ರಾಯಚೂರು: ನವರಾತ್ರಿ ಎಂಟನೇ ದಿನವಾದ ಬುಧವಾರ ದುರ್ಗಾಷ್ಟಮಿಯನ್ನು ನಗರ ಸೇರಿ ಜಿಲ್ಲಾದ್ಯಂತ ಸಡಗರ, ಸಂಭ್ರಮ ಮತ್ತು ಭಕ್ತಿಯಿಂದ ಆಚರಿಸಲಾಯಿತು. ಈ ನಿಮಿತ್ತ ಶ್ರೀ ದೇವಿ ದೇವಸ್ಥಾನಗಳು, ಮಠ ಮಂದಿರಗಳಲ್ಲಿ ವಿಶೇಷ ಪೂಜೆ, ಹೋಮ ಹವನ ನೆರವೇರಿಸಲಾಯಿತು.
ದೇವಿ ಮೂರ್ತಿಗೆ ಸಿರಿ ಉಡಿಸಿ, ಆಭರಣ ಹಾಕಿ, ಹೂ ಹಣ್ಣುಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ನಗರದ ಕಿಲ್ಲೇ ಬೃಹನ್ಮಠದಲ್ಲಿ ಶ್ರೀ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ 18 ಕೈಗಳ ಮಹಿಷಾಸುರ ಮರ್ಧಿನಿ ರಜತ ದೇವಿ ಮೂರ್ತಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ದೇವಿಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಮುತ್ತೈದೆಯರು ಆರತಿ ಬೆಳಗಿ ದೇವಿಗೆ ಮಂಗಳಾರತಿ ಹಾಡಿದರು. ನಂತರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಸರಾಫ್ ಬಜಾರ್ ವೆಲ್ಫೆರ್ ಅಸೋಸಿಯೇಶನ್ ಕಾರ್ಮಿಕರ ಸಂಘದಿಂದ ನಗರದ ಸ್ವರ್ಣ ಮಹಲ್‌ನಲ್ಲಿ ತಾಯಮ್ಮದೇವಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಬೆಳಗ್ಗೆ ದೇವಿಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಅಲಂಕಾರ ಪೂಜೆ, ಮಹಾಮಂಗಳಾರತಿ ಸೇವೆ ಜರುಗಿತು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.
ನಗರದ ಡ್ಯಾಡಿ ಕಾಲೋನಿಯ ಈಶ್ವರ ದೇವಸ್ಥಾನದಲ್ಲಿ ದುರ್ಗಾಷ್ಟಮಿ ನಿಮಿತ್ತ ವಿಶೇಷ ಹೋಮ ನೆರವೇರಿಸಲಾಯಿತು. ನವರಾತ್ರಿ ನಿಮಿತ್ತ ದೇವಿಯನ್ನು ಪ್ರತಿಷ್ಠಾಪಿಸಿದ್ದು, ನಿತ್ಯ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ನಿವಾಸಿಗಳೆಲ್ಲ ಸೇರಿ ವಿಶೇಷ ಹೋಮ ಹಮ್ಮಿಕೊಂಡಿದ್ದರು.
ಮಂತ್ರಾಲಯದಲ್ಲಿ ವಿಶೇಷ ಪೂಜೆ: ದುರ್ಗಾಷ್ಟಮಿ ನಿಮಿತ್ತ ಮಂತ್ರಾಲಯದ ಅಧಿದೇವತೆ ಮಂಚಾಲಮ್ಮ ದೇವಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ದೇವಿಗೆ ವಿಶೇಷ ಪೂಜೆ ನೆರವೇರಿಸಿದರು. ಈ ನಿಮಿತ್ತ ದೇವಿಯನ್ನು ವಿಶೆಷ ಹೂವು, ಹಣ್ಣುಗಳಿಂದ ಅಲಂಕರಿಸಲಾಗಿತ್ತು. ನಂತರ ಮಠದ ಪ್ರಾಂಗಣದಲ್ಲಿ ಹೋಮ ಜರುಗಿಸಲಾಯಿತು.
ಗಮನ ಸೆಳೆದ ನೃತ್ಯ: ನವರಾತ್ರಿ ನಿಮಿತ್ತ ನಗರದ ವಿವಿಧೆಡೆ ದೇವಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಕೆಲವೆಡೆ ಸಂಜೆ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮ, ಪುರಾಣ ಪ್ರವಚನ ನಡೆದರೆ, ಕೆಲವೆಡೆ ದಾಂಡಿಯಾ ನೃತ್ಯ ಗಮನ ಸೆಳೆಯುತ್ತಿದೆ. ಮುಖ್ಯವಾಗಿ ನಗರದಲ್ಲಿ ಗುಜರಾತಿಗಳು, ಮಾರವಾಡಿ ವರ್ತಕರು ಈ ಕಾರ್ಯಕ್ರಮವನ್ನು ವಿಶಿಷ್ಟವಾಗಿ ಆಯೋಜಿಸುತ್ತಾರೆ. ಈಗ ಎಲ್ಲ ಕಡೆ ಸಂಜೆ ಯುವಕ ಯುವತಿಯರು ದಾಂಡಿಯಾ ನೃತ್ಯ ಮಾಡಿ ಸಂಭ್ರಮಿಸಿದರು.