಕರಿಸಿದ ಪಳನಿಸ್ವಾಮಿ ಅವರು ಗೃಹ, ಹಣಕಾಸು ಮುಂತಾದ ಪ್ರಮುಖ ಖಾತೆಗಳನ್ನು ತಾವೇ ಇಟ್ಟುಕೊಂಡಿದ್ದಾರೆ. ಹಿಂದೆ ಈ ಖಾತೆಗಳು ಪನ್ನೀರ್‌ಸೆಲ್ವಂ ಕೈಯ್ಯಲ್ಲಿತ್ತು. ಇಷ್ಟೇ ಅಲ್ಲದೆ, ಲೋಕೋಪಯೋಗಿ, ಹೆದ್ದಾರಿ ಮತ್ತು ಸಣ್ಣ ಬಂದರುಗಳ ಖಾತೆಯನ್ನೂ ಸ್ವಾಮಿಯವರೇ ನಿರ್ವಹಿಸಲಿದ್ದಾರೆ. ಸೆಂಗೊಟ್ಟಾಯನ್ ಹೊರತುಪಡಿಸಿದಂತೆ ಉಳಿದ ಎಲ್ಲ ಸಚಿವರೂ ಪನ್ನೀರ್‌ಸೆಲ್ವಂ ಸಂಪುಟದಲ್ಲಿ ಹೊತ್ತಿದ್ದ ಖಾತೆಗಳನ್ನೇ ನಿರ್ವಹಿಸಲಿದ್ದಾರೆ. ಸದ್ಯಕ್ಕೆ ಸೆಲ್ವಂ ಬಣಕ್ಕೆ ಸೇರ್ಪಡೆಗೊಂಡಿರುವ ಕೆ. ಪಾಂಡ್ಯರಾಜನ್ ಅವರು ಹಿಂದಿನ ಸಂಪುಟದಲ್ಲಿ ಶಾಲಾ ಶಿಕ್ಷಣ ಸಚಿವರಾಗಿದ್ದರು. ಆ ಹುದ್ದೆಯನ್ನು ಇದೀಗ ಸೆಂಗೊಟ್ಟಾಯನ್‌ಗೆ ವಹಿಸಲಾಗಿದೆ. ಒಟ್ಟಿನಲ್ಲಿ ತಮ್ಮ 31 ಮಂದಿ ಸಚಿವರ ಸಂಪುಟದಲ್ಲಿ ಪಳನಿಸ್ವಾಮಿ ಅವರು ಬಹುತೇಕ ಹಳಬರನ್ನೇ ಉಳಿಸಿಕೊಂಡಿದ್ದಾರೆ. ಪ್ರಮಾಣಸ್ವೀಕಾರದ ಬಳಿಕ ಸಿಎಂ ಪಳನಿಸ್ವಾಮಿ ಅವರು ಜಯಲಲಿತಾರ ಸಮಾಧಿಸ್ಥಳಕ್ಕೆ ತೆರಳಿ, ಪುಷ್ಪಾರ್ಚನೆ ಮಾಡಿದ್ದಾರೆ.
Advertisement
ಉತ್ತಮ ಆಡಳಿತವೇ ಗುರಿಹೊಸ ಸಚಿವ ಸಂಪುಟದ ಪ್ರಮಾಣವಚನದ ಬಳಿಕ ಮಾತನಾಡಿದ ಸಚಿವ ರಾಜೇಂದ್ರ ಬಾಲಾಜಿ, “”ಇನ್ನು ನಾವು ಪಳನಿಸ್ವಾಮಿ ನೇತೃತ್ವದಲ್ಲಿ ಕಾರ್ಯನಿರ್ವಹಿಸಲಿದ್ದೇವೆ. ತಮಿಳುನಾಡಿನ ಜನತೆಗೆ ಒಳ್ಳೆಯ ಆಡಳಿತ ನೀಡುವುದೇ ನಮ್ಮ ಗುರಿ,” ಎಂದರು. ಇದೇ ವೇಳೆ, ಶಶಿಕಲಾ ಅವರ ಕುಟುಂಬ ರಾಜಕಾರಣಕ್ಕೆ ಅವಕಾಶ ನೀಡುವುದಿಲ್ಲ ಎಂಬ ಮಾಜಿ ಸಿಎಂ ಪನ್ನೀರ್‌ಸೆಲ್ವಂ ಹೇಳಿಕೆಗೆ ಪ್ರತಿಕ್ರಿಯಿಸಿದ ಬಾಲಾಜಿ, “ಯಾವ ಕುಟುಂಬವೂ ನಮ್ಮನ್ನು ಆಳುತ್ತಿಲ್ಲ. ನಾವು ಅಂದರೆ ಎಲ್ಲ 124 ಶಾಸಕರೂ ಒಗ್ಗಟ್ಟಾಗಿದ್ದೇವೆ. ಒಂದೇ ಕುಟುಂಬದಂತೆ ಕಾರ್ಯನಿರ್ವಹಿಸುತ್ತಿದ್ದೇವೆ,’ ಎಂದರು. ಆಯೋಗಕ್ಕೆ ದೂರು:
ಇನ್ನೊಂದೆಡೆ, ಪನ್ನೀರ್‌ಸೆಲ್ವಂ ಬಣದ ಸದಸ್ಯ. ಪಕ್ಷದ ನಾಯಕ ಡಾ. ವಿ ಮೈತ್ರೇಯನ್ ಅವರು ಗುರುವಾರ ದೆಹಲಿಯಲ್ಲಿ ಚುನಾವಣಾ ಆಯೋಗವನ್ನು ಭೇಟಿ ಮಾಡಿ, ಮಧ್ಯಂತರ ಪ್ರಧಾನ ಕಾರ್ಯದರ್ಶಿಯಾಗಿ ಶಶಿಕಲಾ ನೇಮಕದ ಬಗ್ಗೆ ಪ್ರಶ್ನಿಸಿದ್ದಾರೆ. ಪಕ್ಷದ ನಿಯಮದ ಪ್ರಕಾರ ಪ್ರಧಾನ ಕಾರ್ಯದರ್ಶಿಯನ್ನು ಪ್ರಾಥಮಿಕ ಸದಸ್ಯರು ಆಯ್ಕೆ ಮಾಡಬೇಕು. ಆದರೆ, ಶಶಿಕಲಾರನ್ನು ಎಐಎಡಿಎಂಕೆ ಸಾಮಾನ್ಯ ಮಂಡಳಿಯಲ್ಲಿ ಆಯ್ಕೆ ಮಾಡಲಾಯಿತು. ಹೀಗಾಗಿ, ಅವರ ನೇಮಕ ನಿಯಮಬಾಹಿರ ಎಂದು ಸೆಲ್ವಂ ಬಣ ಆರೋಪಿಸಿದೆ. ಸಮಾಧಿ ರಾಜಕೀಯ
ಎಐಎಡಿಎಂಕೆಯಲ್ಲಿ ಬಿಕ್ಕಟ್ಟು ಆರಂಭವಾದಾಗಿನಿಂದ ಪಕ್ಷದ ನಾಯಕರ “ಸಮಾಧಿ ರಾಜಕೀಯ’ಕ್ಕೆ ತಮಿಳುನಾಡು ಸಾಕ್ಷಿಯಾಗಿತ್ತು. ಪನ್ನೀರ್‌ಸೆಲ್ವಂ ಅವರು ಮೊದಲು ಶಶಿಕಲಾ ವಿರುದ್ಧ ಬಂಡೇಳಲು ಜಯಾ ಸಮಾಧಿಯನ್ನೇ ವೇದಿಕೆಯಾಗಿ ಬಳಸಿಕೊಂಡರು. ಅದಾದ ಬಳಿಕ ಒಬ್ಬರಾದ ನಂತರ ಒಬ್ಬರು ಸಮಾಧಿ ಬಳಿ ಹೋಗಿ ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು. ಫೆ.7 – ಸಿಎಂ ಹುದ್ದೆಗೆ ರಾಜಿನಾಮೆ ಕೊಟ್ಟ ಎರಡೇ ದಿನದಲ್ಲಿ ರಾತ್ರೋರಾತ್ರಿ ಜಯಾ ಸಮಾಧಿ ಬಳಿ ತೆರಳಿ ಧ್ಯಾನ ಮಾಡಿದ ಪನ್ನೀರ್‌ಸೆಲ್ವಂ. ಧ್ಯಾನದ ಬಳಿಕ ಬಂಡಾಯದ ರಣಕಹಳೆ ಮೊಳಗಿಸಿದ್ದ ಸೆಲ್ವಂ.
ಫೆ.14- ಒಂದೇ ವಾರದಲ್ಲಿ ಮತ್ತೆ ಜಯಾ ಸಮಾಧಿ ಸ್ಥಳಕ್ಕೆ ಬಂದ ಪನ್ನೀರ್‌ಸೆಲ್ವಂ. ಜಯಲಲಿತಾ ಸೋದರಸೊಸೆ ದೀಪಾ ಜಯಕುಮಾರ್ ಸಾಥ್. ಇಲ್ಲೇ ರಾಜಕೀಯ ಪ್ರವೇಶದ ಘೋಷಣೆ ಮಾಡಿದ ದೀಪಾ.
ಫೆ.15- ಸುಪ್ರೀಂ ತೀರ್ಪು ಪ್ರಕಟವಾದ ಮಾರನೇ ದಿನ ಬೆಂಗಳೂರಿನ ಜೈಲಿಗೆ ತೆರಳುವ ಮುನ್ನ ಜಯಾ ಸಮಾಧಿಗೆ ಭೇಟಿ ಕೊಟ್ಟ ಶಶಿಕಲಾ.
ಫೆ.16- ಸಿಎಂ ಆಗಿ ಪ್ರಮಾಣ ಸ್ವೀಕರಿಸಿದ ಬಳಿಕ ಜಯಲಲಿತಾ ಸಮಾಧಿ ಸ್ಥಳಕ್ಕೆ ಬಂದು, ಪುಷ್ಪಾರ್ಚನೆ ಮಾಡಿದ ಶಶಿಕಲಾ ಬಣದ ಪಳನಿಸ್ವಾಮಿ ಮತ್ತು ಹೊಸ ಸಂಪುಟದ ಸಚಿವರು. ನಿಷ್ಠೆ ಬದಲಿಸಿದ ಪಾಂಡ್ಯರಾಜನ್
ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಹೊಸ ನಿದರ್ಶನವೆಂಬಂತೆ, ಪನ್ನೀರ್‌ಸೆಲ್ವಂ ಬಣದಲ್ಲಿದ್ದ ಪಾಂಡ್ಯರಾಜನ್ ಮೆಲ್ಲಗೆ ನಿಷ್ಠೆ ಬದಲಿಸಿದ್ದಾರೆ. ಮೊನ್ನೆ ಮೊನ್ನೆಯವರೆಗೂ ಶಶಿಕಲಾ ಪಾಳಯದಲ್ಲಿ ಗುರುತಿಸಿಕೊಂಡಿದ್ದ ಪಾಂಡ್ಯರಾಜನ್, 3-4 ದಿನಗಳ ಹಿಂದೆ ಓಡಿ ಬಂದು, ಸೆಲ್ವಂ ಬಣ ಸೇರಿಕೊಂಡಿದ್ದರು. ಫೋಟೋಗಳಲ್ಲಿ ಸೆಲ್ವಂ ಜೊತೆ ಪೋಸ್ ನೀಡಿದ್ದ ಪಾಂಡ್ಯರಾಜನ್, ಶಶಿಕಲಾ ವಿರುದ್ಧ ಹರಿಹಾಯ್ದಿದ್ದರು. ನಂತರದ ಬೆಳವಣಿಗೆಗಳ ವೇಳೆ ಸೆಲ್ವಂರ ಬಲಗೈ ಬಂಟನಂತೆಯೂ ವರ್ತಿಸಿದ್ದರು. ಆದರೆ, ಪಳನಿಸ್ವಾಮಿ ಅವರು ಸಿಎಂ ಆಗಿ ಅಧಿಕಾರ ಸ್ವೀಕರಿಸುತ್ತಲೇ ಅವರು ಮತ್ತೆ ಉಲ್ಟಾ ಹೊಡೆದಿದ್ದಾರೆ. ಇದೀಗ “ಪಕ್ಷವು ಹೋಳಾಗದಂತೆ ನಾನು ನೋಡಿಕೊಳ್ಳುತ್ತೇನೆ. ಪಕ್ಷ ಯಾವತ್ತೂ ಒಗ್ಗಟ್ಟಾಗಿರಬೇಕು ಎನ್ನುವುದು ಅಮ್ಮನ ಆಸೆಯಾಗಿತ್ತು,’ ಎಂದು ಹೇಳುವ ಮೂಲಕ ಪನ್ನೀರ್‌ಗೆ ಕೈಕೊಟ್ಟು, ಪಳನಿಯ ಕೈಹಿಡಿಯುವ ಸೂಚನೆಯನ್ನು ಪಾಂಡ್ಯರಾಜನ್ ನೀಡಿದ್ದಾರೆ. ಯಾರು ಜಯಲಲಿತಾ ಅವರ ಸಾವಿಗೆ ಕಾರಣರೋ, ಅವರ ಕೈಗೆ ಈಗ ಅಧಿಕಾರ ಸಿಕ್ಕಿದೆ. ಆದರೆ, ನಾನು ಸುಮ್ಮನಿರುವುದಿಲ್ಲ. ಶಶಿಕಲಾ ವಿರುದ್ಧದ ನನ್ನ ಯುದ್ಧ ಮುಂದುವರಿಯುತ್ತದೆ.
– ಒ. ಪನ್ನೀರ್‌ಸೆಲ್ವಂ, ತಮಿಳುನಾಡು ಮಾಜಿ ಸಿಎಂ