Advertisement
ಇ-ಕೆವೈಸಿ ಪ್ರಕ್ರಿಯೆ ಮಾಡಲು ಸರಕಾರವು ಜ. 31ರ ಗಡುವು ವಿಧಿಸಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ನ್ಯಾಯಬೆಲೆ ಅಂಗಡಿಗಳಿಗೆ ಆಗಮಿಸಿದ್ದರಿಂದ ಸರ್ವರ್ ಸಮಸ್ಯೆ ತಲೆದೋರಿ ಜ. 6ರಿಂದ ಇ-ಕೆವೈಸಿ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಬಳಿಕ ಜ. 10ರಿಂದ ಪುನರಾರಂಭಿಸುವುದಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳು ಹೇಳಿದ್ದರಾದರೂ ಸಮಸ್ಯೆ ಸರಿಯಾಗದ ಕಾರಣ ಜ. 20ರಿಂದ ಇ-ಕೆವೈಸಿ ಪ್ರಕ್ರಿಯೆ ನಡೆಯಲಿದೆ ಎಂದಿದ್ದರು. ಆದರೆ ಸರ್ವರ್ ಸಮಸ್ಯೆ ಮುಂದುವರಿದಿರುವುದರಿಂದ ಇನ್ನೂ ಪ್ರಕ್ರಿಯೆ ಪುನರಾರಂಭವಾಗಿಲ್ಲ. ರಾಜ್ಯ ಕಚೇರಿಯಿಂದ ಮಾಹಿತಿ ಬಂದ ಬಳಿಕವಷ್ಟೇ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆಯಿದೆ ಎನ್ನುತ್ತಾರೆ ಜಿಲ್ಲಾ ಮಟ್ಟದ ಇಲಾಖೆ ಅಧಿಕಾರಿಗಳು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನವರಿ 4ರ ವರೆಗೆ ಸುಮಾರು ಶೇ. 38.76ರಷ್ಟು ಕುಟುಂಬಗಳ ಸದಸ್ಯರು ಬಯೋಮೆಟ್ರಿಕ್ ನೀಡಿದ್ದರು. ಒಟ್ಟು 4,30,665 ಕುಟುಂಬಗಳ ಪೈಕಿ 1,54,469 ಮಂದಿಯಷ್ಟೇ ಇ-ಕೆವೈಸಿ ಮಾಡಿಸಿಕೊಂಡಿದ್ದಾರೆ. ಇದರಲ್ಲಿ 23,209 ಅಂತ್ಯೋದಯ ಕುಟುಂಬಗಳ ಪೈಕಿ 4,311 ಕುಟುಂಬ, 2,48,385 ಬಿಪಿಎಲ್ ಕುಟುಂಬಗಳ ಪೈಕಿ 1,08,840 ಕುಟುಂಬ ಮತ್ತು 1,59,061 ಎಪಿಎಲ್ ಕುಟುಂಬಗಳ ಪೈಕಿ 41,318 ಕುಟುಂಬ ಇ-ಕೆವೈಸಿ ಪ್ರಕ್ರಿಯೆಯಡಿ ಬಯೋಮೆಟ್ರಿಕ್ ನೀಡಿವೆ. ಮಂಗಳೂರಿನಲ್ಲಿ 8,316 ಅಂತ್ಯೋದಯ ಕುಟುಂಬಗಳ ಪೈಕಿ 1,146 ಕುಟುಂಬಗಳು, 88,185 ಬಿಪಿಎಲ್ ಕುಟುಂಬಗಳ ಪೈಕಿ 39,091 ಕುಟುಂಬಗಳು, 87,254 ಎಪಿಎಲ್ ಕುಟುಂಬಗಳ ಪೈಕಿ 21,841 ಕುಟುಂಬಗಳು ಬೆರಳಚ್ಚು ನೀಡಿದ್ದು, ಇನ್ನೂ 1,21,678 ಕುಟುಂಬಗಳು ಬೆರಳಚ್ಚು ನೀಡಲು ಬಾಕಿ ಇವೆ. ಮುಂದಿನ ದಿನಾಂಕ ತಿಳಿಸಲಾಗುವುದು
ಜ. 20ರಂದು ಇ-ಕೆವೈಸಿ ಪ್ರಕ್ರಿಯೆ ಆರಂಭಿಸಬೇಕಿತ್ತಾದರೂ ಸರ್ವರ್ ಸಮಸ್ಯೆ ಮುಂದುವರಿದ ಕಾರಣ ಸಾಧ್ಯವಾಗಿಲ್ಲ. ಮುಂದೆ ಪ್ರಕ್ರಿಯೆ ಆರಂಭವಾಗುವ ದಿನಾಂಕವನ್ನು ರಾಜ್ಯ ಕಚೇರಿಯಿಂದ ಮಾಹಿತಿ ಬಂದ ಅನಂತರ ತಿಳಿಸಲಾಗುವುದು. ಸಾರ್ವಜನಿಕರು ಯಾವುದೇ ಗೊಂದಲಕ್ಕೆ ಒಳಗಾಗಬಾರದು.
-ಡಾ| ಮಂಜುನಾಥನ್, ಜಂಟಿ ನಿರ್ದೇಶಕರು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ