ಕಾರವಾರ:ಒಂದು ಪ್ರಕರಣದ ತನಿಖೆಗಾಗಿ ಕಾರವಾರ ಉಪ ವಿಭಾಗದ ಡಿವೈಎಸ್‍ಪಿ ಶಂಕರ್ ಮಾರಿಹಾಳ ಕೈಗಾ -ಬಾರೆ-ವ್ರಜಳ್ಳಿ ರಸ್ತೆಯಲ್ಲಿ ರವಿವಾರ ಬೆಳಿಗ್ಗೆ 10 ಗಂಟೆಗೆ ತಮ್ಮ ವಾಹನ ಚಾಲಕ ಹಾಗೂ ಬೆಂಗಳೂರಿನ ಇನ್ಸಪೆಕ್ಟರ್ ಜೊತೆ ತೆರಳಿದವರು ಮರಳಿಬಾರದೆ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಶಂಕರ್ ಮಾರಿಹಾಳ್ ಹಾಗೂ ಬೆಂಗಳೂರಿನಿಂದ ಪ್ರಕರಣದ ತನಿಖೆಗೆ ಬಂದಿದ್ದ ಸಿಪಿಐ ರವಿಚಂದ್ರನ್ ಎಂಬುವವರು ಹೆರೂರು ಬಳಿ ತನಿಖೆಗೆ ತೆರಳಿದ್ದರು ಎಂದು ತಿಳಿದುಬಂದಿದೆ.
ಸಂಜೆಯಾದರೂ ಕಾರವಾರ ಕಚೇರಿಗೆ ಅಧಿಕಾರಿಗಳು ಮರಳದೇ ಇದ್ದದ್ದು ಕಂಡ ಇಲಾಖೆಯ ಹಿರಿಯ ಅಧಿಕಾರಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಕೈಗಾ ರಸ್ತೆಯಲ್ಲಿ ಅವರಿಗೆ ಹುಡುಕಾಟ ಸಹ ನಡೆಸಿದ್ದಾರೆ. ಅಡಿಶನಲ್ ಎಸ್ಪಿ ಗೋಪಾಲ ಬ್ಯಾಕೋಡ ಅವರ ತಂಡ ಇದೀಗ ಕೈಗಾದತ್ತ ತೆರಳಿದ್ದು, ಡಿವೈಎಸ್ಪಿ ಅವರಿಗಾಗಿ ಹುಡುಕಾಟ ನಡೆದಿದೆ.
ಮಲ್ಲಾಪುರ ಠಾಣೆಗೆ ಹಾಗೂ ಕಂಟ್ರೋಲ್ ರೂಂಗೆ ರಾತ್ರಿ 10-45 ಆದರೂ ಡಿವೈಎಸ್ಪಿ ಪತ್ತೆಯಾದ ಬಗ್ಗೆ ವರದಿ ಬಂದಿಲ್ಲ. ಇಡೀ ಪೊಲೀಸ್ ಇಲಾಖೆ ಡಿವೈಎಸ್ಪಿ ಅವರ ಹುಡುಕಾಟದಲ್ಲಿ ಮಗ್ನವಾಗಿದೆ. ಮಳೆ ಸುರಿಯುತ್ತಿದ್ದು, ಕೈಗಾ -ಬಾರೆ-ಯಲ್ಲಾಪುರ ರಸ್ತೆಯಲ್ಲಿ ಹುಡುಕಾಟ ನಡೆದಿದೆ.
ಈ ರಸ್ತೆ ಏಕಮುಖ ರಸ್ತೆಯಾಗಿದ್ದು, ವಾಹನ ಸಂಚಾರ ಸಹ ಈ ರಸ್ತೆಯಲ್ಲಿ ವಿರಳವಾಗಿದೆ. ಕೈಗಾ -ಯಲ್ಲಾಪುರ ರಸ್ತೆ ಅತ್ಯಂತ ತಿರುವಿನಿಂದ ಕೂಡಿದ್ದು, ಅಪಾಯಕಾರಿ ರಸ್ತೆಯೂ ಆಗಿದೆ. ರವಿವಾರ ಭಾರೀ ಮಳೆ ಸಹ ಸುರಿಯುತ್ತಿದ್ದು, ರಾತ್ರಿ ವೇಳೆ ವಾಹನ ಸಂಚಾರ ಅಪಾಯಕಾರಿಯೂ ಆಗಿದೆ.