ಬೆಂಗಳೂರು: ಸಿಐಡಿ ಡಿವೈಎಸ್ಪಿ ವಿ. ಲಕ್ಷ್ಮೀ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಬುಧವಾರ ಕರ್ತವ್ಯಕ್ಕೆ ಹಾಜರಾಗಿದ್ದ ಲಕ್ಷ್ಮೀ ಸಹೋದ್ಯೋಗಿಗಳ ಜತೆ ಆತ್ಮೀಯವಾಗಿ ಮಾತನಾಡಿ ಸಂಜೆ ಸ್ನೇಹಿತನ ಮನೆಗೆ ಹೋಗಿದ್ದರು.
ಮಾನಸಿಕ ಖನ್ನತೆಗೊಳಗಿದ್ದರಾ?
ನವೀನ್ ಅವರನ್ನು ಲಕ್ಷ್ಮೀ ಕಾಲೇಜು ದಿನಗಳಿಂದಲೇ ಪ್ರೀತಿಸುತ್ತಿದ್ದು, ಪೋಷಕರನ್ನು ಒಪ್ಪಿಸಿ 2012ರಲ್ಲಿ ಮದುವೆಯಾಗಿ ದುಬೈಯಲ್ಲಿ ವಾಸವಾಗಿದ್ದರು. ಅಲ್ಲಿಂದ ಬಂದ ಬಳಿಕ ಕೆಎಸ್‌ಪಿಎಸ್ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದರು. ಪತಿ ನವೀನ್‌ಗೂ ಅಮೆಜಾನ್ ಕಂಪೆನಿಯಲ್ಲಿ ಕೆಲಸ ಸಿಕ್ಕಿತ್ತು. ಈಗ ಹೈದರಾಬಾದ್‌ನಲ್ಲಿ ಬೇರೆ ಉದ್ಯೋಗದಲ್ಲಿದ್ದಾರೆ.
ದಂಪತಿಗೆ ಮಕ್ಕಳಿರಲಿಲ್ಲ. ಪತಿ ಹೈದರಾಬಾದ್‌ನಲ್ಲಿರುವುದು ಲಕ್ಷ್ಮೀಗೆ ಇಷ್ಟವಿಲ್ಲದೆ ಬೆಂಗಳೂರಿನಲ್ಲೇ ಇರುವಂತೆ ಮನವಿ ಮಾಡಿದ್ದರು ಎನ್ನಲಾಗಿದೆ. ಅದಕ್ಕೆ ನವೀನ್ ಒಪ್ಪಿರಲಿಲ್ಲ. ಹೀಗಾಗಿ 2 ವರ್ಷದಿಂದ ಸಾಂಸಾರಿಕ ವಿಚಾರದಲ್ಲೂ ನೊಂದಿದ್ದರು ಎನ್ನಲಾಗಿದೆ.
ಸಾಮಾನ್ಯವಾಗಿ ಕೆಎಸ್‌ಪಿಎಸ್ ಮುಗಿಸಿದ ಬಳಿಕ ಎಕ್ಸಿಕ್ಯೂಟಿವ್ ಹುದ್ದೆ ನೀಡಬೇಕು. ಆದರೆ, ಲಕ್ಷ್ಮೀಗೆ ಸಿಐಡಿಯಲ್ಲಿ ನಾನ್ ಎಕ್ಸಿಕ್ಯೂಟಿವ್ ಹುದ್ದೆ ನೀಡಲಾಗಿತ್ತು. ತನ್ನ ಬ್ಯಾಚ್‌ನ ಮೂವರು ಮಹಿಳೆಯರಿಗೆ ನಗರ ಕಮಿಷನರೆಟ್ ವ್ಯಾಪ್ತಿಯಲ್ಲಿ ಎಸಿಪಿ ದರ್ಜೆಯ ಹುದ್ದೆ ಲಭಿಸಿದೆ. ತನಗೆ ಸಿಕ್ಕಿಲ್ಲ ಎಂದು ಸ್ನೇಹಿತರ ಜತೆ ಬೇಸರ ತೋಡಿಕೊಂಡಿದ್ದರು. ನಗರದಲ್ಲೇ ಎಕ್ಸಿಕ್ಯೂಟಿವ್ ಹುದ್ದೆ ಪಡೆಯಲು ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೆ, ಸಾಧ್ಯವಾಗಿರಲಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಎಲ್ಲ ವಿಚಾರಗಳಿಗೆ ಮಾನಸಿಕ ಖನ್ನತೆಗೊಂಡಿದ್ದ ಲಕ್ಷ್ಮೀ ಈ ಮೊದಲು ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು ಎಂದು ಮೂಲಗಳು ತಿಳಿಸಿವೆ.
ಸಾವಿನಲ್ಲಿ ಅನುಮಾನ
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಲಕ್ಷ್ಮೀ ತಂದೆ ಹಾಗೂ ನಿವೃತ್ತ ಕೆಎಎಸ್ ಅಧಿಕಾರಿ ವೆಂಕಟೇಶ್, ಮಗಳ ಸಂಸಾರ ಚೆನ್ನಾಗಿತ್ತು. ಎರಡು ದಿನಗಳ ಹಿಂದಷ್ಟೇ ಅಳಿಯ ಹೈದರಾಬಾದ್‌ಗೆ ಹೋಗಿದ್ದರು.ಅದಕ್ಕೆ ಬೇಸರವಾಗಿದ್ದರೆ ಹೊರತು ಡಿಪ್ರಷನ್‌ಗೆ ಹೋಗಿರಲಿಲ್ಲ. ಮನೆ, ಹಣ, ಅಧಿಕಾರ ಎಲ್ಲವೂ ಇದೆ. ಯಾಕೆ ಡಿಪ್ರಷನ್‌ಗೆ ಹೋಗುತ್ತಾಳೆ? ಕಿಟಕಿಯ ಸರಳಿಗೆ ನೇಣು ಬಿಗಿದುಕೊಂಡಿದ್ದಾಳೆ ಎಂಬುದು ಸುಳ್ಳು. ಆಕೆಯ ಕಾಲು ನೆಲಕ್ಕೆ ಮುಟ್ಟುವಂತಿದೆ. ಹೀಗಾಗಿ ಈ ಸಾವಿನ ವಿಚಾರದಲ್ಲಿ ಮನು ಮತ್ತು ಪ್ರಜ್ವಲ್ ಮೇಲೆ ಅನುಮಾನವಿದೆ. ಈ ಸಂಬಂಧ ದೂರು ನೀಡಿದ್ದೇನೆ ಎಂದು ಹೇಳಿದ್ದಾರೆ.