Advertisement

Udupi ಗ್ಯಾಸ್‌ ಸಂಪರ್ಕಕ್ಕೆ ಇ – ಕೆವೈಸಿ: ಗ್ರಾಹಕರಲ್ಲಿ ಹೆಚ್ಚಿದ ಗೊಂದಲ

09:53 PM Dec 20, 2023 | Team Udayavani |

ಉಡುಪಿ: ಗೃಹಬಳಕೆಯ ಗ್ಯಾಸ್‌ ಸಂಪರ್ಕ ಪಡೆದವರು ಇ-ಕೆವೈಸಿ ಮಾಡಿಸಿಕೊಳ್ಳಲು ಏಕಾಏಕಿ ಗ್ಯಾಸ್‌ ಏಜೆನ್ಸಿಗಳ ಕಚೇರಿಗೆ ಧಾವಿಸುತ್ತಿರುವ ದೃಶ್ಯ ಜಿಲ್ಲೆಯಾದ್ಯಂತ ಕಂಡುಬರುತ್ತಿದೆ.

Advertisement

ಆಧಾರ್‌ ಲಿಂಕ್‌ ಮಾಡಿಸಿ, ಇ-ಕೆವೈಸಿ ಮಾಡದೇ ಇದ್ದರೆ ಸಬ್ಸಿಡಿ ಬರುವುದಿಲ್ಲ, ಗೃಹ ಬಳಕೆಯ ಸಂಪರ್ಕ ವಾಣಿಜ್ಯ ಬಳಕೆಯ ಗ್ಯಾಸ್‌ ಸಂಪರ್ಕವಾಗಿ ಬದಲಾಗಲಿದೆ, ಗ್ಯಾಸ್‌ ಸಂಪರ್ಕ ರದ್ದಾಗಲಿದೆ ಎಂಬಿತ್ಯಾದಿ ಸಂದೇಶ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರು ಗೊಂದಲಕ್ಕೆ ಒಳಗಾಗಿ ಮಂಗಳವಾರ ಬೆಳಗ್ಗಿನಿಂದಲೇ ಗ್ಯಾಸ್‌ ಏಜೆನ್ಸಿಗಳ ಕಚೇರಿಗೆ ಭೇಟಿ ನೀಡಿ ಇ-ಕೆವೈಸಿ ಮಾಡಿಸಿಕೊಳ್ಳುತ್ತಿದ್ದಾರೆ.

ಎಲ್ಲ ಗ್ರಾಹಕರ ಇ-ಕೆವೈಸಿ ಮಾಡಲು ಸೂಚನೆ ಬಂದಿರುವ ಹಿನ್ನೆಲೆಯಲ್ಲಿ ಎಲ್ಲ ಏಜೆನ್ಸಿಗಳಲ್ಲಿ ಗ್ರಾಹಕರ ಬೆರಳಚ್ಚು ಪಡೆದು ಆಧಾರ್‌ ಲಿಂಕ್‌ ಹಾಗೂ ಇ-ಕೆವೈಸಿ ಮಾಡಿಸುವ ಪ್ರಕ್ರಿಯೆ ನಡೆಯುತ್ತಿದೆ. ಆದರೆ ಮತ್ತೆ ಸಬ್ಸಿಡಿ ಸಿಗಲಿದೆ ಅಥವಾ ಡಿ. 31ರೊಳಗೆ ಈ ಪ್ರಕ್ರಿಯೆ ಮುಗಿಸಬೇಕು ಎಂಬಿತ್ಯಾದಿ ವಿಚಾರಗಳಿಗೂ ಇ-ಕೆವೈಸಿಗೂ ಯಾವುದೇ ಸಂಬಂಧ ಇಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಹರಿದಾಡುತ್ತಿದೆ. ಏಕಾಏಕಿ ಏಜೆನ್ಸಿಗಳ ಕಚೇರಿಗೆ ಧಾವಿಸಿ ಬರುವ ಗ್ರಾಹಕರನ್ನು ಸಮಾಧಾನಪಡಿಸುವುದು ಕಷ್ಟವಾಗುತ್ತಿದೆ ಎಂದು ಜಿಲ್ಲೆಯ ಪ್ರಮುಖ ಗ್ಯಾಸ್‌ ಏಜೆಂಟ್‌ ಒಬ್ಬರು ತಿಳಿಸಿದರು.

ಹರಿದಾಡುತ್ತಿರುವ
ಸಂದೇಶವೇನು?
ಗ್ಯಾಸ್‌ ಸಂಪರ್ಕ ಇರುವವರು ಡಿ. 31ರೊಳಗೆ ಆಧಾರ್‌ ಕಾರ್ಡ್‌, ಬ್ಯಾಂಕ್‌ ಪಾಸ್‌ಬುಕ್‌ ಮತ್ತು ಗ್ಯಾಸ್‌ ಏಜೆನ್ಸಿ ನೀಡಿರುವ ಪುಸ್ತಕ ಅಥವಾ ಕಾರ್ಡ್‌ನೊಂದಿಗೆ ಏಜೆನ್ಸಿ ಕಚೇರಿಗೆ ಭೇಟಿ ನೀಡಿ, ಕೆವೈಸಿ ಮಾಡಿಸಬೇಕು. ಕೆವೈಸಿ ಮಾಡಿಸಿದರೆ ಜ. 1ರಿಂದ ಸಬ್ಸಿಡಿ ಬರುತ್ತದೆ. ಈಗ ಇರುವ ಸಿಲಿಂಡರ್‌ಗೆ 903 ರೂ. ಇದ್ದು, ಸಬ್ಸಿಡಿಯ ಅನಂತರ 500 ರೂ.ಗಳಿಗೆ ಸಿಗುತ್ತದೆ. ಕೆವೈಸಿ ಮಾಡದಿದ್ದರೆ ಸಬ್ಸಿಡಿ ರಹಿತವಾಗಿ ಗ್ಯಾಸ್‌ ಸಂಪರ್ಕವು ಕಮರ್ಶಿಯಲ್‌ ಆಗಿ ಮಾರ್ಪಡುತ್ತದೆ. ಆಗ ಗ್ಯಾಸ್‌ಗೆ 1,400 ರೂ. ನೀಡಬೇಕಾಗುತ್ತದೆ ಎಂಬ ಸಂದೇಶ ಎಲ್ಲೆಡೆ ಹರಿದಾಡುತ್ತಿದೆ.

ಆಧಾರ್‌ ಲಿಂಕ್‌ ಮಾಡಿಸಲು ಸೂಚನೆ ಬಂದಿದೆ. ಹೀಗಾಗಿ ಇ-ಕೆವೈಸಿ ಮಾಡುತ್ತಿದ್ದೇವೆ. ಡಿ. 31ರೊಳಗೆ ಮುಗಿಸುವ ಯಾವ ಗಡುವು ನೀಡಿಲ್ಲ ಮತ್ತು ಇದಕ್ಕೂ ಸಬ್ಸಿಡಿಇಚಾರಕ್ಕೂ ಸಂಬಂಧ ಇರುವ ಬಗ್ಗೆಯೂ ಯಾವುದೇ ಮಾಹಿತಿ ಬಂದಿಲ್ಲ. ಹೀಗಾಗಿ ಗ್ರಾಹಕರು ಗಲಿಬಿಲಿಗೊಳಗಾಗುವ ಅಗತ್ಯವಿಲ್ಲ.
– ರಾಘವೇಂದ್ರ ಆಚಾರ್ಯ,
ಉಡುಪಿಯ ಪ್ರಮುಖ ಗ್ಯಾಸ್‌ ಏಜೆನ್ಸಿಯೊಂದರ ಮಾಲಕರು

Advertisement

ಆಧಾರ್‌ ದೃಢೀಕರಣವು ಉಜ್ವಲ ಗ್ಯಾಸ್‌ ಸಂಪರ್ಕ ಪಡೆದಿರುವವರಿಗೆ ಮಾತ್ರ ಕಡ್ಡಾಯ. ಉಳಿದ ಬಳಕೆದಾರರಿಗೆ ಗ್ಯಾಸ್‌ ಸಬ್ಸಿಡಿಯ ಬಗ್ಗೆ ಪ್ರಸ್ತುತ ಯಾವುದೇ ಘೋಷಣೆ ಆಗಿರುವುದಿಲ್ಲ. ಹೆಚ್ಚುವರಿ ಸಂಪರ್ಕಗಳನ್ನು ಗುರುತಿಸುವ ಸಲುವಾಗಿ ಮಾತ್ರ ಈಗ ಕೆವೈಸಿ ಮಾಡಿಸಲಾಗುತ್ತಿದೆ.
– ಮಾಣಿಕ್ಯ, ಆಹಾರ ಇಲಾಖೆ ಉಪನಿರ್ದೇಶಕರು, ದ.ಕ. ಜಿಲ್ಲೆ,
ರವೀಂದ್ರ, ಆಹಾರ ಇಲಾಖೆ ಪ್ರಭಾರ ಉಪ ನಿರ್ದೇಶಕರು, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next