Advertisement

ಡಿಸ್‌ಫೇಜಿಯಾ;ನಳಿಕೆಯ ಮೂಲಕ ಉಣಿಸುವುದನ್ನು ತ್ಯಜಿಸಿ ಬಾಯಿಯಿಂದಲೇ ಆಹಾರ ಸೇವನೆಯತ್ತ

09:02 PM Apr 18, 2020 | Sriram |

ಲಕ್ವಾ, ಪಾರ್ಕಿನ್ಸನ್‌, ಅಲ್ಜೀಮರ್ಸ್‌ ಮೊದಲಾದ ದೀರ್ಘ‌ಕಾಲೀನ ಕಾಯಿಲೆಗಳು ಮತ್ತು ಅಪಘಾತಗಳಲ್ಲಿ ಗಾಯಗೊಳ್ಳುವುದು ಇತ್ಯಾದಿ ಅನೇಕ ಸಂದರ್ಭಗಳಲ್ಲಿ ವ್ಯಕ್ತಿ ಸ್ವತಃ ಬಾಯಿಯ ಮೂಲಕ ಆಹಾರ ಸೇವಿಸುವುದಕ್ಕೆ ಅಶಕ್ತನಾಗುತ್ತಾನೆ. ಇದನ್ನು ವೈದ್ಯಕೀಯ ಪರಿಭಾಷೆಯಲ್ಲಿ ಡಿಸ್‌ಫೇಜಿಯಾ ಎಂಬುದಾಗಿ ಕರೆಯಲಾಗುತ್ತದೆ. ಅಂದರೆ ಆಹಾರ ನುಂಗುವುದಕ್ಕೆ ಕಷ್ಟವಾಗುವುದು. ಇಂತಹ ಸಂದರ್ಭ ಎದುರಾದಾಗ ವ್ಯಕ್ತಿಯ ಪೌಷ್ಟಿಕಾಂಶ ಅಗತ್ಯವನ್ನು ಪೂರೈಸುವುದು ಮತ್ತು ಬಾಯಿಯ ಔಷಧ ಒದಗಿಸುವುದಕ್ಕೆ ಪರ್ಯಾಯ ಮಾರ್ಗಗಳು ಹಲವಾರಿವೆ. ಅವುಗಳಲ್ಲಿ ಪ್ರಮುಖವಾದದ್ದು ನ್ಯಾಸೊಗ್ಯಾಸ್ಟ್ರಿಕ್‌ ಟ್ಯೂಬ್‌ (ಎನ್‌ಜಿಟಿ) ಮೂಲಕ ಆಹಾರ ಪೂರೈಕೆ. ಆಡುಭಾಷೆಯಲ್ಲಿ ಇದನ್ನು ಮೂಗಿನ ಪೈಪ್‌ ಎಂದು ಕರೆಯುತ್ತಾರೆ.

Advertisement

ಡಿಸ್‌ಫೇಜಿಯಾ ಅಂದರೆ ನುಂಗಲು ಕಷ್ಟವಾಗುವುದು. ಈ ಅನಾರೋಗ್ಯ ಸ್ಥಿತಿಯು ಹಲವಾರು ದುಷ್ಪರಿಣಾಮಗಳನ್ನು ಉಂಟುಮಾಡುತ್ತದೆ. ಇವುಗಳಲ್ಲಿ ಪ್ರಾಮುಖ್ಯ ಮತ್ತು ಮೂಲಭೂತವಾದದ್ದು ಎಂದರೆ ನುಂಗುವಿಕೆಯ ಪರಿಣಾಮಕಾರಿತ್ವ ಮತ್ತು ಸುರಕ್ಷೆ ನಷ್ಟವಾಗುವುದು. ಸುರಕ್ಷೆ ಅಂದರೆ ಶ್ವಾಸಕೋಶಕ್ಕೆ ಆಹಾರ ನುಗ್ಗದಂತೆ ವ್ಯಕ್ತಿಯು ಎಷ್ಟು ಸುರಕ್ಷಿತವಾಗಿ ಆಹಾರವನ್ನು ನುಂಗುತ್ತಾನೆ ಎನ್ನುವುದು ಹಾಗೂ ಪರಿಣಾಮಕಾರಿತ್ವ ಎಂದರೆ ವ್ಯಕ್ತಿಯು ಎಷ್ಟು ಚೆನ್ನಾಗಿ, ಪರಿಣಾಮಕಾರಿಯಾಗಿ ಮತ್ತು ಸಮಯ ಪರಿಪೂರ್ಣವಾಗಿ ಆಹಾರವನ್ನು ನುಂಗುತ್ತಾನೆ ಎನ್ನುವುದು. ಡಿಸ್‌ಫೇಜಿಯಾ ಸಮಸ್ಯೆಯ ಸಂಕೀರ್ಣತೆಗಳಿಂದ ವ್ಯಕ್ತಿಯ ಶ್ವಾಸೋಚ್ಛಾ$Ìಸ ಮತ್ತು ಪೌಷ್ಟಿಕಾಂಶ ಸ್ಥಿತಿಗತಿಗಳೂ ಬಾಧಿತವಾಗುತ್ತವೆ. ಬಾಯಿಯ ಮೂಲಕ ಆಹಾರವನ್ನು ನುಂಗುವುದು ಸಾಧ್ಯವಿಲ್ಲದ ವ್ಯಕ್ತಿಗಳಿಗೆ ಪೌಷ್ಟಿಕಾಂಶ ಪೂರೈಸುವುದಕ್ಕಾಗಿ ಹಲವು ವಿಧಾನಗಳ ಆಯ್ಕೆ ಇದೆ; ನ್ಯಾಸೊಗ್ಯಾಸ್ಟ್ರಿಕ್‌, ಗ್ಯಾಸ್ಟ್ರೊನೊಮಿ, ಜೆಜುನೊಸ್ಟೊಮಿ ಮತ್ತು ಪರ್ಕಟೇನಿಯಸ್‌ ಎಂಡೊಸ್ಕೊಪಿಕ್‌ ಗ್ಯಾಸ್ಟ್ರೊನೊಮಿ (ಪಿಇಜಿ).

ಬಾಯಿಯ ಮೂಲಕ ಸುರಕ್ಷಿತವಾಗಿ ಮತ್ತು ಪರಿಣಾಮಕಾರಿಯಾಗಿ ಆಹಾರವನ್ನು ನುಂಗಲು ಸಾಧ್ಯವಿಲ್ಲದ ವ್ಯಕ್ತಿಗಳಿಗೆ ಆಹಾರ ಮತ್ತು ಪೌಷ್ಟಿಕಾಂಶವನ್ನು ಪೂರೈಸುವುದಕ್ಕೆ ಹಲವು ಮಾರ್ಗೋಪಾಯಗಳಿವೆ.

ಐವಿ ಅಥವಾ ಜನಸಾಮಾನ್ಯರ ಭಾಷೆಯಲ್ಲಿ ಹೇಳುವ “ಗುÉಕೋಸ್‌ ಅಥವಾ ಡ್ರಿಪ್‌ ನೀಡುವುದು’ ಮೂಲಕ ಪೌಷ್ಟಿಕಾಂಶ ಪೂರೈಕೆ ನಮಗೆಲ್ಲ ಗೊತ್ತಿರುವಂಥದ್ದೇ ಆಗಿದೆ. ಇನ್ನೊಂದು ಮೂಗಿನ ಮೂಲಕ ತೂರಿಸಿರುವಂತಹ ನಳಿಕೆಯ ಮೂಲಕ ಆಹಾರ ನೀಡಿಕೆ. ಇದಲ್ಲದೆ ಇನ್ನೂ ಇರುವ ಇತರ ನಳಿಕೆಯ ಮೂಲಕ ಪೌಷ್ಟಿಕಾಂಶ ಪೂರೈಕೆಯ ವಿಧಾನಗಳನ್ನು ಕಂಡಿರುವ ಸಾಧ್ಯತೆ ಕಡಿಮೆ. ಪೌಷ್ಟಿಕಾಂಶ ಪೂರೈಕೆಯ ಕೊಳವೆಗಳನ್ನು ತಾತ್ಕಾಲಿಕ ಅಳವಡಿಸಬೇಕೇ ಅಥವಾ ಖಾಯಂ ಆಗಿಯೇ ಎನ್ನುವುದು ವ್ಯಕ್ತಿಯಿಂದ ವ್ಯಕ್ತಿಗೆ ಆರೋಗ್ಯ ಸ್ಥಿತಿಗತಿಗಳನ್ನು ಆಧರಿಸಿ ಬದಲಾಗುತ್ತದೆ. ಇವುಗಳಲ್ಲಿ ವೈದ್ಯಕೀಯವಾಗಿ ನ್ಯಾಸೊಗ್ಯಾಸ್ಟ್ರಿಕ್‌ ಟ್ಯೂಬ್‌ (ಎನ್‌ಜಿಟಿ)ಗೆ ಆದ್ಯತೆ ನೀಡಲಾಗುತ್ತದೆ. ಪೌಷ್ಟಿಕಾಂಶವನ್ನು ಕಾಪಾಡಿಕೊಳ್ಳುವ ದೃಷ್ಟಿಯಲ್ಲಿ ನ್ಯಾಸೊಗ್ಯಾಸ್ಟ್ರಿಕ್‌ ಟ್ಯೂಬ್‌ ಸಾಮಾನ್ಯವಾಗಿ ಹೆಚ್ಚು ಪರಿಣಾಮಕಾರಿ ಮತ್ತು ಬಹಳ ಸುರಕ್ಷಿತ ಎಂಬುದಾಗಿ ಪರಿಗಣಿತವಾಗಿದೆ. ಎನ್‌ಜಿಟಿ ಮೂಲಕ ಆಹಾರ ಸ್ವೀಕಾರವು ರೋಗಿಯ ಸ್ಥಿತಿಗತಿಯನ್ನು ಆಧರಿಸಿ ಹಲವು ದಿನಗಳು ಅಥವಾ ವಾರಗಳಿಂದ ತೊಡಗಿ ದೀರ್ಘ‌ಕಾಲದ ವರೆಗೂ ಮುಂದುವರಿಯಬಹುದು. ಹೀಗಾಗಿ ಎನ್‌ಜಿಟಿಯ ಮೂಲಕ ಆಹಾರ ಸ್ವೀಕರಿಸುವುದನ್ನು ಕೈಬಿಟ್ಟು ಸಹಜ ಆಹಾರ ಸ್ವೀಕಾರಕ್ಕೆ ಮರಳುವ ಸಮಯವು ಬಹಳ ನಿರ್ಣಾಯಕವಾಗಿರುತ್ತದೆ. ಏಕೆಂದರೆ ಆ ಸಂದರ್ಭದಲ್ಲಿ ಡಿಸ್‌ಫೇಜಿಯಾದ ದ್ವಿತೀಯಕ ಸಂಕೀರ್ಣತೆಗಳಾದ ನಿರ್ಜಲೀಕರಣ, ಅಪೌಷ್ಟಿಕತೆ, ತೂಕ ನಷ್ಟ ಮತ್ತು ಆಸ್ಪಿರೇಶನ್‌ ನ್ಯುಮೋನೈಟಿಸ್‌ನಂತಹವು ಕಾಣಿಸಿಕೊಳ್ಳುವ ಸಾಧ್ಯತೆಗಳಿರುತ್ತವೆ.

ಎನ್‌ಜಿ ಟ್ಯೂಬ್‌ ಎಂದರೇನು?
ವೈದ್ಯಕೀಯವಾಗಿ ಇದು ನ್ಯಾಸೊಗ್ಯಾಸ್ಟ್ರಿಕ್‌ ಟ್ಯೂಬ್‌ ಅಂದರೆ ಶ್ವಾಸಮಾರ್ಗದ ಮೂಲಕವಾಗಿ ಅನ್ನನಾಳವನ್ನು ಪ್ರವೇಶಿಸುವ ಕೊಳವೆ; ಸಾಮಾನ್ಯ ಆಡುಭಾಷೆಯಲ್ಲಿ ಮೂಗಿನ ಪೈಪ್‌ ಎನ್ನುತ್ತಾರೆ. ಮೂಗಿನ ಮೂಲಕ ಹೊಟ್ಟೆಯನ್ನು ಪ್ರವೇಶಿಸುವಂತೆ ಇದನ್ನು ಅಳವಡಿಸುತ್ತಾರೆ. ಆಹಾರ, ದ್ರವಾಹಾರ ಮತ್ತು ಔಷಧಗಳನ್ನು ನೀಡುವುದಕ್ಕಾಗಿ ಇದನ್ನು ಉಪಯೋಗಿಸುತ್ತಾರೆ.

Advertisement

ಈ ಕೊಳವೆಯ ಮೂಲಕ ಆಹಾರ ನೀಡುವುದು ಹೇಗೆ?
ಹೆಚ್ಚಾಗಿ ಆಸ್ಪತ್ರೆಗಳಲ್ಲಿ ದಾದಿಯರು ಈ ಕೊಳವೆಯ ಮೂಲಕ ಆಹಾರ, ಔಷಧ ಪೂರೈಕೆ ಮಾಡುತ್ತಾರೆ, ಸಾಮಾನ್ಯವಾಗಿ ಎರಡು ತಾಸಿಗೆ ಒಮ್ಮೆಯ ಸಮಯ ಅಂತರ ಕಾಪಾಡಿಕೊಳ್ಳುತ್ತಾರೆ. ಈ ಕೊಳವೆಯ ಮೂಲಕ ಯಾವ ವಿಧವಾದ ಆಹಾರವನ್ನು ರೋಗಿಗೆ ನೀಡಬೇಕು ಎಂಬುದನ್ನು ಚಿಕಿತ್ಸೆ ಒದಗಿಸುತ್ತಿರುವ ಮತ್ತು ಪಥ್ಯಾಹಾರ ತಜ್ಞರು ನಿರ್ಧರಿಸುತ್ತಾರೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ ಅವರ ಆರೋಗ್ಯ ಸ್ಥಿತಿಗತಿಯನ್ನು ಆಧರಿಸಿ ನಿರ್ಧಾರವಾಗುತ್ತದೆ. ವ್ಯಕ್ತಿ ಆಸ್ಪತ್ರೆಯಿಂದ ಬಿಡುಗಡೆ ಗೊಳ್ಳುವ ಹೊತ್ತಿಗೆ ಎನ್‌ಜಿ ಕೊಳವೆಯ ಮೂಲಕ ಆಹಾರ ಮತ್ತು ಔಷಧ ನೀಡುವುದರ ಬಗೆಗಿನ ಸೂಚನೆಗಳನ್ನು ನೀಡಲಾಗುತ್ತದೆ.

ಇದಕ್ಕಾಗಿ ನಿಮ್ಮ ಪಥ್ಯಾಹಾರ ಮಾರ್ಗದರ್ಶಿ ಯನ್ನು ರೋಗಿ ಅಥವಾ ರೋಗಿಯ ಆರೈಕೆದಾರರು ಆಸ್ಪತ್ರೆಯಿಂದ ಪಡೆಯಬೇಕೇ ವಿನಾ ಇತರರ ಮಾರ್ಗದರ್ಶಿ ಯನ್ನು ಅನುಸರಿಸ ಬಾರದು. ಆಹಾರ ಅಥವಾ ಔಷಧ ನೀಡಿದ ಬಳಿಕ ರೋಗಿಯು ಕನಿಷ್ಠ ಅರ್ಧ ತಾಸು ಕಾಲ ಕುಳಿತ ಅಥವಾ ಅರೆ ಕುಳಿತ ಭಂಗಿಯಲ್ಲಿ ಇರಬೇಕು. ಔಷಧಗಳ ಸಹಿತ ಸಮರ್ಪಕ ಪ್ರಮಾಣದಲ್ಲಿ ಪೌಷ್ಟಿಕಾಂಶಗಳನ್ನು
ದೀರ್ಘ‌ಕಾಲ ರೋಗಿಗೆ ಒದಗಿಸುವುದಕ್ಕೆ ಈ ವಿಧಾನವು ಬಹಳ ಉಪಯುಕ್ತವೂ ಪ್ರಯೋಜನ ಕಾರಿಯೂ ಆಗಿದೆ.

ಆಸ್ಪತ್ರೆಯಿಂದ ಬಿಡುಗಡೆಗೆ ಮುನ್ನ ಟ್ಯೂಬನ್ನು ತೆಗೆಯಿಸುವುದು ಅಗತ್ಯವೇ?
ಅನೇಕ ಬಾರಿ ರೋಗಿಗಳು ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ತೆರಳುವುದಕ್ಕೆ ಮುನ್ನ ಟ್ಯೂಬನ್ನು ತೆಗೆಯಲೇ ಬೇಕು ಎಂದು ಹಠ ಹಿಡಿಯುವುದು ಕಂಡುಬರುತ್ತದೆ. ಟ್ಯೂಬ್‌ ಇರುವುದರಿಂದ ಮನೆಯಲ್ಲಿ ಯಾವುದೇ ತೊಂದರೆ ಆಗಬಾರದು ಎಂಬ ಆಲೋಚನೆ ಅಥವಾ ಹೆಚ್ಚು ಉತ್ತಮ ಗುಣಮಟ್ಟದ ಜೀವನದ ಬಯಕೆ ಇರುವುದು ಇದಕ್ಕೆ ಕಾರಣವಾಗಿರಬಹುದು.

ಎನ್‌ಜಿ ಟ್ಯೂಬ್‌: ಸಾಮಾನ್ಯವಾದ ಸಮಸ್ಯೆಗಳೇನು?
ಸಾಮಾನ್ಯವಾಗಿ ಕಂಡುಬರುವ ತೊಂದರೆ ಎಂದರೆ, ಕೆಮ್ಮು ಮತ್ತು ಸೀನಿನಿಂದಾಗಿ ಕೊಳವೆ ತನ್ನ ಸ್ಥಾನದಿಂದ ತಪ್ಪುವುದು. ಟೇಪುಗಳ ಸಹಾಯದಿಂದ ಈ ಕೊಳವೆಗಳನ್ನು ಭದ್ರವಾಗಿ ಅಳವಡಿಸಲಾಗಿದ್ದರೂ ರೋಗಿ ತಾನೇ ಟ್ಯೂಬ್‌ ಕಿತ್ತುಕೊಳ್ಳುವ ಪ್ರಕರಣಗಳು ಕೂಡ ವರದಿಯಾಗಿವೆ. ಇನ್ನು, ರೋಗಿಯ ಆರೈಕೆ ನೋಡಿಕೊಳ್ಳುವವರ ದೃಷ್ಟಿಯಿಂದ ಸಮಸ್ಯೆಗಳ ಬಗ್ಗೆ ಹೇಳುವುದಾದರೆ, ಕೊಳವೆಯಲ್ಲಿ ಆಹಾರ ಸಿಲುಕಿಕೊಳ್ಳುವುದು ಒಂದು ಸಮಸ್ಯೆ. ಇದಕ್ಕಾಗಿ ಅವರು ಯಾವುದಾದರೂ ಕಡ್ಡಿಯ ಮೂಲಕ ಅದನ್ನು ನಿವಾರಿಸಲು ಪ್ರಯತ್ನಿಸುವುದು, ಕೊನೆಗೆ ಕಡ್ಡಿ ಮುರಿದು ಆಹಾರ ಮತ್ತು ಕಡ್ಡಿ ಎರಡೂ ಸಿಲುಕಿಕೊಳ್ಳುವುದು, ಕೊಳವೆಗೆ ಹಾನಿಯಾಗುವುದು ಇದ್ದೇ ಇರುತ್ತದೆ.

ಇಂತಹ ಸಂದರ್ಭಗಳಲ್ಲಿ ನಾನು ಅಥವಾ ನಾವು ಮನೆಯಲ್ಲಿಯೇ ಟ್ಯೂಬನ್ನು ಮರಳಿ ತೂರಿಸಿಕೊಳ್ಳಬಹುದೇ?
ಇಲ್ಲ ಇಲ್ಲ, ಖಂಡಿತ ಇಲ್ಲ. ಮರಳಿ ತೂರಿಸಿಕೊಳ್ಳುವ ಪ್ರಯತ್ನವೇನಾದರೂ ನಡೆಸಿದ್ದು, ರೋಗಿ ಅದೃಷ್ಟಶಾಲಿಯಾಗಿದ್ದರೆ ಪರವಾಗಿಲ್ಲ. ಆದರೆ ಹೀಗೆ ಸ್ವಯಂ ಮರಳಿ ಸಿಕ್ಕಿಸಿಕೊಳ್ಳುವ ಪ್ರಯತ್ನದ ದುಷ್ಪರಿಣಾಮಗಳು ಹಲವು ವರದಿಯಾಗುತ್ತವೆ. ಕೊಳವೆಯನ್ನು ಸರಿಯಾಗಿ ತೂರಿಸುವ ಕೌಶಲ ಮತ್ತು ದೇಹದ ಒಳಾಂಗ ರಚನೆಯ ಮಾಹಿತಿ ನಿಮಗಿಲ್ಲದೆ ಇದ್ದರೆ ಅದು ಶ್ವಾಸನಾಳದ ಒಳಕ್ಕೆ ತೂರಿಕೊಳ್ಳುವ ಅಪಾಯವಿದೆ. ಹೀಗಾಗಿ ಇಂತಹ ಸಂದರ್ಭ ಎದುರಾದರೆ ಸನಿಹದ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಆಸ್ಪತ್ರೆಯನ್ನು ಸಂಪರ್ಕಿಸುವುದು ಒಳಿತು.

ಎನ್‌ಜಿ ಟ್ಯೂಬ್‌: ಇತರ ಸಮಸ್ಯೆಗಳೇನು?
ದೀರ್ಘ‌ಕಾಲದಿಂದ ಎನ್‌ಜಿ ಟ್ಯೂಬ್‌ ಅಳವಡಿಸಿದ್ದರೆ ದೈಹಿಕವಾಗಿ ಕಿರಿಕಿರಿ, ನಾಸೊಫ್ಯಾರಿಂಜಿಯಲ್‌ ಅಡೆತಡೆ ಬೆಳವಣಿಗೆ, ತುರಿಕೆ, ಸೈನಸೈಟಿಸ್‌, ಹುಣ್ಣುಗಳು, ರಕ್ತಸ್ರಾವ ಮತ್ತು ಉಸಿರಾಟಕ್ಕೆ ಸಮಸ್ಯೆಯೂ ಉಂಟಾಗಬಹುದು. ಇಂತಹ ಅನೇಕ ಸಮಸ್ಯೆಗಳು ಉಂಟಾದಾಗ ಐವಿ ವಿಧಾನವು ಸುಲಭ ಮತ್ತು ಸುರಕ್ಷಿತವಾಗಿರುತ್ತದೆ. ಆದರೆ ಆಹಾರವು ಕರುಳಿನ ಮೂಲಕ ಸ್ವೀಕೃತವಾದರಷ್ಟೇ ದೇಹವು ಚೆನ್ನಾಗಿ ಕೆಲಸ ಮಾಡುತ್ತದೆ, ರಕ್ತನಾಳಗಳ ಮೂಲಕ ಅಲ್ಲ. ಅಲ್ಲದೆ ಇದರಿಂದ ಜೀವನ ಗುಣಮಟ್ಟದ ಮೇಲೆ ಪರಿಣಾಮ ಉಂಟಾಗಿ ಉದ್ವಿಗ್ನತೆ, ಸಂವೇದನೆ ನಷ್ಟ ಕಾಣಿಸಿಕೊಳ್ಳಬಹುದಲ್ಲದೆ ಆಹಾರ ಸೇವನೆಯ ಸಾಮಾಜಿಕ ಒಳಗೊಳ್ಳುವಿಕೆಯ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಆದ್ದರಿಂದ ಆದಷ್ಟು ಬೇಗನೆ ಕೊಳವೆಯ ಮೂಲಕ ಆಹಾರ ಸೇವನೆಯನ್ನು ನಿಲ್ಲಿಸಿ ಬಾಯಿಯ ಮೂಲಕ ಆಹಾರ ಸೇವನೆಯನ್ನು ಆರಂಭಿಸುವುದು ಉತ್ತಮ.

ಬಾಯಿಯ ಮೂಲಕ ಆಹಾರ ಸೇವನೆಯನ್ನು ಯಾವಾಗ ಆರಂಭಿಸಬಹುದು?
ರೋಗಿ ಬಾಯಿಯ ಮೂಲಕ ಆಹಾರ ಸೇವನೆಗೆ ಸಿದ್ಧನಾಗಿದ್ದಾನೆಯೇ ಎಂಬುದನ್ನು ಸಾಮಾನ್ಯವಾಗಿ ಸ್ಪೀಚ್‌ ಪೆಥಾಲಜಿಸ್ಟ್‌ ವಿಶ್ಲೇಷಿಸಿ ನಿರ್ಧರಿಸುತ್ತಾರೆ. ರೋಗಿಯನ್ನು ಪರೀಕ್ಷಿಸಿ ಅವರು ನುಂಗುವಿಕೆಯ ಕಾರ್ಯನಿರ್ವಹಣೆಯನ್ನು ವಿಶ್ಲೇಷಿಸುತ್ತಾರೆ ಮತ್ತು ಅಗತ್ಯ ಬಿದ್ದರೆ ಇತರ ಪರೀಕ್ಷೆಗಳನ್ನು ಕೈಗೊಳ್ಳುತ್ತಾರೆ. ಕೊಳವೆಯಿಂದ ಬಾಯಿಯ ಮೂಲಕ ಆಹಾರ ಸೇವನೆಯತ್ತ ಮರಳುವುದಕ್ಕೆ ಅವರು ನಿಗದಿತ ಕಾರ್ಯಸೂಚಿಯನ್ನು ಅನುಸರಿಸುತ್ತಾರೆ. ಆರಂಭಿಕ ಹಂತವನ್ನು ಪೂರ್ವಸಿದ್ಧತಾ ಹಂತ ಎಂದು ಕರೆಯಲಾಗುತ್ತದೆ. ಆಹಾರ ಸೇವನೆಗೆ ದೈಹಿಕವಾಗಿ ಸಿದ್ಧತೆ ಹಾಗೂ ವೈದ್ಯಕೀಯವಾಗಿ ಮತ್ತು ಪೌಷ್ಟಿಕಾಂಶ ಸಂಬಂಧಿಯಾಗಿ ಸ್ಥಿರತೆಯನ್ನು ಕಾಯ್ದುಕೊಳ್ಳುವುದು, ಪರ್ಯಾಯವಾಗಿ ಕೊಳವೆಯ ಮೂಲಕ ಆಹಾರ ನೀಡಿಕೆ ಮತ್ತು ನುಂಗುವಿಕೆಯ ವಿಶ್ಲೇಷಣೆ ಇದರಲ್ಲಿ ಒಳಗೊಂಡಿರುತ್ತವೆ. ಇದರ ಮುಂದಿನ ಹಂತವಾಗಿ ಕೊಳವೆಯ ಮೂಲಕ ಆಹಾರ ನೀಡಿಕೆಯನ್ನು ನಿಧಾನವಾಗಿ ಕಡಿಮೆ ಮಾಡಲಾಗುತ್ತದೆ ಮತ್ತು ಬಾಯಿಯ ಮೂಲಕ ಆಹಾರ ಸೇವನೆಯನ್ನು ಹೆಚ್ಚಿಸಲಾಗುತ್ತದೆ. ವ್ಯಕ್ತಿಯು ಸತತ ಮೂರು ದಿನಗಳ ಅವಧಿಯಲ್ಲಿ ಶೇ.75ರಷ್ಟು ಪೌಷ್ಟಿಕಾಂಶಯುಕ್ತ ಆಹಾರ ಸೇವನೆಯನ್ನು ಬಾಯಿಯ ಮೂಲಕವೇ ನಡೆಸಲು ಶಕ್ತನಾದರೆ ಆಗ ಮಾತ್ರ ಕೊಳವೆಯ ಮೂಲಕ ಆಹಾರ ನೀಡಿಕೆಯನ್ನು ನಿಲ್ಲಿಸಲು ಶಿಫಾರಸು ಮಾಡಲಾಗುತ್ತದೆ. ಕೊಳವೆಯ ಮೂಲಕ ಆಹಾರ ಸೇವನೆಯನ್ನು ಕಡಿಮೆಗೊಳಿಸುತ್ತ ಬರುವ ಸಂದರ್ಭದಲ್ಲಿ ಹಲವು ಮಾನದಂಡಗಳನ್ನು ಗಮನಿಸಬೇಕಾಗಿರುತ್ತದೆ,
ಅವುಗಳೆಂದರೆ ವ್ಯಕ್ತಿಯ ದೇಹತೂಕ, ದೇಹದಲ್ಲಿ ದ್ರವಾಂಶ, ನುಂಗುವ ಸಾಮರ್ಥ್ಯ, ಉಸಿರಾಟ ಸಮಸ್ಯೆಗಳು ಇತ್ಯಾದಿ. ಕ್ರಮಬದ್ಧವಾಗಿ ನಳಿಕೆಯ ಮೂಲಕ ಆಹಾರ ಸೇವನೆಯನ್ನು ನಡೆಸಿದಲ್ಲಿ ಹಲವಾರು ಸಮಸ್ಯೆಗಳನ್ನು ತಡೆಗಟ್ಟಬಹುದು.

ಈ ಚೆಕ್‌ಲಿಸ್ಟ್‌ ಕಡೆಗೆ ಗಮನ ಹರಿಸಿ
ರೋಗಿಯ ಆರೈಕೆದಾರರ ದೃಷ್ಟಿಯಿಂದ ಇಂತಹ ಆಲೋಚನೆ ಒಳ್ಳೆಯದೇ. ಆದರೆ ಈ ಬಗ್ಗೆ ಜಾಗರೂಕತೆಯಿಂದ ಇರಬೇಕು. ಇದಕ್ಕಾಗಿ ಈ ಚೆಕ್‌ಲಿಸ್ಟ್‌ ಕಡೆಗೆ ಗಮನ ಹರಿಸಿ:
 ರೋಗಿ ತುತ್ತು ಆಹಾರವನ್ನು ಬಾಯಿಯಲ್ಲಿ ಇರಿಸಿಕೊಳ್ಳಬಲ್ಲರೇ, ಅದನ್ನು ಚೆನ್ನಾಗಿ ಜಗಿಯಬಲ್ಲರೇ ಮತ್ತು ಬಹಳ ಪ್ರಾಮುಖ್ಯವಾಗಿ, ಆಹಾರವನ್ನು ನುಂಗಬಲ್ಲರೇ?
 ಆಹಾರವನ್ನು ನುಂಗಬಲ್ಲರಾದರೆ, ಸುರಕ್ಷಿತವಾಗಿ ಮತ್ತು ಪರಿಣಾಮಕಾರಿಯಾಗಿ ನುಂಗಬಲ್ಲರೇ?
 ರೋಗಿ ನಿದ್ದೆಯಲ್ಲಿ ಇರುವಂತೆ, ತೂಕಡಿಸುತ್ತಿರುವಂತೆ ಇದ್ದಾರೆಯೇ, ಅವರ ಆಹಾರದ ಸಂವೇದನೆಯ ಕೊರತೆ ಇದೆಯೇ, ಆಹಾರವನ್ನು ದೀರ್ಘ‌ಕಾಲ ಬಾಯಿಯಲ್ಲಿಯೇ ಇರಿಸಿಕೊಳ್ಳುತ್ತಿದ್ದಾರೆಯೇ?
 ಬಾಯಿಯ ಮೂಲಕ ಆಹಾರ ತೆಗೆದುಕೊಳ್ಳುವಾಗ ಅವರು ಕೆಮ್ಮುತ್ತಾರೆಯೇ?
 ಅವರ ಶ್ವಾಸಮಾರ್ಗದ ಸಂಪೀಡಕ ಸ್ನಾಯು (ಸ್ಪಿಂಕ್ಟರ್‌)ಗಳು ಸರಿಯಾಗಿ ಕೆಲಸ ಮಾಡುತ್ತಿವೆಯೇ? ಇಂತಹ ವ್ಯಕ್ತಿಗಳಲ್ಲಿ ಆಕ್ಸಿಜನ್‌ ಟ್ಯೂಬ್‌ ಅಳವಡಿಕೆ ಕೊಂಚ ದೀರ್ಘ‌ಕಾಲದಿಂದ ಇರುವುದರಿಂದ ಅವರ ಧ್ವನಿ ಮಡಿಕೆಗಳ ಮೇಲೆ ಸ್ವಲ್ಪ ಪರಿಣಾಮ ಉಂಟಾಗಿರುತ್ತದೆ (ಇದು ಶ್ವಾಸಮಾರ್ಗದ ಪ್ರಾಮುಖ್ಯ ಮುಚ್ಚುದ್ವಾರ ಆಗಿದೆ).
 ಬಹಳ ಮುಖ್ಯವಾಗಿ, ಸಾಮಾನ್ಯವಾಗಿ ತಮ್ಮ ವಯೋವೃದ್ಧ ಸಂಗಾತಿಯ ಜತೆಗೆ ವಾಸಿಸುವ ಈ ಲಕ್ವಾ ಪೀಡಿತ ವೃದ್ಧರು ಈ ಅಸಹಜತೆಗಳ ಲಕ್ಷಣಗಳನ್ನು ಯಶಸ್ವಿಯಾಗಿ ಗುರುತಿಸಬಲ್ಲರೇ? ಅವರು ಇಡೀ ದಿನ ಬಾಯಿಯ ಮೂಲಕ ಒಂದೊಂದೇ ತುತ್ತಾಗಿ ಆಹಾರ ಸೇವಿಸುವುದನ್ನು ನಿಭಾಯಿಸಬಲ್ಲರೇ? ಕೆಲವು ಪರಿಹಾರಾತ್ಮಕ ಕ್ರಮಗಳ ಮೂಲಕ ಇದು ಸಾಧ್ಯವಾದರೂ ಇಷ್ಟು ಕಡಿಮೆ ಪ್ರಮಾಣದ ಆಹಾರವು ಅವರಿಗೆ ಸಾಕಾಗದು ಮತ್ತು ಇದರ ಪರಿಣಾಮವಾಗಿ ಅವರು ಅಪೌಷ್ಟಿಕತೆ ಅಥವಾ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಲ್ಲ ಇಲೆಕ್ಟ್ರೊಲೈಟ್‌ ಅಸಮತೋಲನಕ್ಕೆ ಗುರಿಯಾಗಬಲ್ಲರು.
ಯಾವುದನ್ನು ಸೇವಿಸಬೇಕು, ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಮತ್ತು ಟ್ಯೂಬ್‌ ಮುಖಾಂತರ ಆಹಾರ ಸೇವನೆ ಹೇಗೆ ಎಂಬ ಬಗ್ಗೆ ನೀವು ಮಾಹಿತಿ ಪಡೆದುಕೊಂಡಿದ್ದರೆ ನ್ಯಾಸೊಗ್ಯಾಸ್ಟ್ರಿಕ್‌ ಟ್ಯೂಬ್‌ ಸಹಿತವಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆ ಸೇರುವುದರಲ್ಲಿ ಯಾವ ತೊಂದರೆಯೂ ಇಲ್ಲ.

ಡಾ| ದೀಪಾ ಎನ್‌. ದೇವಾಡಿಗ
ಅಸೊಸಿಯೇಟ್‌ ಪ್ರೊಫೆಸರ್‌
ಸ್ಪೀಚ್‌ ಆ್ಯಂಡ್‌ ಹಿಯರಿಂಗ್‌ ವಿಭಾಗ
ಎಂಸಿಎಚ್‌ಪಿ, ಡಾ| ಟಿಎಂಎ ಪೈ ಆಸ್ಪತ್ರೆ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next