Advertisement

ಬೆಳಗಾವಿ ಮಾದರಿ ಯಶಸ್ವಿಯಾದರೆ ಪ್ರತಿ ಪಾಲಿಕೆಯಲ್ಲೂ ಇ-ಗ್ರಂಥಾಲಯ ನಿರ್ಮಾಣ: ಸಿಎಂ

03:13 PM Sep 26, 2021 | Team Udayavani |

ಬೆಳಗಾವಿ: ಇಡೀ ಭಾರತವೇ ಬೆಳಗಾವಿಯಲ್ಲಿದೆ. ಇಲ್ಲಿಯ ಜನತೆ ಕನ್ನಡನಾಡಿನ ಬಗ್ಗೆ ಅಪಾರ ಅಭಿಮಾನ ಹೊಂದಿದವರು. ದೇಶಾಭಿಮಾನಿಗಳು. ಯಾವುದೇ ರೀತಿಯ ಸಂಕುಚಿತ ಭಾವನೆ ಹಾಗೂ ವಿಚಾರಗಳಿಗೆ ಇಲ್ಲಿ ಜಾಗವಿಲ್ಲ ಎಂಬುದನ್ನು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ತೋರಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ನಗರದ ಶಹಾಪುರದ ಶಿವಾಜಿ ಉದ್ಯಾನದ ಬಳಿಯ ರವೀಂದ್ರ ಕೌಶಿಕ್ ಇ-ಗ್ರಂಥಾಲಯವನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಬೆಳಗಾವಿ ಜಿಲ್ಲೆ ಕರ್ನಾಟಕ ರಾಜ್ಯದ ಕಿರೀಟ ಪ್ರಾಯವಾಗಿದೆ. ಆದ್ದರಿಂದ ಬೆಳಗಾವಿ ಗೌರವ ಹೆಚ್ಚಿಸುವ ಕೆಲಸವನ್ನು ಸರಕಾರ ಸದಾ ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು.

ಬೆಳಗಾವಿಯ ಶಾಸಕರಾದ ಅಭಯ್ ಪಾಟೀಲ್ ಹಾಗೂ ಅನಿಲ್ ಬೆನಕೆ ಅವರು ಇಲ್ಲಿ ಡಬಲ್ ಇಂಜಿನ್ ಸರಕಾರದಂತೆ ಕೆಲಸ ಮಾಡುತ್ತಿದ್ದಾರೆ. ಅವರ ಶ್ರಮದಿಂದ ಬೆಳಗಾವಿಯು ಕರ್ನಾಟಕದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನದಲ್ಲಿ ಎರಡನೇ ಸ್ಥಾನದಲ್ಲಿದ್ದು, ಅದನ್ನು ಮೊದಲ ಸ್ಥಾನಕ್ಕೆ ತರಲು ಸರಕಾರ ಎಲ್ಲ ನೆರವು ನೀಡಲಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಭರವಸೆ ನೀಡಿದರು.

ಇ-ಗ್ರಂಥಾಲಯದ ಬಗ್ಗೆ ಪ್ರಸ್ತಾಪಿಸಿದ ಅವರು ಬದುಕಿನ ಸಾರ್ಥಕತೆಗೆ ಜ್ಞಾನ ಮತ್ತು ಧ್ಯಾನ ಅವಶ್ಯಕ. ರವೀಂದ್ರ ಕೌಶಿಕ್ ಅವರ ಜೀವನ, ಅವರ ದೇಶಭಕ್ತಿ ನಮಗೆ ಆದರ್ಶವಾಗಿದೆ. ಅವರ ಹೆಸರಿನಲ್ಲಿ ಗ್ರಂಥಾಲಯ ನಾಮಕರಣ ಮಾಡಿರುವುದು ಅವರಿಗೆ ಸಲ್ಲಿಸುವ ಗೌರವವಾಗಿದೆ ಎಂದು ಅವರು  ಹೇಳಿದರು.

Advertisement

ಇದನ್ನೂ ಓದಿ:ಪಾಕ್ – ಚೀನಾ ಹೆಸರು ಹೇಳಲು ಮೋದಿಗೆ ಭಯವೇಕೆ ? ಕಾಂಗ್ರೆಸ್ ಪ್ರಶ್ನೆ

ಡಿಜಿಟಲ್ ಲೈಬ್ರರಿ ಜ್ಞಾನವನ್ನು ನೀಡುವ ಒಂದು ದೇವಾಲಯವಾಗಿದೆ. “ಗ್ರಂಥಾಲಯಕ್ಕೆ ಬನ್ನಿ ಅಥವಾ ಗ್ರಂಥಾಲಯವೇ ನಿಮ್ಮ ಕಡೆ ಬರುವುದು” ಇದು ಒಂದು ಹೊಸ ಪ್ರಯೋಗ.  ಈ ಪ್ರಯೋಗ ಯಶಸ್ವಿಯಾದರೆ ಪ್ರತಿ ಮಹಾನಗರ ಪಾಲಿಕೆಗಳಲ್ಲಿ ಇ-ಗ್ರಂಥಾಲಯ ನಿರ್ಮಾಣ ಮಾಡಲಾಗುವುದು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ, ಸ್ಮಾರ್ಟ್ ಸಿಟಿ ಯೋಜನೆ ಈ ಹಂತಕ್ಕೆ ತಲುಪಲು ಮುಖ್ಯಮಂತ್ರಿ ಬೊಮ್ಮಾಯಿ ಅವರು ನೀಡಿದ ಸಹಕಾರ ಪ್ರಮುಖ ಪಾತ್ರ ವಹಿಸಿದೆ. ಹಿಂದೆ ಬೊಮ್ಮಾಯಿ ಅವರು ಜಿಲ್ಲಾ ಉಸ್ತುವಾರಿ ಆಗಿದ್ದಾಗಲೂ ಬೆಳಗಾವಿ ಅಭಿವೃದ್ಧಿಗೆ ಸಂಪೂರ್ಣ ಬೆಂಬಲ ನೀಡಿದ್ದರು ಎಂದು ಸ್ಮರಿಸಿದರು.

ಇದೇ ವೇಳೆ, ರವೀಂದ್ರ ಕೌಶಿಕ್ ಅವರ ಸಹೋದರನ ಪತ್ನಿ ಕುಸುಮಾ ಕೌಶಿಕ್ ಅವರನ್ನು ಮುಖ್ಯಮಂತ್ರಿಗಳು ಸನ್ಮಾನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next