Advertisement

ಇ-ಮೇಲ್‌ ಕೋಟೆ! 

12:30 AM Feb 12, 2019 | |

ಪ್ರತಿಯೊಂದು ಕಂಪನಿಯೂ ಜಾಹೀರಾತಿಗೆಂದು ವರ್ಷಕ್ಕೆ ಕೋಟಿಗಟ್ಟಲೆ ಮೊತ್ತವನ್ನು ಖರ್ಚು ಮಾಡುತ್ತದೆ. ಟಿ.ವಿ., ರೇಡಿಯೋ, ಮತ್ತಿತರ ವಿಧಾನಗಳ ಮೂಲಕ ಜಾಹೀರಾತುಗಳನ್ನು ನೀಡುತ್ತವೆ. ಪಾಶ್ಚಾತ್ಯ ದೇಶಗಳಲ್ಲಿ ಬಹಳ ಹಿಂದೆ ಕಂಪನಿಗಳು ಪತ್ರಗಳ ಮೂಲಕ ಪ್ರತಿ ಮನೆ ಮನೆಗೂ ತಮ್ಮ ಉತ್ಪನ್ನಗಳ ಕುರಿತ ಜಾಹೀರಾತನ್ನು ರವಾನಿಸುತ್ತಿದ್ದವು. ಆಪ್ತತೆಯ ಕಾರಣದಿಂದಾಗಿ ಈ ಉಪಾಯ ಹೆಚ್ಚು ಜನಪ್ರಿಯವಾಗಿತ್ತು. ಅದರ ಆಧುನಿಕ ರೂಪವೇ ಇಮೇಲ್‌ ಮಾರ್ಕೆಟಿಂಗ್‌. ಅತಿ ಕಡಿಮೆ ಖರ್ಚಿನಲ್ಲಿ, ವೇಗವಾಗಿ ಅತಿ ಹೆಚ್ಚು ಜನರನ್ನು ಪರಿಣಾಮಕಾರಿಯಾಗಿ ತಲುಪಬಲ್ಲದು ಎಂಬುದೇ ಇದರ ಹೆಗ್ಗಳಿಕೆ. ಅಲ್ಲದೆ ವಸ್ತು, ವಿಷಯ, ಅನುಗುಣವಾಗಿ ನಿರ್ದಿಷ್ಟ ವಯೋಮಾನದ ಮಂದಿಗೆ ಸಂದೇಶ ರವಾನಿಸುವುದು ಇಲ್ಲಿ ಸಾಧ್ಯ. ಅಲ್ಲದೆ ಹಾಗೆ ಸಂದೇಶ ಮುಟ್ಟಿದವರ ಪ್ರತಿಕ್ರಿಯೆಯನ್ನು ಕೂಡ ಟ್ರ್ಯಾಕ್‌ ಮಾಡಬಹುದು. ಇಂದು ಸಹಸ್ರಾರು ಕಂಪನಿಗಳು ತಮ್ಮ ಸೇವೆ ಹಾಗೂ ಉತ್ಪನ್ನಗಳ ಮಾರ್ಕೆಟಿಂಗಿಗೆ ಇ-ಮೇಲ್‌ ಮಾರ್ಕೆಟಿಂಗ್‌ ವಿಭಾಗವನ್ನು ಅವಲಂಬಿಸಿವೆ. ಇದರಿಂದಾಗಿ ಈ ಕ್ಷೇತ್ರ ವಿಪುಲ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ.

Advertisement

ಕಡಿಮೆ ಖರ್ಚಿನ ಜಾಹೀರಾತು
ಇಂದಿನ ಡಿಜಿಟಲ್‌ ಯುಗದಲ್ಲಿ ಕಂಪನಿಗಳು ತಮ್ಮ ಅಸ್ತಿತ್ವವನ್ನು ಕಾಪಾಡಿಕೊಳ್ಳಬೇಕೆಂದರೆ ಆನ್‌ಲೈನ್‌ನಲ್ಲಿ ಕಾಣಿಸಿಕೊಳ್ಳಲೇಬೇಕು ಎಂಬಂತಾಗಿದೆ. ಹೀಗಾಗಿ ಬಹುತೇಕ ಕಂಪೆನಿಗಳು ಆನ್‌ಲೈನ್‌ನಲ್ಲಿ ಕ್ರಿಯಾಶೀಲವಾಗಿದೆ. ಪ್ರತಿಯೊಂದು ಕಂಪೆನಿಗೂ ವೆಬ್‌ಸೈಟ್‌ ಇದೆ. ತಮ್ಮ ಸೇವೆ ಹಾಗೂ ಉತ್ಪನ್ನಗಳನ್ನು ಕುರಿತಂತೆ ಜನರಿಗೆ ಮಾಹಿತಿ ನೀಡಲು, ಹೊಸ ಉತ್ಪನ್ನಗಳನ್ನು ಪರಿಚಯಿಸಲು ಇ-ಮೇಲ್‌ ಬಹಳ ಪರಿಣಾಮಕಾರಿ ಸಾಧನ. ಇಮೇಲ್‌ ಮಾರ್ಕೆಟಿಂಗ್‌ ನಿರ್ವಹಿಸಲೆಂದೇ ಬಹಳಷ್ಟು ಕಂಪನಿಗಳು ನಮ್ಮ ನಡುವೆ ಇದೆ. ಜಾಹೀರಾತು ನೀಡಬೇಕೆಂದಿಚ್ಛಿಸುವ ಸಂಸ್ಥೆ ಇಮೇಲ್‌ ಮಾರ್ಕೆಟಿಂಗ್‌ ಸಂಸ್ಥೆಗಳನ್ನು ನೇಮಿಸಿಕೊಳ್ಳುತ್ತವೆ. 

ಇಮೇಲ್‌ ಬರವಣಿಗೆ
ಇಮೇಲ್‌ಗ‌ಳನ್ನು ರೂಪಿಸುವಾಗ ಜಾಣ್ಮೆ ಅಗತ್ಯ. ಆಕರ್ಷಕವಾಗಿದ್ದು, ಪೂರ್ತಿಯಾಗಿ ಓದಲು ಪ್ರೇರೇಪಿಸುವಂತೆ ಅದನ್ನು ರೂಪಿಸಬೇಕು. ಸಾಮಾನ್ಯವಾಗಿ ಮಾರ್ಕೆಟಿಂಗ್‌ ಇಮೇಲ್‌ಗ‌ಳನ್ನು ಹೆಚ್ಚಿನವರು ಪೂರ್ತಿ ಓದುವುದಿಲ್ಲ. ಅದನ್ನು ಓದುವಂತೆ ಮಾಡುವುದು, ಬಳಿಕ ಪ್ರತಿಕ್ರಿಯಿಸಲು ಅನುಕೂಲವಾಗುವಂತೆ ಮತ್ತೂಂದು ಕೊಂಡಿಯನ್ನೋ, ಇನ್ನೊಂದು ಫೈಲನ್ನೊ ಡೌನ್‌ಲೋಡ್‌ ಮಾಡುವಂತೆ ಬಳಕೆದಾರನನ್ನು ಪ್ರಚೋದಿಸುವುದು ಬಹಳ ಮುಖ್ಯ. ಇಲ್ಲಿ ಮಾರ್ಕೆಟಿಂಗ್‌ ತಂತ್ರಜ್ಞಾನ ಕ್ರಿಯಾಶೀಲತೆಯನ್ನು ಬೇಡುತ್ತದೆ.

ಬೇಕಾದ ಕೌಶಲ್ಯಗಳು
ಮೊದಲು ಪರಿಣಾಮಕಾರಿ ಪಟ್ಟಿ (ಪ್ರತಿಕ್ರಿಯಿಸುವಂಥವರ ಇ- ಮೇಲ್‌ ವಿಳಾಸ ಪಟ್ಟಿ) ಸಿದ್ಧಪಡಿಸಬೇಕು. ಬ್ಲಾಗಿಂಗ್‌, ವೆಬಿನಾರ್‌, ಸೋಷಿಯಲ್‌ ಮೀಡಿಯಾ, ಗೆಸ್ಟ್‌ ಬ್ಲಾಗಿಂಗ್‌ ಮುಂತಾದ ಮಾಧ್ಯಮಗಳಲ್ಲಿ ನಿರತರಾಗಿರುವ ಪ್ರಭಾವಶಾಲಿ ತಂಡವನ್ನು ಬಳಸಿಕೊಳ್ಳುವ ಚಾಕಚಕ್ಯತೆ ಇರಬೇಕು. ಬಹಳ ಮುಖ್ಯವಾಗಿ ಸೋಷಿಯಲ್‌ ಮೀಡಿಯಾವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳುವ ಕೌಶಲ ಇರಬೇಕು. ಹೀಗೆ ಇ-ಮೇಲ್‌ ಲಿಸ್ಟ್‌ಅನ್ನು ಬೆಳೆಸಿಕೊಳ್ಳುತ್ತಾ ಹೋಗಬೇಕು. 

ಒಂದು ನ್ಪೋರ್ಟ್ಸ್ ಉತ್ಪನ್ನಗಳ ಸಂಸ್ಥೆ ಶೂ ಒಂದನ್ನು ಬಿಡುಗಡೆಗೊಳಿಸುತ್ತಿದೆ ಎಂದಿಟ್ಟುಕೊಳ್ಳೋಣ. ಆ ಉತ್ಪನ್ನದ ಕುರಿತ ಇಮೇಲನ್ನು 30ರ ಒಳಗಿನ ಬಳಕೆದಾರರಿಗೆ ಕಳಿಸಿದರೆ ಅವರು ಆಸಕ್ತಿಯಿಂದ ಓದಿ ಪ್ರಭಾವಿತರಾಗುತ್ತಾರೆ. ಅವರು ಕೊಳ್ಳಲೂಬಹುದು. ಅದೇ ವಯಸ್ಕರಿಗೆ ಆ ಇಮೇಲನ್ನು ಕಳಿಸಿದರೆ ಅವರು ಆ ಉತ್ಪನ್ನವನ್ನು ಕೊಳ್ಳುವುದಿರಲಿ ಇಮೇಲನ್ನು ಪೂರ್ತಿ ಓದುವುದೇ ಅನುಮಾನ. ಹೀಗಾಗಿ ಯಾವ ಯಾವ ಇಮೇಲುಗಳನ್ನು ಯಾರಿಗೆ ಕಳಿಸಿದರೆ ಹೆಚ್ಚು ಉಪಯೋಗ ಎನ್ನುವುದನ್ನು ಇಮೇಲ್‌ ಮಾರ್ಕೆಟಿಂಗ್‌ ತಂತ್ರಜ್ಞ ಅರಿತಿರಬೇಕಾಗುತ್ತದೆ. ಹೆಚ್ಚಿನ ಫ‌ಲಿತಾಂಶ ತಂದುಕೊಡುವ ಕೆಲಸಗಾರನಿಗೆ ಈ ಕ್ಷೇತ್ರದಲ್ಲಿ ಬೇಡಿಕೆ ಹೆಚ್ಚು. 

Advertisement

ಸರ್ಟಿಫಿಕೇಶನ್‌ ಕೋರ್ಸ್‌
ಇಮೇಲ್‌ ಮಾರ್ಕೆಟಿಂಗ್‌ ಕ್ಷೇತ್ರದಲ್ಲಿ ಮುಂದುವರಿಯುವ ಆಸೆಯಿದ್ದವರು ಸರ್ಟಿಫಿಕೇಷನ್‌ ಕೋರ್ಸುಗಳನ್ನು ಮಾಡಿಕೊಂಡರೆ ಉತ್ತಮ ಭವಿಷ್ಯವಿದೆ. ಸರ್ಕಾರದ ವತಿಯಿಂದ ಗಿ ಞಟಟ ಸರ್ಟಿಫಿಕೇಶನ್‌ ಲಭ್ಯವಿದೆ. ಗೂಗಲ್‌ ಮಾರ್ಕೆಟಿಂಗ್‌ನಿಂದ ಕೂಡ ಸರ್ಟಿಫಿಕೇಟ್‌ ಪಡೆಯಬಹುದು. ಅದೇ ರೀತಿ ಹಬ್‌ಸ್ಪಾಟ್‌ನಲ್ಲಿ ಇ-ಮೇಲ್‌ ಮಾರ್ಕೆಟಿಂಗ್‌ನ ಬೇರೆ ಬೇರೆ ವಿಭಾಗದ ಅಂದರೆ, ಸೆಗ್‌ಮೆಂಟಿಂಗ್‌, ಟಾರ್ಗೆಟಿಂಗ್‌, ಅಟ್ರಾಕ್ಟಿಂಗ್‌ ಮತ್ತು ಕನ್ವರ್ಟಿಂಗ್‌ ವಿಭಾಗಗಳದ್ದೇ ಪ್ರತ್ಯೇಕ ಕೋರ್ಸುಗಳು ಇವೆ. ಅವನ್ನೂ ಮಾಡಬಹುದು. ಸರ್ಟಿಫಿಕೇಶನ್‌, ಅನುಭವ, ವಿದ್ಯಾರ್ಹತೆ, ತಾಂತ್ರಿಕ ಪರಿಣತಿಗಳನ್ನು ಆಧರಿಸಿ ಸಂಬಳ-ಸವಲತ್ತುಗಳನ್ನು ನಿಗದಿಪಡಿಸಲಾಗುತ್ತದೆ. 

ಪ್ರೊ. ರಘು, ಪ್ರಾಂಶುಪಾಲರು

Advertisement

Udayavani is now on Telegram. Click here to join our channel and stay updated with the latest news.

Next