ಯಡ್ರಾಮಿ: ತಾಲೂಕಿನ ಅಲ್ಲಾಪುರ ಗ್ರಾಮದ ಪರಿಶಿಷ್ಟ ಜಾತಿ ಯುವಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದವರ ವಿರುದ್ಧ ಜಾತಿ ನಿಂದನೆ ದೂರು ದಾಖಲಾದ ನಿಮಿತ್ತ ಜಿಲ್ಲಾ ಡಿವೈಎಸ್ಪಿ ಟಿ.ಎಸ್. ದೊಡ್ಡಮನಿ ರವಿವಾರ ಸಂಜೆ ಗ್ರಾಮಕ್ಕೆ ಭೇಟಿ ನೀಡಿದರು.
ಈ ವೇಳೆ ಮಾತನಾಡಿದ ಅವರು, ಪರಿಶಿಷ್ಟ ಯುವಕನ ಮೇಲೆ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸಲಾಗುವುದು. ನಾವು ನ್ಯಾಯದ ಪರವಾಗಿ ಕೆಲಸ ಮಾಡುತ್ತೇವೆ. ಆರೋಪಿಗಳು ಯಾರೆ ಆಗಿರಲಿ ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದೆಂದು ಕುಟುಂಬಸ್ಥರಿಗೆ ಭರವಸೆ ನೀಡಿದರು.
ದೂರಿನ ಹಿನ್ನೆಲೆ: ತಾಲೂಕಿನ ಅಲ್ಲಾಪುರ ನಿವಾಸಿ ಮಲ್ಕಪ್ಪ ರಾವುತಪ್ಪ ಗುಡಿಮನೆ (28) ಎಂಬ ಯುವಕನಿಗೆ ಅದೇ ಗ್ರಾಮದ ಭೂತಪ್ಪ ಹಿರೇಕುರುಬರ, ಮಾನಪ್ಪ ಮೇಲಿನಮನಿ ಎಂಬುವವರು ಜು.15ರಂದು ಹಲ್ಲೆ ಮಾಡಿದ ಹಿನ್ನೆಲೆಯಲ್ಲಿ ಯಡ್ರಾಮಿ ಠಾಣೆಯಲ್ಲಿ ಜು.17ರಂದು ದೂರು ದಾಖಲಾಗಿದೆ. ಕಲಂ 341, 323, 324, 325, 504ಸಂ.34 ಐಪಿಸಿ ಮತ್ತು 3(1) ಎಸ್‌ಸಿ, ಎಸ್‌ಟಿ ಕಲಂಗಳ ಅಡಿಯಲ್ಲಿ ದೂರು ದಾಖಲಿಸಿಕೊಂಡರೂ ಆರೋಪಿತರನ್ನು ಇಲ್ಲಿಯವರೆಗೂ ಠಾಣಾ ಪಿಎಸ್‌ಐ ಅವರು ಬಂಧಿಸಿಲ್ಲ. ಆರೋಪಿತರು ರಾಜಾರೋಷವಾಗಿ ಗ್ರಾಮದಲ್ಲೆ ಓಡಾಡಿಕೊಂಡಿದ್ದಾರೆ ಎಂದು ಕುಟುಂಬದ ಸದಸ್ಯರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಆರೋಪಿಗಳ ಬಂಧನಕ್ಕೆ ಒತ್ತಾಯ: ಆರೋಪಿತರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸುವಂತೆ ದಲಿತ ಸಂಘಟನೆಗಳ ಕಾರ್ಯಕರ್ತರಾದ ಗೊಲ್ಲಾಳಪ್ಪ ಗುಡಿಮನಿ, ಪ್ರಭು ಗುಡಿಮನಿ, ಸತೀಶ ಗುಡಿಮನಿ, ಗುರುಪಾದ ಮಾಲಗತ್ತಿ, ಪರುಶುರಾಮ, ಅಶೋಕ ಮಾದರ, ಮಾನಪ್ಪ ಮಾದರ, ಮಾಂತಪ್ಪ, ಶರಣಪ್ಪ ಹಂಚಿನಾಳ, ಸಿದ್ದು ಹಂಚಿನಾಳ ಒತ್ತಾಯಿಸಿದ್ದಾರೆ.