ಚಿಕ್ಕಮಗಳೂರು: ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥಗೊಳಿಸುವ ಉದ್ದೇಶದಿಂದ ರಾಜ್ಯಾದ್ಯಂತ ಸೆ.19ರಂದು ಜಿಲ್ಲಾ ಮತ್ತು ತಾಲೂಕು ಕೇಂದ್ರ ನ್ಯಾಯಾಲಯಗಳಲ್ಲಿ ಬೃಹತ್ ಇ-ಲೋಕ್-ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶುಭ ಗೌಡರ್ ತಿಳಿಸಿದರು.
ಸೋಮವಾರ ನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಎಡಿಆರ್ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ -19 ಸೋಂಕು ಕಾರಣದಿಂದ ಬಹುತೇಕ ಪ್ರಕರಣಗಳು ಇತ್ಯರ್ಥವಾಗದೆ ಬಾಕಿ ಇವೆ. ಅವುಗಳನ್ನು ತ್ವರಿತಗತಿಯಲ್ಲಿ ಬಗೆಹರಿಸುವ ಉದ್ದೇಶದಿಂದ ಉಚ್ಚ ನ್ಯಾಯಾಲಯದ ಆದೇಶದಂತೆ ಸೆ.19ರಂದು ಜಿಲ್ಲೆ ಮತ್ತು ತಾಲೂಕು ನ್ಯಾಯಾಲಯ ಸಂಕೀರ್ಣದಲ್ಲಿ ಬೃಹತ್ ಇ-ಲೋಕ್ -ಅದಾಲತ್ ಆಯೋಜಿಸಲಾಗಿದೆ.
ಕಕ್ಷಿದಾರರು ವಕೀಲರುಮೂಲಕ, ಕಾನೂನು ಸೇವಾ ಪ್ರಾಧಿಕಾರಕ್ಕೆ ಕರೆ ಮಾಡಿ ಅಥವಾ ಇಮೇಲ್ ಮೂಲಕ ತಿಳಿಸಿದ್ದಲ್ಲಿ ವೀಡಿಯೋ ಸಂವಾದದ ಮೂಲಕ ಪ್ರಕರಣವನ್ನು ಸುಲಭವಾಗಿ ಬಗೆಹರಿಸಿಕೊಳ್ಳಬುದು ಎಂದು ತಿಳಿಸಿದರು. ನಗರದ ಜೂನಿಯರ್ ಕಾಲೇಜಿನಲ್ಲಿ ಪ್ರತ್ಯೇಕ 6 ರಿಮೋಟ್ ಪಾಯಿಂಟ್ ಕೊಠಡಿಗಳನ್ನು ನಿಗ ಪಡಿಸಿದ್ದು, 3 ಕೊಠಡಿ ಕ್ರಿಮಿನಲ್ ಪ್ರಕರಣದ ಇತ್ಯರ್ಥಕ್ಕೆ ನಿಗದಿಪಡಿಸಲಾಗಿದೆ. ಪ್ರಕರಣಗಳ ಕುರಿತು ಈಗಾಗಲೇ ಸಾಕ್ಷ್ಯಧಾರಗಳನ್ನು ಸಂಗ್ರಹಿಸಲಾಗುತ್ತಿದ್ದು, ಕಕ್ಷಿದಾರರು ವಿಡಿಯೋ ಸಂವಾದದಲ್ಲಿ ಪಾಲ್ಗೊಂಡು ಪ್ರಕರಣ ಪರಿಹರಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಸವರಾಜ್ ಚೇಂಗಟಿ ಮಾತನಾಡಿ, ಈಗಾಗಲೇ ಮೂರು ರಾಷ್ಟ್ರೀಯ ಲೋಕ ಅದಾಲತ್ ಗಳು ನಡೆಯಬೇಕಿತ್ತು. ಕೋವಿಡ್-19 ಕಾರಣದಿಂದಾಗಿ ಅವುಗಳನ್ನು ರದ್ದುಪಡಿಸಲಾಯಿತು. ಅಲ್ಲದೇ ಹೆಚ್ಚು ಪ್ರಕರಣಗಳು ಇತ್ಯರ್ಥವಾಗದೇ ಬಾಕಿ ಇವೆ. ಪ್ರಕರಣಗಳನ್ನು ಶೀಘ್ರವಾಗಿ ಪರಿಹರಿಸಲು ರಾಜ್ಯ ಉಚ್ಚ ನ್ಯಾಯಾಲಯ ಹಾಗೂ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಜಿಲ್ಲೆ ಹಾಗೂ ಎಲ್ಲಾ ತಾಲೂಕು ನ್ಯಾಯಾಲಯಗಳಲ್ಲಿ ಬೃಹತ್-ಇ-ಲೋಕ್ ಅದಾಲತ್‌ಗೆ ನಿರ್ದೇಶನ ನೀಡಿದೆ. ಕಕ್ಷಿದಾರರು ಇದರ ಸದುಪಯೊಗ ಪಡೆದುಕೊಳ್ಳಬೇಕೆಂದು ತಿಳಿಸಿದರು