ಕೋಲಾರ: ಸರ್ಕಾರಿ ಶಾಲೆಗಳ ಆಸ್ತಿ ಸಂರಕ್ಷಣೆ ಯಲ್ಲಿ ಜಿಲ್ಲಾಡಳಿತ ಯುದ್ಧದೋಪಾದಿ ಕಾರ್ಯನಿ ರ್ವಹಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಸ್ವಾತಂತ್ರ್ಯಕ್ಕೂ ಮುನ್ನ ಹಾಗೂ ಸ್ವಾತಂತ್ರ್ಯನಂತರ ಕೋಲಾರ ಜಿಲ್ಲಾದ್ಯಂತ ಆರಂಭವಾಗಿರುವ ಬಹುತೇಕ ಸರ್ಕಾರಿ ಶಾಲೆ ಆಸ್ತಿಗೆ ಸಮರ್ಪಕವಾದ ಭೂದಾಖಲಾತಿಗಳೇ ಇರಲಿಲ್ಲ. ಇದೀಗ ಕೋಲಾರ ಜಿಲ್ಲಾಧಿಕಾರಿ ಅಕ್ರಂಪಾಷ, ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಪದ್ಮಾಬಸವಂತಪ್ಪರ ಆಸಕ್ತಿ ಮತ್ತು ಕಾಳಜಿ ಫಲವಾಗಿ ಸರ್ಕಾರಿ ಶಾಲೆ ತ್ವರಿತಗತಿಯಲ್ಲಿ ಇ ಖಾತೆ ಹೊಂದುವುದರ ಜತೆಗೆ ಶಾಲಾ ದಾಖಲಾತಿಗಳ ಸಕ್ರಮ ಕಡತಹೊಂದುವಂತಾಗಿದೆ.
1950 ಸರ್ಕಾರಿ ಶಾಲೆ: ಜಿಲ್ಲಾದ್ಯಂತ 1950 ಸರ್ಕಾರಿ ಶಾಲೆಗಳಿವೆ. ಕಳೆದ ವರ್ಷದವರೆಗೂ ಈ ಶಾಲೆಗಳ ಪೈಕಿ ಶೇ.30 ಶಾಲೆ ಮಾತ್ರವೇ ಸಕ್ರಮ ಭೂ ದಾಖಲೆ ಹೊಂದಿದ್ದವು. ಇನ್ನುಳಿದಂತೆ ಶೇ.70 ಶಾಲೆಗೆ ಭೂದಾಖಲಾತಿಗಳೇ ಇರಲಿಲ್ಲ. ಕೆಲವು ಶಾಲೆಗಳ ದಾಖಲಾತಿಗೆ ಮುಂದಾದರೂ ಸಂಬಂಧಪಟ್ಟ ಗ್ರಾಪಂ, ತಾಪಂ, ಪುರಸಭೆ, ಪಪಂ ಹಾಗೂ ನಗರಸಭೆ ಅಧಿಕಾರಿಗಳು ಶಾಲೆಗಳಿಗೆ ಖಾತೆ ಮಾಡಿಕೊಡಲು ಮುಂದಾಗುತ್ತಿರಲಿಲ್ಲ.
ಕೇವಲ 15 ದಿನದಲ್ಲಿ 709 ಶಾಲೆಗೆ ಭೂದಾಖಲೆ: ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೃಷ್ಣಮೂರ್ತಿ ಹಾಗೂ ವಿವಿಧ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲಾ ಭೂದಾಖಲಾತಿ ಸಕ್ರಮೀಕರಿಸಲು ಮುಂದಾದರು. ಇದರಿಂದ ಕೇವಲ ಎರಡು ವಾರಗಳಲ್ಲಿ ಕೋಲಾರ ಜಿಲ್ಲೆಯ ವಿವಿಧ ತಾಲೂಕುಗಳ 709 ಸರ್ಕಾರಿ ಶಾಲೆಗಳ ಭೂಮಿಯ ದಾಖಲಾತಿ ಹೊಂದಿ ಇ ಖಾತೆ ಪಡೆಯುವಂತಾಗಿದೆ. ಈ ಹಿಂದೆ ಸ್ವಾತಂತ್ರ್ಯ ಬಂದಾಗಿನಿಂದಲೂ 634 ಶಾಲೆ ದಾಖಲಾತಿ ಹೊಂದಿದ್ದರೆ, ಈಗ ಕೇವಲ 15 ದಿನಗಳಲ್ಲಿ ಇನ್ನೂ 709 ಶಾಲೆ ದಾಖಲಾತಿ ಹೊಂದುವಂತಾಗಿರುವುದು ಐತಿಹಾಸಿಕ ದಾಖಲೆ ಆಗಿದೆ.
ಬಾಕಿ ಶಾಲೆ: ಇನ್ನೂ 600 ಕ್ಕೂ ಹೆಚ್ಚು ಶಾಲೆ ಭೂದಾಖಲಾತಿ ಹೊಂದಬೇಕಾಗಿದೆ. ಮುಂದಿನ ವಾರದೊಳಗೆ ಪೂರ್ಣಗೊಳಿಸಬೇಕೆಂದು ಡೀಸಿ ಅಕ್ರಂಪಾಷಾ ಕಾಲಮಿತಿ ನಿಗದಿಪಡಿಸಿದ್ದಾರೆ. ಬಾಕಿ ಶಾಲೆಗಳು ತಾ ಪಂ ಹಂತದಲ್ಲಿ 217, ತಹಶೀಲ್ದಾರ್ ಕಚೇರಿಯಲ್ಲಿ 414, ನಗರಸಭೆ ಹಂತದಲ್ಲಿ ಕೇವಲ 9 ಶಾಲೆ ಮಾತ್ರವೇ ಭೂದಾಖಲಾತಿ ಹೊಂದಬೇಕಿದೆ. ಉಳಿದಂತೆ 24 ಶಾಲೆ ಭೂದಾಖಲಾತಿ ವಿಚಾರ ಕೋರ್ಟ್‌ನಲ್ಲಿ ಇತ್ಯರ್ಥವಾಗಬೇಕಾಗಿದೆ. ನಗರಸಭೆ ಹಂತದಲ್ಲಿ ಕೋಲಾರ ನಗರಸಭೆ 3 ದಿನಗಳ ಹಿಂದಷ್ಟೇ 8 ಶಾಲೆಗಳ ಇ ಖಾತೆ ಪೂರ್ಣಗೊಳಿಸಿ ಆಯಾ ಮುಖ್ಯ ಶಿಕ್ಷಕರಿಗೆ ಹಸ್ತಾಂತರಿಸಲು ಮುಂದಾಗಿದೆ. ಕೋಲಾರ ನಗರಸಭೆ ವ್ಯಾಪ್ತಿಯಲ್ಲಿ ಕೇವಲ 1 ಶಾಲೆ ಮಾತ್ರ ಬಾಕಿ ಇದೆ. ಶ್ರೀನಿವಾಸಪುರ ಪುರಸಭೆ ವ್ಯಾಪ್ತಿಯಲ್ಲಿ ಕೇವಲ 8 ಶಾಲೆ ಮಾತ್ರವೇ ಭೂದಾಖಲಾತಿ ಹೊಂದಬೇಕಾಗಿದೆ. ಉಳಿದಂತೆ ಕೆಜಿಎಫ್, ಮಾಲೂರು, ಮುಳಬಾಗಿಲು ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯ ಎಲ್ಲಾ ಸರ್ಕಾರಿ ಶಾಲೆಗಳ ಭೂದಾಖಲಾತಿ ಸಕ್ರಮಗೊಳಿಸಿವೆ.
3 ಕಡತಗಳನ್ನಿಡಲು ಸೂಚನೆ: ಸರ್ಕಾರಿ ಶಾಲೆಗಳ ದಾಖಲಾತಿ ಸಕ್ರಮೀಕರಿಸುವುದರ ಕತೆಗೆ ಭೂದಾಖಲಾತಿಗಳ 3 ಪ್ರತಿಗಳ ಕಡತವನ್ನು ಕಡ್ಡಾಯವಾಗಿ ಸೃಜಿಸಬೇಕೆಂದು ಡೀಸಿ ಸೂಚಿಸಿದ್ದಾರೆ. ಒಂದು ಕಡತ ಆಯಾ ಸರ್ಕಾರಿ ಶಾಲೆ ಮುಖ್ಯೋಪಾಧ್ಯಾಯರ ಸು ಪರ್ದಿಯಲ್ಲಿ ಶಾಲೆಯಲ್ಲಿರಬೇಕು, ಮತ್ತೂಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿರಬೇಕು, ಮತ್ತೂಂದು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿಯಲ್ಲಿರಬೇಕು ಎಂದು ಸೂಚಿಸಲಾಗಿದೆ. ಯಾವುದೋ ಒಂದು ಹಂತದಲ್ಲಿ ಶಾಲಾ ದಾಖಲಾತಿ ಕಳುವಾದರೂ ಮತ್ತೂಂದು ಇಲಾಖೆಯಲ್ಲಿ ಇರುತ್ತದೆ ಎಂಬುದೇ ಇದರ ಉದ್ದೇಶವಾಗಿದೆ. ಒಟ್ಟಾರೆ ಜಿಲ್ಲಾಡಳಿತದ ಅಧಿಕಾರಿಗಳ ಆಸಕ್ತಿ ಫಲವಾಗಿ ಎಲ್ಲಾ ಸರ್ಕಾರಿ ಶಾಲೆಗಳ ಭೂದಾಖಲಾತಿ ಸಕ್ರಮವಾಗುವ ಕಾಲ ಸನ್ನಿಹಿತವಾಗುತ್ತಿದೆ.
1,316ರಲ್ಲಿ 634 ಶಾಲೆಗೆ ಮಾತ್ರ ದಾಖಲಾತಿ: ಜಿಲ್ಲಾದ್ಯಂತ 1950 ವಿವಿಧ ಹಂತಗಳ ಸರ್ಕಾರಿ ಶಾಲೆಗಳಿದ್ದರೂ, ಈ ಹಿಂದಿನ ವರ್ಷದವರೆಗೂ ಕೇವಲ 634 ಶಾಲೆ ಮಾತ್ರವೇ ತನ್ನ ಆಸ್ತಿ ಜಮೀನಿನ ದಾಖಲಾತಿ ಸಕ್ರಮವಾಗಿ ಹೊಂದಿದ್ದವು. ಉಳಿದಂತೆ 1,316 ಸರ್ಕಾರಿ ಶಾಲೆಗೆ ದಾಖಲಾತಿಗಳೇ ಇರಲಿಲ್ಲ. ಕೋಲಾರಕ್ಕೆ ಕಳೆದ ವರ್ಷ ಡೀಸಿ ಅಕ್ರಂಪಾಷಾ ಆಗಮಿಸಿದ ನಂತರ ಶಾಲಾ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನೆ ಸಂದ ರ್ಭದಲ್ಲಿ ಸಾವಿರಕ್ಕೂ ಹೆಚ್ಚು ಶಾಲೆಗೆ ಭೂದಾಖಲಾತಿ ಇಲ್ಲದಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದರು.ಜಿಪಂ ಸಿಇಒ ಆಗಿ ಆಗಮಿಸಿದ್ದ ಪದ್ಮಾಬಸವಂತಪ್ಪ ಅವರು ಶೈಕ್ಷಣಿಕ ಪ್ರಗತಿಗೆ ಗಮನ ಕೊಟ್ಟಿದ್ದಲ್ಲದೆ ಕಾಲಮಿತಿಯೊಳಗೆ ಶಾಲಾ ದಾಖಲಾತಿ ಸಕ್ರಮೀಕರಿಸಬೇಕೆಂದು ಆದೇಶಿಸಿದ್ದರು.
ಈಗಾಗಲೇ 709 ಶಾಲಾ ದಾಖಲಾತಿ ಸಕ್ರಮೀಕರಿಸಲಾಗಿದೆ. ಜಿಲ್ಲಾಧಿಕಾರಿ, ಜಿಪಂ ಸಿಇಒ ಅವರ ಗಡುವಿಗೂ ಮುನ್ನವೇ ಶಾಲೆ ಭೂದಾಖಲಾತಿ ಸಕ್ರಮೀಕರಿಸಲು ಇಲಾಖೆ, ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ.
●ಕೃಷ್ಣಮೂರ್ತಿ, ಉಪ ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ, ಕೋಲಾರ
ಸರ್ಕಾರಿ ಶಾಲೆಗಳ ಭೂ ದಾಖಲೆಸಕ್ರಮ ಆಗಿಸುತ್ತಿರುವುದರಿಂದ ಶಾಲಾ ಭೂಮಿ ಒತ್ತುವರಿಗೆ ಕಡಿವಾಣ ಹಾಕಿದಂತಾಗುತ್ತದೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಗೂ ಇದು ನೆರವಾಗುತ್ತದೆ.
-ಎಂ.ಕೃಷ್ಣಪ್ಪ, ನಿವೃತ್ತ ಮುಖ್ಯ ಶಿಕ್ಷಕರು, ಕೋಲಾರ
–ಕೆ.ಎಸ್.ಗಣೇಶ್