Advertisement

ಇ-ಸಿಗರೇಟ್‌ ಮೇಲಿನ ಸಿಟ್ಟು ಆ ಸಿಗರೇಟ್‌ ಮೇಲೆ ಏಕಿಲ್ಲ?

11:03 PM Sep 19, 2019 | sudhir |

ಬುಧವಾರ ಕೇಂದ್ರ ಸರ್ಕಾರ ದೇಶಾದ್ಯಂತ ಇ-ಸಿಗರೇಟ್‌ಗಳನ್ನು ನಿಷೇಧಿಸಿದೆ. ಇದರನ್ವಯ ಇನ್ಮುಂದೆ ದೇಶದಲ್ಲಿ ಇವುಗಳ ಬಳಕೆ, ಆಮದು, ಮಾರಾಟ, ಹಂಚಿಕೆ ಮಾಡುವಂತಿಲ್ಲ. ಈ ಸುಗ್ರೀವಾಜ್ಞೆಗೆ ರಾಷ್ಟ್ರಪತಿಗಳ ಅಂಕಿತ ದೊರೆತ ಮೇಲೆ ಕಾನೂನಾಗಿ ಅನುಷ್ಠಾನಕ್ಕೆ ಬರಲಿದೆ. “ಇ-ಸಿಗರೇಟ್‌ಗಳ ದುಷ್ಪರಿಣಾಮಗಳಿಂದ ಭಾರತೀಯ ಯುವಜನತೆಯನ್ನು ರಕ್ಷಿಸುವುದಕ್ಕಾಗಿ ತಾನು ಈ ನಿರ್ಧಾರಕ್ಕೆ ಬಂದಿರುವುದಾಗಿ’ ಕೇಂದ್ರ ಹೇಳುತ್ತಿದೆ. ಆದರೆ ಪ್ರತಿವರ್ಷ 10 ಲಕ್ಷಕ್ಕೂ ಹೆಚ್ಚು ಭಾರತೀಯರ ಜೀವ ತೆಗೆಯುತ್ತಿರುವ ಸಾಂಪ್ರದಾಯಿಕ ಸಿಗರೇಟ್‌ /ತಂಬಾಕನ್ನೂ ನಿಷೇಧಿಸುವ ಅಗತ್ಯವಿದೆಯಲ್ಲವೇ ಎಂಬ ಪ್ರಶ್ನೆಯೂ ಜೋರಾಗಿ ಕೇಳಿಸುತ್ತಿದೆ…

Advertisement

ಇ-ಸಿಗರೇಟ್‌ ಗೊಂದಲ
ಇ-ಸಿಗರೇಟ್‌ ಮಾರಾಟ ಮಾಡುವ ಕಂಪನಿಗಳು ಇವನ್ನು “ಸಾಂಪ್ರದಾಯಿಕ ಸಿಗರೇಟ್‌ಗಳಿಗಿಂತ ಸುರಕ್ಷಿತ, ಕಡಿಮೆ ಹಾನಿಕಾರಕ ಹಾಗೂ ಧೂಮಪಾನ ತ್ಯಜಿಸಲು ಬಳಕೆದಾರರಿಗೆ ಸಹಾಯ ಮಾಡುವ ಸಾಧನ’ ಎಂದು ಕರೆಯುತ್ತವೆ.
ಆದರೆ ಇ-ಸಿಗರೇಟ್‌ ಕೂಡ ವ್ಯಸನಕಾರಿಯಾಗಿದ್ದು, ಆರೋಗ್ಯಕ್ಕೂ ಅಪಾಯಕಾರಿಯಾಗಿದೆ ಎಂದು ಕೆಲ ವರದಿಗಳು ಹೇಳುತ್ತವೆ. ಜಾಗತಿಕವಾಗಿಯೂ ಇ-ಸಿಗರೇಟ್‌ಗಳ ಮೇಲೆ ಸಮರ ಆರಂಭವಾಗಿದೆಯಾದರೂ, ಹಲವರು ಇದನ್ನು “ತಂಬಾಕು ಕಂಪನಿಗಳ ಲಾಬಿ’ ಎಂದೇ ಕರೆಯುತ್ತಾರೆ.

ಐಸಿ ಎಂಆರ್‌ ವರದಿ
ಇದೇ ವರ್ಷದ ಮೇ ತಿಂಗಳಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌), ಇ -ಸಿಗರೇಟ್‌ ದುಷ್ಪರಿಣಾಮಗಳ ಬಗ್ಗೆ ವರದಿ ಬಿಡುಗಡೆ ಮಾಡಿತು. ಇ-ಸಿಗರೇಟ್‌ಗಳಿಂದಾಗಿ ಡಿಎನ್‌ಎಗೆ ಹಾನಿ, ಕಾರ್ಸಿನೋಜೆನೆಸಿಸ್‌, ರೋಗ ನಿರೋಧಕ ಶಕ್ತಿಗೆ ಹಾನಿ, ಉಸಿರಾಟ, ಹೃದಯ ಮತ್ತು ನರಸಂಬಂಧಿ ಕಾಯಿಲೆಗಳಾಗುತ್ತವೆ ಎಂದು ಹೇಳಿದ ಈ ವರದಿ ಇ-ಸಿಗರೇಟ್‌ಗಳ ಸಂಪೂರ್ಣ ನಿಷೇಧಕ್ಕೆ ಶಿಫಾರಸು ಮಾಡಿತ್ತು. ಇನ್ನು ಸಾಂಪ್ರದಾಯಿಕ ಸಿಗರೇಟ್‌ಗಳ ಅತೀವ ದುಷ್ಪರಿಣಾಮಗಳ ಬಗ್ಗೆಯೂ ಐಸಿಎಂಆರ್‌ ಬೆಳಕು ಚೆಲ್ಲಿದೆ. ಅದರ ಪ್ರಕಾರ 2020ರ ವೇಳೆಗೆ ಭಾರತದಲ್ಲಿ ತಂಬಾಕು ಸೇವನೆಯಿಂದಾಗಿ, 17 ಲಕ್ಷ ಹೊಸ ಕ್ಯಾನ್ಸರ್‌ ಪ್ರಕರಣಗಳು ಮತ್ತು 8 ಲಕ್ಷಕ್ಕೂ ಹೆಚ್ಚು ಜನರು ಜೀವ ಕಳೆದುಕೊಳ್ಳಲಿದ್ದಾರೆ.

ಸಿಗರೇಟ್‌ ರಾಕ್ಷಸ
ಇನ್ನೊಂದೆಡೆ ತಂಬಾಕು ಸಹಿತ ಧೂಮಪಾನವು ನಿಕೊಟಿನ್‌, ಕಾರ್ಬನ್‌ಮೊನಾಕ್ಸೆ„ಡ್‌ ಹಾಗೂ ಟಾರ್‌ ಸೇರಿದಂತೆ 7000ಕ್ಕೂ ಹೆಚ್ಚು ರಾಸಾಯನಿಕಗಳನ್ನು ದೇಹಕ್ಕೆ ಸೇರಿಸುತ್ತದೆ. ಇವುಗಳಲ್ಲಿ 69ಕ್ಕೂ ಹೆಚ್ಚು ರಾಸಾಯನಿಕಗಳು ಕ್ಯಾನ್ಸರ್‌ ಕಾರಕವಾಗಿವೆ. ಶ್ವಾಸಕೋಶ, ಬಾಯಿ, ಸ್ತನ, ಗರ್ಭಕೋಶ, ಮೂತ್ರಪಿಂಡ ಹಾಗೂ ಹೊಟ್ಟೆಗೆ ಸಂಬಂಧಿಸಿದ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ನಪುಂಸಕತ್ವ, ಬಂಜೆತನ, ಹೃದಯ ಸಮಸ್ಯೆ ಸೇರಿ ದೇಹದ ಅಜಮಾಸು ಎಲ್ಲಾ ಭಾಗಕ್ಕೂ ಸಿಗರೇಟ್‌ನಿಂದ ಹಾನಿಯಾಗುತ್ತದೆ.

ಧೂಮಪಾನಿಗಳ ಆಯಸ್ಸು ಧೂಮಪಾನ ಮಾಡದವರಿಗಿಂತ 15 ವರ್ಷ ಕಡಿಮೆಯಾಗುತ್ತದೆ ಎಂದು ಅಂದಾಜಿಸಲಾಗಿದೆ. ಪರೋಕ್ಷ ಧೂಮಪಾನವೂ ಮಾರಕವೆಂದು ಸಾಬೀತಾಗಿದೆ. ಹೀಗಿರುವಾ ಇ-ಸಿಗರೇಟ್‌ ನಿಷೇಧದಷ್ಟೇ, ತಂಬಾಕು ಒಳಗೊಂಡ ಸಿಗರೇಟ್‌ಗಳ ಮೇಲೂ ಸಮರ ಸಾರಬೇಕಾದ ಅಗತ್ಯವಿದೆ.

Advertisement

ಶಿಕ್ಷೆಯ ಪ್ರಮಾಣ
ಮೊದಲ ಬಾರಿ ನಿಯಮ ಉಲ್ಲಂಘನೆ: 1 ಲಕ್ಷದ ವರೆಗೆ ದಂಡ ಅಥವಾ 1 ವರ್ಷ ಜೈಲು ಶಿಕ್ಷೆ. ಇಲ್ಲವೇ ಎರಡೂ.
ಎರಡನೇ ಬಾರಿ ಉಲ್ಲಂಘನೆ: 3 ವರ್ಷ ಜೈಲು ಶಿಕ್ಷೆ ಮತ್ತು 5 ಲಕ್ಷ ರೂಪಾಯಿವರೆಗೆ ದಂಡ.
ಇ-ಸಿಗರೇಟ್‌ ಹೊಂದಿದ್ದರೆ: 6 ತಿಂಗಳವರೆಗೆ ಜೈಲು ಶಿಕ್ಷೆ ಅಥವಾ 50 ಸಾವಿರ ರೂಪಾಯಿವರೆಗೆ ದಂಡ. ಅಥವಾ ಎರಡೂ.

ಪರ-ವಿರೋಧದ ಚರ್ಚೆ
ಇ-ಸಿಗರೇಟ್‌ ಸೇವನೆ ತಂಬಾಕು ಇರುವ ಸಿಗರೇಟ್‌ಗಿಂತಲೂ ಸುರಕ್ಷಿತ ಎಂದು ವಾದಿಸುತ್ತಾ ಬಂದಿರುವ, ಇ-ಸಿಗರೇಟ್‌ ಬಳಕೆದಾರರನ್ನು ಪ್ರತಿನಿಧಿಸುವ ಅಸೋಸಿಯೇಷನ್‌ ಆಫ್ ವೇಪರ್‌ ಇಂಡಿಯಾ (ಎವಿಐ ಸಂಸ್ಥೆಯು) ಸರ್ಕಾರದ ನಡೆಯನ್ನು ವಿರೋಧಿಸುತ್ತಿದೆ. “ಈ ಸುಗ್ರೀವಾಜ್ಞೆಯು ಜನರ ಜೀವನವನ್ನು ಅಪಾಯದಂಚಿಗೆ ತಳ್ಳುತ್ತಿದೆ. ನಿಷೇಧ ಹೇರುವಲ್ಲಿ ಸರ್ಕಾರ ತೋರಿಸಿದ ಅವಸರ ನೋಡಿದರೆ, ಅದಕ್ಕೆ ಜನರ ಆರೋಗ್ಯ ಸುಧಾರಣೆಗಿಂತಲೂ ಸಿಗರೇಟ್‌ ಉದ್ಯಮವನ್ನು ರಕ್ಷಿಸುವುದೇ ಆದ್ಯತೆಯಾಗಿದೆ ಎಂದು ಅನಿಸುತ್ತದೆ’ ಎನ್ನುತ್ತಾರೆ ಎವಿಐ ಸಂಸ್ಥೆಯ ನಿರ್ದೇಶಕ ಸಾಮ್ರಾಟ್‌ ಚೌಧರಿ. ಹಿರಿಯ ಶ್ವಾಸಕೋಶ ತಜ್ಞ ಮತ್ತು ನ್ಯಾಷನಲ್‌ ಚೆಸ್ಟ್‌ ಸೆಂಟರ್‌ ನಿರ್ದೇಶಕ ಡಾ. ಬಿ. ಗೋಪಾಲ್‌, “”ಈ ಸುಗ್ರೀವಾಜ್ಞೆ ತಪ್ಪು ಗ್ರಹಿಕೆಗಳನ್ನು ಆಧರಿಸಿದೆ. ಹಾನಿ ತಗ್ಗಿಸುವ ವಿಚಾರದಲ್ಲಿ ಹೆಚ್ಚು ತಿಳಿವಳಿಕೆಯಿಲ್ಲದ ನಿರ್ಧಾರವಿದು” ಎನ್ನುತ್ತಾರೆ. ಆದರೆ ವಾಲೆಂಟರಿ ಹೆಲ್ತ್‌ ಅಸೋಸಿಯೇಷನ್‌ ಆಫ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕಿ ಭಾವನಾ, ಕೇಂದ್ರದ ನಿರ್ಧಾರವನ್ನು ಸ್ವಾಗತಿಸುತ್ತಾರೆ.

ಏರಿದ ತಂಬಾಕು ಕಂಪನಿಗಳ ಷೇರು
ಇ-ಸಿಗರೇಟ್‌ ನಿಷೇಧದ ಘೋಷಣೆಯ ನಂತರ ಐಟಿಸಿ ತಂಬಾಕು ಕಂಪೆನಿ , ಗೋಲ್ಡನ್‌ ಟೊಬ್ಯಾಕೋ ಮತ್ತು ಗಾಡ್‌ಫ್ರೆà ಫಿಲಿಪ್ಸ್‌ ಕಂಪನಿಗಳ ಷೇರಿನಲ್ಲಿ ಏರಿಕೆ ಕಂಡಿದೆ. ಐಟಿಸಿಯ ಷೇರು 1 ಪ್ರತಿಶತ ಏರಿಕೆ ಕಂಡಿದೆ(239 ರೂ), ಇನ್ನೊಂದೆಡೆ ಗಾಡ್‌ಫ್ರೆà ಫಿಲಿ ಪ್ಸ್‌ ನ ಷೇರಿ ನಲ್ಲಿ 5.6 ಪ್ರತಿಶತ ಏರಿಕೆಯಾಗಿದ್ದು 990.95 ರೂಪಾಯಿ ತಲುಪಿದೆ. ಇನ್ನು ವಿಎಸ್‌ಟಿ (ವಝೀರ್‌ ಸುಲ್ತಾನ್‌ ಟೊಬ್ಯಾಕೋ ಕಂಪನಿ)ಷೇರಿನಲ್ಲಿ 1.7 ಪ್ರತಿಶತ ಏರಿಕೆ ಕಂಡು ಬಂದಿದ್ದು, ಷೇರು ಬೆಲೆ 3,560 ರೂಪಾಯಿಗೆ ತಲುಪಿದೆ!

ಸರ್ಕಾರಕ್ಕೆ ಲಾಭ?
ಇಲ್ಲಿ ಉಲ್ಲೇಖೀಸಬೇಕಾದ ಅಂಶವೆಂದರೆ ಐಟಿಸಿ ತಂಬಾಕು ಕಂಪನಿಯಲ್ಲಿ ಭಾರತ ಸರ್ಕಾರ 8 ಪ್ರತಿಶತ ಪಾಲು ಹೊಂದಿದೆ (ಎಸ್‌ಯುಯುಟಿಐ ಮೂಲಕ) ಎನ್ನುವುದು. ಇನ್ನು ಸರ್ಕಾರಿ ಸ್ವಾಮ್ಯದ ವಿಮಾ ಕಂಪನಿ ಎಲ್‌ಐಸಿ ಕೂಡ ಐಟಿಸಿಯಲ್ಲಿ 15 ಪ್ರತಿಶತಕ್ಕಿಂತ ಅಧಿಕ ಪಾಲನ್ನು ಹೊಂದಿದೆ. ಒಟ್ಟಲ್ಲಿ ಸಿಗರೇಟ್‌ ವ್ಯಾಪಾರದಿಂದ ಸರ್ಕಾರಕ್ಕಂತೂ ಅಪಾರ ಲಾಭವಿದೆ.

ಇ-ಸಿಗರೇಟ್‌ ಮಾರುಕಟ್ಟೆಯ ಗಾತ್ರವೆಷ್ಟಿದೆ?

ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ ಇ-ಸಿಗರೇಟ್‌ (ವೇಪರ್‌ ಉತ್ಪನ್ನಗಳ) ಮಾರುಕಟ್ಟೆಯು ಭಾರತದಲ್ಲಿ ಅಂಬೆಗಾಲಿಡುತ್ತಿತ್ತು. ಅಂಬೆಗಾಲು ಎಂದರೂ, ಈ ಮಾರುಕಟ್ಟೆಯ ವಹಿವಾಟು 2017ರಲ್ಲೇ 106 ಕೋಟಿ ರೂಪಾಯಿ ದಾಟಿತ್ತು. 2022ರ ವೇಳೆಗೆ ಇ-ಸಿಗರೇಟ್‌ ವಹಿವಾಟು 400 ಕೋಟಿ ರೂಪಾಯಿಗೂ ಅಧಿಕವಾಗುವ ನಿರೀಕ್ಷೆಯಿತ್ತು. 2016-17ರಿಂದ 2018-19ರ ನಡುವೆ ಇ-ಸಿಗರೇಟ್‌ ಮತ್ತು ಅದಕ್ಕೆ ಸಂಬಂಧಿಸಿದ ಉತ್ಪನ್ನಗಳ ಆಮದು 119 ಪ್ರತಿ ಶತ ಏರಿಕೆ ಕಂಡಿತು.

– ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ವಿಶ್ವದ ಧೂಮಪಾನಿಗಳಲ್ಲಿ ಭಾರತೀಯರ ಪ್ರಮಾಣವೇ 12 ಪ್ರತಿಶತದಷ್ಟಿದ್ದು ಪ್ರತಿವರ್ಷ 10 ಲಕ್ಷಕ್ಕೂ ಹೆಚ್ಚು ಭಾರತೀಯರು ತಂಬಾಕು ಬಳಕೆಯಿಂದಾಗಿ ಸಾವನ್ನಪ್ಪುತ್ತಿದ್ದಾರೆ.

– ಅತಿ ಹೆಚ್ಚು ಧೂಮಪಾನಿಗಳಿರುವ ಎರಡನೇ ರಾಷ್ಟ್ರ ಭಾರತ. ನಮ್ಮಲ್ಲಿ 12 ಕೋಟಿಗೂ ಹೆಚ್ಚು ಧೂಮಪಾನಿಗಳಿದ್ದಾರೆ. ಹೀಗಾಗಿ ಧೂಮಪಾನವು ಲಕ್ಷಾಂತರ ಕೋಟಿ ರೂಪಾಯಿಗಳ ಲಾಭದಾಯಕ ವ್ಯವಹಾರವಾಗಿದೆ. ಜೆಯುಯುಎಲ್‌, ಫಿಲಿಪ್‌ ಮೋರೀಸ್‌ನಂಥ ಕಂಪನಿಗಳು ಭಾರತದಲ್ಲಿ ಇ-ಸಿಗರೇಟ್‌ ವಲಯಕ್ಕೂ ವ್ಯಾಪಾರ ವಿಸ್ತರಿಸುವ ಯೋಚನೆಯಲ್ಲಿದ್ದವು.

– ಭಾರತದಲ್ಲಿ ಇ-ಸಿಗರೇಟ್‌ ಉತ್ಪಾದನಾ ಘಟಕಗಳು ಇಲ್ಲವಾದರೂ, ದೇಶದಲ್ಲಿ ಈ ಸಮಯದಲ್ಲಿ 400ಕ್ಕೂ ಹೆಚ್ಚು ಇ-ಸಿಗರೇಟ್‌ ಬ್ರ್ಯಾಂಡ್‌ಗಳಿವೆ.

– ರಾಘವ

Advertisement

Udayavani is now on Telegram. Click here to join our channel and stay updated with the latest news.

Next