Advertisement

ಇ.ಡಿ. ಸಮನ್ಸ್‌: ಡಿಕೆಶಿ ಆಪ್ತರಿಗೆ ಬಂಧನ ಭೀತಿ

11:06 PM Oct 14, 2019 | Lakshmi GovindaRaju |

ಬೆಂಗಳೂರು: ಐಟಿ ದಾಳಿ ವೇಳೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ಗೆ ಸೇರಿದ ದೆಹಲಿಯ ಮನೆಗಳಲ್ಲಿ ಸಿಕ್ಕ 8.69 ಕೋಟಿ ರೂ. ಬೇನಾಮಿ ಹಣಕ್ಕೆ ಸಂಬಂಧಿಸಿದ ವಿಚಾರಣೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾದರೆ ಬಂಧಿಸದಂತೆ ನೀಡಿರುವ ಮಧ್ಯಂತರ ರಕ್ಷಣೆಯನ್ನು ವಿಸ್ತರಿಸುವಂತೆ ಡಿ.ಕೆ. ಶಿವಕುಮಾರ್‌ ಆಪ್ತರು ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.

Advertisement

ಈ ಕುರಿತಂತೆ ಪ್ರಕರಣದಲ್ಲಿ ವಿಚಾರಣೆ ಎದುರಿಸು ತ್ತಿರುವ ಡಿ.ಕೆ. ಶಿವಕುಮಾರ್‌ ಅವರ ಆಪ್ತರಾದ ಸಚಿನ್‌ ನಾರಾಯಣ, ಸುನೀಲ್‌ ಶರ್ಮಾ ಹಾಗೂ ಆಂಜನೇಯ ಹೈಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ. ಈ ಮಧ್ಯಂತರ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ್‌ ಹಾಗೂ ನ್ಯಾ. ಎಸ್‌.ಆರ್‌. ಕೃಷ್ಣಕುಮಾರ್‌ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿತ್ತು.

ಆಗ ಅರ್ಜಿದಾರರ ಪರ ವಕೀಲರು, ಅರ್ಜಿಯ ತುರ್ತು ವಿಚಾರಣೆ ನಡೆಸುವಂತೆ ನ್ಯಾಯಪೀಠಕ್ಕೆ ಮನವಿ ಮಾಡಿದರು. ಅದಕ್ಕೆ, ಮಂಗಳವಾರ ವಿಚಾರಣೆ ನಡೆಸುವುದಾಗಿ ನ್ಯಾಯಪೀಠ ಹೇಳಿತು. ವಿಚಾರಣೆಗೆ ಹಾಜರಾಗಲು ಜಾರಿ ನಿರ್ದೇಶನಾಲಯ ನೀಡಿದ್ದ ಸಮನ್ಸ್‌ ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದ ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಮೂವರು ಮೇಲ್ಮನವಿ ಸಲ್ಲಿಸಿದ್ದರು.

ಈ ಮೇಲ್ಮನವಿಯನ್ನೂ ವಿಭಾಗೀಯ ನ್ಯಾಯಪೀಠ ತಳ್ಳಿ ಹಾಕಿತ್ತು. ಆದರೆ, ಮಧ್ಯಂತರ ರಕ್ಷಣೆ ನೀಡಿ, ಮೇಲ್ಮನವಿದಾರರು ವಿಚಾರಣೆಗೆ ಹಾಜರಾದರೆ ನಾಲ್ಕು ವಾರಗಳ ಕಾಲ ಬಂಧಿಸದಂತೆ ಜಾರಿ ನಿರ್ದೇಶನಾಲಯಕ್ಕೆ ಸೆ.17ರಂದು ಸೂಚನೆ ನೀಡಿತ್ತು.

ಇದೀಗ ನಾಲ್ಕು ವಾರ ಕಾಲಾವಕಾಶ ಮುಗಿದಿರುವು ದರಿಂದ ಮಧ್ಯಂತರ ಅರ್ಜಿ ಸಲ್ಲಿಸಲಾಗಿದ್ದು, ಸುಪ್ರೀಂ ಕೋರ್ಟ್‌ಗೆ ರಜೆ ಇದ್ದಿದ್ದರಿಂದ ಮೇಲ್ಮನವಿ ಸಲ್ಲಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವವರೆಗೆ ಜಾರಿ ನಿರ್ದೇಶನಾಲಯ ಬಂಧಿಸದಂತೆ ಈ ಹಿಂದೆ ನೀಡಿದ್ದ ಮಧ್ಯಂತರ ರಕ್ಷಣೆಯನ್ನು ವಿಸ್ತರಿಸಬೇಕೆಂದು ಕೋರಲಾಗಿದೆ.

Advertisement

ದತ್ತಪೀಠಕ್ಕೆ ನೇಮಕ: ವಿಚಾರಣೆ ಮುಂದಕ್ಕೆ
ಬೆಂಗಳೂರು: ಬಾಬಾಬುಡನ್‌ ಗಿರಿಯ ದತ್ತಪೀಠದಲ್ಲಿ ಪೂಜಾ ಕೈಂಕರ್ಯ ನೆರವೇರಿಸಲು ಮುಜಾವರ್‌ ಅವರನ್ನು ನೇಮಕ ಮಾಡಿರುವ ವಿವಾದಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್‌ ಎರಡು ವಾರಗಳ ಕಾಲ ಮುಂದೂಡಿತು. ಈ ಕುರಿತಂತೆ ಶ್ರೀಗುರು ದತ್ತಾತ್ರೇಯ ಪೀಠ ದೇವಸ್ಥಾನ ಸಂವರ್ಧನಾ ಸಮಿತಿಯ ಯೋಗೀಶ್‌ರಾಜ್‌ ಅರಸ್‌ ಸಲ್ಲಿಸಿರುವ ಅರ್ಜಿಯು ನ್ಯಾ. ಬಿ. ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿತ್ತು.

ಈ ವೇಳೆ ವಾದ ಆಲಿಸಿದ ನ್ಯಾಯಪೀಠ, ಈ ವಿವಾದವನ್ನು ಉಭಯ ಪಕ್ಷಗಾರರು ಪರಸ್ಪರ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬಹುದು. ಆದರೆ, ಇದನ್ನೊಂದು ತಗಾದೆ ಮಾಡಿ ಎಳೆದುಕೊಂಡು ಹೋಗುತ್ತಿರುವುದು ಸಮಂಜಸವಲ್ಲ. ರಾಜ್ಯ ಸರ್ಕಾರ ನೇಮಿಸಿದ್ದ ತಜ್ಞರ ಸಮಿತಿ ಬಗ್ಗೆ ಆಕ್ಷೇಪವಿದ್ದರೆ, ಸಮಿತಿ ರಚನೆ ಆದಾಗಲೇ ಯಾಕೆ ಪ್ರಶ್ನಿಸಿಲ್ಲ ಎಂದು ಅರ್ಜಿದಾರರ ಪರ ವಕೀಲರಿಗೆ ಹೇಳಿ ವಿಚಾರಣೆ ಮುಂದೂಡಿತು.

ಮಾಧ್ಯಮ ನಿರ್ಬಂಧ: ಸ್ಪೀಕರ್‌ ವಿರುದ್ಧ ಹೈಕೋರ್ಟ್‌ ಮೊರೆ
ಬೆಂಗಳೂರು: ವಿಧಾನಸಭೆಯ ಕಲಾಪಗಳಿಂದ ದೃಶ್ಯ ಮಾಧ್ಯಮಗಳನ್ನು ನಿಷೇಧಿಸಿರುವ ವಿವಾದ ಇದೀಗ ಹೈಕೋರ್ಟ್‌ ಮೆಟ್ಟಿಲೇರಿದೆ. ಈ ಸಂಬಂಧ ತುಮಕೂರು ಮೂಲದ ವಕೀಲ ಎಲ್‌. ರಮೇಶ್‌ ನಾಯಕ್‌ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ವಿಧಾನಸಭೆ ಸ್ಪೀಕರ್‌ ಅವರನ್ನು ಪ್ರತಿವಾದಿಯನ್ನಾಗಿ ಮಾಡಲಾಗಿದ್ದು, ಅರ್ಜಿಯು ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.

ವಿಧಾನಸಭೆ ಕಲಾಪಗಳಿಂದ ದೃಶ್ಯ ಮಾಧ್ಯಮಗಳನ್ನು ನಿಷೇಧಿಸಿ ವಿಧಾನಸಭೆ ಸ್ಪೀಕರ್‌ ಅ.9ರಂದು ಹೊರಡಿಸಿರುವ ಪತ್ರಿಕಾ ಪ್ರಕಟಣೆ ಏಕಪಕ್ಷೀಯ, ಕಾನೂನುಬಾಹಿರವಾಗಿದ್ದು, ಪೂರ್ವಾಲೋಚನೆ ಮಾಡದೇ ಪ್ರಕಟಣೆ ಹೊರಡಿಸಲಾಗಿದೆ. ಆದ್ದರಿಂದ ಈ ಪತ್ರಿಕಾ ಪ್ರಕಟಣೆ ರದ್ದುಗೊಳಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ. ವಿಧಾನಸಭೆ ಕಲಾಪಗಳಿಂದ ದೃಶ್ಯಮಾಧ್ಯಮಗಳ ಕ್ಯಾಮರಾಗಳು ಹಾಗೂ ಫೋಟೋಗ್ರಾಫ‌ರ್‌ಗಳನ್ನು ನಿಷೇಧಿಸಿರುವುದು “ತಮ್ಮ ಜನಪ್ರತಿನಿಧಿಗಳ ಕುರಿತು ಮಾಹಿತಿ ಪಡೆದುಕೊಳ್ಳುವ ಮತದಾರರ ಮೂಲಭೂತ ಹಕ್ಕಿನ ಉಲ್ಲಂಘನೆ ಆಗಲಿದೆ. ಅಲ್ಲದೇ ಇದು ಸಂವಿಧಾನದ ಕಲಂ 19(1) (ಎ) ಹಾಗೂ 21ಗೆ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಸಾರ್ವಜನಿಕ ವ್ಯವಹಾರಗಳ ಕುರಿತು ತಿಳಿದುಕೊಳ್ಳುವುದು ಮೂಲ ಹಕ್ಕು ಆಗಿದೆ ಎಂದು ಸುಪ್ರೀಂಕೋರ್ಟ್‌ ಹೇಳಿದೆ. ಹೀಗಾಗಿ, ಸಾರ್ವಜನಿಕ ಸಂಸ್ಥೆಗಳು ನಿರ್ವಹಿಸುವ ಜವಾಬ್ದಾರಿಗಳನ್ನು ಅರಿತುಕೊಳ್ಳುವುದು ದೇಶದ ಪ್ರಜೆಗಳ ಹಕ್ಕು ಆಗಿದೆ. ಶಾಸಕರು ಮತ್ತು ಸಂಸದರು ಸಾರ್ವಜನಿಕ ಸೇವಕರು ಅನ್ನುವುದು ಗಮನಾರ್ಹ. ಈ ಹಿನ್ನೆಲೆಯಲ್ಲಿ ಸ್ಪೀಕರ್‌ ಅವರು ತೆಗೆದುಕೊಂಡಿರುವ ತೀರ್ಮಾನ ಸುಪ್ರೀಂಕೋರ್ಟ್‌ನ ನಿಲುವಿಗೆ ತದ್ವಿರುದ್ಧವಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next