ಬೆಂಗಳೂರು: ಇ-ಪುಸ್ತಕ ಓದು ಅಪಾಯಕಾರಿ ಸಂಸ್ಕೃತಿಯಾಗಿದ್ದು ಇದು ಓದುಗರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಈ ಹಿನ್ನೆಲೆಯಲ್ಲಿ ಮುದ್ರಿತ ಪುಸ್ತಕಗಳ ಓದುವ ಗೀಳನ್ನು ರೂಢಿಸಿಕೊಳ್ಳುವಂತೆ ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಹೇಳಿದ್ದಾರೆ.
ಕನ್ನಡ ಪುಸ್ತಕ ಪ್ರಾಧಿಕಾರ ವತಿಯಿಂದ ಆಯೋಜಿಸಲಾಗಿದ್ದ “ನಿಮ್ಮ ಮನೆಗೆ ನಮ್ಮ ಪುಸ್ತಕ ಕಾರ್ಯಕ್ರಮ’ದಲ್ಲಿ ಮಾತನಾಡಿದ ಅವರು, ಇ-ಪುಸ್ತಕದ ಓದು ಕಣ್ಣಿನ ಆರೋಗ್ಯದ ಮೇಲೆ ಹಲವು ಅಡ್ಡ ಪರಿಣಾಮಗಳನ್ನು ಬೀರಲಿದೆ ಎಂದು ತಿಳಿಸಿದರು. ಮುದ್ರಿತ ಪುಸ್ತಕಗಳ ಓದು ಮನಸ್ಸಿಗೆ ಹಿತನೀಡುತ್ತದೆ.
ಅಲ್ಲದೆ ನಾವು ಓದಿದ್ದು ಕೂಡ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯಲಿದೆ. ಈ ಹಿನ್ನೆಲೆಯಲ್ಲಿ ಓದುಗರ ಅದಷ್ಟು ಇ-ಪುಸ್ತಕ ಓದುವ ಸಂಸ್ಕೃತಿಯಿಂದ ದೂರ ಇರುವಂತೆ ಮನವಿ ಮಾಡಿದರು. ಓದುಗರನ್ನು ಬೆಳೆಸುವ ನಿಟ್ಟಿನಲ್ಲಿ ಪ್ರಾಧಿಕಾರ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದು, ಇದರಲ್ಲಿ ನಿಮ್ಮ ಮನೆಗೆ ನಮ್ಮ ಪುಸ್ತಕ ಕಾರ್ಯಕ್ರಮ ಕೂಡ ಒಂದಾಗಿದೆ. ರಾಜ್ಯದ ನಾನಾ ಮೂಲೆಗಳಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ ಎಂದರು.
ವಿಜ್ಞಾನ ಲೇಖಕ ಸುಧೀಂದ್ರ ಹಾಲೊªಡ್ಡೇರಿ ಮಾತನಾಡಿ, ಬಿಜಿಎಲ್ ಸ್ವಾಮಿ ಅವರ ಕೃತಿಗಳ ಓದು ನನ್ನನ್ನು ವಿಜ್ಞಾನ ಬರಹದತ್ತ ಆಕರ್ಷಿಸಿತು. ಅಲ್ಲದೆ ಸರಳ ಭಾಷೆಯಲ್ಲಿ ಲೇಖನಗಳ ಬರವಣಿಗೆಗೂ ಸ್ಫೂರ್ತಿಯಾಯಿತು. ಬಿಜಿಎಲ್ ಸ್ವಾಮಿ ಅವರ “ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕ’ ಕೃತಿ ದಕ್ಷಿಣ ಅಮೆರಿಕಾ ತರಕಾರಿಗಳ ಬೆಳೆಗಳ ಕುರಿತು ಅನುಪಮ ಮಾಹಿತಿ ನೀಡಲಿದೆ ಎಂದು ಹೇಳಿದರು.
ಲೇಖಕಿ ಡಾ.ಎನ್ ಗಾಯಿತ್ರಿ ಮಾತನಾಡಿ, ಸಾಹಿತಿ ಗೀತಾ ನಾಗಭೂಷಣ್, ನಾಗವೇಣಿ ಅವರ ಪುಸ್ತಕಗಳು ನನಗೆ ಅಚ್ಚುಮೆಚ್ಚು ಎಂದು ಹೇಳಿದರು. ಡಾ.ಎಚ್.ಎಸ್. ಪ್ರೇಮ, ಪ್ರಾಧಿಕಾರದ ಆಡಳಿತಾಧಿಕಾರಿ ಸೌಭಾಗ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.