Advertisement

ಉಡುಪಿ ಜಿಲ್ಲೆಯಲ್ಲಿ ಶೇ.80ರಷ್ಟು ಪಡಿತರ ಕಾರ್ಡ್‌ಗಳ ಇ-ಕೆವೈಸಿ ಪೂರ್ಣ

06:15 PM Oct 03, 2021 | Team Udayavani |

ಉಡುಪಿ : ಅನರ್ಹ ಪಡಿತರ ಚೀಟಿಗಳನ್ನು ರದ್ದುಗೊಳಿಸುವ ಉದ್ದೇಶದಿಂದ ಸರಕಾರ ಆಹಾರ ಸುರಕ್ಷಾ ಅಭಿಯಾನ ಹಮ್ಮಿಕೊಂಡಿದ್ದು, ಅಂತೆ‌ಯೇ ಉಡುಪಿಯಲ್ಲಿ ಸಹ ಪಡಿತರ ಇ- ಕೆವೈಸಿ ಪ್ರಾರಂಭವಾಗಿದ್ದು, ಪ್ರತಿ ತಿಂಗಳ 10ನೇ ತಾರೀಕಿನ ವರೆಗೆ ಪಡಿತರ ಕೇಂದ್ರದಲ್ಲಿ ಇ-ಕೆವೈಸಿ ಆಪ್‌ಡೇಟ್‌ ಮಾಡಲು ಅವಕಾಶ ಕಲ್ಪಿಸಲಾಗಿದೆ.

Advertisement

ಆಹಾರ ಇಲಾಖೆಯ ಅಂದಾಜಿನ ಪ್ರಕಾರ ರಾಜ್ಯದಲ್ಲಿ ಸುಮಾರು 4 ಲ. ನಕಲಿ ಪಡಿತರ ಚೀಟಿಗಳು ಚಾಲ್ತಿಯಲ್ಲಿದ್ದು, ಇದರಿಂದ ಸುಮಾರು 150-200 ಕೋ.ರೂ. ಮೌಲ್ಯದ ಪಡಿತರ ಸೋರಿಕೆಯಾಗುತ್ತಿದೆ. ನಕಲಿ ಪಡಿತರ ಚೀಟಿ ತಡೆಯುವ ಉದ್ದೇಶ‌ದಿಂದ ನಾಲ್ಕು ವರ್ಷಗಳ ಹಿಂದೆ ಪಡಿತರ ಚೀಟಿ ಪರಿಶೀಲನೆ ಕಾರ್ಯವನ್ನು ಆಹಾರ ಇಲಾಖೆ ಕೈಗೊಂಡಿತ್ತು. ಆ ಬಳಿಕ ಪಡಿತರ ಚೀಟಿಗೆ ಆಧಾರ್‌ ಸಂಖ್ಯೆ ಕಡ್ಡಾಯ ಜೋಡಣೆ ನಿಯಮ ಜಾರಿಗೆ ತರಲಾಗಿತ್ತು.

ಪ್ರಾರಂಭದಲ್ಲಿ ಸ್ಥಳೀಯ ಬಯೋಮೆಟ್ರಿಕ್‌ ಕೇಂದ್ರ ಹಾಗೂ ಪಡಿತರ ಕೇಂದ್ರಗಳಲ್ಲಿ ಆಧಾರ್‌ ಕಾರ್ಡ್‌ಗಳ ಲಿಂಕೇಜ್‌ ಮಾಡಿಸಲು ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಲಕ್ಷಾಂತರ ನಕಲಿ ಕಾರ್ಡ್‌ಗಳು ಪತ್ತೆಯಾಗಿದ್ದವು. ಈ ನಡುವೆ ಸರಕಾರ ಅನೇಕ ಬಾರಿ ಇ- ಕೆವೈಸಿ ಪೂರ್ಣಗೊಳಿಸಲು ಗಡವು ನೀಡಿದರೂ ಸರ್ವರ್‌ ತಾಂತ್ರಿಕ ಸಮಸ್ಯೆ, ಕೊರೊನಾದಿಂದಾಗಿ ಇ-ಕೆವೈಸಿ ಆಪ್‌ಡೇಟ್‌ ಕಾರ್ಯ ಸ್ಥಗಿತಗೊಂಡಿತ್ತು. ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಶೇ.80ರಷ್ಟು ಪಡಿತರದಾರರು ಇ-ಕೆವೈಸಿ ದೃಢೀಕರಣಗೊಳಿಸಿದ್ದು, ಬಾಕಿ ಶೇ.20ರಷ್ಟು ಕಾರ್ಡ್‌ಗಳು ಶೀಘ್ರದಲ್ಲಿ ಇ-ಕೆವೈಸಿ ಪೂರ್ಣಗೊಳಿಸುವ ಗುರಿ ಇದೆ.

ಜಿಲ್ಲೆಯಲ್ಲಿ ಆರ್ಥಿಕವಾಗಿ ಸದೃಢರಾಗಿದ್ದು, ಅಂತ್ಯೋದಯ ಮತ್ತು ಬಿಪಿಎಲ್‌ ಪಡಿತರ ಚೀಟಿಗಳನ್ನು ಹೊಂದಿರುವ 3,474 ಕುಟುಂಬಗಳನ್ನು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಪತ್ತೆ ಹಚ್ಚಿದೆ. ಅದರಲ್ಲಿ 44 ಸರಕಾರಿ ನೌಕರರು ಬಿಪಿಎಲ್‌ ಕಾರ್ಡ್‌ ಹೊಂದಿದ್ದಾರೆ. ಅವರಲ್ಲಿ ಈಗಾಗಲೇ 33 ಕುಟುಂಬದ ಕಾರ್ಡ್‌ಗಳನ್ನು ರದ್ದುಗೊಳಿಸಲಾಗಿದೆ. 13,889 ಮಂದಿ ಮೃತ ಸದಸ್ಯರ ಹೆಸರು ಕಾರ್ಡ್‌ನಿಂದ ತೆಗೆಯಲಾಗಿದೆ.

ಇದನ್ನೂ ಓದಿ :‘ನಿಜವಾದ ವಿಚಾರ’ ಮರೆ ಮಾಚಲು ಕ್ರೂಸ್ ಶಿಪ್ ಮೇಲೆ ದಾಳಿ : ಕಾಂಗ್ರೆಸ್

Advertisement

ಯಾರ್ಯಾರು ಅನರ್ಹರು?
ಕುಟುಂಬದಲ್ಲಿ ಸರಕಾರಿ ಅಥವಾ ಅರೆ ಸರಕಾರಿ ಉದ್ಯೋಗ ಹೊಂದಿರುವರು, ಆದಾಯ ತೆರಿಗೆ ಪಾವತಿಸುವವರು, ಪಡಿತರ ಚೀಟಿ ವಿಳಾಸದಲ್ಲಿ ವಾಸ್ತವ್ಯ ಇಲ್ಲದೆ ಇರುವವರು, ಒಂದು ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಪಡಿತರ ಚೀಟಿ ಹೊಂದಿರುವವರು, ಮರಣ ಹೊಂದಿದವರ ಮತ್ತು ಕುಟುಂಬದಲ್ಲಿ ವಾಸ್ತವ್ಯವಿಲ್ಲದೆ ಇರುವವರ ಹೆಸರನ್ನು ಪಡಿತರ ಚೀಟಿಯಿಂದ ತೆಗೆಯದೆ ಉಳಿಸಿಕೊಂಡವರು, ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್‌ ಭೂಮಿ ಹಾಗೂ ನಗರ ಪ್ರದೇಶದ 1,000 ಚದರ ಅಡಿಗಿಂತ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆ ಸ್ವಂತವಾಗಿ ಹೊಂದಿರುವವರು, ಸ್ವಂತ ಉಪಯೋಗಕ್ಕಾಗಿ ಕಾರು, ಲಾರಿ, ಜೆಸಿಬಿ ಇತ್ಯಾದಿ ವಾಹನ ಹೊಂದಿರುವವರು ಬಿಪಿಎಲ್‌ ಹಾಗೂ ಅಂತ್ಯೋದಯ ಕಾರ್ಡ್‌ ಪಡೆಯಲು ಅನರ್ಹರು.

Advertisement

Udayavani is now on Telegram. Click here to join our channel and stay updated with the latest news.

Next