ಬೆಂಗಳೂರು: ನಗರದಲ್ಲಿ ವಾಯು ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹಲವು ಯೋಜನೆಗಳನ್ನು ರೂಪಿಸುತ್ತಿದೆ. ಇದರಲ್ಲಿ “ಇ-ಚಾರ್ಜಿಂಗ್ ಘಟಕ’ ಸ್ಥಾಪನೆ ಕೂಡ ಸೇರಿದೆ. ಭವಿಷ್ಯದ ದೃಷ್ಟಿಯಿಂದ ವಿದ್ಯುತ್ ಚಾಲಿತ ವಾಹನಗಳನ್ನು (ಎಲೆಕ್ಟ್ರಿಕಲ್ ವೆಹಿಕಲ್) ಪ್ರೋತ್ಸಾಹಿಸುವ ಉದ್ದೇಶ ಕೂಡ ಇದರಲ್ಲಿ ಅಡಗಿದೆ. ಈ ನಿಟ್ಟಿನಲ್ಲೇ ಕಾರ್ಯ ಪ್ರವೃತ್ತವಾಗಿರುವ ಬಿಡಿಎ ಎಲ್ಲಾ ರೀತಿಯಲ್ಲೂ ಸಜ್ಜಾಗುತ್ತಿದೆ.
ಹುನ್ನಿಗೆರೆಯಲ್ಲಿ ಇ-ಚಾರ್ಜಿಂಗ್ ಕೇಂದ್ರ ಸ್ಥಾಪನೆ ಮಾಡಿದ ನಂತರ ದಿನಗಳಲ್ಲಿ ಬೆಂಗಳೂರಿನ ಸುಮಾರು 20 ಕಡೆಗಳಲ್ಲಿ ವಿದ್ಯುತ್ ಚಾಲಿತ ವಾಹನಗಳಿಗೆ ಚಾರ್ಜಿಂಗ್ ಮಾಡುವ ಘಟಕಗಳನ್ನು ತೆರೆಯುವ ಉದ್ದೇಶವಿದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ. ಪರಿಸರ ಮಾಲಿನ್ಯವನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಸರ್ಕಾರ ವಿದ್ಯುತ್ ಚಾಲಿತ ವಾಹನಗಳಿಗೆ ಪ್ರೋತ್ಸಾಹ ನೀಡುವ ಸಾಧ್ಯತೆ ದಟ್ಟವಾಗಿದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಬಿಡಿಎ, ಇ-ಚಾರ್ಜಿಂಗ್ ಕೇಂದ್ರಕ್ಕೆ ಸ್ಥಾಪನೆಗೆ ಮುಂದಾಗಿದೆ.
ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿಯ ಹುನ್ನಿಗೆರೆ ಗ್ರಾಮದಲ್ಲಿ ವಿಲ್ಲಾ ಮತ್ತು ಅಪಾರ್ಟ್‌ಮೆಂಟ್ ನಿರ್ಮಾಣಕ್ಕೆ ಬಿಡಿಎ ಯೋಜನೆ ರೂಪಿಸಿದೆ. ತುಮಕೂರು ರಸ್ತೆಗೆ ಸಮೀಪದಲ್ಲಿರುವ ಹುನ್ನಿಗೆರೆ ಗ್ರಾಮದಲ್ಲಿ ಪ್ರಾಧಿಕಾರಕ್ಕೆ ಸೇರಿದ ಸುಮಾರು 31ಎಕರೆ ಜಮೀನಿದೆ. ಇಲ್ಲಿ ಸುಮಾರು 322 ವಿಲ್ಲಾಗಳು ಮತ್ತು 320 ಫ್ಲಾಟ್‌ಗಳನ್ನು ಳಗೊಂಡ ಅಪಾರ್ಟ್‌ಮೆಂಟ್ ನಿರ್ಮಿಸಲು ನೀಲಿ ನಕಾಶೆಯನ್ನು ಸಿದ್ಧಪಡಿಸಲಾಗಿದೆ. ಹುನ್ನಿಗೆರೆ ಅಪಾರ್ಟ್‌ಮೆಂಟ್‌ನಲ್ಲಿಯೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ತನ್ನ ಮೊದಲ “ಇ-ಚಾರ್ಜಿಂಗ್ ಘಟಕ’ ಸ್ಥಾಪಿಸಲು ನಿರ್ಧರಿಸಿದೆ.
ಆಡಳಿತ ಮಂಡಳಿ ಸಭೆಯಲ್ಲಿ ಚರ್ಚೆ: ಇದುವರೆಗೂ ಬಿಡಿಎ ಕೇವಲ ಅಪಾರ್ಟ್‌ಮೆಂಟ್, ಸೇತುವೆ ನಿರ್ಮಾಣ ಸೇರಿದಂತೆ ಇನ್ನಿತರ ಕೆಲಸಗಳಲ್ಲಿ ತೊಡಗಿಸಿಕೊಂಡಿತ್ತು. ಆದರೆ, ಈಗ ವಿದ್ಯುತ್ ಚಾಲಿತ ವಾಹನಗಳ ಬಳಕೆಯನ್ನು ಪ್ರೋತ್ಸಾಹಿಸುವ ಸಲುವಾಗಿ “ಇ-ಚಾರ್ಜಿಂಗ್ ಘಟಕ’ ನಿರ್ಮಾಣ ಮಾಡಲು ಮುಂದಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆಡಳಿತ ಮಂಡಳಿಯ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿಲ್ಲ. ಆದರೆ ಈಗಾಗಲೇ ಈ ಸಂಬಂಧ ಪ್ರಾಸ್ತಾವನೆ ಸಿದ್ಧಪಡಿಸಲಾಗಿದ್ದು, ಇದಕ್ಕೆ ಮುಂದಿನ ದಿನಗಳಲ್ಲಿ ಆಡಳಿತ ಮಂಡಳಿ ಸಭೆಯಲ್ಲಿ ಒಪ್ಪಿಗೆ ದೊರೆಯುವ ಸಾಧ್ಯತೆ ಇದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸುಧಾರಿತ ತಂತ್ರಜ್ಞಾನ ಅಳವಡಿಕೆ: ಹುನ್ನಿಗೆರೆ ಯೋಜನೆಗಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸುಮಾರು 195 ಕೋಟಿ ರೂ. ಮೀಸಲಿಟ್ಟಿದೆ. ಆ ಅನುದಾನದಲ್ಲಿಯೇ ಇ-ಚಾರ್ಜಿಂಗ್ ಘಟಕ ತೆರೆಯಲಾಗುವುದು. ಘಟಕದಲ್ಲಿ ಸುಧಾರಿತ ತಂತ್ರಜ್ಞಾನ ಅಳವಡಿಕೆ ಮಾಡಲಾಗುವುದು. ಈ ಬಗ್ಗೆ ಪರಿಸರ ಇಲಾಖೆಯೊಂದಿಗೆ ಮಾತುಕತೆ ನಡೆಸಲಾಗಿದ್ದು, ಸರ್ಕಾರ ಇದಕ್ಕೆ ಮತ್ತಷ್ಟು ಪ್ರೋತ್ಸಾಹ ನೀಡಲಿದೆ ಎಂಬ ನಂಬಿಕೆಯನ್ನು ಪ್ರಾಧಿಕಾರ ಹೊಂದಿದೆ.
ಬಸ್ ನಿಲ್ದಾಣಗಳಲ್ಲೂ ತೆರೆಯಲು ಸಿದ್ಧ: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಮುಂದಿನ ದಿನಗಳಲ್ಲಿ ಮತ್ತಷ್ಟು ವಿದ್ಯುತ್ ಚಾಲಿತ ವಾಹನಗಳನ್ನು ಖರೀದಿ ಮಾಡಿದರೆ ಅದನ್ನು ಪ್ರೋತ್ಸಾಹಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬಿಎಂಟಿಸಿ ಬಸ್ ನಿಲ್ದಾಣಗಳಲ್ಲಿಯೇ ಇ-ಚಾರ್ಜಿಂಗ್ ಘಟಕಗಳನ್ನು ತೆರೆಯಲು ಸಿದ್ಧವಿದೆ ಎಂದು ಬಿಡಿಎ ಎಂಜಿನಿಯರ್ ಮಾಹಿತಿ ನೀಡಿದ್ದಾರೆ.
ಭವಿಷತ್ತಿನ ದೃಷ್ಟಿಯಿಂದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ “ಇ-ಚಾರ್ಜಿಂಗ್ ಘಟಕ’ ಸ್ಥಾಪನೆಗೆ ಮುಂದಾಗಿದೆ. ಈ ಸಂಬಂಧ ಕ್ರಿಯಾ ಯೋಜನೆಯನ್ನು ರೂಪಿಸಲಾಗುತ್ತಿದೆ.
-ವಿನಾಯಕ ಸೂಗುರು, ಬಿಡಿಎ ಅಭಿಯಂತರ ಅಧಿಕಾರಿ
* ದೇವೇಶ ಸೂರಗುಪ್ಪ